ಯಾದಗಿರಿ | ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಜೂರಿಗೆ ವಕೀಲರ ಹರ್ಷ
ಯಾದಗಿರಿ : ಸರಕಾರದಿಂದ ಶಹಾಪುರ ತಾಲ್ಲೂಕು ಒಳಗೊಂಡಂತೆ 2ನೇ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಧೀಶರು (ಶೋರಾಪುರ ಪೀಠ) ನ್ಯಾಯಾಲಯವನ್ನು ಆರಂಭಕ್ಕೆ ಹಲವು ಹುದ್ದೆಗಳ ಮಂಜೂರಾತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಸುರಪುರ ನಗರದ ನ್ಯಾಯಾಲಯ ಆವರಣದಲ್ಲಿ ವಕೀಲರು ಸಂಭ್ರಮಾಚರಣೆ ನಡೆಸಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲ ನಿಂಗಣ್ಣ ಚಿಂಚೋಡಿ ಮಾತನಾಡಿ, ನಮ್ಮ ಸುರಪುರದಲ್ಲಿ ಜಿಲ್ಲಾ 2ನೇ ಹೆಚ್ಚುವರಿ ನ್ಯಾಯಾಲಯ ಆರಂಭಕ್ಕೆ ಕರ್ನಾಟಕ ಸರಕಾರ ಮಂಜೂರು ನೀಡಿದ್ದಕ್ಕಾಗಿ ಸರಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಹೋರಾಟಗಾರ ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿ, ಇಲ್ಲಿಯ ಅನೇಕ ಜನ ಹಿರಿಯ ವಕೀಲರ ಅಭಿಲಾಷೆಯಂತೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಜೂರಾಗಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕ ವಕೀಲರು ಭಾಗವಹಿಸಿ, ಸಿಹಿ ಹಂಚಿ ವರ್ಷ ವ್ಯಕ್ತಪಡಿಸಿದರು.