ಒಲಿದ ಸ್ವರಗಳು
ತುಮಕೂರು ಜಿಲ್ಲೆಯ ಪಾವಗಡದ ಕೃಷಿ ಕುಟುಂಬದ ಲುತ್ಫುಲ್ಲಾ ಕೆ. ಅತೀಕ್ ೧೯೯೧ರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಐಎಎಸ್‌ಗೆ ಆಯ್ಕೆಯಾದವರು. ಮಂಗಳೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಇವರು ಮಂಗಳೂರಿನ ಅಳಿಯನೂ ಹೌದು. ಕರ್ತವ್ಯ ನಿರ್ವಹಿಸಿದ ಎಲ್ಲೆಡೆ ಜನಪರ ಕಳಕಳಿಯ ದಕ್ಷ ಅಧಿಕಾರಿ ಎಂದು ಮನ್ನಣೆ ಗಳಿಸಿದವರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಜಂಟಿ ಕಾರ್ಯದರ್ಶಿಯಾಗಿ, ವಿಶ್ವ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರನಾಗಿ ಹಲವು ಪ್ರತಿಷ್ಠಿತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ನ್ಯಾಯ ಒದಗಿಸಿದವರು. ಸದ್ಯ ಮುಖ್ಯಮಂತ್ರಿಗಳ ಹಾಗೂ ವಿತ್ತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. ಉತ್ತಮ ಕನ್ನಡ, ಉರ್ದು ಲೇಖಕರೂ ಆಗಿದ್ದಾರೆ.
ಸೆರೆಮನೆಯ ಒಂದು ಮುಂಜಾವು
ರಾತ್ರಿ ಉಳಿದಿತ್ತು ಇನ್ನೂ ತಲೆಯ ಬಳಿ ಬಂದ ಚಂದ್ರ
ಎದ್ದೇಳು ಬಂದಿದೆ ಮುಂಜಾವು ಎಂದ
ಏಳು ಈ ರಾತ್ರಿ ನಿನ್ನ ಪಾಲಿನ ನಿದ್ರೆಯ ಮದ್ಯ
ಬಟ್ಟಲ ತುದಿಯಿಂದ ಬಟ್ಟಲ ತಳಕ್ಕೆ ಇಳಿದಿದೆ ಎಂದ
ನಲ್ಲೆಯ ಬಿಂಬದಿಂದ ಪಡೆದು ವಿದಾಯ ಎದ್ದಿತು ನನ್ನ ದೃಷ್ಟಿ
ರಾತ್ರಿಯ ನಿಂತ ನೀರಿನ ಕಪ್ಪು ಹಾಸಿನ ಮೇಲೆ
ಅಲ್ಲಿ ಇಲ್ಲಿ ನೃತ್ಯ ಮಾಡುತಿವೆ ಬೆಳ್ಳಿಯ ಸುಳಿಗಳು
ಚಂದ್ರನ ಕೈಯಿಂದ ನಕ್ಷತ್ರಗಳು ಬಿದ್ದು ಬಿದ್ದು
ಮುಳುಗುತಿವೆ, ಈಜುತಿವೆ, ಬಾಡುತಿವೆ, ಅರಳುತಿವೆ
ರಾತ್ರಿ ಮತ್ತು ಮುಂಜಾವು ಬಹಳ ಕಾಲ ಆಲಂಗಿಸುತಿವೆ
