ಕರಾವಳಿಯ ಸೌಹಾರ್ದ ಸಂಸ್ಕೃತಿ ಮತ್ತು ಕೋಮುವಾದ

ಪತ್ರಕರ್ತ, ಲೇಖಕ ನವೀನ್ ಸೂರಿಂಜೆ ಅವರು ಕರಾವಳಿಯ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ವಿಶ್ಲೇಷನಾತ್ಮಕವಾದ ಬರಹಗಳ ಮೂಲಕ ಈಗಾಗಲೇ ಚಿರಪರಿಚಿತರು. ಸಾಮಾಜಿಕ ಹೋರಾಟಗಳಲ್ಲೂ ಗುರುತಿಸಿಕೊಂಡವರು. ತನಿಖಾ ಪತ್ರಿಕೋದ್ಯಮದಲ್ಲಿ ಆಸಕ್ತಿಯನ್ನು ಹೊಂದಿದವರು. ಇವರ ಲೇಖನಗಳು, ವಿಶೇಷ ವರದಿಗಳು ನಾಡಿನ ಹಲವು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನೇತ್ರಾವತಿಯಲ್ಲಿ ನೆತ್ತರು, ಸದನದಲ್ಲಿ ಶ್ರೀರಾಮ ರೆಡ್ಡಿ, ಕುತ್ಲೂರು ಕಥನ, ನಡುಬಗ್ಗಿಸದ ಎದೆಯ ದನಿ ಇವರ ಪ್ರಮುಖ ಕೃತಿಗಳು.

Update: 2025-01-01 10:18 GMT

ಬಹುಸಂಸ್ಕೃತಿಯ ಸಮೃದ್ಧ ನಾಡು ಆಗಿರುವ ಕರ್ನಾಟಕದ ಪಶ್ಚಿಮ ಕರಾವಳಿಗೆ ಮತೀಯವಾದ ಎನ್ನುವುದು ಕಪ್ಪು ಚುಕ್ಕೆಯಾಗಿದೆ. ಮಂಗಳೂರನ್ನು ‘ಹಿಂದುತ್ವ ನೆಲ’ ಎಂದೆಲ್ಲಾ ಕರೆಯುವ ಬಲಪಂಥೀಯರು ಕರಾವಳಿಯ ಇತಿಹಾಸ ಮತ್ತು ಜನಪದವನ್ನು ಅಧ್ಯಯನ ಮಾಡಬೇಕು. ಕರಾವಳಿಯ ಸಂಸ್ಕೃತಿ ಮತ್ತು ಇತಿಹಾಸದ ಮೇಲೆ ದಾಳಿ ಮಾಡಿಯೇ ಬಲಪಂಥೀಯರು ‘ಹಿಂದುತ್ವ’ದ ಕೋಟೆಯನ್ನು ಕಟ್ಟಿಕೊಂಡಿದ್ದಾರೆ.

ಕರಾವಳಿಯ ಇತಿಹಾಸದ ಪ್ರಕಾರ, ಪಾಂಡ್ಯ ರಾಜ ಚೆಟ್ಟಿಯನ್ ಕ್ರಿ.ಶ.715ರಲ್ಲಿ ಇದನ್ನು ಮಂಗಲಾಪುರಂ ಎಂದು ಕರೆದಿದ್ದ. 11ನೇ ಶತಮಾನದಲ್ಲಿ ಅರಬಿ ಪ್ರವಾಸಿಗ, ಇಸ್ಲಾಂ ಧರ್ಮಾನುಯಾಯಿ ಇಬ್ನ್ ಬಬೂತ ಎಂಬಾತ ಮಂಗಳೂರನ್ನು ಮಂಜರೂರ್ ಎಂದು ಕರೆದ. ಕ್ರಿ.ಶ. 1526ರಲ್ಲಿ ಪೋರ್ಚುಗೀಸರ ವಶವಾದಾಗ ಅವರು ಮ್ಯಾಂಗಲೋರ್ ಎಂದು ಕರೆದರು. 1799 ರಲ್ಲಿ ಮಂಗಳೂರು ಬ್ರಿಟಿಷರ ವಶವಾದಾಗ ಅವರೂ ಇಂಗ್ಲಿಷ್ ಉಚ್ಚಾರದಲ್ಲಿ ಮ್ಯಾಂಗಲೋರ್ ಎಂದೇ ಕರೆದರು. ತುಳುವಿನಲ್ಲಿ ಮಂಗಳೂರನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿ ಭಾಷಿಕ ಕ್ರಿಶ್ಚಿಯನ್ನರು ಮತ್ತು ಕೊಂಕಣಿ ಬ್ರಾಹ್ಮಣರು ಕೊಡಿಯಾಲ್ ಎಂದು ಕರೆಯುತ್ತಾರೆ. ಕೊಡಿಯಾಲ್ ಎನ್ನುವುದೇ ತುಳುವಿನಲ್ಲಿ ಅಪಭ್ರಂಷಗೊಂಡು ಅಥವಾ ಸರಳೀಕೃತಗೊಂಡು ಕುಡಾಲ್/ಕುಡ್ಲ ಆಗಿದೆ. ಬ್ಯಾರಿ ಮುಸ್ಲಿಮರು ಮಂಗಳೂರನ್ನು ಮೈಕಾಲ ಎಂದು ಕರೆಯುತ್ತಾರೆ. ಕುಡ್ಲ ಅಥವಾ ಕೊಡಿಯಾಲ ಎಂದು ಮಂಗಳೂರಿಗೆ ಹೆಸರು ಇಟ್ಟಿದ್ದು ಟಿಪ್ಪು ಸುಲ್ತಾನನ ತಂದೆ ಹೈದರಲಿ! (ಆಧಾರ: HISTORY OF THE Catholic Community of SOUTH KANARA BY A.L.P D’SOZA-1983) ಅಂದಿನಿಂದ ಇಂದಿನವರೆಗೂ ಹೈದರಲಿ ಕೊಟ್ಟ ‘ಕೊಡಿಯಾಲ್’ ಹೆಸರನ್ನು ಕರಾವಳಿಗರು ಬಳಸುತ್ತಿದ್ದಾರೆ. ತುಳುವರು ಇನ್ನೂ ಪ್ರೀತಿಯಿಂದ ‘ಕುಡಲ, ಕುಡ್ಲ’ ಎನ್ನುತ್ತಾರೆ.

