ಹೆಣ್ಣಿನ ಧ್ವನಿ ಕಲೆಯ ಹೆಸರಲ್ಲಿ ಕೊಲೆಯಾಗದಿರಲಿ!
ಕನ್ನಡ ರಂಗಭೂಮಿ, ಕಿರುತೆರೆಗಳಲ್ಲಿ ಉತ್ತಮ ಅಭಿನೇತ್ರಿ ಎಂದು ಹೆಸರು ಮಾಡಿರುವ ಕವಿ, ಕಾದಂಬರಿಗಾರ್ತಿ, ಸಂಘಟಕಿ ಮತ್ತು ಹೋರಾಟಗಾರರಾದ ಜಯಲಕ್ಷ್ಮೀ ಪಾಟೀಲ್ ಅವರ ಊರು ವಿಜಯಪುರವಾದರೂ, ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಗೊಂಡಿದ್ದಾರೆ. ಬಿ.ವಿ. ಕಾರಂತ, ಸಿ. ಬಸವಲಿಂಗಯ್ಯ, ಸುರೇಶ ಅನಗಳ್ಳಿ ಮುಂತಾದ ಹಲವು ಕನ್ನಡದ ದಿಗ್ಗಜರು ನಿರ್ದೇಶಿಸಿದ ಅನೇಕ ನಾಟಕಗಳಲ್ಲಿ ಅಭಿನಯಿಸಿದ ಹಾಗೂ ನಾಟಕ, ಕಿರುಚಿತ್ರಗಳ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ. 2009ರ ಸ್ವರ್ಣಕಮಲ ಪ್ರಶಸ್ತಿ ವಿಜೇತ ಚಲನಚಿತ್ರ ‘ಪುಟಾಣಿ ಪಾರ್ಟಿ’ಯಲ್ಲಿ ಅಭಿನಯಿಸಿದ್ದೂ ಅಲ್ಲದೆ ಈ ಚಿತ್ರಕ್ಕೆ ಸಂಭಾಷಣಾಕಾರರಾಗಿಯೂ ಕೆಲಸ ಮಾಡಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ‘ಬನದ ನೆರಳು’ ಚಲನಚಿತ್ರ ಹಾಗೂ ಇತ್ತೀಚಿಗೆ ಬಿಡುಗಡೆಯಾದ ‘ಸಕುಟುಂಬ ಸಮೇತ’, ‘9 ಸುಳ್ಳು ಕಥೆಗಳು’, ‘ನನ್ ಆಫ್ ಹರ್’, ‘ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ’, ‘ಬ್ಯಾಚುಲರ್ ಪಾರ್ಟಿ’, ಇತ್ಯಾದಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಜಯಲಕ್ಷ್ಮೀ ಪಾಟೀಲ್ ಅವರು ಹಲವು ಕಿರುತೆರೆ ಧಾರವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಲೇಖಕಿ, ಕವಯತ್ರಿಯಾಗಿಯೂ ಗುರುತಿಸಿ ಕೊಂಡಿರುವ ಪಾಟೀಲ್, ಎರಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ‘ಮುಕ್ಕು ಚಿಕ್ಕಿಯ ಕಾಳು’ ಇವರ ಕಾದಂಬರಿ.
