AI ಇತ್ಯಾದಿ: ವಿಜ್ಞಾನದ ಈ ಪ್ರಗತಿಗೆ ಏನಂತ ಹೆಸರಿಡೋಣ?

ಪ್ರಶಾಂತ ಹುಲ್ಕೋಡು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ 1985ರಲ್ಲಿ ಜನನ. ಆಸಕ್ತಿಯಿಂದ ಆರಿಸಿಕೊಂಡ ಕ್ಷೇತ್ರ ಪತ್ರಿಕೋದ್ಯಮ. ಕಳೆದ 15 ವರ್ಷಗಳಲ್ಲಿ ಕರ್ನಾಟಕದ ಪ್ರಮುಖ ದಿನ ಪತ್ರಿಕೆಗಳು, ಸುದ್ದಿವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾ ಸಂಸ್ಥೆಗಳ ಭಾಗವಾಗಿ ಹಲವು ಸ್ಥರಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ. ಮುಖ್ಯವಾಹಿನಿಯಲ್ಲಿ ಪರ್ಯಾಯ ರಾಜಕಾರಣದ ಹಿನ್ನೆಲೆಯಲ್ಲಿ ಪ್ರಕಟಗೊಂಡ ‘ಕೇಜ್ರಿಕ್ರಾಂತಿ- ಅಧಿಕಾರದೆಡೆಗೆ ಜನಸಾಮಾನ್ಯರ ನಡಿಗೆ’ ಇವರ ಚೊಚ್ಚಲ ಪುಸ್ತಕ. ಈಗ ಎಐ ತಂತ್ರಜ್ಞಾನ ಆಧರಿತ ಸೇವೆಗಳನ್ನು ರೂಪಿಸುತ್ತಿರುವ ಪ್ರಾಜೆಕ್ಟ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Update: 2025-01-01 13:08 GMT

ಅದು 2022, ಫೆಬ್ರವರಿ ತಿಂಗಳು. ಭಾರತದ ಶೇರು ಮಾರುಕಟ್ಟೆಯಿಂದ ಹಿಡಿದು ಜಾಗತಿಕ ತೈಲ ಮಾರುಕಟ್ಟೆವರೆಗೆ, ದೇಶಗಳನ್ನು ಆಳುವ ವರ್ಗಗಳಿಂದ ಹಿಡಿದು ಸಾಮಾನ್ಯ ಜನರವರೆಗೆ; ಮತ್ತದೇ, ಮೊದಲಿನ ಬದುಕಿಗೆ ಮರಳುವ ಪ್ರಯತ್ನ ಆರಂಭವಾಗಿತ್ತು. 2019ರ ನವೆಂಬರ್ ತಿಂಗಳಿನಲ್ಲಿ ಪತ್ತೆಯಾದ ವಿಸ್ಮಯಕಾರಿ ವೈರಸ್, ಆವರೆಗೂ ಕಟ್ಟಿಕೊಂಡು ಬಂದಿದ್ದ ಆಧುನಿಕ ನಾಗರಿಕ ಸಮಾಜಕ್ಕೆ ಸವಾಲು ಎಸೆದಿತ್ತು. ಪರಿಣಾಮ, ಒಂದಷ್ಟು ದಶಲಕ್ಷ ಜನರನ್ನು ಕಳೆದುಕೊಂಡೆವು. ವ್ಯವಸ್ಥೆಯ ಲೋಪಗಳನ್ನು ಕಂಡುಕೊಂಡೆವು. ಹಣಕಾಸು ವ್ಯವಸ್ಥೆ ಗತಿಯನ್ನು ಬದಲಿಸಲೇಬೇಕಾದ ಅನಿವಾರ್ಯತೆಯನ್ನು ಅರ್ಥಪಡಿಸಿತ್ತು. ಹಾಗೆ ನೋಡಿದರೆ, ಕೊರೋನ ವೈರಸ್ ಹುಟ್ಟಿಸಿದ ಬಿಕ್ಕಟ್ಟು, ಈ ಶತಮಾನದಲ್ಲಿ ಮನುಷ್ಯನ ಬದುಕಿಗೆ ಎದುರಾದ ಬಹುದೊಡ್ಡ ಅಪಾಯವಾಗಿತ್ತು. ಅದೆಷ್ಟೇ ಆಡಳಿತಗಾರರ ನ್ಯೂನತೆಗಳಿದ್ದರೂ, ವಿಜ್ಞಾನದ ಅಡಿಯಲ್ಲಿ, ಮಾರ್ಗದರ್ಶನದಲ್ಲಿ ಜಗತ್ತು ಕೇವಲ 25 ತಿಂಗಳ ಅವಧಿಯಲ್ಲಿಯೇ ಮನುಷ್ಯನಿಂದ ಮನುಷ್ಯಗೆ ಕಾಯಿಲೆಯನ್ನು ಹರಡಬಹುದಾದ ವೈರಸನ್ನು ನಿಯಂತ್ರಿಸಲು ಸಾಧ್ಯವಾಯಿತು. ಲಸಿಕೆಯ ಅಡ್ಡಪರಿಣಾಮಗಳ ಆಚೆಗೂ ಜನಜೀವನ ಮತ್ತದೇ ಹಳೆಯ ಬದುಕಿಗೆ ಮರಳಲು ಭರವಸೆ ನೀಡಿದ್ದು ಅಂತಿಮವಾಗಿ ವಿಜ್ಞಾನ ಮಾತ್ರ.

