ಒಲಿದ ಸ್ವರಗಳು
ಚಿತ್ರಾ ಫಲ್ಗುಣಿ 15 ವರ್ಷಗಳಿಂದ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡೆಕ್ಕನ್ ಹೆರಾಲ್ಡ್, ವಾರ್ತಾಭಾರತಿ ಹಾಗೂ ಇತರ ಪತ್ರಿಕೆಗಳಿಗೆ ಲೇಖನ ಹಾಗೂ ವರದಿ ಬರೆದಿದ್ದಾರೆ; ಹಿರಿಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಭಾಷಾಶಾಸ್ತ್ರದಲ್ಲಿ ಎಂಎ ಪದವಿ ಹೊಂದಿರುವ ಚಿತ್ರಾ ವಿವಿಧ ಸಂಸ್ಥೆಗಳ ಲೇಖನ, ಕೃತಿಗಳನ್ನು ಅನುವಾದಿಸಿದ್ದಾರೆ.
ಕೆತ್ತುವ ಕೆಲಸ
ಒಪ್ಪಿದೆ,
ಶಿಲ್ಪಿಯ ಉಳಿಯ ಪೆಟ್ಟಿಲ್ಲದೆ ಕಲ್ಲು ಕಲೆಯಾಗುವುದೆಂತು?
ಆದರೆ
ಯಾರದೋ ಕಣ್ಣಿಗೆಂದು ನಾ ನನ್ನ ರೂಪ ಕಳಕೊಳ್ಳಬೇಕೆ?
ಯಾರನ್ನು ಸರಿಯೆನ್ನುವುದು, ಯಾರು ತಪ್ಪೆನ್ನುವುದು?
ನೆನಪಾಗುವುದು ನನಗೀಗ
ಗುರುವೆಂಬ ಶಿಲ್ಪಿಯ ಕೆತ್ತನೆಯ ಮಾತು,
ಮೊದಲು ಬರುವುದು ಅ, ಅನಂತರವಷ್ಟೇ ಇ
ವಿಶಾಲಾಕಾರದ, ದಿಗಂತದೆಡೆಗೆ ಹಬ್ಬಿರುವ ಈ ಸಮುದ್ರದ ಮಧ್ಯೆ ಕುಳಿತು,
ಅನ್ನುವೆ ನಾನೀಗ, ಶಿಲ್ಪವಿಲ್ಲದೆ ಶಿಲ್ಪಿಯೆಲ್ಲಿ?
ನನ್ನ ರೂಪ ನನಗೇನೂ ಕಾಣದು, ನಿನ್ನ ಕಣ್ಣಿಗೆ ಹೇಗೆ?
ಎಂದು ಆ ಕಗ್ಗಲ್ಲು ಬಳಿಗೆ ಬರದಿದ್ದರೆ,
ಯಾವ ಉಳಿ ಈ ಕೈಯಲ್ಲಿದ್ದರೇನು, ಈ ನೀರ ಕೆತ್ತಬಲ್ಲೆನೆ?
ನೀರು ರಾಶಿರಾಶಿಯಾಗಿ ಬಿದ್ದರೂ ಅಡಿಯೂ ಸರಿಯದೇ,
ಸ್ಥಿರಜೀವಿಯಾಗಿ, ನನ್ನ ಬರುವನ್ನೇ ಕಾದಿರುವಂತೆ
ಆಹ್ವಾನಿಸುವ ಬೋರ್ಗಲ್ಲು
ಸುತ್ತಲೆಲ್ಲಾ ಇರುವ ನೀರಿನಂತೆ ಕೈಜಾರಿದರೆ,
ಕಣ್ಣು-ಮುಚ್ಚಾಲೆಯೆಂದು ನನ್ನ ನೋಡಿ ನಗುತ್ತಾ,
ಅಲ್ಲೊಮ್ಮೆ-ಇಲ್ಲೊಮ್ಮೆ ಹಾರಿದರೆ,
ಪೆಟ್ಟು ಹಾಕಲು ನನಗೆ ಬೇಕಾಗುವುದು ದೊಣ್ಣೆ!
ಅಸ್ತಿತ್ವದ ನಾಶವಾದಾಗ ಆ ಕಲ್ಲಿನದ್ದೆಲ್ಲಿ?
ಈ ಶಿಲ್ಪಿಯದೇ!
***
ನಾನೂ ನನ್ನ ಮಗುವೂ
ತಾಯ್ತನದ ಮರ್ಮವ ತಿಳಿಯಲಾರೆಯೆ?