ನೇರ ಮಾತಾಡ್ತೀನಿ, ಸುತ್ತಿ ಬಳಸಿ ಕತೆ ಹೇಳುವ ಅಗತ್ಯವಿಲ್ಲ ಈ ವಿಷಯದ ಕುರಿತು. ಜಗತ್ತಿನ ಯಾವುದೇ ಕ್ಷೇತ್ರವಾಗಲಿ ಅಲ್ಲಿ ದುಡಿವ ಬಹಳಷ್ಟು ಜನ ಹೆಣ್ಣುಮಕ್ಕಳ ಮನದಲ್ಲಿ ಸದಾ ಒಂದು ಅಸುರಕ್ಷತೆಯ ಭಾವ ಮನೆಮಾಡಿರುತ್ತದೆ. ಇದಕ್ಕೆ ಅಪವಾದವಿಲ್ಲ ಅಂತಲ್ಲ, ಆದರೆ ಅಂಥವರು ಕೆಲವರಷ್ಟೆ. ಈ ಅಸುರಕ್ಷತೆ ತಮ್ಮ ಪ್ರತಿಭೆಯ ಕುರಿತಾಗಲಿ, ಸಾಮರ್ಥ್ಯದ ಕುರಿತಾಗಲಿ ಇರುವುದಲ್ಲ. ಅದು ಪುರುಷ ಸಹೋದ್ಯೋಗಿಯ ಕುರಿತಾಗಿ ಇರುವಂಥದ್ದು. ಎಲ್ಲ ಗಂಡಸರೂ ಕಾಮುಕರೇ? ಮಹಿಳಾ ಸಹೋದ್ಯೋಗಿಯನ್ನು ಸಮನಾಗಿ ಗೌರವಿಸದೇ ಎಲ್ಲರೂ ಸಸಾರವಾಗಿ ವರ್ತಿಸುವವರೇ ಇರ್ತಾರೆಯೇ? ಯಾರಲ್ಲೂ ಮನುಷ್ಯತ್ವವೇ ಇಲ್ಲವೆ? ಊಂಹೂಂ ಒಳ್ಳೆಯ ಗಂಡಸರೂ ಸಾಕಷ್ಟು ಇದ್ದಾರೆ. ಹಾಗಂತ ಅವರನ್ನೆದುರು ಇಟ್ಟುಕೊಂಡು, ಲೋಲುಪತೆಗೆ, ಪುರುಷಾಹಂಕಾರಕ್ಕೆ ರಸಿಕತನದ, ಸ್ಥಾನದ ಹೆಸರಿಟ್ಟು ಹೆಣ್ಣುಮಕ್ಕಳನ್ನು ನಾನಾ ರೀತಿಯಲ್ಲಿ ಶೋಷಿಸುವವರನ್ನು ಕ್ಷಮಿಸಲಾದೀತೆ?!
ಇಂಥ ಶೋಷಣೆಗೆ ಸಿನೆಮಾ ಕ್ಷೇತ್ರವೂ ಹೊರತಾಗಿಲ್ಲ. ನಮ್ಮ ಕನ್ನಡ ಚಿತ್ರರಂಗವನ್ನೂ ಸೇರಿಸಿ ಅದು ಜಗತ್ತಿನ ಯಾವುದೇ ಭಾಷೆಯ ಚಿತ್ರರಂಗವಾಗಿರಲಿ, ಅಲ್ಲಿರುವ ಹೆಣ್ಣುಮಕ್ಕಳಿಗೆ ಈ ಅಸುರಕ್ಷತೆಯ ಭಾವ ತಪ್ಪಿದ್ದಲ್ಲ. ಹಾಗಂತ ಚಿತ್ರರಂಗವೆಂದರೆನೇ ಕೆಟ್ಟ ಕ್ಷೇತ್ರವಾ? ಖಂಡಿತ ಅಲ್ಲ. ಉಳಿದ ಉದ್ಯಮಗಳಂತೆ ಅದೂ ಒಂದು ಉದ್ಯಮ. ಲಕ್ಷಾಂತರ ಜನರಿಗೆ ಅನ್ನ ನೀಡುತ್ತದೆ, ಜನ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿಗೆ ಬಂದು ಸಾವಿರಾರು ಜನರು ಹೆಸರುವಾಸಿಯಾಗಿದ್ದಾರೆ, ಸಿನೆಮಾ ಕನಸನ್ನು ಹೊತ್ತು ಕೇವಲ ಬಸ್ ಚಾರ್ಜ್ ಇಟ್ಟುಕೊಂಡು ಊರಿಂದ ಹೊರಟು ಬಂದವರು ಇಲ್ಲೀಗ ರಾಶಿ ಹಣ ಮಾಡಿದ್ದಾರೆ. ಜನರಿಗೆ ಮನೋರಂಜನೆಯ ಜೊತೆಗೆ ಬದುಕಿನ ಕುರಿತು ಸುಂದರ ಕನಸುಗಳನ್ನೂ ಕಾಣುವಂತೆ ಮಾಡುತ್ತದೆ ಸಿನೆಮಾ. ಇದೆಲ್ಲವೂ ಸತ್ಯ. ಆದರೆ ಹಲವಾರು ಭಾಷೆಯ ಸಿನೆಮಾಗಳಲ್ಲಿ ಅಭಿನಯಿಸಿದ ನಮ್ಮ ನಟಿಯರಲ್ಲಿ ಕೇಳಿದರೆ ಇದ್ದುದರಲ್ಲಿ ನಮ್ಮ ಕನ್ನಡ ಚಿತ್ರರಂಗವೇ ತಕ್ಕಮಟ್ಟಿಗೆ ವಾಸಿ ಎನ್ನುವ ಮಾತುಗಳು ಕೇಳಿ ಬರುತ್ತದಾದರೂ, ಅವರು ಹೇಳುವ ‘ತಕ್ಕಮಟ್ಟಿಗೆ’ ಅನ್ನುವ ಮಾತನ್ನು ನಾವು ಮುಖ್ಯವಾಗಿ ಗಮನಿಸಬೇಕು. ಅಂದರೆ ಇಲ್ಲೂ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ. ಒಂದು ಎತ್ತರಕ್ಕೇರಿದವರನ್ನು ಕೆಣಕುವ ಧೈರ್ಯ ಯಾರಿಗೂ ಇರುವುದಿಲ್ಲ. ಆದರೆ ಹೊಸಬರ, ಧೈರ್ಯ ಸಾಲದವರ ಅಳುಕು, ಅಳಲಿಗೆ ದನಿ ಇಲ್ಲ?