ಸಾಂಸ್ಕೃತಿಕವಾಗಿ, ಕರಾವಳಿಯ ಹಿಂದೂ ಮುಸ್ಲಿಮರು ಯಾವ ವ್ಯತ್ಯಾಸವೂ ಇಲ್ಲದೇ ಬೆರೆತು ಹೋಗಿದ್ದರು. ಹಿಂದೂ ಆಚರಣೆಗಳಲ್ಲಿ ಬ್ಯಾರಿ ಮುಸ್ಲಿಮರ ಪ್ರಭಾವವೂ, ಮುಸ್ಲಿಮರ ಆಚರಣೆಗಳಲ್ಲಿ ಹಿಂದೂ ಆಚರಣೆಗಳ ಪ್ರಭಾವವೂ ಗಾಢವಾಗಿದೆ. ಆರ್ಥಿಕ ವ್ಯವಹಾರ, ಉದ್ಯೋಗಗಳೂ ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ ಎನ್ನುವಷ್ಟು ಹಿಂದೂ ಮುಸ್ಲಿಮರ ಮಧ್ಯೆ ಬೆರೆತು ಹೋಗಿದೆ.

ಕರಾವಳಿಯಲ್ಲಿ ಬೆಳ್ಚಡ ಎಂಬ ಸಮುದಾಯವಿದೆ. ಇವರನ್ನು ಮಲಯಾಳಿ ಬಿಲ್ಲವರು ಎಂದೂ ಕರೆಯುತ್ತಾರೆ. ಇವರ ಮಾತೃ ಭಾಷೆ ಕರಾವಳಿಯ ಮುಸ್ಲಿಮರು ಮಾತನಾಡುವ ಬ್ಯಾರಿ ಭಾಷೆ. 80 ರ ದಶಕದ ಮೊದಲು ಮಂಗಳೂರಿನ ಉಳ್ಳಾಲದಲ್ಲಿ ಮುಸ್ಲಿಮರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮದೇ ಸರಹದ್ದು ಎಂಬಂತೆ ಬದುಕಿದ್ದರು. ಭಾಷೆಯ ಕಾರಣಕ್ಕಾಗಿ ಬೆಳ್ಚಡ ಸಮುದಾಯವೂ ಕೂಡಾ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಉಳ್ಳಾಲದಲ್ಲಿ ನೆಲೆ ಕಂಡುಕೊಂಡಿತ್ತು. ಹಿಂದೂ ಧರ್ಮದ ಬೆಳ್ಚಡರು ಮತ್ತು ಬ್ಯಾರಿಗಳನ್ನು ಭಾಷೆ ಒಂದಾಗಿಸಿತ್ತು. ಈ ಸಂಬಂಧವನ್ನು ಒಡೆಯಬೇಕು ಎನ್ನುವ ಕಾರಣಕ್ಕಾಗಿ 1988 ರಲ್ಲಿ ಆರೆಸ್ಸೆಸ್ ಕಾರ್ಯಯೋಜನೆ ರೂಪಿಸಿತ್ತು.