ಬಹುಶಃ ಇದನ್ನೇ ವಿಜ್ಞಾನದ ಕಾರಣಕ್ಕೆ ನಾಗರಿಕ ಸಮಾಜದ ಸಂರಚನೆಯಲ್ಲಿ ಕಾಲಕಾಲಕ್ಕೆ ಬರುವ ‘paradigm shift’ ಎಂದು ಕರೆಯಬಹುದೇನೋ? ಆದರೆ, ಈ ಕುರಿತು ಸಮಗ್ರವಾಗಿ ಅರ್ಥೈಸುವ, ವಿಜ್ಞಾನದ ಲೋಕದಲ್ಲಿ ಕಂಡುಕೊಳ್ಳಲೇಬೇಕಾದ ಹೊಸ ಪರಿಭಾಷೆಗಳ ಅಗತ್ಯದ ಬಗೆಗೆ ಚರ್ಚಿಸುವ, ಒಟ್ಟಾರೆ- ವಿಜ್ಞಾನದ ಸಾಧ್ಯತೆಗಳ ಕುರಿತು ಹೊಸ ಪರಿಕಲ್ಪನೆಗಳನ್ನು ಸಮಾಜಕ್ಕೆ ಕಟ್ಟಿಕೊಡಬೇಕಿರುವ ಸಮಯದಲ್ಲಿಯೇ ರಶ್ಯ ಯುದ್ಧವನ್ನು ಆರಂಭಿಸಿತು. ನೇಟೊ ಎಂಬ ಜಗತ್ತಿನ ನಟೋರಿಯಸ್ ಮಿಲಿಟರಿ ಪಡೆ ಪಕ್ಕದ ಮನೆ ಬಾಗಿಲು ಬಡಿದಿತ್ತು. ಹೀಗಾಗಿ, 2022ರ ಆರಂಭದಲ್ಲಿಯೇ ಅಧಿಕೃತತೆ ಪಡೆದುಕೊಂಡ ಈ ಯುದ್ಧ್ದ ಎಂಬ ಸಾವಿರಾರು ಕೋಟಿಗಳ ಸಾವಿನ ವ್ಯಾಪಾರ ಕೊನೆಗೂ ನಿಲ್ಲಲೇ ಇಲ್ಲ.

ಈ ಯುದ್ಧ್ದಗಳು 2024ರ ಇಡೀ ವರ್ಷದ ಕ್ಯಾಲೆಂಡರನ್ನೂ ಆವರಿಸಿಕೊಂಡವು. ಹಮಾಸ್- ಇಸ್ರೇಲ್ ನೆಪದಲ್ಲಿ ಆರಂಭವಾದ ಮಧ್ಯಪ್ರಾಚ್ಯದ ಬಿಕ್ಕಟ್ಟು ಸದ್ಯಕ್ಕೆ ಈ ಪ್ರದೇಶದಲ್ಲಿ ಶಾಂತಿಯ ಬಗ್ಗೆ ಹುಟ್ಟಿಕೊಂಡಿದ್ದ ಪಶ್ಚಿಮದ ಕನಸುಗಳನ್ನು ಪುಡಿಪುಡಿಯಾಗಿಸಿದೆ. ಉಳಿದಂತೆ ಸುಡಾನ್, ಉಗಾಂಡ, ಭಾರತದಂತಹ ದೇಶಗಳಲ್ಲಿನ ಆಂತರಿಕ ನಾಗರಿಕ ಯುದ್ಧಗಳು ಈ ವರ್ಷ ಅತಿಹೆಚ್ಚು ಸಾವು- ನೋವುಗಳಿಗೆ ಕಾರಣವಾಗಿವೆ. ನೆಲೆಗಳನ್ನು ಕಳೆದುಕೊಂಡ ಕುಟುಂಬಗಳ ಸಂಖ್ಯೆ ದುಪ್ಪಟ್ಟಾಗಿದೆ. ಜಾಗತಿಕ ಅಂಕಿಅಂಶಗಳ ಪ್ರಕಾರ, 2024ರಲ್ಲಿ ಘಟಿಸಿದ ಸಾವಿನ ಪ್ರಮಾಣವೇ 5.8 ಕೋಟಿಯಷ್ಟಿದೆ. ಹೆಚ್ಚುಕಡಿಮೆ ಒಂದು ಕರ್ನಾಟಕದ ಜನಸಂಖ್ಯೆ. ಇನ್ನು, ಆಸ್ತಿ-ಪಾಸ್ತಿಗಳ ಹಾನಿ, ನೈಸರ್ಗಿಕ ವಿಕೋಪಗಳು ಸೃಷ್ಟಿಸಿದ ಬಿಕ್ಕಟ್ಟಿನ ಚಿತ್ರಣವೂ ಭೀಕರವಾಗಿದೆ.