ಆದರೆ 2018ಲ್ಲಿ ME TOO ಅಭಿಯಾನ ನಮ್ಮ ಭಾರತದಲ್ಲಿ ಶುರುವಾದಾಗ ನಮ್ಮ ದಕ್ಷಿಣ ಭಾರತದ ಕೆಲವೇ ಕೆಲವು ನಟಿಯರೂ ಸಹ ಇದ್ದಬದ್ದ ಧೈರ್ಯ ಒಗ್ಗೂಡಿಸಿಕೊಂಡು ತಮ್ಮೊಂದಿಗಾದ ಲೈಂಗಿಕ ಕಿರುಕುಳದಂಥ ಅಹಿತಕರ ಅನುಭವಗಳನ್ನು ಸಮಾಜದೆದುರು ತೆರೆದಿಟ್ಟರು. ಆಗ ಬಂದಂಥ ಪ್ರತಿಕ್ರಿಯೆಗಳು ಎಂತೆಂಥವಿದ್ದವು?! ಇಲ್ಲಿ ಬರೆಯಲೂ ಮುಜುಗರವಾಗುವಷ್ಟು ಅಸಭ್ಯ ಭಾಷಾ ಬಳಕೆ ಸಾಮಾಜಿಕ ಜಾಲತಾಣಗಳಲ್ಲಿ. ನಟಿಯರು ಅನುಭವಿಸಿದ ಕಿರುಕುಳ, ಕೊಟ್ಟ ನೋವಿಗೆ ಸಮವಾಗುವಷ್ಟು ನೋವು ಜನರ ಪ್ರತಿಕ್ರಿಯೆಗಳಿಂದ ಉಂಟಾಗಿತ್ತು. ಅವರ ನೋವಿಗೆ ಸ್ಪಂದಿಸಿದವರ ದನಿಗಳು, ಹೊಲಸು ಭಾಷಿಗರ ಅಬ್ಬರದಲ್ಲಿ ಕ್ಷೀಣಗೊಂಡು ಮತ್ತೆ ಪರಿಸ್ಥಿತಿ ಯಥಾಸ್ಥಿತಿ ಮುಂದುವರಿಯಿತು ಎನ್ನುವುದು ನಿಜವಾದರೂ ಮೀ ಟೂ ಅಭಿಯಾನದಿಂದ ಜನರಲ್ಲಿ ಸ್ವಲ್ಪ ಮಟ್ಟಿಗೆ ಒಂದು ಎಚ್ಚರಿಕೆ ಮೂಡಿದ್ದಂತೂ ಸತ್ಯ. ಆಗ ನೊಂದ ನಟಿಯರಿಗೆಲ್ಲ, ಸಾಮಾಜಿಕ ತಾಣಗಳಲ್ಲಿ ‘ಇಷ್ಟು ದಿನ ಸುಮ್ಮನಿದ್ದು ಈಗ್ಯಾಕೆ ಮಾತಾಡುತ್ತಿರುವಿ? ನೀನು ಒಳ್ಳೆಯವಳಾಗಿದ್ದರೆ ಆಗಲೇ ಹೇಳಬೇಕಿತ್ತು’ ಎನ್ನುವ ತಿವಿತ ಹೆಣ್ಣುಗಂಡುಗಳು ಭೇದವಿಲ್ಲದೇ ಸಾಕಷ್ಟು ಜನರಿಂದ ಹರಿದು ಬಂತು. ‘ಅರೇ! ಎಲ್ಲರ ಮನೆಗಳಲ್ಲೂ ಹೆಣ್ಣು ಹುಟ್ಟಿದಾಗಿನಿಂದ, ‘‘ಶ್ಯ್ ಸುಮ್ಮನಿರು, ಯಾರಲ್ಲೂ ಹೇಳಬೇಡ, ಅದರಿಂದ ನಿನ್ನ ಮರ್ಯಾದೆ ಹೋಗುತ್ತೆ’’ ಎಂದು ಹೇಳಿ ಹೆದರಿಸಿ ಹೆದರಿಸಿಟ್ಟಿದ್ದು