ಉಳ್ಳಾಲದ ಐತಿಹಾಸಿಕ ದರ್ಗಾದ ಸನಿಹದಲ್ಲೇ ಬೆಳ್ಚಡರ ಭಗವತಿ ದೇವಸ್ಥಾನವಿದೆ. ಹಬ್ಬ, ಮತಪ್ರಸಂಗ, ರಮಝಾನ್, ಜಾತ್ರೆ, ಉಪವಾಸಗಳಲ್ಲಿ ಎರಡೂ ಧರ್ಮದ ಜನರು ಪರಸ್ಪರ ಬೆರೆಯುತ್ತಿದ್ದರು. ಮಾತೃಭಾಷೆಯೂ ಒಂದೇ ಆಗಿದ್ದರಿಂದ ಸಂಬಂಧ ಹೆಚ್ಚು ಗಟ್ಟಿಯಾಗಿತ್ತು. ಇಂತಹ ಸಂದರ್ಭದಲ್ಲೇ, ಉಳ್ಳಾಲದ ಸೈಯದ್ ಮದನಿ ದರ್ಗಾದಲ್ಲಿ 27.03.1988 ರಲ್ಲಿ ರಮಝಾನ್ ಪ್ರಯುಕ್ತ ಮಧ್ಯರಾತ್ರಿಯವರೆಗೆ ಮತ ಪ್ರಸಂಗ ನಡೆಯುತ್ತಿತ್ತು. ದರ್ಗಾದ ಎದುರುಗಡೆ ಬೆಳ್ಚಡ ಸಮುದಾಯಕ್ಕೆ ಸೇರಿದ ಭಗವತಿ ದೇವಸ್ಥಾನದ ವಾರ್ಷಿಕ ಜಾತ್ರೆ 26.03.1988 ರಿಂದ ಪ್ರಾರಂಭವಾಗಿತ್ತು. ಭಗವತಿ ದೇವಸ್ಥಾನದಿಂದ ಭಕ್ತರು ಹಿಂದಿರುಗುವಾಗ ಅದರ ಮಧ್ಯೆ ಸೇರಿಕೊಂಡ ಕೆಲ ದುಷ್ಕರ್ಮಿಗಳು ದೇವಸ್ಥಾನದ ಮುಂಭಾಗದಲ್ಲಿದ್ದ ಮುಹಿಯುದ್ದೀನ್ ಎಂಬವರ ಮನೆ ಮುಂದೆ ಕೋಳಿ ಪುಕ್ಕಗಳನ್ನು ಉದ್ದೇಶಪೂರ್ವಕವಾಗಿ ಹಾಕಿದ್ದರು. ಈ ಬಗ್ಗೆ ಮುಹಿಯುದ್ದೀನ್ ಅವರು ತಮ್ಮ ಆಪ್ತರೇ ಇರುವ ಭಗವತಿ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟ್‌ಗೆ ದೂರು ನೀಡಿದ್ದರು. ಭಗವತಿ ದೇವಸ್ಥಾನದ ಆಡಳಿತ ಮಂಡಳಿಯವರು ತಕ್ಷಣ ದೇವಸ್ಥಾನದ ಮೈಕ್‌ನಲ್ಲಿ ತಮ್ಮ ಸಮಾಜ ಬಾಂಧವರಿಗೆ ತಿಳುವಳಿಕೆ ನೀಡಿದರು. ‘ಧಾರ್ಮಿಕ ಕಾರ್ಯವನ್ನು ಯಾರಿಗೂ ನೋವು ತರದಂತೆ ನಿರ್ವಹಿಸಿ’ ಎಂದು ಮೈಕ್ ಮೂಲಕ ಅನೌನ್ಸ್ ಮಾಡಿದರು. ಸೌಹಾರ್ದ ಹಾಳು ಮಾಡಲು ಹೊರಟಾಗ ಸೌಹಾದರ್ತೆ ಇನ್ನಷ್ಟು ಗಟ್ಟಿಯಾಗಿರುವುದು ಕಂಡು ದುಷ್ಕರ್ಮಿಗಳು ಹತಾಶರಾಗಿದ್ದರು. ಹಾಗಾಗಿ ದಿನಾಂಕ 27.03.1988 ರಂದು ಮುಂಜಾನೆ 3 ಗಂಟೆಗೆ ದೇವಸ್ಥಾನದ ಮುಂದೆ ಸರಣಿ ಪಟಾಕಿ ಸಿಡಿಸಲಾಯಿತು. ಪಟಾಕಿ ಸದ್ದಿನ ಮಧ್ಯೆ ದುಷ್ಕರ್ಮಿಗಳು ಮುಹಿಯುದ್ದೀನ್ ಅವರ ಮನೆಗೆ ನುಗ್ಗಿ ಕಿಟಕಿಗಳ ಮತ್ತು ಕಾರಿನ ಗಾಜುಗಳನ್ನು ಒಡೆದು ಹಾಕಿ ದಾಂಧಲೆ ನಡೆಸಿದರು.

 

ಇದು ಹಿಂದೂ-ಮುಸ್ಲಿಮ್ ಮಧ್ಯೆ ಇದ್ದ ಸಾಂಸ್ಕೃತಿಕ-ಧಾರ್ಮಿಕ ಬಾಂಧವ್ಯವನ್ನು ಕೆಡಿಸಲು ನಡೆಸಿದ ವ್ಯವಸ್ಥಿತ ಸಂಚಾಗಿತ್ತು ! ಮಾತೃಭಾಷೆಯ ಕಾರಣಕ್ಕಾಗಿ ಬೆರೆತು ಹೋಗಿದ್ದ ಬೆಳ್ಚಡರು ಮತ್ತು ಬ್ಯಾರಿಗಳನ್ನು ಧರ್ಮದ ಕಾರಣಕ್ಕಾಗಿ ವಿಘಟಿಸಲಾಯಿತು.

ಮುಸ್ಲಿಮರು ಮತ್ತು ಮೊಗವೀರರ ಮಧ್ಯೆ ಒಂದು ವ್ಯಾವಹಾರಿಕ ಸಂಬಂಧವಿದೆ. ಮೊಗವೀರರು ಮೀನು ಹಿಡಿದರೆ ಅದನ್ನು ಹರಾಜಿನ ಮೂಲಕ ಮಾರಾಟ ಮಾಡುವುದು ಬ್ಯಾರಿ ಮುಸ್ಲಿಮರು. ಈ ವ್ಯಾವಹಾರಿಕ ಸಂಬಂಧ ಗೆಳೆತನವಾಗಿ ಮಾರ್ಪಟ್ಟಿತ್ತು. ಈ ಸಂಬಂಧವನ್ನೇ ಹಿಡಿದುಕೊಂಡು ಕರಾವಳಿಯ ಖ್ಯಾತ ನಿರ್ದೇಶಕ, ಲೇಖಕ ವಿಶುಕುಮಾರ್ ಅವರು 1979ರಲ್ಲಿ ‘ಕರಾವಳಿ’ ಎನ್ನುವ ಕನ್ನಡ ಚಲಚಿತ್ರ ನಿರ್ಮಾಣ ಮಾಡಿದರು. ಅದು ಮೀನು ವ್ಯಾಪಾರಿ ಮುಸ್ಲಿಮ್ ಯುವಕ ಮತ್ತು ಮೊಗವೀರ ಸಮುದಾಯದ ಮೀನು ಮಾರುವ ಹುಡುಗಿಯ ನಡುವಿನ ಪ್ರೇಮ ಕತೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಹಿಂದುತ್ವವಾದಿಗಳು ಗದ್ದಲ ಎಬ್ಬಿಸಿದರು. ಒಳ್ಳೆಯ ಆಶಯದ ಸಿನೆಮಾವನ್ನು ಕೋಮುವಾದಿಗಳು ಕೋಮು ಅಜೆಂಡಾಕ್ಕೆ ಬಳಸಿಕೊಂಡರು. ತಮ್ಮ ಮನೆಯ ಹುಡುಗಿಯರನ್ನು ರಕ್ಷಿಸಿಕೊಳ್ಳಬೇಕಾದರೆ ಮೊಗವೀರರು ಕೋಮುಗಲಭೆಗಳಲ್ಲಿ ಭಾಗಿಯಾಗುವಂತೆ ಹಿಂದುತ್ವವಾದಿಗಳು ಪ್ರಚೋದಿಸಿದರು. ಇದು ಮೊಗವೀರ-ಬ್ಯಾರಿ ಮುಸ್ಲಿಮರ ನಡುವೆ ಇದ್ದ ಸಾಮಾಜಿಕ ಸಂಬಂಧದ ಮಧ್ಯೆ ಕಂದಕ ನಿರ್ಮಿಸಿತು.

