‘ಅಡುಗೆ ಮಾತು’ ಪ್ರಯೋಗ ಹುಟ್ಟಿದ್ದು ಹೇಗೆ ಅಂದ್ರ?
ಚಾನೆಲ್ ಥಿಯೇಟರ್ಸ್ ಪ್ರಸ್ತುತ ಪಡಿಸಿದ ಅಡುಗೆ ಮಾತು ರಂಗಭೂಮಿಯ ಒಂದು ವಿಭಿನ್ನ ಪ್ರಯೋಗ. ನಟಿ, ಲೇಖಕಿ ಅಕ್ಷತಾ ಪಾಂಡವಪುರ ಅವರು ಬರೆದು ನಟಿಸಿದ ನಾಟಕ ಇದು. ನಾಟಕದ ಬಗ್ಗೆ ಅವರು ಹಂಚಿಕೊಂಡಿರುವುದು ಹೀಗೆ ...
ನಾಟಕ ಕಟ್ಟಿದ್ದು ಹೇಗೆ?
2015 ರಲ್ಲಿ ಮೊದಲ ಬಾರಿಗೆ ಈ ಪ್ರಯೋಗವನ್ನು ನನ್ನ ಬೆಂಗಳೂರು ಮನೆಯ ಅಡುಗೆ ಮನೆಯಲ್ಲಿಯೇ (open kitchen) ಮಾಡಿದ್ದೆ..
ಆಗ ಒಂದು 25 ಜನ ಸೇರಿದ್ದರೇನೋ.. ನಂತರ ಅವರೆಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೆ, ನಂತರ ಪ್ರತೀ ಬಾರಿಯ ರಿಹರ್ಸಲ್ ಸಮಯದಲ್ಲೂ ಇನ್ನೇನೋ ಬೇಕು, ಮತ್ತೇನೋ ಬೇಕು ಅಂತ ಪ್ರಯೋಗ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲೇ ಇಲ್ಲ. ಬಹುಷಃ ಈ ಪ್ರಯೋಗಕ್ಕೆ ಬೇಕಿರುವುದು ಜಾಗ ಬೇರೇನೇ ಏನೋ ಎಂದು ಭಾವಿಸಿ ಮತ್ತೊಮ್ಮೆ 2017ರಲ್ಲಿ ನನ್ನ ಹುಟ್ಟೂರು ಹಾರೋಹಳ್ಳಿ ಪಾಂಡವಪುರದಲ್ಲಿ ಮಾಡಿದೆ. ಆಗ ಹೆಚ್ಚು ಜನರು ಪಾಲ್ಗೊಂಡ ಕಾರಣ ನಾಟಕ ನನಗೆ ನಿರೀಕ್ಷೆಯ ಸಮಾಧಾನ ತರಲಿಲ್ಲ.
ನಂತರ ಒಂದಷ್ಟು ಕೆಲಸ ಅಂತ ಈ ಪ್ರಯೋಗ ಪ್ರದರ್ಶನಕ್ಕೆ ತೆರೆದುಕೊಳ್ಳಲಿಲ್ಲ... ಹಾಗಂತ ತಾಲೀಮು ನಿಲ್ಲಲೇ ಇಲ್ಲ ಜೊತೆಗೆ ಒಂದಷ್ಟು ಹುಡುಕಾಟ!
2019 ರಲ್ಲಿ ನನ್ನದೇ studio kitchen ನಲ್ಲಿ ಈ ಪ್ರಯೋಗವನ್ನು ಪ್ರದರ್ಶನಕ್ಕೆ ಇಟ್ಟೆ! ನೋಡಿದವರು ಬೆರಗಾದರು. ಆದರೆ ಪ್ರಯೋಗದ ಖರ್ಚು ಮಿತಿ ಮೀರುತ್ತಿತ್ತು.. ಒಂದು 3 ಪ್ರಯೋಗದ ನಂತರ ರಂಗಮಂದಿರ, ವೇದಿಕೆಗಳ ಮೇಲೆ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಒಳಗೊಂಡು ಈ ಪ್ರಯೋಗ ಆದರೆ ಒಳ್ಳೆಯದು ಎಂದು ಬೇರೆ ಪ್ರಯೋಗಗಳ ಕಡೆ ಗಮನ ಕೊಟ್ಟೆ!
