ಮಲ್ಲಿಗೆ ನೆನಪಿನಲ್ಲಿ...

ಲೇಖಕಿ ಸಹನಾ ಕಾಂತಬೈಲು ಅವರು ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದವರು. 2007ರಲ್ಲಿ ‘ಸಿಂಚನ’ ಹನಿಗವನ ಸಂಕಲದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಸಹನಾ ಅವರು ಮೂಲತಃ ಕೃಷಿ ಕೇತ್ರವನ್ನು ನೆಚ್ಚಿಕೊಂಡವರು. ಮಣ್ಣಿನ ಜೊತೆಗೆ ಬೆಸೆದುಕೊಂಡ ಅವಿನಾಭಾವ ಸಂಬಂಧವೇ ನಿಧಾನಕ್ಕೆ ಅವರನ್ನು ಬರಹಗಾರರನ್ನಾಗಿಸಿತು. ‘ಆನೆ ಸಾಕಲು ಹೊರಟವಳು’ ಇವರ ಪ್ರಬಂಧ ಸಂಕಲನ. ಕಾಡು, ಕೃಷಿ ಪರಿಸರವನ್ನು ಕೇಂದ್ರವಾಗಿಟ್ಟು ಬರೆದ ಬರಹಗಳಿವು. ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ. ನಾಯಕ ಅಂಕಣ ಬರಹ ಪುರಸ್ಕಾರವನ್ನು ಈ ಕೃತಿ ತನ್ನದಾಗಿಸಿಕೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೆ. ಮಂಜಪ್ಪ ದತ್ತಿ ಪ್ರಶಸ್ತಿ, ಅಂಜೂರ ಪ್ರತಿಷ್ಠಾನ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳನ್ನು ಈ ಕೃತಿ ಪಡೆದಿವೆ. ‘ಇದು ಬರಿ ಮಣ್ಣಲ್ಲ’ ಪ್ರಬಂಧ ಸಂಕಲನ ಇನ್ನೊಂದು ಮಹತ್ವದ ಕೃತಿ. ಇದು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕೃಷಿ ಕ್ಷೇತ್ರಗಳಲ್ಲೂ ಹಲವು ಸಾಧನೆಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ.