ಕೋಮುಗಲಭೆಗಳ ಬಗ್ಗೆ ಅಧ್ಯಯನ ಮಾಡುವ ದೃಷ್ಟಿಯಿಂದ ಸರಕಾರಿ ದಾಖಲೆಗಳನ್ನು ತಿರುವಿ ಹಾಕಿದರೆ ಇಂತಹ ಘನಘೋರ ಘಟನೆಗಳು ಮಂಗಳೂರಿನಲ್ಲಿ ನಡೆದಿದೆ ಎಂಬ ಸಾಕ್ಷ್ಯ ಲಭಿಸುತ್ತದೆ. ಸರಕಾರಿ ದಾಖಲೆಗಳು ಹೇಳುವ ಪ್ರಕಾರ 1991 ಎಪ್ರಿಲ್ ನಿಂದ 1992 ಡಿಸೆಂಬರ್ ವರೆಗೆ ಮಂಗಳೂರಿನಲ್ಲಿ 787 ಕೋಮುಗಲಭೆಗಳು ನಡೆದಿದ್ದವು. 20 ತಿಂಗಳಲ್ಲಿ 787 ಕೋಮುಗಲಭೆ ಎಂದರೆ ತಿಂಗಳಿಗೆ 39 ಕೋಮುಗಲಭೆಗಳು ! ಈ ಅವಧಿಯಲ್ಲಿ 8 ಜನ ಸಾವನ್ನಪ್ಪಿದ್ದರು! 1991 ರ ಕೋಮುಗಲಭೆಯಲ್ಲಿ ಮೊಗವೀರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ಕೋಮುವಾದಿಗಳು ಇಡೀ ರಾಜ್ಯದ ಗಮನವನ್ನು ಮಂಗಳೂರಿನತ್ತ ಸೆಳೆಯುವಂತೆ ಮಾಡಿ ಇಡೀ ರಾಜ್ಯದಲ್ಲಿ ಕೋಮುವಾದವನ್ನು ತಣ್ಣಗೆ ಹರಡಿ ಬಿಡುತ್ತಾರೆ. 1990 ರಲ್ಲಿ ಬೆಂಗಳೂರು ನಗರ, ರಾಮನಗರ, ಚನ್ನಪಟ್ಟಣ, ದೊಡ್ಡ ಬಳ್ಳಾಪುರ, ಕೋಲಾರ, ಮುಳಬಾಗಿಲು, ದಾವಣಗೆರೆ, ಹುಬ್ಬಳ್ಳಿ ನಗರ, ಅರಕಲಗೂಡು, ಚನ್ನರಾಯಪಟ್ಟಣ, ಸಕಲೇಶಪುರ, ಸೋಮವಾರ ಪೇಟೆ ತಾಲೂಕು, ಬಂಗಾರಪೇಟೆ, ಕೆ.ಜಿ.ಎಫ್. ಗುಣಿಗಲ್, ಚನ್ನಗಿರಿ, ತುಮಕೂರು ನಗರಗಳಲ್ಲಿ ಅಲ್ಲಲ್ಲಿ ಬೇರೆ ಬೇರೆ ಸಮಯದಲ್ಲಿ ಕೋಮುಗಲಭೆಗಳು ನಡೆಯುತ್ತವೆ. 1990 ರಲ್ಲಿ ರಾಜ್ಯದಲ್ಲಿ ಒಟ್ಟು 69 ಜನ ಕೋಮುಗಲಭೆಯಲ್ಲಿ ಸಾವನ್ನಪ್ಪಿದ್ದರು. ಕೋಮುಗಲಭೆ ಸಂಬಂಧ ನಡೆದ ಪೊಲೀಸ್ ಗೋಲಿಬಾರ್‌ನಲ್ಲಿ 8 ಜನ ಸಾವನ್ನಪ್ಪಿದ್ದರು. ಆದರೆ, ಕರಾವಳಿ ಹಿಂದುತ್ವದ ಪ್ರಯೋಗಶಾಲೆ ಎನ್ನುತ್ತಲೇ ಉಳಿದ ಜಿಲ್ಲೆಗಳಲ್ಲಿ ಕೋಮುಗಲಭೆಗಳನ್ನು ಮಾಡುತ್ತಾ ಜನರನ್ನು ಒಡೆಯುತ್ತಿದ್ದರು. ಅದರ ಫಲವೇ ಇಂದಿನ ಕರ್ನಾಟಕದ ಸ್ಥಿತಿ !

