ಯಾದಗಿರಿ | ಅಂಗವಿಕಲ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಶ್ರಮಿಸಿ : ಇಓ ಸಂಗ್ವಾರ್
ಯಾದಗಿರಿ : ಮಹಿಳಾ ಸಂಘಗಳ ಬಲವರ್ಧನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಸಹಕಾರ ನೀಡಿ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಜೀವನ ನಡೆಸಲು ತಮ್ಮೆಲ್ಲರ ಸಹಕಾರ ಅತ್ಯವಶ್ಯಕವಾಗಿದೆ ಎಂದು ತಾ.ಪಂ ಇಓ ಮಲ್ಲಿಕಾರ್ಜುನ ಸಂಗ್ವಾರ ಹೇಳಿದರು.
ವಡಿಗೇರಾ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರದಂದು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ʼಒಂದುದಿನದ ಸಮುದಾಯ ಆಧಾರಿತ ಒಗ್ಗೂಡಿಸುವಿಕೆ ಕಾರ್ಯಾಗಾರʼ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಲಿಂಗ ತಾರತಮ್ಯ, ಬಾಲ್ಯ ವಿವಾಹ, ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಗಟ್ಟಲು ಕಾಲಕಾಲಕ್ಕೆ ಗ್ರಾಮಗಳಲ್ಲಿ ಜನಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಅಸಹಾಯಕ, ಅಂಗವಿಕಲ ಮಹಿಳೆಯರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲು ಶ್ರಮ ವಹಿಸಲು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ ಯೋಜನಾ ಅಧಿಕಾರಿ ರಾವೇಂದ್ರ, ಎನ್ ಆರ್ ಎಲ್ ಎಂ ಜಿಲ್ಲಾ ವ್ಯವಸ್ಥಾಪಕ ಗಿರೀಶ್ ಮುಂಡರಗಿ ಮಠ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಶರಣಗೌಡ ಹಾಗೂ ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ತಾಲ್ಲೂಕು ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ, ತಸ್ಲೀಮಾ ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.