ಹಾಗಂತ ನಾಗರಿಕ ಸಮಾಜಕ್ಕೆ ಸಿಹಿ ಸುದ್ದಿ ಏನೂ ಇಲ್ಲ ಅಂತೇನಿಲ್ಲ! 2024, ವಿಜ್ಞಾನ ಲೋಕದಲ್ಲಿ ಮಹತ್ವದ ಬೆಳವಣಿಗೆಗಳಿಗೂ ಸಾಕ್ಷಿಯಾಗಿದೆ. ಕೊರೋನ ಸಮಯದಲ್ಲಿ ಏಕಾಂತದ ಕೋಣೆಗಳಲ್ಲಿ ಹುಟ್ಟಿಕೊಂಡ ವಿಜ್ಞಾನದ ಆವಿಷ್ಕಾರಗಳು, ಈ ವರ್ಷ ಹೊರಜಗತ್ತಿಗೆ ಮುಕ್ತವಾಗಿ ಸಿಕ್ಕಿವೆ. ಅದರಲ್ಲೂ ಕೃತಕ ಬುದ್ಧಿವಂತಿಕೆ ಎಂದು ಕರೆಯಬಹುದಾದ ಎಐ ತಂತ್ರಜ್ಞಾನ ನಾನಾ ಕ್ಷೇತ್ರಗಳ ಜತೆಗೆ ಬೌದ್ಧಿಕ ಲೋಕದಲ್ಲಿ ಏಳಬಹುದಾದ ಬಿಕ್ಕಟ್ಟುಗಳಿಗೆ ಪರಿಹಾರದ ರೂಪದಲ್ಲಿ ಪ್ರಾಕ್ಟಿಕಲ್ ಅನ್ನಿಸುವ ಉತ್ತರ ನೀಡಿದೆ. ವಿಶೇಷವಾಗಿ, ಆರೋಗ್ಯ ಕ್ಷೇತ್ರ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಎಐ ಉಪಯೋಗ ತಳಮಟ್ಟದಲ್ಲಿಯೇ ಶುರುವಾಗಿದೆ. ‘ಜೆನ್ ಝಿ’ ಎಂದು ಕರೆಯುವ ಒಂದು ತಲೆಮಾರು ಯಾವುದೇ ಗೊಂದಲಗಳಿಲ್ಲದೆ, ಚರ್ಚೆಯ ಅಗತ್ಯವೂ ಇಲ್ಲದೆ ಡಿಜಿಟಲ್‌ಗೆ ವಾಲಿದ್ದಾರೆ, ಎಐಗೆ ಸ್ಥಿತ್ಯಂತರವಾಗಲಿದ್ದಾರೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತಿವೆ.