ಸೆರೆಮನೆಯ ಅಂಗಳದಲಿ ಸ್ನೇಹಿತರ ಶುಭ್ರ ಚಹರೆಗಳು
ಕರಾಡತೆಯ ನೆಲೆಯಿಂದ ಹೊಳೆಯುತ ಎದ್ದವು ಮೆಲ್ಲಮೆಲ್ಲನೆ
ನಿದ್ರೆಯ ಇಬ್ಬನಿ ಅವರ ಮುಖಗಳಿಂದ ತೊಳೆದು ಬಿಟ್ಟಿತ್ತು
ಸೂರಿಲ್ಲದ ನೋವು, ವಿರಹದ ದುಃಖದ ಪೀಡೆಯನ್ನು
ದೂರದಲಿ ಡೋಲಿನ ಸದ್ದು, ಬೇಸರ ತುಂಬಿದ ಹೆಜ್ಜೆಗಳ ಸದ್ದು
ಸ್ವಂತ ಹತಾಶೆಯ ಹಸಿವಿನಿಂದ ದಣಿದ ಪಹರೇದಾರರು
ಸೆರೆವಾಸಿಗಳ ಹಿಂಸಿತ ರೋದನಗಳ ಸದ್ದು
ತಿರುಗ ತೊಡಗಿದವು ತೋಳಲಿ ಬಳಸಿ ತೋಳುಗಳ
ನಿದ್ರೆಯ ರುಚಿಯಲ್ಲಿ ತಲ್ಲೀನ ಗಾಳಿ ಎಚ್ಚರವಾಯಿತು
ಸೆರೆಮನೆಯ ವಿಷಭರಿತ ಕೂಗುಗಳು ಎದ್ದವು
ದೂರ ಒಂದು ಬಾಗಿಲು ತೆರೆಯಿತು, ಒಂದು ಮುಚ್ಚಿತು
ದೂರ ಸರಸರನೆಂದ ಸರಪಳಿಯ ಸದ್ದು, ಅದರ ಅಳು
ದೂರ ಒಂದು ಬೀಗದ ಎದೆಯಲಿ ಇಳಿಯಿತು ಬಾಕು
ತಲೆ ಬಡಿದುಕೊಂಡಂತೆ ತಿರುತಿರುಗಿ ಕಿರ್ರೆನ್ನುವ ಕಿಟಕಿ
ತಿರುಗಿ ನಿದ್ರೆಯಿಂದ ಎಚ್ಚರಗೊಂಡಂತೆ ಪ್ರಾಣಶತ್ರುಗಳು
ಉಕ್ಕು ಕಲ್ಲುಗಳಲಿ ಅಚ್ಚಾಗಿ ಹೊರಬಂದ ನರಪಿಶಾಚಿಗಳು
ಅವರ ಮುಷ್ಟಿಯಲಿ ಹಗಲು ಇರುಳು ರೋದಿಸುವ
ನನ್ನ ವ್ಯರ್ಥ ರಾತ್ರಿ ಹಗಲ ನಾಜೂಕು ಅಪ್ಸರೆಯರು
ದಾರಿ ಕಾಯುತಿವೆ ಭರವಸೆ ತುಂಬಿದ ಅಗ್ನಿಬಾಣಗಳ
ಬತ್ತಳಿಕೆ ತುಂಬಿರುವ ತಮ್ಮ ಮುಕ್ತಿದಾತನ
ಭೇಟಿ
ಈ ರಾತ್ರಿ ಆ ನೋವಿನ ವೃಕ್ಷ
ನನಗಿಂತ ನಿನಗಿಂತ ಶ್ರೇಷ್ಠ
ಸಿಕ್ಕಿ ಮಾಯವಾಗಿವೆ ಶ್ರೇಷ್ಠವಾಗಿದೆ ಇದು,
ಇದರ ಕೊಂಬೆಗಳಲಿ
ಜ್ಯೋತಿ ಹಿಡಿದ ಲಕ್ಷಾಂತರ ನಕ್ಷತ್ರಗಳ ಗುಂಪುಗಳು
ಸಾವಿರ ಚಂದ್ರಗಳು ಇವುಗಳ ನೆರಳಲಿ
ತಮ್ಮ ಎಲ್ಲಾ ಬೆಳದಿಂಗಳು ಕಳೆದುಕೊಂಡಿವೆ
ಈ ರಾತ್ರಿ ಆ ನೋವಿನ ವೃಕ್ಷ
ನನಗಿಂತ ನಿನಗಿಂತ ಶ್ರೇಷ್ಠ
ಆದರೆ ಇದೇ ರಾತ್ರಿಯ ವೃಕ್ಷದ