ನೀವೇ ಅನ್ನೋದನ್ನ ಅದು ಹೇಗೆ ಅಷ್ಟು ಸುಲಭದಲ್ಲಿ ಮರೆತುಬಿಟ್ಟಿರಿ ನೀವೆಲ್ಲ?! ಆಕೆ ಅದನ್ನು ನಂಬಿ, ಸಂಕಟಪಡುತ್ತಲೇ ಲೈಂಗಿಕ ಕಿರುಕುಳಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತ ಜೊತೆಗೆ ತನ್ನ ಕೆಲಸವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಾ ಸುಮ್ಮನಿರುವಂತೆ ವ್ಯವಸ್ಥಿತವಾಗಿ ನೋಡಿಕೊಂಡವರು ಯಾರು?! ಆಗಲೇ ಆಕೆ ಹೇಳಲು ಹೇಗೆ ಸಾಧ್ಯವಿತ್ತು? ಈಗ ತನ್ನ ನೋವಿಗೊಂದು ದನಿ ಸಿಕ್ಕ ಹೊತ್ತಲ್ಲಿ ಹಾಗೂ ಹೀಗೂ ತನ್ನಲ್ಲಿರುವ ಧೈರ್ಯ ಒಗ್ಗೂಡಿಸಿಕೊಂಡು, ‘ನನ್ನೊಂದಿಗೆ ಇಂಥವ ಅನುಚಿತವಾಗಿ ನಡೆದುಕೊಂಡ’ ಎಂದು ಹೇಳಿದರೆ, ಆಗ ಯಾಕೆ ಸುಮ್ಮನಿದ್ದೆ ಎಂದು ಈಗ ತಿವಿಯುತ್ತೀರಿ ಎಂದರೆ ಏನರ್ಥ?! ಅಷ್ಟು ಸಾಲದು ಎಂಬಂತೆ ಮುಂದುವರಿದು, ಮೀ ಟೂ ಅಭಿಯಾನದ ಹೊತ್ತಲ್ಲೂ, ಈಗಲೂ ಅದಕ್ಕೇನು ಸಾಕ್ಷಿ ಎಂದು ಕೇಳುತ್ತೀರಿ! ಅಸಹ್ಯವಾದ ಕಣ್ಣಸನ್ನೆಗಳಿಗೆ, ಕೈಸನ್ನೆಗಳಿಗೆ, ವಾಂಛನೆ ತುಂಬಿಕೊಂಡ ನಗುವಿಗೆ, ಅಕಸ್ಮಾತ್ ಎಂಬಂತೆ ಮೈಕೈ ಮುಟ್ಟಿ ನಗುವ ಕೊಳಕಿಗೆ, ಯಾರಿಲ್ಲದ ಸಮಯ ನೋಡಿಕೊಂಡು ಬಾ ಎಂದು ಕರೆಯುವ ದುಷ್ಟತನಕ್ಕೆ, ಹೆಣ್ಣು ನಾಲ್ಕಾರು ಗಂಡಸರೊಡನೆ ನಗುತ್ತಾ ಮಾತನಾಡಿದರೆ ಸಾಕು, ಆಕೆ ಸರಿಯಿಲ್ಲ ಎಂದು ಪುಕಾರು ಹಬ್ಬಿಸುವ ಮನೋವ್ಯಾಧಿಗೆ ಸಾಕ್ಷಿ ಕೊಡು ಎಂದು ಕೇಳಿದರೆ, ಎಲ್ಲಿಂದ ಹೇಗೆ ತರಬೇಕು ಆಕೆ ಸಾಕ್ಷಿಯನ್ನ?!
