ನಮ್ಮ ‘ಕುಲವೃತ್ತಿ’ಗೂ ಗೌರವ ಕೊಡಿ...

ಪಿ. ಲಂಕೇಶ್ ಅವರ ಗರಡಿಯಲ್ಲಿ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಸಿ.ಎಸ್. ದ್ವಾರಕನಾಥ ಅವರು ವೃತ್ತಿಯಿಂದ ವಕೀಲರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾಗಿ ತಳಸ್ತರದ ಸಮುದಾಯದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದರು. ಸಿದ್ದರಾಮಯ್ಯ ನೇತೃತ್ವದ ಕ್ರಾಂತಿಕಾರಿ ಹೆಜ್ಜೆಗಳಲ್ಲಿ ಒಂದಾಗಿರುವ ಜಾತಿಗಣತಿಗೆ ತಳಹದಿಯನ್ನು ಹಾಕಿಕೊಟ್ಟವರು. 2019ನೇ ಸಾಲಿನ ‘ಅನಿಕೇತನ ಪ್ರಶಸ್ತಿ’ ‘ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ 2018’ ಇವರ ಸಾಧನೆಗೆ ಸಂದ ಗೌರವಗಳಾಗಿವೆ. ವಾರ್ತಾ ಭಾರತಿ ದಿನಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ದ್ವಾರಕಾನಾಥ್ ಅವರ ಗಮನಾರ್ಹ ಕೃತಿಗಳು: ‘ಮೂಕ ನಾಯಕ’ ಹಾಗೂ ‘ಭಾರತ ಸಂವಿಧಾನ : ಐತಿಹಾಸಿಕ ದಾಖಲಾತಿಗಳೊಂದಿಗೆ’, ‘ಗಾಂಧಿಮೆಟ್ಟಿದ ನಾಡಿನಲ್ಲಿ ’ (ಪ್ರವಾಸ ಕಥನ).