ಈ ಕೆಲ ಕ್ಷಣಗಳ ಒಣ ಎಲೆಗಳು
ಬಿದ್ದಿವೆ, ಬಿದ್ದು ನಿನ್ನ ಕೂದಲಲಿ
ಹರಡಿ ಹೂಬನವಾಗಿವೆ
ಇದರ ಇಬ್ಬನಿಯಿಂದ ನಿಶ್ಯಬ್ದದ
ಈ ಕೆಲ ತೊಟ್ಟುಗಳು ನಿನ್ನ ಹಣೆಯ ಮೇಲೆ
ಬಿದ್ದು ರತ್ನಮಾಲೆಯಾಗಿವೆ
ಬಹಳ ಕಪ್ಪಿದೆ ಈ ರಾತ್ರಿ ಆದರೆ
ಇದೇ ಕತ್ತಲಿಂದ ಹೊರಬರುತ್ತಿದೆ
ಆ ರಕ್ತದ ನದಿ, ನನ್ನ ಧ್ವನಿ
ಇದರ ನೆರಳಲಿ ಹೊಳೆಯುತ್ತಿದೆ
ಆ ಹೊಳಪಿನ ಅಲೆ, ನಿನ್ನ ದೃಷ್ಟಿ
ನಿನ್ನ ತೋಳುಗಳ ಬನದಲಿ
ಉರಿಯುತ್ತಿರುವ ಆ ನೋವು
(ಈ ರಾತ್ರಿಯ ಫಲವಾದ ಆ ನೋವು)
ಬೆಂದರೆ ಇನ್ನೂ ಕೊಂಚ ನಮ್ಮ ರೋದನಗಳಲಿ
ಕಿಡಿಯಾಗುವುದು
ಪ್ರತಿಯೊಂದು ಕಪ್ಪು ಕೊಂಬೆಗಳ ಬಿಲ್ಲಿಂದ
ಇಳಿದಿವೆ ಎದೆಯಲಿ ಎಷ್ಟು ಬಾಣಗಳು
ಮುರಿದು ಪ್ರತಿಯೊಂದನು
ಅಸ್ತ್ರ ಮಾಡಿಕೊಂಡಿದ್ದೇನೆ
ನೊಂದವರ ಬೆಂದವರ ಮುಂಜಾವು
ಇರುವುದಿಲ್ಲ ಆಕಾಶಗಳಲಿ
ನಾನು ನೀನು ನಿಂತ ಸ್ಥಳದಲ್ಲೆ
ಇಲ್ಲೇ ಇದೆ ಬೆಳಗಿನ ನಸುಕು
ಇಲ್ಲೇ ನೋವಿನ ಕಿಡಿಗಳು ಅರಳಿ
ಬಾನಂಚು ಹೂಬನವಾಗಿದೆ
ಇಲ್ಲೇ ಕೊಲೆಗಾರನೋವುಗಳ ಅಸ್ತ್ರಗಳು
ಸಾಲು ಸಾಲಾದ ಕಿರಣಗಳ
ಕಿಚ್ಚಿನ ಸರವಾಗಿವೆ
ಈ ರಾತ್ರಿ ನೀಡಿದ ಈ ನೋವು
ಈ ನೋವು ಮುಂಜಾವಿನ ದೃಢನಂಬಿಕೆಯಾಗಿದೆ
ನೋವಿಗಿಂತ ಕರುಣಾಮಯ ದೃಢನಂಬಿಕೆ
ರಾತ್ರಿಗಿಂತ ಶ್ರೇಷ್ಠ ಮುಂಜಾವು
ಮಾಂಟಗೊಮೆರಿ ಸೆರೆಮನೆ
12.10 ರಿಂದ 03.11.1953
ಮೂರು ಧ್ವನಿಗಳು
ಪೀಡಕ
ಭರವಸೆಯ ಶೋಕದ ಹಬ್ಬ ಇದೆ ಬನ್ನಿ ಜನರೆ
ಸಮೂಹದ ಸಾವಿನ ಉತ್ಸವ ಆಚರಿಸಿ ಜನರೆ
ಹಾಳುಬಿದ್ದ ಬೀದಿಗೆ ಜೀವ ತುಂಬಿದೆ ನಾನು
ನಿಮ್ಮನು ರಾತ್ರಿ ಲುಗಳ ಚಕ್ರದಿಂದ ಮುಕ್ತಗೊಳಿಸಿದೆನು ನಾನು
ಬೆಳಗಿನ ದರ್ಶನದಿಂದ ಬೇಡುವಿರೇನು
ನಿದ್ರೆಯ ಹಾಸಿಗೆಯಿಂದ ಬಯಸುವಿರೇನು