1999 ರಲ್ಲಿ ನಾನು ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದೆ. ಒಂದು ತಿಂಗಳ ಕಾಲ ಕರಾವಳಿಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ನಮ್ಮೂರು ಸೂರಿಂಜೆ ಎಂಬ ಹಳ್ಳಿಗೂ ಕರ್ಫ್ಯೂ ಬಿಸಿ ತಟ್ಟಿತ್ತು. 1998 ನೇ ಡಿಸೆಂಬರ್ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆ ಆರಂಭವಾಗುತ್ತದೆ. 1999 ಜನವರಿಯವರೆಗೂ ಕೋಮುಗಲಭೆ ನಿಯಂತ್ರಣಕ್ಕೆ ಬರುವುದಿಲ್ಲ. ಬರೋಬ್ಬರಿ ಒಂದು ತಿಂಗಳ ಕಾಲ ನಡೆದ ಕೋಮು ಗಲಭೆಗೆ ಸಂಬಂಧಪಟ್ಟಂತೆ ಸುರತ್ಕಲ್, ಪಣಂಬೂರು, ಕಂಕನಾಡಿ ಪೊಲೀಸ್ ಸ್ಟೇಷನ್‌ಗಳಲ್ಲಿ ಒಟ್ಟು 265 ಎಫ್‌ಐಆರ್ ಗಳನ್ನು ದಾಖಲಿಸಲಾಗುತ್ತದೆ. 1999 ರ ಕೋಮುಗಲಭೆಯ ನಂತರ ಕರಾವಳಿ ಜನರ ನಡುವಿನ ಸೌಹಾದರ್ ಒಡೆದು ಹೋಯಿತು. ಅದರ ಸಂಪೂರ್ಣ ಕ್ರೆಡಿಟ್ ಅಂದಿನ ಶಾಸಕರಾದ ಕುಂಬ್ಳೆ ಸುಂದರರಾವ್‌ರಿಗೆ ಸಲ್ಲಬೇಕು. ಆರೆಸ್ಸೆಸ್ ಕುಂಬ್ಳೆ ಸುಂದರರಾವ್ ಎಂಬ ಕರಾವಳಿಯ ಸಾಂಸ್ಕೃತಿಕ ಕ್ಷತ್ರಿಯನನ್ನು ಕಾಲಾಳುವನ್ನಾಗಿಸಿ ತನ್ನ ಅಜೆಂಡಾವನ್ನು ಪೂರೈಸಿತು. ಸತ್ಯಜಿತ್ ಸುರತ್ಕಲ್ ಎಂಬ ಹಿಂದುತ್ವವಾದಿ ನಾಯಕ ರೂಪುಗೊಂಡಿದ್ದೇ ಈ ಅವಧಿಯಲ್ಲಿ ! 1999ರ ಜನವರಿಯಲ್ಲಿ ದಾಖಲಾದ 265 ಎಫ್‌ಐಆರ್ ಗಳನ್ನು ತೆಗೆದು ನೋಡಿದರೆ ಐವತ್ತಕ್ಕೂ ಹೆಚ್ಚು ಎಫ್‌ಐಆರ್ ಗಳಲ್ಲಿ ಸತ್ಯಜಿತ್ ಸುರತ್ಕಲ್ ಹೆಸರಿದೆ ! ಬಹುತೇಕ ಎಲ್ಲಾ ಎಫ್‌ಐಆರ್ ಗಳಲ್ಲಿ ಆರೋಪಿಯಾಗಿದ್ದ ಸತ್ಯಜಿತ್ ಸುರತ್ಕಲ್ ರನ್ನು ಬಳಸಿ ಬಿಸಾಡಲಾಯಿತು. ಇದು ಕೇವಲ ಸತ್ಯಜಿತ್ ಸುರತ್ಕಲ್ ಕತೆಯಲ್ಲ, ಬಿಲ್ಲವ ಸಮುದಾಯದ ಯುವಕರು ಒಂದೋ ಜೈಲುಸೇರಿದರು ಅಥವಾ ಕೊಲೆಯಾದರು. ಆ ಮೂಲಕ ನೂರಾರು ಬಿಲ್ಲವ ಕುಟುಂಬಗಳು ಬೀದಿಪಾಲಾದವು.

ಕರಾವಳಿಯಲ್ಲಿ 1999 ರ ಬಳಿಕ ಹಿಂದೂ ಮುಸ್ಲಿಮ್ ವಿಘಟನೆ ಮನೋಭಾವ ಅಧಿಕವಾಯಿತು. ಸಾಂಸ್ಕೃತಿಕ, ಸಾಮಾಜಿಕ ಕೊಡು ಕೊಳ್ಳುವಿಕೆಗಳು ಕ್ಷೀಣಿಸುತ್ತಾ ಬಂದವು. ಹಿಂದೂ ಮುಸ್ಲಿಮ್ ಸಂಬಂಧಗಳ ಮೇಲೆ ದಾಳಿಗಳು ನಡೆದವು. ಅದನ್ನು ನೈತಿಕ ಪೊಲೀಸ್ ಗಿರಿ ಎಂದು ಕರೆಯಲಾಯಿತು. ಹೋಟೆಲ್, ಪಬ್, ಬೀಚ್‌ಗಳ ಮೇಲೆ ಬಜರಂಗದಳ ದಾಳಿ ನಡೆಸಿತು. ಬಸ್ನ್‌ನಲ್ಲೂ ಅಪರಿಚಿತ ಹಿಂದೂ-ಮುಸ್ಲಿಮ್ ಹುಡುಗ ಹುಡುಗಿ ಜತೆಯಾಗಿ ಕೂರಬಾರದು ಎಂಬ ಅಘೋಷಿತ ಕಾನೂನು ಜಾರಿಗೆ ಬಂತು. ದನ ಸಾಗಾಟಗಾರರ ಮೇಲೆ ಹಲ್ಲೆಗಳು, ಮಸೀದಿ ಮುಂದೆ ಹಂದಿ ತಲೆ ಕಡಿದು ಹಾಕುವ ದುಷ್ಕೃತ್ಯಗಳು ನಡೆದವು. ಇವೆಲ್ಲದರಿಂದ ಕರಾವಳಿ ಕೋಮುಗಲಭೆಯ ಪ್ರಯೋಗಶಾಲೆಯಾಗಿ ಮಾರ್ಪಟ್ಟಿತ್ತು.