ಕೇಳಿದೆ ನೀ ನನ್ನ, ಗೆಳತಿ
ಕೇಳೀಗ ಈ ತಾಯ ಕಥೆಯ
ಮನವೆಂಬ ಕ್ಷೇತ್ರದ ಮರ್ಮದ ಕಥೆ ಕೇಳು
ಹಿರಿ-ಕಿರಿಯದೆಂಬ ತುಲನೆಯನ್ನು
ಕೊಂಚ ನಡೆಸುತ್ತಾ, ಕೊಂಚ ಮರೆಯುತ್ತಾ
ತನ್ನ ಮಗುವಿನೆಡೆಗೆ ನಡೆದ ತಾಯಿಯ ಕಥೆಯ ಕೇಳು.
ಇದರಲ್ಲೂ ಇರುವನೊಬ್ಬ ಬಡಕಲು ರೈತ
ಕಂಡೂ ಕಾಣದಂತಿರುವ ಬೀಜ, ಬರಡು ಕ್ಷೇತ್ರ
ಅವರೊಂದಿಗೇ ಸಾಗೋಣವೆಂದರೆ,
ತಾನು ಹೆಜ್ಜೆಯಿಟ್ಟಲ್ಲೇ ಮಾರ್ಗ!
ಇವರೆಲ್ಲರ ಗಾಥೆಯೇ ದಾನಗೈದಿದೆ
ಬೀಜಾಸುರನ ರಕ್ತದ ಹನಿ, ಹನಿ, ಹನಿ...
ಬಾಯಾರಿ, ನೀರಿಲ್ಲದಿದ್ದರೆ ಬೇರಿನ್ನೇನೆಂದು
ನಿಸ್ಸಾಹಯಕಳಾಗಿ ಸ್ವೀಕರಿಸಿರುವ ಈ ಕ್ಷೇತ್ರ!
ಈಗಿದೋ, ಇಲ್ಲಿದೆ ಮಗು!
‘‘ತಾಯಿಗೆ ಕಾಂಬುದೆಂದೂ ಮಗು ಸುಂದರವೆಂದೇ
ಎಂದು ನೀನೆಷ್ಟೇ ಅಂದರೂ, ನನಗೆಂತೇ ಕಂಡರೂ
ರಾತ್ರಿಗಾಲದಲ್ಲಿ ಕಿವಿಗೆ ಬೀಳುವವು ಮಾತುಗಳು
ಮಗುವನ್ನು ನಾ ಬಿಡಬೇಕೆಂದಿಲ್ಲ
ನಿನಗೇಕೆಂದು ಎಳಕೊಳ್ಳಲು ಮುಂದಾಗುವರು
ಮತ್ತೆ ನಿಸ್ಸಾಯಕಳಾಗಿ ದೂರ ಕುಳಿತು ನೋಡುವಿಯಂತೆ
ತಾಯ್ತನದ ಇನ್ನೆಷ್ಟೋ ರೂಪಗಳ
ಬೀಜಕ್ಕೂ ಕ್ಷೇತ್ರಕ್ಕೂ ಏನಿದೆ ಸಂಬಂಧವೀಗ?
ತಿಳಿಯೆನೆಂದಾಗ ಹೇಳಿದರೆನಗೆ
ನಿನ್ನ ಮಗನೆಂದರಾತ ಕ್ಷತ್ರಿಯ
ಈಗ ಕಾಣುವನು ಸೂತ!
ಎರಡು ಮಾತುಗಳ ನಡುವೆ ಸಿಲುಕಿರುವೆ
ಹೇಳೀಗ ಗೆಳತಿ
ನಿಜಕೂ ನಾನಿದಕೆ ತಾಯೆ?
ನನ್ನೋರ್ವಳದೇ ಇದು ಮಗುವೆ?