ಎಲ್ಲಾ ಕಣ್ಣುಗಳನ್ನು ಖಡ್ಗಕ್ಕೆ ಬಲಿ ಕೊಟ್ಟೆನು ನಾನು
ಎಲ್ಲಾ ಕನಸುಗಳ ಕತ್ತು ಹಿಸುಕಿದೆನು ನಾನು
ನಮ್ರೂದನ ಅಗ್ನಿಕುಂಡದಲಿ ಉರಿಯುವುದು ಹೂಗಳ ಬೆಳೆ
ಈಗ ಮಳೆಗಾಲದಲ್ಲಿ ಬೀಳುವುದಿಲ್ಲ ಮುತ್ತಿನ ಮಳೆ
ಈಗ ಬಳುಕುವುದಿಲ್ಲ ಯಾವ ಕೊಂಬೆಯ ಮೇಲೂ ಹೂಗಳ ಲಾಲಿ
ಮೇಘ ಬರುವುದು ಮುಳ್ಳುಗಳ ವಡ್ಡನ್ನು ಹೊತ್ತಿ
ನನ್ನ ನಂಬಿಕೆ ಹೊಸತು, ಹೊಸದು ನನ್ನ ವಿಧಾನ
ನನ್ನ ನಿಯಮಗಳು ನೂತನ, ಹೊಸತು ನನ್ನ ಧರ್ಮ
ಈಗ ಮಸೀದಿಯ ಮುಲ್ಲಾಗಳು ಬೀಳುವರು ಪ್ರತಿಮೆಯ ಕಾಲಿಗೆ
ಎತ್ತರ ನಿಂತವರು ಬಗ್ಗುವರು ಕುಬ್ಬರ ಮುಂದೆ
ಭೂಮಿಯ ಮೇಲಿಂದು ಸತ್ಯ ದಯಾಪರತೆಯ ಕದ ಮುಚ್ಚಿತು
ಆಕಾಶದಲಿಂದು ಪ್ರಾರ್ಥನೆಯ ಎಲ್ಲಾ ಬಾಗಿಲು ಮುಚ್ಚಿದವು.
*ಪ್ರವಾದಿ ಇಬ್ರಾಹೀಂ ಅವರನ್ನು ಕೊಲ್ಲಲು ಆಗಿನ ಶಕ್ತಿಶಾಲಿ ದೊರೆ ಅಹಂಕಾರಿ ನಮ್ಮೂದ್, ತಾನೇ ದೇವರು ಎಂದು ಘೋಷಿಸಿ ಅಗ್ನಿಕುಂಡವನ್ನು ರಚಿಸಿದ.
ಪೀಡಿತರು
ಇರುಳು ಅರಳಿದರೆ ಹೊರಬಂದವು ನೋವಿನ ಎಲ್ಲಾ ಧಾರೆ
ಹಗಲು ಒಡೆದರೆ ಬಿಚ್ಚಿದವು ಪ್ರತಿಯೊಂದು ಗಾಯದ ಹೊಲಿಗೆ
ಮಧ್ಯಾಹ್ನದಲಿ, ನರನರದಿಂದ ಹರಿಯಿತು ರಕ್ತ
ಹಗಲು ಉರುಳಿದರೆ, ಭಯದ ಭೂತ ಮುಂದೆ ನಿಂತ
ದೇವರೆ, ನನ್ನ ಸುತ್ತಲು ಈ ರಾತ್ರಿ ಹಗಲು ಮುಂಜಾವುಗಳು
ನನ್ನ ಜೀವನದ ಗುರಿ ವಿಶ್ರಾಂತಿ ಇಲ್ಲದ ಈ ಪ್ರಯಾಣಗಳು
ನನ್ನ ಭಾಗ್ಯದಲಿ ನೀ ಬರೆದಿದ್ದು ಇಷ್ಟೆ?
ವಂಚಿಸಿದೆ ನನ್ನ ಪ್ರತಿಯೊಂದು ಸಂತಸದಿಂದ ನೀನು
ಪ್ರತಿಯೊಂದು ಹಿಂಸೆಯ ಅರಿವಿದೆಯಂತೆ ನಿನಗೆ
ಪ್ರತಿಯೊಂದು ಪಿಡಗು ನಿನ್ನ ಆಜ್ಞೆಯಿಂದ ಎನ್ನುತ್ತಾರೆ
ನಿಜವೇ ಇದು, ಹಾಗಿದ್ದರೆ ತಿರಸ್ಕರಿಸಲೇ ನಿನ್ನ ನ್ಯಾಯ?