ಕೋಮುವಾದಿಗಳು ಏನೇ ಮಾಡಿದರೂ ಕರಾವಳಿಯ ಸೌಹಾರ್ಧವನ್ನು ಸಂಪೂರ್ಣವಾಗಿ ಅಳಿಸಲು ಸಾಧ್ಯವಿಲ್ಲ. ಯಾಕೆಂದರೆ ಕರಾವಳಿಯ ಸಂಸ್ಕೃತಿಯಲ್ಲಿ ಅಂತಹದ್ದೊಂದು ಶಕ್ತಿಯಿದೆ. ಮೊಗವೀರ, ಬೆಳ್ಚಡ, ಬಂಟರು, ಬಿಲ್ಲವರು ಸೇರಿದಂತೆ ಎಲ್ಲಾ ಶೂದ್ರ ಸಮುದಾಯಗಳ ಆರಾಧನಾ ಪದ್ಧತಿಯೊಂದಿಗೆ ಮುಸ್ಲಿಮರ ಕೊಂಡಿ ಇದೆ.

ತುಳುನಾಡಿನ ಸಾವಿರದ ಒಂದು ದೈವಗಳನ್ನು ಭೂಮಿಯಲ್ಲಿ ಮನುಷ್ಯನ ಮೇಲೆ ದರ್ಶನ ಬರಿಸಿದಾಗ ಎಲ್ಲಾ ಜಾತಿ ಧರ್ಮಗಳನ್ನು ಕರೆದೇ ತನ್ನ ಧಾರ್ಮಿಕ ವಿಧಿವಿಧಾನಗಳನ್ನು ಪ್ರಾರಂಭಿಸುತ್ತವೆ. ಗುತ್ತಿನಾರ್ಲೇ, ನೂಲ್ ಪಾಡಿ ಕರ್ತುಲೇ, ಮೂಲ್ಯರೇ, ಪೂಜಾರ್ಲೇ, ಸೇಕುರ್ಕುಲೇ.. ಒರಿಯತ್ತು, ಒರಿಯಂದು ಅಂತ ದೈವ ಎಲ್ಲಾ ಜಾತಿ ಧರ್ಮದವರನ್ನು ಕರೆದು ಗೌರವಿಸಿ ಅವರೆಲ್ಲರ ಅನುಮತಿ ಪಡೆದು ತನ್ನ ನಡಾವಳಿಯನ್ನು ಪ್ರಾರಂಭಿಸುತ್ತವೆ. ನೂಲ್ ಪಾಡಿ ಕರ್ತುಲು ಎಂದರೆ ನೂಲು ಹಾಕಿಕೊಂಡ ದೊಡ್ಡವರು ಎಂದು ಅರ್ಥ. ಜನಿವಾರಧಾರಿ ಬ್ರಾಹ್ಮಣರನ್ನು ದೈವ ಗೌರವಪೂರ್ವಕವಾಗಿ ಹಾಗೆ ಕರೆಯುತ್ತದೆ. ‘ಸೇಕುರ್ಕುಲೇ’ ಅಂದರೆ ತುಳುನಾಡಿನ ಮುಸ್ಲಿಮರಾದ ಬ್ಯಾರಿಗಳನ್ನು ಉದ್ದೇಶಿಸಿರುವುದು. ದೈವಗಳೆಂದರೆ ಪತ್ತಪ್ಪೆ ಜೋಕುಲೆನ್ ಒಂಜಿ ಮಟ್ಟೆಲ್ಡ್ ಪಾಡುನ ಶಕ್ತಿಲು (ಹತ್ತು ತಾಯಿಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿ ಸಾಕುವ ಶಕ್ತಿಗಳು) ಎಂದೇ ಬಣ್ಣಿಸಲಾಗುತ್ತದೆ.

ಮೊಗವೀರರು ಮತ್ತು ಮುಸ್ಲಿಮರ ನಡುವಿನ ಸಂಬಂಧದ ದ್ಯೋತಕವಾಗಿ ‘ಹಿಂದೂ ಮುಸ್ಲಿಮ್ ತಂದೆ ತಾಯಿಗೆ ಜನಿಸಿದ ಬಬ್ಬರ್ಯ ದೈವ’ ಇಂದಿಗೂ ಆರಾಧನೆಗೊಳಪಡುತ್ತಿದ್ದಾನೆ. ಮಂಜೇಶ್ವರದ ಅಣ್ಣತಮ್ಮ ಅರಸು ದೈವಗಳು ಮುಸ್ಲಿಮ್ ವ್ಯಾಪಾರಿಯಿಂದ ವೀಳ್ಯದೆಲೆ ಖರೀದಿಸದೆ, ಸಾವಿರ ಜಮಾಅತ್ ಮಸೀದಿಗೆ ಹೋಗಿ ಆಹ್ವಾನ ನೀಡದೆ, ಮಸೀದಿಯ ಮುಖ್ಯಸ್ಥರು ಜಾತ್ರೆಗೆ ಬಾರದೆ ಜಾತ್ರೆ ಆರಂಭಿಸುವುದಿಲ್ಲ. ಕರಾವಳಿಯ ಪ್ರತೀ ದೈವದ ಜೊತೆಗೊಂದು ಮುಸ್ಲಿಮ್ ಸಮುದಾಯದ ಸಂಪರ್ಕದ ಕತೆಯಿದೆ.