2020/22 ರ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಆಗು ಹೋಗುಗಳ ಗಮನ, YouTube, reels, social media ಅಂತ ಅಡುಗೆ ಕಲೆ ಹುಟ್ಟಿದ ರೀತಿ ಮತ್ತೆ ತಿರುಗಿ ಪ್ರಯೋಗದ ಕಡೆ ನೋಡುವಂತೆ ಮಾಡಿತು.
‘ಲೀಕ್ ಔಟ್’ ನಾಟಕ ಪ್ರಯೋಗದಲ್ಲಿ ಪ್ರೇಕ್ಷಕರ ಜೊತೆ ನೇರಾ ನೇರ ಸಂವಾದ ಮಾಡುತ್ತಾ ಸಾಗುವ ವಿಧಾನ ಇಷ್ಟವಾದ ಕಾರಣ ಇನ್ನಷ್ಟು ಪುಷ್ಟಿ ಈ ಅಡುಗೆ ಮಾತು ಕಟ್ಟಲು ಸಿಕ್ಕಿತು... ಈಗ ಒಟ್ಟು 5 ಪ್ರಯೋಗ ಆಗಿದೆ.. ಹಿಂದೆ 5 ಒಟ್ಟು 10 ಪ್ರಯೋಗಗಳಾಗಿದೆ.
*******
ಇಲ್ಲಿ ಕೇಳಿ
ನುಡಿಯುವ ಪ್ರತಿಯೊಂದು ಮಾತೂ ತೂಕವಾಗಿರಬೇಕು, ಆಡುವ ಆಟ ನ್ಯಾಯವಾಗಿರಬೇಕು, ನೋಡುವ ನೋಟ ಶುದ್ಧವಾಗಿರಬೇಕು, ಕಾಣುವ ಕನಸು ಕಾಡುವಂತಿರಬೇಕು, ಮಾಡುವ ಅಡುಗೆ ರುಚಿಕರವಾಗಿರಬೇಕು
ಇದು ಬಹಳ ಹಿಂದೆ ನನ್ನ ಅಜ್ಜಿ ರಾಮಾಯಣ, ಮಹಾಭಾರತದಂತಹ ಮತ್ತು ಒಂದಷ್ಟು ಜಾನಪದ-ಉಪಕತೆಗಳನ್ನು ಹೇಳುವಾಗ ಬಳಸುತ್ತಿದ್ದ ಮಾತುಗಳು. ಆ ಎಲ್ಲಾ ಮಾತುಗಳ ನಿರೂಪಣೆಯೇ ‘ಅಡುಗೆ ಮಾತು’ ರಂಗಪ್ರಯೋಗ!
