ಯಾದಗಿರಿ | ಗ್ರಾಮೀಣ ಭಾಗದ ಸಖಿಯರಿಗೆ ಕನಿಷ್ಟ ವೇತನ ಸೇವಾ ಭದ್ರತೆಗೆ ಆಗ್ರಹ

Update: 2024-12-11 13:31 GMT

ಯಾದಗಿರಿ : ಗ್ರಾಮೀಣ ಭಾಗದ ಸಖಿಯರಿಗೆ ಕನಿಷ್ಟ ವೇತನ, ಸೇವಾ ಭದ್ರತೆ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಸಖಿಯರ ಮಹಾ ಒಕ್ಕೂಟದ ಉಪಾಧ್ಯಕ್ಷೆ ಹೇಮಾ ಬಿ.ದಳವಾಯಿ ಒತ್ತಾಯಿಸಿದರು.

ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ಇಲ್ಲದೆ ಅತಂತ್ರಕ್ಕೆ ಸಿಲುಕಿದ್ದೇವೆ ಎಂದರು.

ಬೆಂಗಳೂರಿನಲ್ಲಿ ನಡೆದ ಹೋರಾಟದ ಫಲವಾಗಿ ಅಧಿಕಾರಿಗಳ ಜಂಟಿ ಸಭೆಯಲ್ಲಿ ಗೌರವಧನ ಸಹಿತ ಹೆರಿಗೆ ರಜೆ, ಮೊಬೈಲ್ ಕರೆನ್ಸಿ, ಟಿಎ, ಡಿಎ, ಜಿಟಿಎಲ್ಎಫ್ ಪದಾಧಿಕಾರಿಗಳ ಸಿಟ್ಟಿಂಗ್ ಜಾರ್ಚ್, ಮಾನಸಿಕ ಒತ್ತಡ ಕಡಿಮೆ ಮಾಡಲು ಮೇಲಧಿಕಾರಿಗಳಿಗೆ ನೋಟಿಸ್ ಮಾಡಲು ಹಾಗೂ ಗುರುತಿನ ಚೀಟಿ, ಸಮವಸ್ತ್ರ ನೀಡಲು ಭರವಸೆ ನೀಡಲಾಗಿದೆ. ಆದರೆ, ಗೌರವ ಧನ ಹೆಚ್ಚಿಸಲು ಮುಂದಾಗುತ್ತಿಲ್ಲ. ಕಡಿಮೆ ಗೌರವ ಧನದಲ್ಲಿ ಬದುಕು ಸಾಗಿಸುವುದು ಕಷ್ಟವಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಖಿಯರಿಗೆ ಹೆಚ್ಚುವರಿ ಕೆಲಸ ಮಾಡುವಂತೆ ಮಾಡುತ್ತಿದ್ದಾರೆ. ಆದರೆ, ಸೌಲಭ್ಯ ಮಾತ್ರ ಒದಗಿಸುತ್ತಿಲ್ಲ. ಸಾಮಾನ್ಯ ಕೂಲಿ ಕಾರ್ಮಿಕರಿಗೆ ಇರುವ ಕೂಲಿಯೂ ಸಖಿಯರಿಗೆ ಇಲ್ಲವಾಗಿದ್ದು, ಹೀಗಾದರೆ, ಮಹಿಳೆಯರ ಅಭಿವೃದ್ಧಿ ಎಲ್ಲಿಂದ ಆಗಬೇಕು. ರಾಜ್ಯದಲ್ಲಿ 30 ಸಾವಿರ ಸಖಿಯರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಹೊಟ್ಟೆ ತುಂಬಿಸುವಂತಹ ವೇತನ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಮ್.ಬಿ.ಕೆ ಮತ್ತು ಎಲ್.ಸಿ.ಆರ್.ಪಿ ಮಹಾ ಒಕ್ಕೂಟದ ರಾಜ್ಯ ಅಧ್ಯಕ್ಷೆ ರುದ್ರಮ್ಮ ಎಸ್. ಮಂಕಣಿ, ಯಾದಗಿರಿ ಜಿಲ್ಲಾಧ್ಯಕ್ಷೆ ಸಂಗೀತಾ ಬಿ.ರೆಡ್ಡಿ ಭಾಗ್ಯಲಕ್ಷ್ಮೀ ಗುಂಡಗುರ್ತಿ, ಲಲಿತಾ ದೇವತ್ಕಲ್, ಸುಮಂಗಲಾ ಗೋಗಿ, ಚಂದ್ರಕಲಾ ವನದುರ್ಗಾ, ಭಾರತಿ ಮದ್ದರಕಿ, ಶಿಲ್ಪಾ ಕುರಕುಂದಾ, ವಿಜಯ ಲಕ್ಷ್ಮಿ ಮೂಡಬೂಳ, ಉಮಾದೇವಿ ಯಲ್ಲೇರಿ, ಕವಿತಾ ಕೊಂಕಲ್, ಲಕ್ಷ್ಮೀದೇವಿ ಸೂಗೂರ, ಸುನಂದಾ ಮದ್ರಿಕಿ, ಸುನೀತಾ, ಗೀತಾ, ವಿಜಯಲಕ್ಷ್ಮಿ ಗೋಗಿ ಹಾಗೂ ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News