ವಿಜ್ಞಾನ ಎಂಬ ಆಲದ ಮರದ ಅಡಿಯಿಂದ ಕೇವಲ ಎಐ ತಂತ್ರಜ್ಞಾನ ಮಾತ್ರವಲ್ಲ, ನಾನಾ ಕವಲುಗಳಲ್ಲಿ ಮಹತ್ವದ ಬದಲಾವಣೆಗಳನ್ನು ಈ ವರ್ಷ ದಾಖಲಿಸಿಕೊಂಡಿದೆ. ‘ಗ್ರೀನ್ ಕೆಮಿಸ್ಟ್ರಿ’ ಎಂದು ಗುರುತಿಸಿರುವ ಹೊಸ ಹುಡುಕಾಟವೊಂದು ಈವರೆಗಿನ ರಸಾಯನ ಶಾಸ್ತ್ರದ ಪರಿಕಲ್ಪನೆಯನ್ನೇ ಬದಲಿಸುವ, ಸಮಾಜಮುಖಿಯಾಗಿರುವ ಸಾಧ್ಯತೆ ಇದೆ. ಜೈವಿಕ ಅಂಗಾಂಗಗಳ ಸೃಷ್ಟಿಯ ಜತೆಜತೆಗೆ ಕೇವಲ ಲಸಿಕೆಯಿಂದಲೇ ಟ್ಯೂಮರ್ ಅಳಿಸಿ ಹಾಕುವ ಸಾಧ್ಯತೆಗಳನ್ನು ವೈದ್ಯಲೋಕ ಅಚ್ಚರಿಯಿಂದ ಬರಮಾಡಿಕೊಂಡಿದೆ. ಕ್ವಾಂಟಂ ಸೈನ್ಸ್‌ನಲ್ಲಿ ಜುನ್ ಯೇ ಎಂಬ ವಿಜ್ಞಾನಿ ಕಟ್ಟಿಕೊಟ್ಟ ‘ಟೈಮಿಂಗ್’ ಕುರಿತಾದ ಹೊಸ ಅಲೆಗಳು ಈವರೆಗೆ ಬಂಡವಾಳಿಗರು ಸೃಷ್ಟಿಸಿದ ಉದ್ಯಮಗಳ ಸ್ವರೂಪವನ್ನೇ ಬದಲಿಸುವ ಸಾಧ್ಯತೆಗಳಿವೆ. ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ ಸಹ್ಯ ಎನ್ನಿಸುವ ನಗರಗಳ ನಿರ್ಮಾಣದಿಂದ ಹಿಡಿದು, ಆಹಾರ ಪಡಿತರ ವ್ಯವಸ್ಥೆಯಲ್ಲಿ ವೈಜ್ಞಾನಿಕ ದೃಷ್ಟಿಕೋನಗಳನ್ನು ಅಳವಡಿಸಿಕೊಳ್ಳಲು ಬೇಕಾದ ತಂತ್ರಜ್ಞಾನದ ಬೆಳವಣಿಗೆಗಳವರೆಗೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಪಡೆದುಕೊಂಡ ವಿಜ್ಞಾನದ ಪ್ರಗತಿಯ ವೇಗಕ್ಕೆ ಈ ವರ್ಷ ಹೊರಬಿದ್ದಿರುವ ಉತ್ಪನ್ನಗಳು ಸಾಕ್ಷಿಯಾಗಿವೆ.

 

ಹಾಗಂತ ಇವುಗಳ ಒಟ್ಟಾರೆ ಮೊತ್ತವನ್ನೇ ‘Paradigm Shift’ ಎಂದು ಕರೆಯ ಬಹುದಾ? ‘‘ಖಂಡಿತಾ ಕರೆಯಬಹುದು. ಅದರಲ್ಲೂ ಮನೋವಿಕಾಸದ ಹಿನ್ನೆಲೆಯಲ್ಲಿ ಖಂಡಿತವಾಗಿಯೂ ನಾಗರಿಕರ ಬದುಕಿನಲ್ಲಿ ದೊಡ್ಡ ಬದಲಾವಣೆ ಬಂದಾಗಿದೆ. ಇದು ಆಕಸ್ಮಿಕವಲ್ಲ. ಈ ಹಿಂದಿನ ತಲೆಮಾರು ವೈಜ್ಞಾನಿಕ ಆಲೋಚನೆಗಳ ಮೂಲಕ ನೀಡಿದ ಕೊಡುಗೆಗಳ ಜತೆಜತೆಗೆ ಬದಲಾವಣೆ ಅನಿವಾರ್ಯ ಎಂಬ ವಾತಾವರಣವೂ, ವಾಸ್ತವವೂ ಕಾರಣ. ಅದರಲ್ಲೂ ಡಿಜಿಟಲ್ ತಂತ್ರಜ್ಞಾನ ತಂದಿರುವ ಬದಲಾವಣೆಯು ಗುರುತರವಾದದ್ದು,’’ ಎನ್ನುತ್ತಾರೆ ಬೆಂಗಳೂರು ಮೂಲದ ಮನೋವಿಜ್ಞಾನಿ ಡಾ. ಆಚಾರ್ಯ ಶ್ರೀಧರ್.

‘‘1962ರಲ್ಲಿ ವಿಜ್ಞಾನಿ ಥಾಮಸ್ ಕೂನ್ (Thomas Kuhn) ಹೊರತಂದ ಪುಸ್ತಕ "The Structure of Scientific Revolutions" ಇದು ಆವರೆಗೂ ನಿಧಾನಗತಿಯ ಬದಲಾವಣೆಯು ಆರೋಪಗಳನ್ನು ಹೊತ್ತುಕೊಂಡಿದ್ದ ವಿಜ್ಞಾನದ ಬಗೆಗಿನ ತಿಳುವಳಿಕೆಯಲ್ಲೇ ದೊಡ್ಡ ಪಲ್ಲಟಕ್ಕೆ ಕಾರಣವಾಯಿತು’’ ಎಂದವರು ವಿವರಿಸುತ್ತಾರೆ.