ಆಗಲೇ ನಾನು ಕೇಳ್ತಿದ್ದೆ ‘ಅಜ್ಜಿ ಅಕಸ್ಮಾತ್ ನೀನ್ ಆಡೋ ಮಾತು ಎಲ್ಲರಿಗೂ ತೂಕ ಅನ್ನಿಸಿ, ನನಗೆ ಅನ್ನಿಸದಿದ್ರೆ? ಆಟ ನ್ಯಾಯವಾಗಿ ಅಡ್ಲಿಲ್ಲ ಅಂತ ಎದುರಾಳಿಗಳಿಗೆ ಅನ್ನಿಸಿದ್ರೆ? ನಿಜ ಹೇಳು ಅಜ್ಜಿ ನೀನ್ ನೋಡೋದೆಲ್ಲ ಶುದ್ಧವಾಗಿಯೇ ಇರುತ್ತಾ? ಕೆಟ್ಟ ಕನುಸುಗಳೂ ಹೆಚ್ಚು ಹೆಚ್ಚು ಕಾಡ್ತಾವಪ್ಪ! ಅಮ್ಮ ಚೆನ್ನಾಗೇ ಅಡುಗೆ ಮಾಡುತ್ತಪ್ಪಾ ಆದ್ರೂ ಒಂದೊಂದ್ ಸಲ ಅಪ್ಪಂಗೆ ಇಷ್ಟವಾಗಲ್ಲ’
ನನ್ನ ಮರು ಪ್ರಶ್ನೆಗೆ ಅಜ್ಜಿ ಉತ್ತರ ತಡಕುತ್ತ ಡಬ್ಬದಲ್ಲಿ ಕುರುಕಲನ್ನೂ ತಡಕುತ್ತ ತಿನ್ನೋಕೆ ಕೊಡ್ತಿದ್ಲು. ಇಲ್ಲಾ ಗುಡಾಣದಿಂದ ಕರೀ ಹುಣಸೆಹಣ್ಣು ತೆಗೆದು ಉಪ್ಪು ಖಾರದ ಜೊತೆ ಕುಟ್ಟಿ, ಉಂಡೆ ಮಾಡಿ ಮಟ್ಟೆ ಕಡ್ಡಿಗೆ ಸಿಗಿಸಿ ಕೊಡ್ತಿದ್ಲು, ಖುಷಿಯಿಂದ ತಿನ್ನುವಾಗಲೂ ಅಜ್ಜಿ ಹೇಳುತ್ತಿದ್ದ ಉಪನಿಷತ್ತಿಗೆ ವ್ಯಾಖ್ಯಾನ ಸಿಗ್ತಾ ಇರ್ಲಿಲ್ಲ. ಅಂತಹ ಡಬ್ಬಗಳ ತಡಕಾಟವೇ ‘ಅಡುಗೆ ಮಾತು’ ಆಪ್ತ ರಂಗಪ್ರಯೋಗ!
ನನ್ನ ಅಜ್ಜಿ ಮರಿಯಮ್ಮ ತುಂಬಾ ಚಂದ ಅಡುಗೆ ಮಾಡ್ತಿದ್ರು. ತರಾವರಿ ತಿಂಡಿಗಳು, ವಾರಕ್ಕೊಮ್ಮೆ ಬಾಡು, ತಿಂಗಳಿಗೊಮ್ಮೆ ಅಥವಾ ನೆಂಟರು ಬಂದಾಗ ಕುಯ್ಯುತ್ತಿದ್ದ ನಾಡಕೋಳಿ, ಅದರ ಸಾರು... ಚೂರು ಕಾಲುವೆ ನೀರು ಹೋದ್ರೂ ಸಿಗುತ್ತಿದ್ದ ಹಾವುಬತ್ತಿ ಮತ್ತದರ ಮೀನ್ ಸಾರು, ಗದ್ದೆ ಗುಂಡಿ ನಾಲೇಲಿ ಸಿಗುತ್ತಿದ್ದ ಏಡಿಕಾಯಿ...