ಕರಾವಳಿಯ ಭೂತಾರಾಧನೆಗೆ ಯಾವ ದೇಶ, ಧರ್ಮ, ಜಾತಿ, ಲಿಂಗದ ಗೋಡೆಗಳೂ ಇಲ್ಲ. ಅರಬಿಗಳೂ, ಚೀನಿ ವ್ಯಾಪಾರಿಗಳೂ ಇಲ್ಲಿನ ಜನರ ಜೊತೆ ಸಂಬಂಧ ಹೊಂದಿ ದೈವಗಳಾಗಿದ್ದಾರೆ. ಹಿಂದೂ ಮುಸ್ಲಿಮ್ ಮದುವೆಯಿಂದ ಹುಟ್ಟಿದ ಮಗು ದೈವವಾಗಿದೆ. ಬ್ಯಾರಿ ವ್ಯಾಪಾರಿಯೊಬ್ಬ ಬ್ರಾಹ್ಮಣ ಕನ್ಯೆಯ ಜೊತೆ ಇದ್ದನೆಂದು ಬ್ಯಾರಿಯನ್ನೂ, ಬ್ರಾಹ್ಮಣ ಕನ್ಯೆಯನ್ನೂ ಮಾಯ ಮಾಡಿ ಈಗಲೂ ಬ್ಯಾರಿಮತ್ತು ಬ್ರಾಹ್ಮಣ ಕನ್ಯೆಯನ್ನು ಮದುಮಗಳಂತೆ ಸಿಂಗರಿಸಿ ಅರಬೀ ಭೂತ, ಬ್ರಾಂದಿ ಭೂತ ಎಂದು ಆರಾಧನೆ ಮಾಡಲಾಗುತ್ತಿದೆ. ಇದಲ್ಲದೆ ಮುಸ್ಲಿಮ್ ದೈವಗಳಾಗಿ ಆಲಿ ಭೂತ, ಮಾಪಿಳ್ಳೆ, ಬಬ್ಬರ್ಯ, ಬ್ಯಾರಿ ಭೂತ, ಬ್ಯಾರ್ದಿ ಭೂತಗಳೂ ಆರಾಧನೆಗೆ ಒಳಪಡುತ್ತಿವೆ. ಅರಸು ಮಂಜೇಷ್ಣಾರ್ ಮಾತ್ರವಲ್ಲದೆ ಕೆಲವೆಡೆ ಜುಮಾದಿ ದೈವಗಳು ಮುಸ್ಲಿಮರು ಅಥವಾ ಮುಸ್ಲಿಮ್ ದೈವಗಳು ಜೊತೆ ಇದ್ದರೆ ಮಾತ್ರ ಕೋಲ/ನೇಮವನ್ನು ಪಡೆಯುತ್ತವೆ.

 

ದೈವದ ಒಳಗೊಳ್ಳುವ ಪ್ರಕ್ರಿಯೆಯಲ್ಲಿ ಬಹುಮುಖ್ಯವಾಗಿರುವುದು ಮುಸ್ಲಿಮ್, ಜೈನ, ಕ್ರಿಶ್ಚಿಯನ್ ಧರ್ಮಗಳನ್ನು ಅದು ನಡೆಸಿಕೊಳ್ಳುವ ರೀತಿ ! ಭೂತಸಾನದಲ್ಲಿ ನೇಮ ಮುಗಿಯುವ ಕೊನೇ ಗಳಿಗೆಯಲ್ಲಿ ಭೂತ/ದೈವವು ಗುತ್ತಿನಾರ ಬಳಿ ಕೇಳುತ್ತದೆ ‘ಎನ್ನ ಕರಿಗಂಧ ತಿಕ್ಕಂದೆ ಏರ್ಲಾ ಪೋತಿಜೆರತ್ತಾ?’ (ನನ್ನ ಕರಿಗಂಧ ಸಿಗದೇ ಯಾರೂ ಹೋಗಿಲ್ಲ ತಾನೆ ?) ಎಂದು ಪ್ರಶ್ನಿಸುತ್ತದೆ. ಭೂತಸಾನದಲ್ಲಿ ಮಸಿ ಮತ್ತು ತೆಂಗು, ಎಣ್ಣೆಯಿಂದ ತೇಯ್ದ ಕರಿಗಂಧ ನೀಡಲಾಗುತ್ತದೆ. ಜಾತಿ, ಮತ, ಧರ್ಮ ಭೇದಭಾವ ಇಲ್ಲದೆ ಭೂತಸಾನಕ್ಕೆ ಬಂದ ಎಲ್ಲರಿಗೂ ಕರಿಗಂಧ ನೀಡಲಾಗಿದೆ ಎಂದು ಕೋಲ/ ನೇಮದ ನೇತೃತ್ವ ವಹಿಸಿಕೊಂಡ ಗುತ್ತಿನಾರ್ ಅಥವಾ ಮುಖ್ಯಸ್ಥ ಖಾತ್ರಿಪಡಿಸಿಕೊಳ್ಳಬೇಕು.