ಇದಕ್ಕೂ ಮೊದಲೇ, ಹೆಚ್ಚುಕಡಿಮೆ ಇದೇ ಮಾದರಿಯಲ್ಲಿ ಸಮಾಜದ ಬದಲಾವಣೆ ಕಲ್ಪನೆಯನ್ನು ಮುಂದಿಟ್ಟಿದ್ದು ಮಾರ್ಕ್ಸ್‌ವಾದ. ‘ಡೈಎಲೆಕ್ಟಿಕಲ್ ಮಟೀರಿಯಲಿಸಂ’ ಅಡಿಯಲ್ಲಿ ಸಮಾಜದ ‘ಗುಣಾತ್ಮಕ ಬದಲಾವಣೆ- ತುಲನಾತ್ಮಕ ಬದಲಾವಣೆ’ಗಳು ಹೇಗೆ ಸಾಧ್ಯ ಎಂದು ವಿವರಿಸಲಾಗಿತ್ತು. ಇದನ್ನೇ ನಮ್ಮಲ್ಲಿ ‘ಪಾಪದ ಕೊಡ ತುಂಬಿದರೆ’ ಎಂಬ ಪರಿಕಲ್ಪನೆಯ ಅಡಿಯಲ್ಲಿ ವೈಯಕ್ತಿಕ ಬದಲಾವಣೆಯ ಗತಿಯನ್ನು ಅರ್ಥೈಸಿಕೊಂಡಿದ್ದೆವು ಕೂಡ. ಇವುಗಳನ್ನು ಸರಿಯಾದ ಸಾರದಲ್ಲಿ, ವಿಜ್ಞಾನದ ಕಾರಣಕ್ಕೆ ಕಾಲಕಾಲಕ್ಕೆ ಬರುವ ರಚನಾತ್ಮಕ ಸ್ಥಿತ್ಯಂತರಗಳನ್ನು ಪುಸ್ತಕ ಗುರುತಿಸಲು ಸಹಾಯ ಮಾಡಿತು. ‘‘ವಿಜ್ಞಾನದ ಬೆಳವಣಿಗೆ, ಕೇವಲ ಹುಡುಕಾಟದ ಮನೋಭಾವನೆಗಳನ್ನು ಮಾತ್ರವೇ ಬದಲಾಯಿಸುವುದಿಲ್ಲ, ಜತೆಗೆ ಆ ಕಾಲಘಟ್ಟದ ಸಾಮಾಜಿಕ ಸಂರಚನೆಗಳನ್ನು, ಸಾಮೂಹಿಕ ನಡವಳಿಕೆಗಳನ್ನು, ಕುಲಾಚಾರವನ್ನೂ ಬದಲಿಸುತ್ತವೆ’’ ಎಂಬುದು ಥಾಮಸ್ ಕೂನ್ ಪುಸ್ತಕ ಮುಂದಿಟ್ಟಿದ್ದ ವಾದವಾಗಿತ್ತು.

ಹಾಗೆ ನೋಡಿದರೆ, ಈ ಪುಸ್ತಕ ಹೊರಬೀಳುವ ಮುನ್ನವೇ ನಾಗರಿಕ ಸಮಾಜ ವಿಜ್ಞಾನದ ಪ್ರಗತಿಯ ಕಾರಣಕ್ಕೆ ರಚನಾತ್ಮಕ ಸ್ಥಿತ್ಯಂತರವೊಂದನ್ನು ಮೊದಲು ಕಂಡಿದ್ದು ‘ಸೂರ್ಯನ ಸುತ್ತ ಭೂಮಿ ಸುತ್ತುತ್ತಿದೆ’ ಎಂಬುದನ್ನು ಒಪ್ಪಿಕೊಂಡಾಗಲೇ. ವಿಜ್ಞಾನಿ ಗೆಲಿಲಿಯೋನ ದಾರುಣ ಅಂತ್ಯಕ್ಕೆ ಕಾರಣವಾದ ಈ ಬೆಳವಣಿಗೆ, ‘ವಿಜ್ಞಾನ ಧರ್ಮ’ಗಳ ನಡುವೆ ಸಮನ್ವಯ ಇರಲು ಸಾಧ್ಯವೇ ಇಲ್ಲ ಎಂಬ ವಾದವು 18ರ ದಶಕದ ಮಧ್ಯಭಾಗದಲ್ಲಿ ಬಲಗೊಳ್ಳಲು ಕಾರಣವಾಗಿತ್ತು. ಹೊಸ ತಲೆಮಾರಿನ ವಿಜ್ಞಾನ ಮಾತ್ರ, ಹಳೆಯ ನಂಬಿಕೆಗಳು ಹಾಗೂ ವೈಜ್ಞಾನಿಕ ಪ್ರಗತಿ ನಡುವಿನ ಸಂಬಂಧ ‘ಹಲವು ಆಯಾಮಗಳನ್ನು ಹೊಂದಿದೆ’ ಕೇವಲ ಶತ್ರುತ್ವವನ್ನು ಆರೋಪಿಸುವುದು ತಪ್ಪಾಗುತ್ತದೆ ಎಂದು ವಾದಿಸಿದೆ. ಗೆಲಿಲಿಯೋ ಪ್ರಸಂಗವನ್ನು Exceptional ಸಾಲಿಗೆ ಸೇರಿಸಿದೆ, ಇರಲಿ.