Update: 2025-01-01 14:03 GMT

ಈಚೆಗೆ ಹಲವು ಪ್ರಶಸ್ತಿ ನೀಡುವ ಆಯ್ಕೆ ಸಮಿತಿಗಳಲ್ಲಿ ನಾನು ಸದಸ್ಯನಾಗಿ ಕೆಲಸ ಮಾಡಬೇಕಿತ್ತು. ಅಂತಹ ಒಂದು ಸಮಿತಿಯ ಸದಸ್ಯರ ನಡುವೆ, ಸಭೆಯ ಒಳಗಡೆ ಮತ್ತು ಹೊರಗಡೆ ನಡೆದ ಕೆಲ ಮಾತುಕತೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಆಯ್ಕೆ ಸಮಿತಿಯಲ್ಲಿದ್ದ ಪ್ರೊಫೆಸರ್ ಒಬ್ಬರು, ಈ ಸಲ ಪುರೋಹಿತರ ಸಂಘದ ಮುಖ್ಯಸ್ಥರೊಬ್ಬರಿಗೆ ಪ್ರಶಸ್ತಿ ಕೊಡೋಣ.. ಅಂದರು. ಅವರು ಪುರೋಹಿತ ಸಮುದಾಯಕ್ಕೆ ಸೇರಿದವರೂ ಆಗಿದ್ದರಿಂದ ಅವರ ಕಾಳಜಿಯನ್ನು ವ್ಯಕ್ತಪಡಿಸಿದ್ದರು. ನಾನು ಏನೂ ಪ್ರತಿಕ್ರಿಯಿಸಲಿಲ್ಲ ಅವರೇ ಮತ್ತೆ ಮಾತು ಆರಂಭಿಸಿ, ನೀವು ಸದಾ ಕುಲವೃತ್ತಿಗಳ ಬಗ್ಗೆ ಮಾತಾಡುತ್ತಿರುತ್ತೀರಿ.. ಪೌರೋಹಿತ್ಯ ಎಂಬ ಕುಲವೃತ್ತಿಯನ್ನೂ ಗಂಭೀರವಾಗಿ ಪರಿಗಣಿಸಬಾರದೇಕೆ..? ಅದೊಂದು ಕುಲಕಸುಬು ಎಂದ ಮೇಲೆ ಅದನ್ನೂ ಗೌರವಿಸಬೇಕಲ್ಲವೆ ಎಂದು ಅವರಲ್ಲಿರುವ ವೃತ್ತಿ ಪ್ರತಿಭಾವಂತ ಬಾಂಧವರ ಕುರಿತು ವಿವರಿಸಿ ಹೇಳಿದರು. ಅವರು ಹೇಳಿದ್ದು ಸರಿಯಿತ್ತು. ನಾನು ಹೇಳಿದೆ, ಖಂಡಿತ ಪರಿಗಣಿಸೋಣ ಸರ್.. ಅಂತೆಯೇ ಎಲ್ಲಾ ಕುಲವೃತ್ತಿಗಳನ್ನೂ ಗೌರವಿಸೋಣ. ನೋಡಿ ನಮ್ಮಲ್ಲಿ ‘ಗಂಟಿಚೋರ್’ ಎಂಬ ಸಮುದಾಯವಿದೆ, ಇವರ ಕುಲವೃತ್ತಿ ಕಳ್ಳತನ ಮಾಡುವುದು. ಈ ಕುಲವೃತ್ತಿಯನ್ನು ಅವರು ಆಯ್ದು ಕೊಂಡಿದ್ದಲ್ಲ, ನಮ್ಮಂತಹ ಸಭ್ಯ ಜಾತಿಗಳವರು ಅವರಿಗೆ ವಹಿಸಿದ್ದ ಈ ಕುಲಕಸುಬನ್ನು ಕಾಲಾಂತರಗಳಿಂದ ಗಂಭೀರವಾಗಿ ಮುನ್ನಡೆಸುತ್ತಾ ಹೋಗುತ್ತಿದ್ದಾರೆ. ಅದರಲ್ಲೂ ಪ್ರತಿಭೆಯುಳ್ಳವರಿದ್ದಾರೆ..! ನೋಡಿ.. ಕಳೆದ ಮೂವತ್ತು ವರ್ಷಗಳ ಹಿಂದೆ ಗಂಟಿಚೋರ್ ಸಮುದಾಯದ ಕೇವಲ ಮೂರು ಮಂದಿ ಯುವಕರು, ‘ಮಹಾಲಕ್ಷ್ಮಿ ಎಕ್ಸ್‌ಪ್ರೆಸ್’ ರೈಲಿನಲ್ಲಿದ್ದ ಎಲ್ಲಾ ಪ್ಯಾಸೆಂಜರ್ ಗಳ ಬಳಿಯಿದ್ದ ಎಲ್ಲವನ್ನೂ ಒಂದೇ ಏಟಿಗೆ ಕದಿಯುತ್ತಾರೆ.!! ರೈಲ್ವೆ ಸಿಬ್ಬಂದಿ, ರೈಲ್ವೆ ಪೊಲೀಸ್, ಜಾಗೃತ ಪ್ರಯಾಣಿಕರೆಲ್ಲರನ್ನೂ ಯಾಮಾರಿಸಿ ತಮ್ಮ ಕುಲಕಸುಬಿನ ಕೈಚಳಕ ತೋರಿದ್ದು ಪ್ರತಿಭೆಯಲ್ಲವೆ..? ಆ ಮೂವರಲ್ಲಿ ಈಗಲೂ ಒಬ್ಬಾತ ಬದುಕಿದ್ದಾನೆ, ಕುಲವೃತ್ತಿಯ ಪ್ರತಿಭೆೆಯನ್ನು ಗುರುತಿಸಿ ಪ್ರಶಸ್ತಿ ಕೊಡುವುದಿದ್ದರೆ ಆತನನ್ನು ಪರಿಗಣಿಸಬಹುದಲ್ಲವೆ..? ಎಂದೆ. ನಾನು ಈ ಮಾತುಗಳನ್ನು ಯಾರನ್ನೋ ಹಳಿಯಲು, ಯಾರನ್ನೋ ಅವಮಾನಿಸಲು ಖಂಡಿತ ಹೇಳಿರಲಿಲ್ಲ. ರಾಜ್ಯ ಗಂಟಿಚೋರ್ ಸಂಘದ ಗೌರವಾಧ್ಯಕ್ಷನಾಗಿ ಜವಾಬ್ದಾರಿಯುತನಾಗಿಯೇ ಹೇಳಿದ್ದೆ. ನನ್ನ ಮಾತುಗಳನ್ನು ಕೇಳಿ ಎಲ್ಲರೂ ನಕ್ಕರು, ನಾನು ನಗಲಿಲ್ಲ. ಅಷ್ಟರಲ್ಲೊಬ್ಬ ಗೌರವಾನ್ವಿತರು ‘ದ್ವಾರಕಾನಾಥ್ ಸರ್ ಕಳ್ಳತನ ಎಂಬ ವೃತ್ತಿ ತಪ್ಪಲ್ಲವೆ..?’ ಅಂದರು. ‘ಸಂಪತ್ತಿನ ಸಮಾನ ಹಂಚಿಕೆಯಾಗಿದ್ದರೆ ಯಾರು ಕಳ್ಳತನ ಮಾಡುತ್ತಿದ್ದರು ಸರ್’ ಅಂದೆ ತಕ್ಷಣಕ್ಕೆ.. ಇದರ ಅರ್ಥ ನಾನು ಕಳ್ಳತನವನ್ನು ಸಮರ್ಥಿಸುತ್ತಿದ್ದೇನಂತಲ್ಲ. ವಾಸ್ತವವನ್ನು ಹತ್ತಿರದಿಂದ ಕಂಡು ಹೇಳುತ್ತಿದ್ದೇನೆ. ಕಳ್ಳತನವೂ ಕುಲವೃತ್ತಿ ಎಂದ ಮೇಲೆ ಅದನ್ನು ಹೇಗೆ ಕೆಟ್ಟದ್ದು ಎನ್ನುತ್ತೀರಿ..? ಅದಕ್ಕೂ ಒಂದು ಸೈದ್ಧಾಂತಿಕ ಹಿನ್ನೆಲೆ ಇರಬಹುದಲ್ಲವೆ? ಈ ಸಂದರ್ಭದಲ್ಲಿ ನನ್ನ ಈ ಮಾತಿಗೆ ಪೂರಕವೆಂಬಂತಹ ಇನ್ನೊಂದು ಘಟನೆ ನೆನಪಾಗುತ್ತೆ...