Update: 2025-01-02 11:14 GMT

 ನನ್ನ ಬಾಲ್ಯದಲ್ಲಿ ಅಂಗಳ ತುಂಬ ಹಲವು ಜಾತಿಯ ಮಲ್ಲಿಗೆ ಬಳ್ಳಿಗಳಿದ್ದವು. ಉದಯ ಮಲ್ಲಿಗೆ, ಕಸ್ತೂರಿ ಮಲ್ಲಿಗೆ, ಸೆಂಟ್ ಮಲ್ಲಿಗೆ, ತೋರಣ ಮಲ್ಲಿಗೆ, ದುಂಡು ಮಲ್ಲಿಗೆ, ಮರಮಲ್ಲಿಗೆ, ಭಟ್ಕಳ ಮಲ್ಲಿಗೆ... ಹೀಗೆ. ಒಂದೊಂದು ಮಲ್ಲಿಗೆಗೂ ಒಂದೊಂದು ಘಮ. ನನಗೆ ಎಲ್ಲ ಮಲ್ಲಿಗೆಯೂ ಪ್ರಿಯವೇ. ಅದರಲ್ಲೂ ಮೂರು ಸುತ್ತು ಒತ್ತೊತ್ತಾಗಿ ದಳಗಳನ್ನು ಹೊಂದಿರುವ ದೊಡ್ಡ ಗಾತ್ರದ ಉದಯ ಮಲ್ಲಿಗೆಯೆಂದರೆ ಪ್ರಾಣ. ಸಾಮಾನ್ಯವಾಗಿ ಮಲ್ಲಿಗೆ ಹೂಗಳು ರಾತ್ರಿ ಪಕಳೆಗಳನ್ನು ಬಿಡಿಸಿ ಪರಿಮಳ ಸೂಸಲು ತೊಡಗಿದರೆ ಉದಯ ಮಲ್ಲಿಗೆ ಅರಳುವುದು ಸೂರ್ಯ ಉದಯವಾದ ಮೇಲೆಯೇ. ವಿಶೇಷವೆಂದರೆ ಅದು ಸಂಜೆ ಕಿತ್ತರೆ ಬೆಳಗ್ಗೆ ಅರಳುವುದಿಲ್ಲ; ಸುವಾಸನೆಯೂ ಇರುವುದಿಲ್ಲ. ಸೂರ್ಯನ ಆಗಮನದ ಬಳಿಕವೇ ಅದನ್ನು ಕೊಯ್ಯಬೇಕು. ಆಗ ಅದರ ಪರಿಮಳವೂ ಅದ್ಭುತ. ಮರಮಲ್ಲಿಗೆ ಗಿಡದಲ್ಲಿ ಆಗುವ ಮಲ್ಲಿಗೆಯಾದರೆ ತೋರಣ ಮಲ್ಲಿಗೆ ಮನೆದ್ವಾರದ ಎರಡೂ ಬದಿಗೆ ತೋರಣದಂತೆ ಹಬ್ಬಿ ಬಂದವರನ್ನು ಸ್ವಾಗತಿಸುತ್ತಿತ್ತು. ಬೇಸಗೆಯಲ್ಲಿ ಮೊದಲ ಮಳೆ ಬಿದ್ದಾಕ್ಷಣ ಅದುವರೆಗೂ ಸೊರಗಿದ್ದ ಮಲ್ಲಿಗೆ ಬಳ್ಳಿಗಳೆಲ್ಲ ಯೌವನ ಉಕ್ಕಿದಂತೆ ಚಿಗುರಿ ಹೂ ಬಿಟ್ಟು ಅಂಗಳದಲ್ಲಿ ರಂಗೋಲಿ ಹಾಕಿದಂತೆ ಕಾಣುವುದನ್ನು ನೋಡುವುದೇ ಒಂದು ಸೊಬಗು. ಆದರೆ ಕಸ್ತೂರಿ ಮಲ್ಲಿಗೆ ಹೂ ಬಿಡಲು ಇಂಥದೇ ಕಾಲ ಬೇಕು ಎಂದು ಇಲ್ಲ. ಪ್ರಮಾಣದಲ್ಲಿ ಹೆಚ್ಚುಕಡಿಮೆಯಿದ್ದರೂ ವರ್ಷವಿಡೀ ಹೂ ಕೊಡುತ್ತಾ ಇರುತ್ತದೆ. ಹೀಗೆ ನನ್ನ ಚಿಕ್ಕಂದಿನಲ್ಲಿ ದಿನಾ ಮಲ್ಲಿಗೆ ಹೂವಿನ ಸುಗ್ಗಿ.

ಸಂಜೆ ಶಾಲೆ ಬಿಟ್ಟು ಮನೆಗೆ ಬಂದಾಕ್ಷಣ ನಾನು ಮಾಡುತ್ತಿದ್ದ ಮೊದಲ ಕೆಲಸವೆಂದರೆ ಉದಯ ಮಲ್ಲಿಗೆ ಬಿಟ್ಟು ಉಳಿದ ಮಲ್ಲಿಗೆಯನ್ನು ಕೊಯ್ಯುವುದು. ಅದನ್ನು ಮಾತ್ರ ಬೆಳಗ್ಗೆ ಕೊಯ್ಯುವುದು. ಕೆಲವೊಮ್ಮೆ ಬೆಳಗ್ಗೆ ಏಳುವಾಗ ತಡವಾಗಿ ಶಾಲೆಗೆ ಹೋಗುವ ಅವಸರದಲ್ಲಿ ಉದಯ ಮಲ್ಲಿಗೆ ಬಿಡಿಸಲು ಸಮಯ ಸಿಗುತ್ತಿರಲಿಲ್ಲ. ಆಗ ನನಗೆ ಅಳು ಬಂದಂತಾಗುತ್ತಿತ್ತು. ಶಾಲೆಯನ್ನು ಶಪಿಸುತ್ತಿದ್ದೆ.