ಹಾಗೆ ‘ಭೂಮಿ ಕೇಂದ್ರಿತ ಕಲ್ಪನೆ’ಯಿಂದ ಹೊರಬಂದ ನಂತರದಲ್ಲಿ ಮತ್ತೊಂದು ಮಹತ್ವದ ನೆಗೆತ ತಂದುಕೊಟ್ಟಿದ್ದು, ‘ಕೈಗಾರಿಕಾ ಕ್ರಾಂತಿ’ ಹಾಗೂ ಪ್ರಾದೇಶಿಕ ನೆಲಗಳಲ್ಲಿ ನಡೆದ ‘ಸಾಮಾಜಿಕ ಕ್ರಾಂತಿ’ಗಳು. ಈ ಸಮಯದಲ್ಲಿ ಹಡಗುಗಳಿಂದ ಹಿಡಿದು, ಅಂಚೆ-ತಂತಿಯವರೆಗೆ ವಿಜ್ಞಾನ ಕಂಡುಕೊಂಡ ಆವಿಷ್ಕಾರಗಳು ನೀಡಿದ ಪ್ರತಿಫಲ ಈಗಾಗಲೇ ಜಗತ್ತಿನ ಮುಂದಿದೆ. ಇದು ಕೂಡ ರಚನಾತ್ಮಕ ಸ್ಥಿತ್ಯಂತರದ ಮತ್ತೊಂದು ಮಹತ್ವದ ಮೈಲಿಗಲ್ಲು ಎಂದೇ ಗುರುತಿಸಲಾಗುತ್ತಿದೆ.

‘‘ಹಾಗೆ ನೋಡಿದರೆ, ವಿಜ್ಞಾನದ ಬೆಳವಣಿಗೆಗಳು ಡೋಲು- ಡಂಗೂರ ಸಾರಿಸಿಕೊಂಡು ಬರುವುದಿಲ್ಲ. ಸುಪ್ತವಾಗಿಯೇ ಬದಲಾವಣೆಗಳಿಗೆ ಕಾರಣವಾಗುತ್ತವೆ. ಕೇವಲ ವಿಜ್ಞಾನದ ಲ್ಯಾಬ್‌ನಲ್ಲಿ ಮಾತ್ರವೇ ಇರುತ್ತದೆ ಎಂಬ ಕಾಲ ಹೋಗಿಯಾಗಿದೆ. ಕೆಲವೇ ವರ್ಷಗಳ ಹಿಂದೆ, ಯಾವ ಹಾರ-ತುರಾಯಿಗಳ ಅವಶ್ಯಕತೆ ಇಲ್ಲದೆ ಬೀದಿಗೆ ಇಳಿದ ಮೊಬೈಲ್ ಎಂಬ ಸಲಕರಣೆ ಇವತ್ತು ಮನಸ್ಸುಗಳನ್ನೇ ಆಕ್ರಮಿಸಿಕೊಂಡಿದೆ’’ ಎಂದು ವಿವರಿಸುತ್ತಾರೆ ಡಾ. ಶ್ರೀಧರ.