ನಾವು ಹುಡುಗರಾಗಿದ್ದಾಗ ಕೇಡಿ ನಂಜುಂಡ ಎಂಬ ಅತ್ಯಂತ ಪ್ರತಿಭಾವಂತನಾದ ಕಳ್ಳನಿದ್ದ. ಈತನನ್ನು ‘ಟೇಕಲ್ ನಂಜುಂಡ’ ಅಂತಲೂ ಕರೆಯುತ್ತಿದ್ದರು. ಈತನೂ ಅಪರಾಧಿ, ಬುಡಕಟ್ಟಿನ ಯಾವುದೋ ಜಾತಿಗೆ ಸೇರಿದವನಿರಬೇಕು. ಈತ ಶ್ರೀಮಂತರಿಗೆ ಮೊದಲೇ ಹೇಳಿ ಕಳ್ಳತನ ಮಾಡುತ್ತಿದ್ದ!! ಎಷ್ಟೇ ಎಚ್ಚರಿಕೆ ವಹಿಸಿದರೂ, ಎಷ್ಟೇ ಪೊಲೀಸ್ ಪಹರೆ ಇಟ್ಟರೂ ಈತ ಎಲ್ಲರನ್ನೂ ಯಾಮಾರಿಸಿ ಕದ್ದೊಯ್ಯುತ್ತಿದ್ದ!! ಆ ಕಾಲದಲ್ಲಿ ನಮ್ಮ ಭಾಗದಲ್ಲಿ ಈತನ ಕಳ್ಳತನದ ಸಾಹಸಗಳನ್ನು ನಾವು ದಂತಕತೆಗಳಂತೆ ವೈಭವೀಕರಿಸಿಕೊಂಡು ಮಾತಾಡುತ್ತಿದ್ದೆವು.