ನಾನು ‘ಉದುರು ಉದುರು ಮಲ್ಲಿಗೆ, ಉದುರದಿರು ಮಲ್ಲಿಗೆ, ಉದುರಿದರೆ ಶಿವನಾ ಪಾದ ಸೇರು ಮಲ್ಲಿಗೆ’ ಎಂದು ರಾಗವಾಗಿ ಹಾಡುತ್ತಾ ಒಂದೊಂದೇ ಮೊಗ್ಗನ್ನು ಬಿಡಿಸುತ್ತಿದ್ದರೆ ಒಮ್ಮೊಮ್ಮೆ ತಮ್ಮನೂ ಜೊತೆ ಸೇರುತ್ತಿದ್ದ. ದುಂಡು ಮಲ್ಲಿಗೆ ಮರವಿಡೀ ಹಬ್ಬಿ ನೆಲದಲ್ಲಿ ಬಿಡುವುದಕ್ಕಿಂತಲೂ ಹೆಚ್ಚು ಮರದ ಮೇಲೆಯೇ ಬಿಡುತ್ತಿತ್ತು. ಆ ಮಲ್ಲಿಗೆಯನ್ನು ಕೊಯ್ಯಲು ನನಗೆ ಆಗುತ್ತಿರಲಿಲ್ಲ. ಅದು ಕೊಯ್ಯುವವರಿಲ್ಲದೆ ಮರದಲ್ಲೇ ಅರಳಿ ಉದುರಿಹೋಗುತ್ತಿತ್ತು. ಕೆಲವೊಮ್ಮೆ ಕೂಲಿಕಾರರ ಬಳಿ ಏಣಿ ಇಟ್ಟು ಕೊಯ್ಯಲು ಅಮ್ಮ ಹೇಳುತ್ತಿದ್ದದ್ದೂ ಉಂಟು. ಆಗ ನನಗೆ ಸಂಭ್ರಮವೋ ಸಂಭ್ರಮ. ಕೊಯ್ದ ಮೊಗ್ಗುಗಳನ್ನು ಅಮ್ಮ ಕಟ್ಟುತ್ತಿದ್ದುದು ಬಾಳೆ ಬಳ್ಳಿಯಲ್ಲಿ. ಮಲ್ಲಿಗೆ ಕಟ್ಟುವುದಕ್ಕಾಗಿಯೇ ಬೇಸಿಗೆಯಲ್ಲಿ ಒಂದು ವರ್ಷಕ್ಕಾಗುವಷ್ಟು ಬಾಳೆ ಬಳ್ಳಿ ಮಾಡಿ ಇಡುತ್ತಿದ್ದಳು. ಅದಕ್ಕಾಗಿ ತೋಟದಿಂದ ಗೊನೆ ಕಡಿದ ಬಾಳೆಯ ಕಾಂಡವನ್ನು ಕೂಲಿಕಾರರಲ್ಲಿ ಹೇಳಿ ತರಿಸುತ್ತಿದ್ದಳು. ಬಾಳೆಕಾಂಡದ ಪದರವನ್ನು ಒಳಗಿನ ಟ್ಯೂಬ್ ಲೈಟ್‌ನಂತಹ ಭಾಗ ಬರುವವರೆಗೆ ಒಂದೊಂದೇ ಬಿಡಿಸಿ ಬಿಸಿಲಿನಲ್ಲಿ ಒಣ ಹಾಕುತ್ತಿದ್ದಳು. 5-6 ಬಿಸಿಲು ಆದಾಗ ಅದು ಒಣಗುತ್ತಿತ್ತು. ಒಣಗಿದ ಪದರವನ್ನು ಸೂರ್ಯನ ಬಿಸಿಲು ಬೀಳುವ ಮೊದಲೇ ಸುತ್ತಿ ಜೋಪಾನ ಮಾಡಿ ಇಡುತ್ತಿದ್ದಳು. ಮಾಲೆ ಕಟ್ಟುವ ಮೊದಲು ಇದರಿಂದ ಸಪೂರವಾಗಿ ಬಳ್ಳಿ ಸಿಗಿದು ನೀರಲ್ಲಿ ಅದ್ದಿ ತೆಗೆಯುತ್ತಿದ್ದಳು. ನೀರಲ್ಲಿ ಒದ್ದೆ ಮಾಡದಿದ್ದರೆ ಬಳ್ಳಿ ತುಂಡಾಗುತ್ತದೆ. ಆಮೇಲೆ ಒಂದೊಂದೇ ಮೊಗ್ಗನ್ನು ಒಂದರ ಮೇಲೆ ಒಂದರ ಹಾಗೆ ಬಳ್ಳಿ ಮೇಲೆ ಇಟ್ಟು ಹೆಣೆಯುತ್ತಿದ್ದಳು. ಹೀಗೆ ಕಟ್ಟಿದ ಮಾಲೆಯನ್ನು ಅಮ್ಮ ನನಗೆ ಎರಡು ಜಡೆ ಹಾಕಿ ಈ ಜಡೆಯಿಂದ ಆ ಜಡೆಗೆ ಸೇತುವೆಯ ಹಾಗೆ ಮುಡಿಸುತ್ತಿದ್ದಳು. ನಾನು ಎಷ್ಟೇ ಕುಣಿದು ಕುಪ್ಪಳಿಸಿದರೂ ಅದು ಅಲ್ಲಾಡುತ್ತಿರಲಿಲ್ಲ.