ಸಮಾಜದಲ್ಲಿ ವೈಜ್ಞಾನಿಕ ಶಿಕ್ಷಣ ಹಾಗೂ ಜಾಗೃತಿಯ ಮೂಲಕವೇ ರಚನಾತ್ಮಕ ಬದಲಾವಣೆಗಳಾಗುತ್ತವೆ ಎಂದು ಇಂದಿನ ವಿಜ್ಞಾನವೂ ವ್ಯಾಖ್ಯಾನಿಸಿರುವುದು ಗಮನಾರ್ಹ. ಹೀಗಾಗಿಯೇ ‘ಲೈಫ್ ಸೈನ್ಸ್’ ಕುರಿತು ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ಅರಿವು ಮೂಡಿಸುವುದು ಪ್ರಮುಖ ಕೆಲಸವಾಗಬೇಕು ಎಂದೂ ಹೇಳಲಾಗುತ್ತಿದೆ. ಈ ಕುರಿತು ಸಾಕಷ್ಟು ಕಾರ್ಯಕ್ರಮಗಳು ಜಾಗತಿಕ ಮಟ್ಟದಲ್ಲಿ ನಡೆದುಕೊಂಡು ಬಂದಿವೆ ಕೂಡ. ಭಾರತದ ಸಂವಿಧಾನ ಕೂಡ ‘ವೈಜ್ಞಾನಿಕ ಮನೋಭಾವನೆ’ ಬೆಳೆಸಿಕೊಳ್ಳುವುದು ಮೂಲಭೂತ ಕರ್ತವ್ಯ ಎನ್ನುತ್ತದೆ. ಅದರ ಮುಂದುವರಿದ ಭಾಗವಾಗಿರುವ, ‘ಪಾಲಂಪೂರ್ ಡಿಕ್ಲರೇಷನ್- 2011’ ಹದಿಮೂರು ವರ್ಷಗಳ ಹಿಂದೆಯೇ, ‘ಏನ್ರಿ ಮೀಡಿಯಾ’ವನ್ನು ಗಂಭೀರವಾಗಿ ಪರಿಗಣಿಸಿತ್ತು, ಅದಕ್ಕಾಗಿ ಸಂವಹನ ಮಾಧ್ಯಮಗಳಲ್ಲಿ ಬರಬೇಕಾದ ಬದಲಾವಣೆಗಳನ್ನು ಪಟ್ಟಿ ಮಾಡಿತ್ತು. ಆದರೆ ನಂತರ ಬಂದ ರಾಜಕೀಯ ಬದಲಾವಣೆಯ ಅಲೆ ವಿಜ್ಞಾನವನ್ನು ಮುನ್ನೆಲೆಯಿಂದ ಅಳಿಸಿಹಾಕುವ ಪ್ರಯತ್ನದಲ್ಲಿರುವಂತೆ, ಆದರೆ ಪದೇ ಪದೇ ವಿಫಲವಾಗಿರುವಂತೆ ಕಾಣಿಸುತ್ತಿದೆ. ಮಿತಿಗಳ ನಡುವೆಯೇ, ವಿಜ್ಞಾನ ಲೋಕ ದಾಖಲಿಸಿರುವ ಪ್ರಗತಿ ಕೂಡ, ಈ ಕಾಲಘಟ್ಟದ ಮನಸ್ಥಿತಿಯಲ್ಲಿ ರಚನಾತ್ಮಕ ಸ್ಥಿತ್ಯಂತರಕ್ಕೆ ಕಾರಣವಾಗಿರಬಹುದು.

ಹಾಗಂತ, ಪ್ರತಿಸಾರಿಯೂ ಇಂತಹ ಬದಲಾವಣೆಗಳಿಗೆ ಸಮಾಜದ ಒಂದಿಲ್ಲೊಂದು ವರ್ಗ ತಡೆಯೊಡ್ಡುವ ಪ್ರಯತ್ನಗಳೂ ಇರುತ್ತವೆ ಎಂಬ ಐತಿಹಾಸಿಕ ಸತ್ಯವನ್ನು ಮರೆಯಬಾರದು. ಅನುಮಾನ ಹುಟ್ಟಿಸುವುದು ಅಥವಾ ಮುಖ್ಯವಾಹಿನಿಯ ಚರ್ಚೆಗಳಿಂದ ಹೊರಗಿಡುವುದು ಈವರೆಗೆ ಕಂಡುಕೊಂಡು ಬಂದ ವಿಜ್ಞಾನದ

ವಿರೋಧ ಪಂಥದ ಪ್ರತಿತಂತ್ರಗಳ ಒಟ್ಟು ಸಾರ. ಆದರೆ ಡಿಜಿಟಲ್ ತಂತ್ರಜ್ಞಾನ ಆವರಿಸಿಕೊಂಡಿರುವ ಈ ಹೊತ್ತಿನಲ್ಲಿ ಹಳೆಯ ಪ್ರತಿತಂತ್ರಗಳು ಯಶಸ್ವಿಯಾಗುತ್ತಿಲ್ಲ. ಇವತ್ತಿನ ಸಾಮಾಜಿಕ ಮನಸ್ಥಿತಿಯಲ್ಲಿ ಸಂಶಯವಾಗಲೀ, ನಿರಾಸಕ್ತಿಯಾಗಲೀ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಹೊಸ ಕಾಲಘಟ್ಟದಲ್ಲಿ, ವಿಜ್ಞಾನ ತಂದಿರುವ ರಚನಾತ್ಮಕ

ಸ್ಥಿತ್ಯಂತರಗಳಿಗೆ ವಿರೋಧ ಹೇಗಿರಬಹುದು? ಎಂಬ ಕುತೂಹಲವಂತೂ ಇದ್ದೇ ಇದೆ. ಹಾಗೆ ನೋಡಿದರೆ, ಭಾರತದ ವಿಜ್ಞಾನಿಗಳು ಚಂದ್ರ ಗ್ರಹದ ದಕ್ಷಿಣದ ಮೇಲೆ ಕಾಲಿಟ್ಟಾಗ ಪ್ರಧಾನ ಮಂತ್ರಿಗಳು ವಿಜ್ಞಾನ ಲೋಕದ ಕಾಲಾಳುಗಳನ್ನು ಕೊಂಡಾಡಿದ ಪರಿ ಅಚ್ಚರಿದಾಯಕವಾಗಿತ್ತು. ವಿಜ್ಞಾನದ ಪ್ರಗತಿಗಳನ್ನು ಜನಮಾನಸದಿಂದ ಅಳಿಸಲು ಸಾಧ್ಯವಾಗದ ಸನ್ನಿವೇಶ ಹೇಗೆಲ್ಲಾ ಸೃಷ್ಟಿಯಾಗಿದೆ ಎಂಬುದರ ನಿದರ್ಶನದಂತೆ