ಇದಕ್ಕೂ ಒಂದು ವರ್ಷ ಅಂದರೆ 2017ಲ್ಲಿ ಮಲಯಾಳಂ ಚಿತ್ರರಂಗದ ನಟಿಯೊಬ್ಬರ ಅಪಹರಣವಾಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವನ್ನೆಸಗಲಾಗಿತ್ತು. ಆ ಹೇಯ ಪ್ರಕರಣದ ಹಿಂದೆ ಅಲ್ಲಿನ ದಿಲೀಪ್ ಎನ್ನುವ ನಟನ ಕೈವಾಡವಿತ್ತು ಎನ್ನುವುದು ತಿಳಿದು ಆತನನ್ನು ಬಂಧಿಸಲಾಯಿತು. ಆಗ ಆ ಸಂತ್ರಸ್ತ ನಟಿಯ ಪರ ನಿಂತು ಅಲ್ಲಿನ ಬಹಳಷ್ಟು ಹೆಸರಾಂತ ನಟಿಯರು ಹೋರಾಡಿದ್ದು ಜಗತ್ತಿಗೇ ಮಾದರಿಯಾಗುವಂಥದ್ದು (ದುರಂತವೆಂದರೆ ನಮ್ಮ ಕನ್ನಡ ಚಿತ್ರರಂಗದ ಹೆಸರಾಂತ ನಟಿಯರಿಗೆ ಅದು ಮಾದರಿಯಾಗಲಿಲ್ಲ. ಸಂಗೀತ ಭಟ್ ಪರವಾಗಲಿ, ಶ್ರುತಿ ಹರಿಹರನ್ ಪರವಾಗಲಿ ಒಬ್ಬ ಹೆಸರಾಂತ ನಟಿಯೂ ನಿಲ್ಲಲಿಲ್ಲ). ಅದರ ಫಲವಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಹೇಮಾ, ನಿವೃತ್ತ ಐಎಎಸ್ ಅಧಿಕಾರಿ ಕೆ.ಬಿ. ವಲ್ಸಲಾ ಕುಮಾರಿ ಮತ್ತು ಹಿರಿಯ ನಟಿ(ಮಾಜಿ) ಶಾರದಾ ಅವರನ್ನೊಳಗೊಂಡು ರಚನೆಯಾದ ‘ನ್ಯಾ. ಹೇಮಾ ಸಮಿತಿ’ಯು ತನಿಖೆಗಿಳಿದು, 2019ಲ್ಲಿ ಕೇರಳ ಸರಕಾರಕ್ಕೆ ತನ್ನ ವರದಿಯನ್ನು ಒಪ್ಪಿಸಿತ್ತು.
ಈಗ ಎರಡು ತಿಂಗಳ ಹಿಂದೆ ಅಂದರೆ ಆಗಸ್ಟ್ ತಿಂಗಳ 19ರಂದು ಆ ಸಮಿತಿಯ ವರದಿಯು ಅಲ್ಲಿನ ಚಿತ್ರರಂಗದಲ್ಲಿನ ಮಹಿಳೆಯರ ಮೇಲಿನ ಶೋಷಣೆ, ಲೈಂಗಿಕ ಕಿರುಕುಳ ಮತ್ತು ತಾರತಮ್ಯವನ್ನು ಬಹಿರಂಗಗೊಳಿಸಿದೆ. ಅಲ್ಲಿನ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಅಲ್ಲೀಗ ಕತ್ತಲೆ ಕಳೆದು ಬೆಳಕು ಹರಿಯಲು ವೇದಿಕೆ ಸಜ್ಜಾಗಿದೆ.