 

ಜಾನಪದ ತಜ್ಞ ಎಚ್.ಎಲ್.ನಾಗೇಗೌಡರು ಬಳ್ಳಾರಿಯ ಜಿಲ್ಲಾಧಿಕಾರಿಗಳಾಗಿದ್ದಾಗ ಕೇಡಿ ನಂಜುಂಡ ಬಳ್ಳಾರಿ ಜೈಲಿನಲ್ಲಿದ್ದ. ನಾಗೇಗೌಡರಿಗೆ ಪ್ರಖ್ಯಾತ ಕಳ್ಳ ನಂಜುಂಡನ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ಒಮ್ಮೆ ಜೈಲಾಧಿಕಾರಿಗೆ ಹೇಳಿ ನಂಜುಂಡನನ್ನು ನೋಡಲು ಜೈಲಿಗೆ ಹೋಗೇಬಿಟ್ಟರು. ಜಿಲ್ಲಾಧಿಕಾರಿಗಳು ಬಂದಿದ್ದಾರೆಂದು ಜೈಲಧಿಕಾರಿ ಜೈಲಿನ ಆವರಣದಲ್ಲಿ ಒಂದು ಟೇಬಲ್ ಹಾಕಿ ಅದರ ಮೇಲೆ ಜಿಲ್ಲಾಧಿಕಾರಿಗಳಿಗಾಗಿ ಒಂದು ಲೋಟ ನೀರಿಟ್ಟು, ಟೇಬಲ್‌ನ ಎರಡೂ ಕಡೆ ಎರಡು ಕುರ್ಚಿ ಹಾಕಿ ಮಾತಾಡಲು ವ್ಯವಸ್ಥೆ ಮಾಡಿದ್ದರು.

ನಾಗೇಗೌಡರು ಹಸನ್ಮುಖದಿಂದ ಸುದೀರ್ಘವಾಗಿ ಮಾತಾಡುತ್ತಾ ನಂಜುಂಡನ ಬಾಯಲ್ಲಿ ಆತನ ಕಳ್ಳತನದ ಸಾಹಸಗಳ ಎಪಿಸೋಡ್‌ಗಳನ್ನು ಕುತೂಹಲದಿಂದ ಕೇಳಿ ತಿಳಿದುಕೊಂಡರು. ಸಂದರ್ಶನ ಮುಗಿಯುವಾಗ ಕಡೆಯಲ್ಲಿ ನಾಗೇಗೌಡರು, ನಂಜುಂಡಪ್ಪ ಏನೇ ಇರಲಿ ಕಳ್ಳತನ ತಪ್ಪಲ್ಲವೇನೋ..? ಅಂದರು, ಅದಕ್ಕೆ ನಂಜುಂಡ ಮುಗುಳ್ನಗುತ್ತಾ ಟೇಬಲ್ ಮೇಲಿನ ನೀರಿನ ಲೋಟವನ್ನು ತೋರಿಸುತ್ತಾ, ಸಾರ್, ಆ ಲೋಟದಲ್ಲಿ ನೀರಿಟ್ಟಿರುವುದು ಯಾರಿಗೆ ಸಾರ್...? ಕೇಳಿದ. ಅದಕ್ಕೆ ನಾಗೇಗೌಡರು, ನನಗಪ್ಪ.. ಎಂದರು. ತಕ್ಷಣ ನಂಜುಂಡ, ಸಾರ್ ಆ ಲೋಟದಲ್ಲಿ ನಿಮಗಾಗೇ ಇಟ್ಟ ನೀರನ್ನು ನಾನು ಕಿತ್ತುಕೊಂಡು ಕುಡಿದರೆ ತಪ್ಪು ಸಾರ್.. ಆದರೆ ನಾನು ನದಿಯಲ್ಲಿ, ಬಾವಿಯಲ್ಲಿ, ಕಾಲುವೆಯಲ್ಲಿ, ಕೆರೆಯಲ್ಲಿ ಯಥೇಚ್ಛವಾಗಿ ಇರುವ ನೀರಿನಲ್ಲಿ ಒಂದು ಲೋಟ ತಗೊಂಡರೆ ಹೆಂಗೆ ತಪ್ಪಾಯ್ತದೆ ಸಾರ್..? ಎಂದನಂತೆ. ನಾಗೇಗೌಡರು ನಿರುತ್ತರರಾಗುತ್ತಾರೆ! ಇದನ್ನು ನಾಗೇಗೌಡರೇ ದಾಖಲಿಸಿದ್ದಾರೆ.