ಮಲ್ಲಿಗೆ ಮುಡಿದು ಜಂಭದಿಂದ ನಾನು ಶಾಲೆಗೆ ಹೋಗುತ್ತಿದ್ದೆ. ಜಂಭ ಏಕೆಂದರೆ ಉಳಿದ ಮಕ್ಕಳ ಮನೆಯಲ್ಲಿ ನನ್ನ ಮನೆಯಲ್ಲಿ ಆಗುವ ಹಾಗೆ ನಿತ್ಯ ಮಲ್ಲಿಗೆ ಹೂ ಆಗುತ್ತಿರಲಿಲ್ಲ. ನನ್ನ ಗೆಳತಿಯರು ನನ್ನ ತಲೆಯಲ್ಲಿರುವ ಮಲ್ಲಿಗೆಯನ್ನು ನೋಡುತ್ತ ‘ಆಹಾ! ಎಂಥ ಪರಿಮಳ, ನನಗೆ ಕೊಡೇ’ ಎಂದು ದುಂಬಾಲು ಬೀಳುತ್ತಿದ್ದರು. ಆದರೆ ನಾನು ಯಾರಿಗೂ ಕೊಡುತ್ತಿರಲಿಲ್ಲ. ಒಂದು ಸಲ ನನ್ನ ಸಹಪಾಠಿಯೊಬ್ಬಳು ನನಗೆ ಮಲ್ಲಿಗೆ ಕೊಟ್ಟರೆ ಪೆನ್ಸಿಲ್ ಕೊಡುವೆ ಎಂಬ ಆಮಿಷ ಒಡ್ಡಿದಳು. ಅವಳ ಅಪ್ಪನಿಗೆ ಮಿಠಾಯಿ, ನೋಟ್ ಪುಸ್ತಕ, ಪೆನ್ಸಿಲ್, ರಬ್ಬರು ಇತ್ಯಾದಿ ಇರುವ ಸಣ್ಣ ಗೂಡಂಗಡಿ ಇತ್ತು. ಪೆನ್ಸಿಲಿನ ಆಸೆಗೆ ನಾನು ಮಲ್ಲಿಗೆಯನ್ನು ಅವಳಿಗೆ ಕೊಟ್ಟುಬಿಟ್ಟೆ.