ಈ ನಡವಳಿಕೆ ಕಾಣಿಸಿತು. ಆಯಾ ಕಾಲಘಟ್ಟದಲ್ಲಿ ಭಾಷೆಗಳನ್ನು ನಿಯಂತ್ರಿಸುವುದರಿಂದ ಆರಂಭವಾದ ರಾಜಕೀಯ ಎಂಬ ವ್ಯವಸ್ಥೆ ಇವತ್ತು ‘ಫಿಲಾಸಫಿ ಆಫ್ ಸೈನ್ಸ್’ ಎಂದು ಕರೆಯುವ ವಿಜ್ಞಾನದ ತಿಳಿವಳಿಕೆ ಮುಂದೆ ಮಂಡಿಯೂರಿದೆ ಕೂಡ. ಹೊಸ ತಲೆಮಾರಿನ ರಾಜಕಾರಣದಲ್ಲಿ ಪಾರದರ್ಶಕತೆ ಮತ್ತು ಅಧಿಕಾರದ ವಿಕೇಂದ್ರೀಕರಣ ತರುವ ಮೂಲಕ ವಿಜ್ಞಾನ ರಾಜಕೀಯ ಪಲ್ಲಟಕ್ಕೂ ಕಾರಣವಾಗುತ್ತಿರುವುದನ್ನು ಈ ಸಮಯದಲ್ಲಿ ಗಮನಿಸಬೇಕಿದೆ.

 

PC : AI

ಮೊದಲೇ ಹೇಳಿದಂತೆ ಸಾಮೂಹಿಕ ಮನಸ್ಥಿತಿ, ಮನೋಭಿಲಾಷೆಗಳು, ಸಂಬಂಧಗಳ ಮರುವ್ಯಾಖ್ಯಾನ, ಕುಲಾಚಾರಗಳಲ್ಲಿ ತಂದುಕೊಳ್ಳುವ ಬದಲಾವಣೆಗಳೇ ನಿಜವಾದ ‘ರಚನಾತ್ಮಕ ಸ್ಥಿತ್ಯಂತರ’ ಎಂಬುದನ್ನು ಇವತ್ತು ವಿಜ್ಞಾನ ಒಪ್ಪಿಕೊಂಡಿದೆ. ಬಹುಶಃ ಜನ ತಮ್ಮ ಮನಸ್ಸುಗಳನ್ನು ಆಕ್ರಮಿಸಿಕೊಂಡಿರುವ ಮೊಬೈಲ್ ಹಾಗೂ ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೆ ದೇಹಕ್ಕಾಗಿ ಬಳಸುವ ವಿಜ್ಞಾನದ ಆವಿಷ್ಕಾರಗಳ ಬಗೆಗೆ ಚಿಕ್ಕದೊಂದು ಕೃತಜ್ಞತಾಭಾವವನ್ನು ಹೊರಹಾಕಿದರೂ ಸಾಕಿದೆ. ವೈಜ್ಞಾನಿಕ ಪ್ರಗತಿ ವೇಗ ಪಡೆದುಕೊಳ್ಳುತ್ತದೆ. ವೈಜ್ಞಾನಿಕ ಜಗತ್ತು ಸಮರ್ಥವಾಗಿ ಎದುರುಗೊಳ್ಳಲು, ‘ಸೈಬರ್ ಸೆಕ್ಯುರಿಟಿ’ ಎಂಬ ಹೆಸರಿನಲ್ಲಿ ಈ ಹೊತ್ತಿಗೆ ನಡೆಸುತ್ತಿರುವ ಅಗೋಚರ ಯುದ್ಧಗಳಿಂದ ರಕ್ಷಿಸಿಕೊಳ್ಳಲು ಜಾಗೃತ ಮನಸ್ಥಿತಿಯೊಂದರ ಅವಶ್ಯ ಇದ್ದೇ ಇದೆ. ಇಂತಹ ವೈಜ್ಞಾನಿಕ ಮನೋಭಾವನೆಯ ಬೆಳವಣಿಗೆಗೆ 2025 ಕಾರಣವಾಗಲಿ ಎಂಬ ಆಶಯಗಳೊಂದಿಗೆ, ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಪ್ರಶಾಂತ್ ಹುಲ್ಕೋಡು

contributor

Similar News