ನ್ಯಾ. ಹೇಮಾ ವರದಿ ಬಹಿರಂಗಗೊಂಡ ಮೇಲೆ, ಇಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಸೇರಿದಂತೆ ಇತರ ಸಮಸ್ಯೆಗಳ ತನಿಖೆ ನಡೆಸಲು, ಮಹಿಳೆಯರಿಗೆ ಸುರಕ್ಷಿತ ಮತ್ತು ನ್ಯಾಯಯುತವಾದ ವಾತಾವರಣವನ್ನು ಸೃಷ್ಟಿಯಾಗುವಂತೆ ತಕ್ಕ ಪಾಲಸಿಗಳನ್ನು ಮಾಡಲು, ನಮ್ಮಲ್ಲೂ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲು ಆಗ್ರಹಿಸಿ, ದಿನಾಂಕ 05/09/2024ರಂದು ನಟ ಚೇತನ್ ಅವರ ಮುಂದಾಳತ್ವದಲ್ಲಿ ಹಿರಿಯ ಪತ್ರಕರ್ತೆ ಡಾ. ವಿಜಯಾ, ನಟಿಯರಾದ ಶ್ರುತಿ ಹರಿಹರನ್, ನೀತು, ಅಡ್ವಕೇಟ್ ಅಶ್ವಿನಿ ಓಬಳೇಶ್ ಮತ್ತು ನಾನು,FIRE ಸಂಸ್ಥೆಯ ಮೂಲಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿಪತ್ರವನ್ನು ನೀಡಿದೆವು. ಆ ಮನವಿಪತ್ರಕ್ಕೆ ನಾಡಿನ ಜನರ ಜೊತೆಗೆ, ಚಿತ್ರರಂಗವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಗಣ್ಯರು ತಮ್ಮ ಬೆಂಬಲ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ, ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಸೆಪ್ಟಂಬರ್ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರರಂಗದವರ ಸಭೆ ಕರೆದು, ಕನ್ನಡ ಚಿತ್ರರಂಗದಲ್ಲಿ POSH (Prevention of Sexual Harassment) ಕಮಿಟಿ ರಚಿಸಲು ಸೂಚಿಸಿ 15 ದಿನಗಳ ಗಡುವು ನೀಡಿದರಾದರೂ ಇಲ್ಲಿಯವರೆಗೆ ವಾಣಿಜ್ಯ ಮಂಡಳಿಯಿಂದ ಅದರ ಬಗ್ಗೆ ಯಾವುದೇ ಸುದ್ದಿ ಇಲ್ಲ. ಕನ್ನಡ ಚಿತ್ರರಂಗದಲ್ಲಿ PಔSಊ ಕಮಿಟಿ ರಚನೆಯಾಗುವುದರ ಅಗತ್ಯವಿಲ್ಲ ಎಂದೂ, ಅದು ತಮಗೆ ಸಮ್ಮತವಿಲ್ಲವೆಂದೂ ವಾಣಿಜ್ಯ ಮಂಡಳಿಯ ಕೆಲವು ಪದಾಧಿಕಾರಿಗಳು ಹಾಗೂ ಸದಸ್ಯರು ಹೇಳುವುದನ್ನು ಕೇಳಿದರೆ ಆಶ್ಚರ್ಯ, ಆತಂಕ ಒಟ್ಟಿಗೆ ಆಗುತ್ತವೆ.
ಭಾರತದಲ್ಲಿ 2013ರಲ್ಲಿ POSH act ಜಾರಿಗೆ ಬಂದಿದೆ. ಇದು ಕೆಲಸದ ಜಾಗದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ಯಾವುದೇ ರೀತಿಯ ಲೈಂಗಿಕ ಕಿರುಕುಳಗಳನ್ನು ತಡೆಗಟ್ಟಲು ಮಾಡಿದ ಕಾಯ್ದೆ. ಕಾಯ್ದೆ ಕಾನೂನು ನಮಗೆ ಬೇಕಿಲ್ಲ ಅನ್ನುವ ಹುಂಬತನಕ್ಕೆ ಏನನ್ನಬೇಕೊ ತಿಳಿಯುತ್ತಿಲ್ಲ?