ಗಂಟಿಚೋರ್ ಸಂಘದ ಹಿಂದಿನ ಅಧ್ಯಕ್ಷರ ಬಳಿ ಒಮ್ಮೆ ಹೈಕೋರ್ಟ್‌ನ ಮುಂದೆ ಮಾತಾಡುತ್ತಾ ಬರುತ್ತಿದ್ದೆ. ಈಗಲೂ ನಿಮ್ಮ ಕುಲವೃತ್ತಿಯನ್ನು ಯಾರಾದರೂ ಮಾಡುವವರಿದ್ದಾರ..? ಕೇಳಿದೆ. ಅದಕ್ಕವರು, ಇಲ್ಲಾ ಸಾರ್.. ಅಲ್ಲಿಲ್ಲಿ ಒಬ್ಬೊಬ್ಬರು ಮಾಡುತ್ತಿರಬಹುದು.. ಈಗ ವೃತ್ತಿಗೆ ಬಹಳ ಕಾಂಪಿಟೇಶನ್ ಇದೆ ಸರ್.. ಅಂತ ನಕ್ಕರು. ಕಳ್ಳತನದ ವೃತ್ತಿಗಾ..?! ಎಂದೆ ಆಶ್ಚರ್ಯದಿಂದ. ಅದಕ್ಕೆ ಆತ ವಿಧಾನಸೌಧದ ಕಡೆ ಕೈತೋರಿಸುತ್ತಾ ಇಲ್ಲಿರೋರು ನಮಗಿಂತಲೂ ಪಟಿಂಗರು ಸಾರ್.. ಇವರ ಮುಂದೆ ನಮ್ಮ ಜುಜುಬಿ ವೃತ್ತಿ ಹೇಗೆ ನಡೆಯುತ್ತೆ ಹೇಳಿ ಸರ್.. ಎಂದು ನಕ್ಕರು. ಆಡಳಿತಾರೂಢ ಪ್ರಮುಖರನ್ನು ಸದಾ ಸುತ್ತುವರಿದು ಓಲೈಸುತ್ತಾ ಅವರಿಗಾಗಿ ಹೀನಾಯ ‘ವೃತ್ತಿ’ ಮಾಡುತ್ತಾ ಅವರಿಂದ ಅಧಿಕಾರ ಗಿಟ್ಟಿಸುವವರು, ಭ್ರಷ್ಟತನವನ್ನೇ ಕುಲವೃತ್ತಿಯನ್ನಾಗಿಸಿಕೊಂಡ ಮಿಲಿಯಾಧಿಪತಿಗಳು ನನ್ನ ಕಣ್ಣ ಮುಂದೆ ಒಂದು ಕ್ಷಣ ಹಾದು ಹೋದರು.