ಕುರಿ ಮೆದುಳನ್ನು ಹದವಾಗಿ ಹಬೆಯಲ್ಲಿ ಬೇಯಿಸಿ ವಿಶೇಷವಾಗಿ ನನಗೆ ಕೊಡುತ್ತಿದ್ದ ಆ ರುಚಿ, ಆ ದಿನವನ್ನು ನೆನಪಿಸಿಕೊಂಡ್ರೆ ಇವತ್ತಿಗೂ ಮನಸ್ಸು ಹಗುರವಾಗುತ್ತೆ! ಆ ನೆನಪಿನ್ನು ಹಗುರ ಮಾಡಿಕೊಳ್ಳಲು ಕಟ್ಟಿದ ನಾಟಕವೇ ‘ಅಡುಗೆ ಮಾತು’
ಇದಿಷ್ಟು ಬೇಸಿಗೆ ದಸರಾ ಅದೂ ಇದು ಅಂತ ಒಂದಷ್ಟು ರಜಗಳ ದಿನದ ಅಜ್ಜಿ ಊರಿನ ಮುತ್ತಜ್ಜಿಯ ನೆನಪು.. ಅಜ್ಜಿ ಅಡುಗೆ ಮಾಡುವಾಗ ಪ್ರತಿ ಬಾರಿ ಕಥೆಗಳನ್ನು ಹೇಳ್ತಾ ಇರ್ತಿದ್ಲು.. ಕಥೆ ಹೇಳುತ್ತಾ ಅಡುಗೆ ಮಾಡ್ತಿದ್ದಳೋ, ಅಡುಗೆ ಮಾಡ್ಲಿಕ್ಕಾಗಿ ಕಥೆ ಹೇಳ್ತಿದ್ದಳೋ ಗೊತ್ತಿಲ್ಲ. ಆದ್ರೆ ಅಡುಗೆ ಮಾಡುವ ಸಮಯಕ್ಕೆ ನನನ್ನು ಕರೀತಾ ಇದ್ಲು ಅಥವಾ ನಾನೇ ಹಂಚಿನ ಮೇಲೆ ಹೊಗೆ ಆಡೋದು ನೋಡಿ ಆಟಕ್ಕೆ ಊಫಿ ಹೇಳಿ ಅಡುಗೆ ಮನೆ ಸೇರ್ತಿದ್ದೆ. ಕಾಲು ಕೈ ತೊಳೆಯದೆ ಬಂದ್ಯಾ ಅಂತ ಕುಂಡಿಗೆ ಒಂದು ಬಾರಿಸಿ ಬಚ್ಚಲ ಬಳಿ ಕರ್ಕೊಂಡು ಹೋಗ್ತಾ ಇದ್ಲು...
ಅಜ್ಜಿಯ ವಿಶೇಷತೆ ಅಂದ್ರೆ ಕಥೆ ಸರಿಯಾಗಿ ಅಡುಗೆ ಮುಗಿಯುವ ಸಮಯಕ್ಕೆ ಮುಗಿಸ್ತಾ ಇದ್ಲು. ಒಮ್ಮೊಮ್ಮೆ ನನಗೆ ending ನಲ್ಲಿ ಸಮಾಧಾನ ಇರ್ತಾ ಇರ್ಲಿಲ್ಲ, ಆದ್ರೂ ಸರಿಯಾದ TIME ಗೆ ಆಕೆ ಅಡುಗೆ ಮತ್ತು ಕಥೆ ಎರಡೂ ಮುಗಿಸಿ ಏರು ಕಟ್ಕೊಂಡು ಹೊಲಗದ್ದೆಯಿಂದ ಬರುವ ಮಗನಿಗಾಗಿಯೂ (ನನ್ನ ತಾಯಿಯ ಸೋದರ ಮಾವ)ಆಳು-ಕಾಳುಗಳಿಗಾಗಿಯೂ ಕಾಯ್ತಾ ಇರ್ತಿದ್ಲು!ಹಾಗೆ ಕಾಯುವ ಪರಿಯೇ ‘ಅಡುಗೆ ಮಾತು’ ಪ್ರಯೋಗ...