ಮಲ್ಲಿಗೆ ಮುಡಿಯುತ್ತ ಅವಳು ಈಗ ನನ್ನ ಹತ್ತಿರ ಪೆನ್ಸಿಲ್ ಇಲ್ಲವೆಂದೂ, ಅಪ್ಪನ ಹತ್ರ ಕೇಳಿ ನಾಳೆ ತರುವೆನೆಂದೂ ಹೇಳಿದಳು. ಸಂಜೆ ನನ್ನ ಖಾಲಿ ತಲೆಯನ್ನು ನೋಡಿದ ಅಮ್ಮ ಮಲ್ಲಿಗೆ ಏನಾಯ್ತೆಂದು ಕೇಳಿದಳು. ನಿಜ ಹೇಳಿದರೆ ಅಮ್ಮ ಬೈಯುವಳೆಂದು ಅದು ಶಾಲೆಯಿಂದ ನಡೆದು ಬರುತ್ತಿರುವಾಗ ದಾರಿಯಲ್ಲೆಲ್ಲೋ ಬಿದ್ದಿರಬೇಕೆಂದು ಸುಳ್ಳು ಹೇಳಿದೆ. ಆದರೆ ಆ ಹುಡುಗಿ ನನಗೆ ಪೆನ್ಸಿಲ್ ಕೊಡಲೇ ಇಲ್ಲ. ಕೊಡಬೇಕಾದರೆ ಅದರ ಬೆಲೆ 50 ಪೈಸೆ ಕೊಡಲು ಅಪ್ಪ ಹೇಳಿದ್ದಾರೆ ಎಂದು ಹೇಳಿದಳು. ಅದೇ ಕೊನೆ. ನಂತರ ನಾನು ನನ್ನ ಸಹಪಾಠಿಗಳು ಏನೇ ಕೊಡುವೆನೆಂದು ಹೇಳಿದರೂ ನನ್ನ ತಲೆಯಿಂದ ತೆಗೆದು ಮಲ್ಲಿಗೆ ಕೊಡಲಿಲ್ಲ. ಅಮ್ಮ ದಿನಾ ಮಲ್ಲಿಗೆ ಮುಡಿಯುತ್ತಿರಲಿಲ್ಲ. ಮದುವೆ, ಮುಂಜಿ, ನಾಮಕರಣ ಹೀಗೆ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಮಾತ್ರ ಮುಡಿಯುತ್ತಿದ್ದಳು. ಮಲ್ಲಿಗೆ ಮುಡಿದು ಜರಿ ಸೀರೆ ಉಟ್ಟು ಹೊರಟರೆ ಅಮ್ಮ ಸಾಕ್ಷಾತ್ ದೇವಿಯಂತೆಯೇ ಕಂಗೊಳಿಸುತ್ತಿದ್ದಳು.

ನನ್ನ ಅಜ್ಜನಮನೆಯಲ್ಲೂ ಮಲ್ಲಿಗೆ ನಿತ್ಯ ಆಗುತ್ತಿತ್ತು. ಈಗಲೂ ಆಗುತ್ತದೆ. ಅದು ಜಾಜಿ ಮಲ್ಲಿಗೆ. ಸಂಜೆ ಅರಳುವಂಥದ್ದು. ಹೂ ಅರಳುವಾಗ ಅದರ ಪರಿಮಳ ಅಂಗಳ ದಾಟುತ್ತದೆ. ನಾನು ಬೇಸಿಗೆ ರಜೆಯಲ್ಲಿ ಅಜ್ಜನಮನೆಗೆ ಹೋದಾಗ ಅಜ್ಜಿ ಜಾಜಿ ಮೊಗ್ಗುಗಳನ್ನು ಬಿಡಿಸಿ ಮಾಲೆ ಕಟ್ಟಿ ನನ್ನ ಜಡೆ ನೇಯ್ದು ಮುಡಿಸುತ್ತಿದ್ದಳು. ನನ್ನನ್ನು ತಬ್ಬಿ ‘ಈಗ ಎಷ್ಟು ಚಂದ ಕಾಣಿಸುತ್ತಿ ಮಗಳೇ. ದೃಷ್ಟಿ ಆಗಬಹುದು’ ಎಂದು ಹೇಳುತ್ತಿದ್ದಳು. ಅಜ್ಜಿಯ ಮನಸ್ಸೂ ಜಾಜಿಯಂತೆ ಮೃದು. ಈ ತಂಪು ಹೊತ್ತಿನಲ್ಲಿ ಅಜ್ಜಿಯನ್ನು ನೆನೆಯುವಾಗ ಮನಸ್ಸು ಆರ್ದ್ರವಾಗುತ್ತದೆ.