ಕೇಳಲೆ ಅವರ ಮಾತು, ಒಪ್ಪಲೆ ನಿನ್ನ ಪ್ರಭುತ್ವ?
ದಿವ್ಯವಾಣಿ
ಪ್ರತಿಯೊಂದು ಒಡೆಯನನು ಎಚ್ಚರಿಸಿರಿ
ನಿರ್ವಹಿಸಲಿ ತಮ್ಮ ಕರ್ತವ್ಯವನ್ನು ಸರಿಯಾಗಿ
ಎದ್ದರೆ ನಿರ್ಭಯ ಧೀರರ ಸಮೂಹ
ಬೀಳುವುದು ನೇಣು ಒಡೆಯರ ಕತ್ತಿಗೆ
ಬರುವುದಿಲ್ಲ ಯಾರೂ ಅವರ ರಕ್ಷಣೆಗೆ
ಫಲ ಶಿಕ್ಷೆ ಎಲ್ಲಾ ಆಗುವುದು ಇಲ್ಲೇ
ಇಲ್ಲೇ ಸ್ವರ್ಗ ನರಕ ಇಲ್ಲೇ
ಏಳುವುದು ಪ್ರಳಯದ ಕೂಗು ಇಲ್ಲೇ
ರಚಿಸಲಾಗುವುದು ಲೆಕ್ಕಾಚಾರದ ದಿನ ಇಲ್ಲೇ
ಸಮರಖಂದ್ ಮೇ 79
ಕತ್ತಲಿನ ಹಾದಿಗಳಲ್ಲಿ ಕೊಲೆಯಾದ ನಾವು
ನಿನ್ನ ಹೂತುಟಿಗಳ ಬಯಕೆಯಲಿ ನಾವು
ನೇಣುಗಂಬಗಳಿಗೆ ಮಾಡಿದೆವು ಆರತಿ
ನಿನ್ನ ಅಂಗೈ ದೀಪಗಳ ಅಪೇಕ್ಷೆಯಲಿ ನಾವು
ಅರೆ ಕತ್ತಲ ಹಾದಿಗಳಲಿ ಕೊಲೆಯಾದೆವು
ನೇಣಿನ ಹಲಗೆಗಳ ಮೇಲೆ ನಮ್ಮ ತುಟಿಗಳಾಚೆ
ನಿನ್ನ ತುಟಿಗಳ ಕೆಂಪು ತುಳುಕುತ್ತಿತ್ತು
ನಿನ್ನ ಕೇಶದ ಸೊಂಪು ಸುರಿಯುತ್ತಿತ್ತು
ನಿನ್ನ ಕೈಯ ಬೆಳ್ಳಿ ಹೊಳೆಯುತ್ತಿತ್ತು
ನಿನ್ನ ಹಾದಿಗಳಲಿ ದೌರ್ಜನ್ಯದ ಇರುಳು ಕರಗಿದಾಗ
ಬಂದೆವು ನಾವು ಕಾಲು ಒಯ್ಯುವ ತನಕ
ತುಟಿಗಳಲಿ ಕವನದ ಅಕ್ಷರ ಎದೆಯಲಿ ನೋವಿನ ಜ್ಯೋತಿ
ನಿನ್ನ ಚೆಲುವಿಗೆ ಸಾಕ್ಷಿ ನಮ್ಮ ನೋವು
ನೋಡು ಈ ಸಾಕ್ಷಿಯ ಮೇಲೆ ಗಟ್ಟಿ ನಿಂತೆವು ನಾವು
ಕತ್ತಲಿನ ಹಾದಿಗಳಲಿ ಕೊಲೆಯಾದ ನಾವು
ನೀ ನಮಗೆ ಸಿಗದಿರುವುದು ನಮ್ಮ ಕರ್ಮ
ಆದರೆ ನಿನ್ನ ಪ್ರೀತಿಸುವುದು ನಮ್ಮ ಧರ್ಮ
ವಿರಹದ ಕಗ್ಗೋಲೆಯ ಬೀಡಿಗೆ ಸೇರಿದರೆ