ವಿಶೇಷವಾದ ಅಡುಗೆಯಲ್ಲಿ ನೆಂಟರಿಷ್ಟರಿಗೆ ಕಾಯ್ತಾ ಇರ್ತಿದ್ಲು, ತಡವಾದ್ರೂ ಖುಷಿಯಿಂದ ಕಾಯ್ತಾ ಇರ್ತಿದ್ಲು, ನೆಂಟ್ರು ಒಮ್ಮೊಮ್ಮೆ ಬೇಗ ಬಂದ್ರೆ ಮತ್ತೊಮ್ಮೆ ಬರ್ತಾನೆ ಇರ್ಲಿಲ್ಲ! ಆದ್ರೂ ಆ ಊಟ ಆ ದಿನ ಅವರಿಗೇ ಕಾಯ್ತಾ ಇತ್ತೇ ವಿನಃ ನಮ್ಮ ಪಾಲಿಗಲ್ಲ... ಉಳಿದ್ರೆ ಮಾರನೇ ದಿನ ನಮ್ಮ ತಟ್ಟೆಗೆ ಸೇರ್ತಿತ್ತೇ ವಿನಃ ದನಕರುಗಳಿಗೆ ಹಾಕ್ತಾ ಇರ್ಲಿಲ್ಲ, ಅಪ್ಪಿ ತಪ್ಪಿಯೂ ಬಿಸಾಡುತ್ತಾ ಇರ್ಲಿಲ್ಲ. ಹಾಗೆ ಇತ ಮಿತವಾಗಿ ಬಿಸಾಡದೆ ಬಡಿಸುತ್ತಿದ್ದ ನಿಲುವೇ ಈ ‘ಅಡುಗೆ ಮಾತು’ ನಾಟಕ ಪ್ರಯೋಗ!
ಅಜ್ಜಿಯ ಕಥೆಗೆ ಕಿವಿಗೊಡುತ್ತಾ ಅಡುಗೇಗೂ ಸಹಾಯ ಮಾಡುತ್ತ ಇದ್ದ ನನಗೆ ದಿನಗಳು ಹೋಗ-ಹೋಗುತ್ತಿದ್ದಂತೆ ಆ ದಿನಗಳು, ಆಕೆಯ ಕೈ ರುಚಿ, ವಿಧಾನ ಯಾವುದನ್ನೂ ಕೇವಲ ನೆನಪು ಎಂದು ಭಾವಿಸದೆ ಪ್ರಯೋಗಕ್ಕೆ ಇಳಿಸುವ ಶತಪ್ರಯತ್ನವೇ ‘ಅಡುಗೆ ಮಾತು’ ಸಾಹಸ ಪ್ರಯತ್ನ...
ನನಗೆ ಅಡುಗೆಯೆಂಬುದು ಕಲೆ ಅಂತ ತಿಳಿದದ್ದೇ ಅಜ್ಜಿಯಿಂದ! ಆಕೆಯ ಅಡುಗೆ ಮನೆ ಕಸರತ್ತಿನಿಂದ, ರುಚಿಸಲು ಹುಡುಕುತ್ತಿದ್ದ ಮಸಾಲೆಗಳಿಂದ, ರಂಜಿಸಲು ಹೇಳುತ್ತಿದ್ದ ಕತೆಗಳಿಂದ. ಮುತ್ತಜ್ಜಿ ಹೋದ್ಮೇಲೆ ಪ್ರತಿಯೊಬ್ಬರ ನೆನಪಿನಲ್ಲಿ ಆಕೆಯ ಕೈ ರುಚಿ, ಕೈಯಳತೆ, ಪದಾರ್ಥಗಳ ಮೇಲಿನ ಹಿಡಿತ, ಬಡಿಸುತ್ತಿದ್ದ ರೀತಿಯದ್ದೆ ಮಾತು.. ಆ ಮಾತುಗಳನ್ನು ನಾನೂ ನೆನಪುಮಾಡಿಕೊಳ್ಳುತ್ತ ಮತ್ತೊಬ್ಬರ ಅಡುಗೆ ಮನೆ ಶಿಸ್ತನ್ನು ತಿಳಿಯಲು ರೂಪಿಸಿದ ಸಂವಾದಾತ್ಮಕ ನಾಟಕವೇ ‘ಅಡುಗೆ ಮಾತು’!