ಚಿತ್ರರಂಗದಲ್ಲಿ ಮಹಿಳೆ ಎಂದ ಕೂಡಲೇ ನಟಿ ಎನ್ನುವ ಪದವೇ ಮೊದಲಿಗೆ ಮನದಲ್ಲಿ ಮೂಡುವುದು ಅಭ್ಯಾಸಬಲವಾದರೂ, ಅಲ್ಲಿನ ನಿರ್ದೇಶನ, ನಿರ್ಮಾಣ, ಛಾಯಾಗ್ರಹಣ, ಮೇಕಪ್, ಕೇಶಾಲಂಕಾರ ಇತ್ಯಾದಿ ವಿಭಾಗಗಳಲ್ಲೂ ಮಹಿಳೆಯರಿದ್ದಾರೆ ಮತ್ತು ಸಂಭಾವನೆಯಿಂದ ಮೊದಲುಗೊಂಡು ಅನೇಕ ವಿಧದಲ್ಲಿ ತಾರತಮ್ಯವನ್ನು ಅನುಭವಿಸುತ್ತ, ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಹೆಣಗುತ್ತಾರೆ. ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಬಹಿರಂಗವಾಗಿ ಹೇಳಿಕೊಳ್ಳಲಾಗದೇ, ಯಾರ್ಯಾರ ಕೈಯಿಂದ ಹೇಗೆಲ್ಲ ಪಾರಾದೆ ಎಂದು ತಮ್ಮ ತಮ್ಮಲ್ಲೇ ಮಾತಾಡಿಕೊಂಡು ನಿಟ್ಟುಸಿರು ಬಿಡುತ್ತಾರೆ. ಇಲ್ಲೂ ಕೂಡ ಎಲ್ಲ ಮಹಿಳೆಯರೂ ಲೈಂಗಿಕಪೀಡಿತರು ಎಂದು ಜನರಲೈಸ್ ಮಾಡಲಾಗುವುದಿಲ್ಲವಾದರೂ ಮೇಲೆ ಒಳ್ಳೆಯತನವಿರುವ ಪುರುಷರ ಕುರಿತು ಹೇಳಿದಂತೆ, ಒಂದಿಷ್ಟು ಜನ ಮಹಿಳೆಯರು ಯಾವುದೇ ರೀತಿಯ ಕಿರುಕುಳ ಅನುಭವಿಸದೇ ನೆಮ್ಮದಿಯಿಂದ ಕೆಲಸ ಮಾಡಿಕೊಂಡಿದ್ದಾರೆ ಎಂದ ಮಾತ್ರಕ್ಕೆ ಉಳಿದವರನ್ನು ಅಲಕ್ಷಿಸುವಂತಿಲ್ಲ. ಪ್ರತಿಯೊಬ್ಬ ಮಹಿಳೆಯೂ ಸುರಕ್ಷತೆಯಿಂದ ಕೂಡಿದ ವಾತಾವರಣದಲ್ಲಿ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗಬೇಕು. ಮಹಿಳೆಯರಿಗೆ ಅಗತ್ಯವಾದ ಸೌಕರ್ಯಗಳನ್ನು ಉದ್ಯಮ ಒದಗಿಸಿಕೊಡಬೇಕು. ಆಕೆಗೆ ಸಿಗಬೇಕಾದ ಗೌರವ ಸಿಗಬೇಕು. ತನ್ನೊಂದಿಗಾಗುವ ಕಿರುಕುಳವನ್ನು ಧೈರ್ಯವಾಗಿ ಅಲ್ಲಿನ ಮುಖ್ಯಸ್ಥರಿಗೆ ಹೇಳುವಂತಹ ವಾತಾವರಣ ಸೃಷ್ಟಿಯಾಗಬೇಕು, ತಪ್ಪಿತಸ್ಥರಿಗೆ ತಕ್ಕುದಾದ ಶಿಕ್ಷೆಯಾಗಬೇಕು. ಮಹಿಳೆಯರು ನಿರಾತಂಕವಾಗಿ ಇಲ್ಲಿ ಕೆಲಸ ಮಾಡುವಂತಾಗಬೇಕು. ಅದು ಆರೋಗ್ಯಕರ ವಾತಾವರಣ. ಹಾಗಾಗಬೇಕು ಎಂದರೆ ನಮ್ಮ ಕನ್ನಡ ಚಿತ್ರರಂಗ ಮಾತ್ರವಲ್ಲ ಎಲ್ಲಾ ಭಾಷೆಗಳ ಚಿತ್ರರಂಗಗಳಲ್ಲೂ POSH ಕಮಿಟಿ ರಚನೆಯಾಗಬೇಕು.