ಗಂಟಿಚೋರ್(ಗಂಟು ಕಳ್ಳರು) ಗಳನ್ನು ಅಪರಾಧಿ ಬುಡಕಟ್ಟುಗಳೆಂದು ಪರಿಗಣಿಸಿ criminal tribes act 1871 ಅನ್ನು ತಂದ ಬ್ರಿಟಿಷರು ಅವರಿಗೆ ಕೊಡಬಾರದ ಹಿಂಸೆಯನ್ನೆಲ್ಲ ಕೊಟ್ಟು ಕಡೆಗೆ, ಇಡೀ ಸಮುದಾಯಗಳನ್ನೇ ವೃತ್ತಿಪರ ಅಪರಾಧಿಗಳು ಎಂದು ಪರಿಗಣಿಸುವುದು ತಪ್ಪು ಎಂಬ ಆತ್ಮಾವಲೋಕನದ ಅಭಿಪ್ರಾಯ ತಳೆದು, denotified criminal tribes (ವಿಮುಕ್ತ ಅಪರಾಧಿ ಬುಡಕಟ್ಟುಗಳು) ಎಂದು ಅವರೇ ಪರಿಗಣಿಸಿದ್ದವರನ್ನು ಆ ಕಳಂಕದಿಂದ ಹೊರತರಲು ಅವರೇ ಪ್ರಯತ್ನಿಸಿದ್ದರು. ಅವರಿಗೆ ಅನೇಕ ಕಡೆ ಭೂಮಿ, ನಿವೇಶನ ಕೊಟ್ಟು ಗೌರವದಿಂದ ಬದುಕಲು ಅನುವುಮಾಡಿಕೊಟ್ಟಿದ್ದರು. ಆದರೆ ನಮ್ಮ ಸ್ವತಂತ್ರ ಭಾರತದ ಪೊಲೀಸರು ಅವರನ್ನು ಇಂದಿಗೂ ಅಪರಾಧಿಗಳೆಂದೇ ಪರಿಗಣಿಸಿ, ಎಲ್ಲೇ ಕಳ್ಳತನ ಆದರೂ ಗಂಟಿಚೋರ್‌ಗಳನ್ನು ಎಳೆದೊಯ್ದು ಹಿಂಸಿಸುತ್ತಾರೆ. ಇದೇ ರೀತಿ ಪಾರ್ಧಿ, ಹರಿಣಿಶಿಖಾರಿ, ಚಪ್ಪರ್ಬಂಧ್, ಕೋಲಿ, ಕೊರಮ, ಕೊರಚ ಮುಂತಾದ ಅನೇಕ ಸಮುದಾಯಗಳನ್ನು ವಿಮುಕ್ತ ಅಪರಾಧಿ ಬುಡಕಟ್ಟುಗಳೆಂದು ಪರಿಗಣಿಸಿ ಹಿಂಸಿಸುತ್ತಾರೆ.

ಈಚೆಗೆ ಗೋಕಾಕ್ ಫಾಲ್ಸ್ ಬಳಿ ಇರುವ ಗಂಟಿಚೋರ್ ಸಮುದಾಯದ ಕಾಲೋನಿಗೆ ಹೋಗಿದ್ದೆ, ಅವರ ಕಾಲನಿ ಸುತ್ತಲು ಮನುಷ್ಯ ಹತ್ತಲಾರದಷ್ಟು ಎತ್ತರದ ಜೈಲಿನಂತಹ ಗೋಡೆಯನ್ನು ಅಂದು ಬ್ರಿಟಿಷರು ನಿರ್ಮಿಸಿದ್ದರು! ಇಂದಿಗೂ ಗಟ್ಟಿಮುಟ್ಟಾಗಿರುವ ಈ ಗೋಡೆಯನ್ನು ನೋಡಿ ನನಗೆ ಆಶ್ಚರ್ಯವಾಯಿತು! ಅದಕ್ಕೆ ಅಂಟಿಕೊಂಡೇ ಇರುವ, ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಈ ಗಂಟಿಚೋರ್ ಸಮುದಾಯದ ಜನ ಕೆಲಸ ಆದ ನಂತರ ಪೊಲೀಸರ ಕಣ್ಗಾವಲಿನಲ್ಲಿ ದೊಡ್ಡ ಗೋಡೆಯ ನಡುವೆ ಇರುವ ಶೆಡ್ ನಂತಹ ಮನೆಗಳಲ್ಲಿ ಹೋಗಿ ಬಂದಿಗಳಾಗಿ ವಾಸಿಸಬೇಕಿತ್ತು. ‘ಗಂಟಿಚೋರ್’ ಎಂಬ ಕಳಂಕದಿಂದ ಹೊರಬರಲು ಹೆಣಗಾಡುತ್ತಿರುವ ಈ ಜನ ‘ಗಿರಣಿವಡ್ಡರ್’ ಎಂದು ಹೆಸರು ಬದಲಿಸಿಕೊಂಡು ಇನ್ನೂ ಅಲ್ಲೇ ಜೀವಿಸುತ್ತಿದ್ದಾರೆ!!