ಒಬ್ಬ ನಟನಿಗೆ ಗ್ರಾಂಥಿಕ ಪಠ್ಯ ಎಷ್ಟು ಮುಖ್ಯನೋ ಅದಕ್ಕಿಂತ ಮುಖ್ಯ ಆತನ ‘ಸ್ಮತಿ’! ಎಂಬುದನ್ನು ಹೆಚ್ಚಾಗಿ ನಂಬುವ ಮತ್ತು ಪಾಲಿಸುವ ನನಗೆ ಅಳು, ನಗು, ಅವಮಾನ, ಅಡುಗೆ ಎಲ್ಲವೂ ಧ್ಯಾನವೇ..ಆ ಧ್ಯಾನದ ರೂಪವೇ ‘ಅಡುಗೆ ಮಾತು’!
ಅಜ್ಜಿಯಾಗಿ ಅಲ್ಲದಿದ್ದರೂ ಅವರದೇ ಮನೆಯ ಹೆಣ್ಣುಮಗಳಾಗಿ ಅಡುಗೆ ಮಾಡುತ್ತ ಸಹಾಯ ಪಡೆಯುತ್ತಾ, ಕಥೆ ಹೇಳುತ್ತಾ, ಕಥೆ ಕಟ್ಟುತ್ತಾ, ಕೇಳುತ್ತಾ ಮತ್ತೂ ಅತಿಥಿಯನ್ನು ಹುಡುಕುತ್ತ, ಅತಿಥಿಯನ್ನು ಪರಿಚಯಿಸುತ್ತ, ಕಾಯುತ್ತಾ ಅಡುಗೆ ಬಡಿಸುತ್ತಾ ಹೋಗುವ ಕ್ರಮವೇ ಇವತ್ತಿನ ‘ಅಡುಗೆ ಮಾತು’ ನಾಟಕ ಪ್ರಯೋಗ..
ನಾಟಕ ಅದರ ಪರಿಕಲ್ಪನೆ ಎಲ್ಲಾ ಶಾಸ್ತ್ರಗಳನ್ನು ಮೀರಿದ್ದು ಎಂಬುದು 5 ವರ್ಷಗಳ ಕಾಲದ ನನ್ನ ರಂಗಭೂಮಿ ಓದಿನಿಂದ ತಿಳಿದ ನನಗೆ ಆ so ಛಿಚಿಟಟeಜ ಶಾಸ್ತ್ರ ಮೀರುವುದಕ್ಕೆ ಯಾರ ಅಪ್ಪಣೆಯೂ ಬೇಡವಾಗಿದ್ದ ಕಾರಣ ನೇರವಾಗಿ ಪ್ರೇಕ್ಷಕರ ಬಳಿಯೇ ಹೋಗಿ ರಂಗದ ಮೇಲೆಯೇ ಮಾಡಿದ 100ರ ‘ಲೀಕ್‌ಔಟ್’ ರಂಗಪ್ರಯೋಗದ ಅನುಭವವೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಡುಗೆ ಜೊತೆ ನಾಟಕ ಕಟ್ಟುವ ಶಕ್ತಿಗೆ ಕಾರಣವಾಯಿತು.
ಮರಿಯಮ್ಮಜ್ಜಿ ನಂತರ ಮುಂದುವರಿದಂತೆ ಅವರ ಮಗಳು ನನ್ನಜ್ಜಿ ತಾಯಮ್ಮ ಜೊತೆ ಕೂಡ ಅದೇ ಅಡುಗೆ ಸಂಬಂಧ ಇನ್ನೂ ಗಾಢವಾಗುತ್ತಾ ಹೋದ ತೀವ್ರತೆಯೇ ಈ ಪ್ರಯೋಗ!
ಒಟ್ನಲ್ಲಿ ಹೇಳೋದಾದ್ರೆ ‘ಅಡುಗೆ ಮಾತು’ ಪ್ರಯೋಗದ ವಿನ್ಯಾಸ, ಪರಿಕಲ್ಪನೆ, ನಿರ್ದೇಶನ
‘ನನ್ನ ಅಜ್ಜಿ’ ಅಂದ್ರೆ ತಪ್ಪಾಗಲ್ಲ...