ಬಯಕೆಯ ಹಾದಿಗಳೆಲ್ಲ ಯಾರ ಕೇಳಲಿ ನಾವು
ಕಗ್ಗೋಲೆಗಳ ಬೀಡುಗಳಿಂದ ಆರಿಸಿ ತಮ್ಮ ಬಾವುಟ
ಹೊರಡುವವು ಪ್ರೇಮಿಗಳ ಹೊಸ ಸಾಲುಗಳು
ಅವರ ದಾರಿಗಳ ನೋವಿನ ದೂರವನ್ನು
ಕಿರಿದಾಗಿಸಿ ಹೊರಟಿವೆ ನಮ್ಮ ಹೆಜ್ಜೆಗಳು
ಅವರಿಗಾಗಿ ಬಲಿದಾನಕ್ಕೆ ಹೊರಡುವೆವು ನಾವು
ಕೀರ್ತಿ ಬೆಳೆಸಿದೆವು ನಿನ್ನ ಪ್ರೇಮದ ಹಿರಿಮೆಯ ನಾವು
ಕತ್ತಲಿನ ದಾರಿಗಳಲಿ ಕೊಲೆಯಾದ ನಾವು
ಮಾಂಟ್ಗೋ ಮೆರಿ ಸೆರೆಮನೆ 15 ಮೇ 54.
(ಇಥೆಲ್ ಮತ್ತು ಜ್ಯುಲಿಯಸ್ ರೊಸೆನ್‌ಬರ್ಗ್ ಪತ್ರಗಳಿಂದ ಪ್ರಭಾವಿತ)
ನಾವುಗಳು
ಹೃದಯದ ಭವನದಲಿ ಆರಿದ ದೀಪಗಳ ಸಾಲು ಹಿಡಿದ
ಸೂರ್ಯನ ಪ್ರಕಾಶ ಆತಂಕಿತ ಚಿಟ್ಟು ಹಿಡಿದ
ಪ್ರಿಯತಮೆಯ ಚಂಚಲ ಕಲ್ಪನೆಯಂತೆ
ತಮ್ಮ ಅಂಧಕಾರವನು ಸುತ್ತುತ್ತಾ ಒಟ್ಟು ಹಾಕುತ್ತಾ
ಲಾಭ ನಷ್ಟಗಳ ಆರಂಭ ಅಂತ್ಯಗಳ ಅನಿವಾರ್ಯಗಳು
ಅದೇ ವ್ಯರ್ಥ ಅನ್ವೇಷಣೆ ಅದೇ ನಿರುಪಯುಕ್ತ ಪ್ರಶ್ನೆಗಳು
ದಿನಗಳ ನಶ್ವರ ಕ್ಷಣಗಳ ನಿವರ್ಣತೆಯಿಂದ
ಗತನೆನಪುಗಳಿಂದ ದುಃಖಿತ ಭೀಕರ ಭವಿಷ್ಯದ ಭಯದಿಂದ
ನೀಗಿಸಲಾಗದ ನಿಶ್ಯಕ್ತ ಚಿಂತನೆಗಳ ಬಾಯಾರಿಕೆ
ಕಣ್ಣಿಂದ ಸುರಿಯದ ಉರಿದ ಕಣ್ಣೀರು
ಹಾಡಾಗದ ತೀವ್ರ ನೋವು
ಹೊರಬರುವುದಿಲ್ಲ ಎದೆಯ ಕಪ್ಪು ಮೂಲೆಗಳಿಂದ
ಒಂದು ಜಟಿಲ ಕಾಲ್ಪನಿಕ ಚಿಕಿತ್ಸೆಯ ಶೋಧನೆ
ಬರಡಿನ, ಬಂದೀಖಾನೆಯ ಬಯಕೆ ಹರಿದ ಅಂಗಿಯ* ಹುಡುಕಾಟ.
*’ಹರಿದ ಅಂಗಿ’ ಈ ಶಬ್ದವನ್ನು ಉರ್ದು ಸಾಹಿತ್ಯದಲ್ಲಿ ’ಹುಚ್ಚುತನ’ ದ ಅರ್ಥ ಕೊಡಲು ಬಳಸುತ್ತಾರೆ.