ಲಕ್ಷ್ಮಣ ಗಾಯಕವಾಡ್ ಪಾರ್ಧಿ ಎಂಬ ಪುಸ್ತಕ ಬರೆಯುವವರೆಗೂ ಈ ಸಮುದಾಯಗಳ ಬಗ್ಗೆ ಸಾಮಾನ್ಯ ಜನರಿಗೆ ಅರಿವಿರಲಿಲ್ಲ. ಅಪರಾಧಿ ಬುಡಕಟ್ಟುಗಳೆಂಬ ಕಳಂಕ ಹೊತ್ತು ಕಳ್ಳತನವೆಂಬ ಕುಲವೃತ್ತಿಯನ್ನು ಶ್ರದ್ಧಾಭಕ್ತಿಯಿಂದ ಮಾಡುತ್ತಿದ್ದ ಸಮುದಾಯಗಳು ಕೆಲಸಕ್ಕೆ ಹೋಗುವ ಮುಂಚೆ ಬ್ಲೇಡಿಗೆ ಕುಂಕುಮ ಬಳಿದು, ಹೂವಿಟ್ಟು ಭಕ್ತಿಯಿಂದ ಪೂಜೆ ಮಾಡಿ ದೇವರನ್ನು ನೆನೆದು ವೃತ್ತಿಗೆ ಹೋಗುತ್ತಿದ್ದರು. ಮತ್ತೆ ಕೆಲವರು ಕೋಳಿ ಕೊಯ್ದು ಪವಿತ್ರ ಬ್ಲೇಡಿಗೆ ರಕ್ತತಿಲಕ ಇಟ್ಟು ಪೂಜಿಸಿ ವೃತ್ತಿಗೆ ಹೋಗುತ್ತಿದ್ದರು. ಇಂತಹ ವೃತ್ತಿಯೊಂದನ್ನು ಅಪರಾಧ ಎಂದು ಪರಿಗಣಿಸಬಹುದೆ?

ವಜ್ರವನ್ನು ಕದ್ದಿರಲಿ ಅಥವಾ ಕುಂಬಳಕಾಯನ್ನು ಕದ್ದಿರಲಿ ಕಳ್ಳತನ ಕಳ್ಳತನವೇ ಎಂದು ಕಳ್ಳತನವನ್ನು ಸರಳೀಕರಿಸುವಾಗ ನಮಗೆ ಮೊದಲು ನೆನಪಾಗುವುದು ಬೆಣ್ಣೆ ಕದ್ದ ಕಳ್ಳ ಕೃಷ್ಣನೇ, ಅಂತೆಯೇ ನಾರಿಯರ ಸೀರೆ ಕದ್ದ, ಅನೇಕ ಹೆಂಗಳೆಯರ ಹೃದಯ ಕದ್ದ ಕೃಷ್ಣನೊಂದಿಗೆ ಅನೇಕ ಮಹಾಮಹಿಮರೂ ನೆನಪಾಗುತ್ತಾರೆ..!? ಕಡೆಗೆ ಕಳ್ಳನಲ್ಲದವನು ಯಾರು? ಎಂಬ ಜಿಜ್ಞಾಸೆಯ ಪ್ರಶ್ನೆ ನಮಗೇ ಸುತ್ತಿಕೊಳ್ಳುತ್ತದೆ.

ಯಾಕೋ ಕಳ್ಳತನ ಎನ್ನುವ ಈ ತರ್ಕ ಕಡೆಗೆ ಅಧ್ಯಾತ್ಮದ ಹಾದಿ ಹಿಡಿಯುತ್ತಿದೆಯೇನೋ ಅನುಭಾವವಾಗಿ ಕಾಣುತ್ತಿದೆಯೇನೋ ಅನಿಸುತ್ತಿದೆ...! ಹೆಚ್ಚು ಎಳೆಯುವುದು ಬೇಡ..

ಜಲಾಲುದ್ದೀನ್ ರೂಮಿ ಇದಕ್ಕೊಂದು ಸುಂದರ ಅಂತ್ಯ ಕಾಣಿಸುತ್ತಾರೆ...

Shall I tell you our secret? We are charming thieves who steal hearts and never fail because we are the friends of the one.

Writer - ವಾರ್ತಾಭಾರತಿ

contributor

Editor - Musaveer

contributor

Byline - ಡಾ. ಸಿ.ಎಸ್. ದ್ವಾರಕಾನಾಥ್

contributor

Similar News