 

ಹೀಗೆ ಮಲ್ಲಿಗೆ ಕೊಯ್ಯುತ್ತ, ಮುಡಿಯುತ್ತ ನಾನು ಯವ್ವನಕ್ಕೆ ಕಾಲಿಟ್ಟೆ. ಮದುವೆಯೂ ಆಯಿತು. ನನ್ನಂತೆ ನನ್ನ ಅತ್ತೆಗೂ ಮಲ್ಲಿಗೆಯೆಂದರೆ ವಿಪರೀತ ಮೋಹ. ಇಲ್ಲೂ ಅಂಗಳದಲ್ಲಿ ಮಲ್ಲಿಗೆಯದೇ ಸಾಮ್ರಾಜ್ಯ. ಸೂರ್ಯನ ಬಿಸಿಲು ಹೋದ ನಂತರ ನಾನು ಮಲ್ಲಿಗೆ ಮೊಗ್ಗುಗಳನ್ನು ಕೊಯ್ದು ತಂದು ಮನೆ ಜಗಲಿಯಲ್ಲಿ ಇಡುತ್ತಿದ್ದೆ. ಮುಸ್ಸಂಜೆ ಹೊತ್ತಲ್ಲಿ ನಾನೂ, ಅತ್ತೆಯೂ ಕಟ್ಟಲು ಕುಳಿತುಕೊಳ್ಳುತ್ತಿದ್ದೆವು. ಅತ್ತೆಗೆ ನನ್ನ ಅಮ್ಮನಂತೆ ಕೈಯಲ್ಲಿ ಬಳ್ಳಿ ಹಿಡಿದು ಒಂದೊಂದೇ ಮೊಗ್ಗು ಇಟ್ಟು ಕಟ್ಟುವ ಕಲೆ ಗೊತ್ತಿರಲಿಲ್ಲ. ಕಾಲು ನೀಡಿ ಕೂತು ಕಾಲಿನ ಹೆಬ್ಬ್ಬೆರಳ ತುದಿಗೆ ಬಳ್ಳಿ ಸಿಕ್ಕಿಸಿ ಅದರ ಎರಡು ತುದಿಯನ್ನು ಸೇರಿಸಿ ಸೀರೆಗೆ ಗಂಟು ಹಾಕುತ್ತಿದ್ದರು. ಈ ಎರಡು ಬಳ್ಳಿಗಳ ಮಧ್ಯೆ ನಾಲ್ಕೈದು ಮೊಗ್ಗುಗಳನ್ನು ಒಟ್ಟಿಗೆ ಹಿಡಿದು ಕಟ್ಟುತ್ತಿದ್ದರು. ಅದು ನಾನು ಕಟ್ಟುವಂತೆ ಉದ್ದದ ಮಾಲೆ ಆಗುತ್ತಿರಲಿಲ್ಲ. ನನ್ನದು ಮೊಳದಷ್ಟು ಉದ್ದ ಆದರೆ ಅತ್ತೆಯದು ಬೆರಳಷ್ಟು ಉದ್ದದ ಮಾಲೆ ಆಗುತ್ತಿತ್ತು. ಅದಕ್ಕೊಂದು ನಾಜೂಕುತನವೂ ಇರಲಿಲ್ಲ. ಮಾವ ದೇವರ ಪೂಜೆಗೆ ಮಾಲೆ ಇಡುತ್ತಿದ್ದರು. ಪೂಜೆ ಆದ ಮೇಲೆ ಮಾವ ಪ್ರಸಾದವಾಗಿ ಮಲ್ಲಿಗೆ ಮಾಲೆ ಕೊಡುತ್ತಿದ್ದರು. ಅತ್ತೆ ತಾನೇ ಮೊದಲು ಹೋಗಿ ಮಾವನ ಹತ್ತಿರ ನಾನು ಕಟ್ಟಿದ ಉದ್ದದ ಮಾಲೆಯನ್ನೇ ಕೇಳಿ ಪಡೆಯುತ್ತಿದ್ದರು. ನನಗೆ ಗಿಡ್ಡ ಮಾಲೆ! ಉದ್ದ ಮಾಲೆಯನ್ನು ಕೇಳುವ ಧೈರ್ಯ ನನಗೆ ಇರಲಿಲ್ಲ. ಅತ್ತೆಯ ಎದುರು ಬೆದರಿದ ಹರಿಣದಂತೆ ಇರುತ್ತಿದ್ದೆ. ನನ್ನ ಉದ್ದ ಜಡೆಗೆ ಅಷ್ಟೇ ಉದ್ದದ ನಾನು ಕಟ್ಟಿದ ಮಲ್ಲಿಗೆ ಮಾಲೆಯನ್ನು ಇಳಿ ಬಿಟ್ಟು ವಯ್ಯಾರದಿಂದ ಗಂಡನ ಬಳಿ ಸಾರುವ ಆಸೆಯಾಗುತ್ತಿತ್ತಾದರೂ ಅತ್ತೆಯ ದೆಸೆಯಿಂದ ಕೈಗೂಡುತ್ತಿರಲಿಲ್ಲ. ಅತ್ತೆಯನ್ನು ಮನಸ್ಸಿನಲ್ಲೇ ಬೈಯುತ್ತಿದ್ದೆ.