ಕರಾವಳಿಯ ದೈವಗಳು ಮಾತ್ರವಲ್ಲ. ಬ್ರಾಹ್ಮಣ ಮೂಲದ ದೇವರುಗಳೂ ಕೂಡಾ ಮೌಖಿಕ ಪರಂಪರೆಯಲ್ಲಿ ಸೌಹಾರ್ದವನ್ನೇ ಸಾರಿವೆ. ಜನಪದ ಪಾಡ್ದನದಲ್ಲಿ ಉಲ್ಲೇಖವಾಗಿರುವಂತೆ, ಶೂದ್ರ ಅರಸ ಬಲಿಯನ್ನು ವಂಚಿಸಿ ತುಳುನಾಡಿನ ಆಡಳಿತವನ್ನು ವಶಕ್ಕೆ ಪಡೆದುಕೊಂಡ ವಿಷ್ಣುವಿನ ಅವತಾರಿ ವಾಮನನನ್ನು ‘ತಾನು ದಾನವಾಗಿ ನೀಡಲಿರುವ ಮೂರು ಹೆಜ್ಜೆ ಭೂಮಿಯನ್ನು ಏನು ಮಾಡುತ್ತೀಯ’ ಎಂದು ಬಲಿ ಚಕ್ರವರ್ತಿಯು ಕೇಳುತ್ತಾನೆ. ಆಗ ವಾಮನನು,

‘‘ದೇವೆರೆಗು ದೇವಾಲ್ಯೊ,

ದೈವೋಳೆಗು ಬದಿಮಾಡ,

ಬೆರ್ಮೆರೆಗು ಸಾನ,

ನಾಗೆರೆಗ್ ಬನ,

ಜೈನೆರೆ ಬಸ್ತಿ,

ಬ್ಯಾರಿಳೆ ಪಲ್ಲಿ,

ಕುಡುಂಬೆರೆ ಇಂಗ್ರೇಜಿ ಕಟ್ಟಾವ’’ ಅನ್ನುತ್ತಾನೆ.

ಇದರ ಕನ್ನಡ ಅರ್ಥ ಹೀಗಿದೆ : ನನ್ನಿಂದ ದಾನವಾಗಿ ಪಡೆಯಲಿರುವ ಮೂರು ಹೆಜ್ಜೆ ಭೂಮಿಯನ್ನು ಏನು ಮಾಡುತ್ತೀಯಾ ಎಂದು ಬಲಿ ಚಕ್ರವರ್ತಿಯು ವಾಮನನನ್ನು ಕೇಳಿದಾಗ ವಾಮನನು,

‘‘ದೇವರಿಗೆ ದೇವಾಲಯ,

ದೈವಗಳಿಗೆ ಮಾಡ ಎಂಬ ಸಾನ

ಬೆರ್ಮೆರ್‌ಗೆ ಗುಡಿ

ನಾಗ ದೇವರಿಗೆ ಕಾಡು

ಜೈನರಿಗೆ ಬಸದಿ

ಬ್ಯಾರಿ ಮುಸ್ಲಿಮರಿಗೆ ಮಸೀದಿ

ಕ್ರಿಶ್ಚಿಯನ್ನರಿಗೆ ಚರ್ಚು ಕಟ್ಟಿಸುತ್ತೇನೆ’’ ಎನ್ನುತ್ತಾನೆ.

ಬಲಿ ಮತ್ತು ವಿಷ್ಣು ಅವತಾರಿ ವಾಮನ ಸಂಭಾಷಣೆಯನ್ನು ಜನಪದರೇ ಪಾಡ್ದನಗಳ ಮೂಲಕ ಕಟ್ಟಿ ಬೆಳೆಸಿದ್ದಾರೆ. ಈ ಸಾಂಸ್ಕೃತಿಕ ಸೌಹಾರ್ಧವನ್ನು ಹಾಳು ಮಾಡಲು ಸಂಘಪರಿವಾರಕ್ಕೆ ಇನ್ನೂ ಸಾಧ್ಯವಾಗಿಲ್ಲ, ಆಗುವುದೂ ಇಲ್ಲ.

ಈಗೀಗ ವೈದಿಕ ಹಿಂದುತ್ವದ ವಿಷ ತುಂಬಿಕೊಂಡ ಯುವ ಸಮುದಾಯ ಕರಾವಳಿಯ ನೈಜ ಮೂಲವನ್ನು ಮರೆತಿದೆ. ಕರಾವಳಿಯ ಭೂತಸ್ಥಾನಗಳು, ನಾಗ ಬೆಮ್ಮೆರ್, ಗರೋಡಿಗಳೇ ತುಳುನಾಡಿನ ಧಾರ್ಮಿಕ ಸಂಸ್ಕೃತಿಗಳು. ದಲಿತ, ಶೋಷಿತ ಸಮುದಾಯ ಕೇಂದ್ರಿತ ತುಳುವ ಸಂಸ್ಕೃತಿಯ ಜೊತೆಜೊತೆಗೇ ಸಮಕಾಲೀನವಾಗಿ ಬೆಳೆದಿರುವುದು ಬ್ಯಾರಿ ಮುಸ್ಲಿಮರ ಸಂಸ್ಕೃತಿ. ಹಾಗಾಗಿ ಭೂತ/ದೈವಗಳಿಗೂ ಬ್ಯಾರಿ ಮುಸ್ಲಿಮರಿಗೂ ಅವಿನಾಭಾವ ಸಂಬಂಧ ಇದೆ. ಈ ರೀತಿಯ ಸೌಹಾರ್ದ ಸಾಂಸ್ಕೃತಿಕ ಪರಂಪರೆಯ ಆಶಯದಂತೆ ನಾವು ಕರಾವಳಿಯನ್ನು ಕಟ್ಟಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ನವೀನ್ ಸೂರಿಂಜೆ

contributor

Similar News