ಕಾಲ ನಿಲ್ಲುವುದಿಲ್ಲ. ಮಾವ ಒಂದು ದಿನ ಕಣ್ಮುಚ್ಚಿದರು. ಈಗ ಅತ್ತೆ ಮಲ್ಲಿಗೆ ಕಟ್ಟಲು ನನ್ನ ಜೊತೆ ಬರುವುದಿಲ್ಲ. ನಾನು ಕಟ್ಟುವಾಗ ಮಲ್ಲಿಗೆಗೂ, ಅವರಿಗೂ ಸಂಬಂಧವೇ ಇಲ್ಲದಂತೆ ಹರಿ, ನಾರಾಯಣ ಎಂದು ಹೇಳುತ್ತ ಒಂದು ಮೂಲೆಯಲ್ಲಿ ಕುಳಿತುಕೊಳ್ಳುತ್ತಾರೆ. ಈಗ ಪೂಜೆ ಮಾಡುವ ಕೆಲಸ ಗಂಡನದು. ಅವರು ಮಾವ ಕೊಡುವಂತೆ ಇದ್ದುದರಲ್ಲಿ ಉದ್ದ ಮಾಲೆಯನ್ನೇ ಅತ್ತೆಗೆ ಕೊಡುತ್ತಾರೆ. ಆಗ ಅತ್ತೆ ‘ನನಗೆ ಮಲ್ಲಿಗೆ ಮಾಲೆ ಬೇಡ. ಒಂದು ಬಿಡಿ ಹೂ ಕೊಟ್ಟರೆ ಸಾಕು’ ಎಂದು ಹೇಳುತ್ತಾರೆ. ಈಗ ಎಲ್ಲಾ ಮಲ್ಲಿಗೆ ನನಗೇ. ಆದರೆ ಮುಡಿಯಲು ಉದ್ದ ಜಡೆ ಇಲ್ಲ. ಮೊದಲಿನ ಉತ್ಸಾಹವೂ ಇಲ್ಲ.

Writer - ವಾರ್ತಾಭಾರತಿ

contributor

Editor - Musaveer

contributor

Byline - ಸಹನಾ ಕಾಂತಬೈಲು

contributor

Similar News