****
ಅಶ್ವತ್ಥದ ಕೆಳಗೆ
ಊರ ಬಳಿಯ ದಾರಿಯಿಂದ ಒಳ ಹೊಕ್ಕು
ಕಾಡ ಸೇರಿದರೆ
ಊರಿಂದ ಬಿಡುವು ಪಡೆದು ಬಂದಿರುವ ಕಾಗೆಗಳು
ಅಲ್ಲಿವೆ, ಮರದ ಕೆಳಗೆ
ನಡುವಿನ ಕೋಗಿಲೆಯ ಉಸಿರು ಕಟ್ಟಿದೆ
ಕಾಗೆಗಳ ಕರ್ಕಶವೂ ಕೋಗಿಲೆಯ ಗೀತೆಯೂ
ಸೇರಿ ಪ್ರಕೃತಿ
ಆದರೆ ಗೀತೆಗಳ ದಾಟಿಸುವುದು ಹರಸಾಹಸದ ಕೆಲಸ
ಎಂದು ಕೋಗಿಲೆಯೀಗ ಅರಿತುಕೊಂಡಿದೆ
ನಿನ್ನೆಯಾದರೆ ಕಾಗೆಗಳು ತೋರಿಸಿದ
ಮಾಮರವ ಕಂಡು ಆಗಲೆಂದದ್ದು
ಇಂದು ತನ್ನದೇ ಕಂಠ ಬಿರಿದಂತಾಗಿದೆ
ಹಾಡೆಂದು ಕರೆದದ್ದು, ಮತ್ತೆ-ಮತ್ತೆ ಕರೆದದ್ದು,
ಎಂದೋ ಅದು?
ಅನ್ನಿಸುತ್ತಿದೆ
ಕಾಗೆ ಬಾಯ್ತೆರೆದು ಕರೆಯುವುದಂತೆ ಯಾವತ್ತೂ ತನ್ನವರ
ಹೀಗೆ ಬಂದು ಎಲ್ಲರೂ ಬಾಯ್ತೆರೆದರೆ
ಗೀತೆಯ ಗತಿಯೇನು?
ಕಾಗೆಗನ್ನಿಸುತ್ತಿದೆ,
ಆದರೆ, ಮಾಮರದ ಹಠವೇಕೆ?
ನನ್ನ ನೋಡು,
ಕಲ್ಪವೃಕ್ಷವೇ ಇದೆ ನನಗೋಸ್ಕರ!
ಯಾರ ನುಡಿ ಸರಿಯೆನ್ನಲಿ?
ಮಾತು ಕಟ್ಟಿದೆ
****
ಚಕ್ರ
ಸುಂದರಿ ಎಂದು ಕರೆದಾಗ ಕೇಳಿಸಲಿಲ್ಲ, ಗೆಜ್ಜೆ ಸದ್ದು ಅಡ್ಡ ಬಂತು
ಎಂತೆಂತಹ ಚೆಲುವು ಎಂದು ಹಂತಹಂತವಾಗಿ
ಹೆಚ್ಚಿಸಬೇಕಾಯಿತು, ಮಾತುಮಾತಿನಲ್ಲೇ
ನಡುವಲ್ಲೆಲ್ಲೋ ಅದಕೊಂದು ಉತ್ತರವೂ ಸಿಕ್ಕಿತು
ಮಾತು ಬೆಳೆಯಿತು ಕೂಡಾ,
ಗಾಡಿ ಹೊರಡಿಸಲೆ? ಬರುವೆಯಾ ಜೊತೆಯಲ್ಲಿ?
ಎಂದರೆ, ಅಂದೆ,
ಬೇಡ, ಮನೆಗೆ ಹೋಗಬೇಕು, ತಂದೆ ಕಾಯುತ್ತಿದ್ದಾರೆ.
ತಂದೆಯಷ್ಟೇ ಅಲ್ಲ,
ನಾಳೆಗಾಗಿ ಕಾಯುತ್ತಿದ್ದಾರೆ ಇನ್ನೆಷ್ಟೋ ಮಂದಿ.
ಬಿಡು, ಅದೆಲ್ಲಾ ನಾಳೆಯ ಕತೆಯಲ್ಲವೆ?
ನಾಡಿದ್ದಿನ ಕತೆಯೂ ಅಲ್ಲಿರಲಿ!
ಇರುವುದೆಲ್ಲವೂ ನಿನ್ನೊಂದಿಗೇ, ಬೇರೆ ಸಾಧ್ಯವೆ?
ಆದರೆ, ಇಂದಾಗದ್ದು ನಾಳೆಗಾದೀತೆ?
ಗೊತ್ತಿಲ್ಲೆ, ನಡುವೆ ಕತ್ತಲಿದೆ!
ಬೇಕೆಂದೊಮ್ಮೆ, ಬೇಡವೆಂದೊಮ್ಮೆ
ನಾಡಿದ್ದು ಅಂದಾರು ನೋಡು, ಖಂಡಿತಾ ಕೇಳುವರು ನಿನ್ನ
ಯಾಕೆ ಬೇಕೆನ್ನಲಿಲ್ಲ? ಭಯವೇನಿದು?
ನಡುವೆ ನುಸುಳುವುದು ಪ್ರಶ್ನೆಯೂ,
ಬೇಕೆನ್ನುವ ಆಸೆಯ ಕಡೆಗೆ ತಿರುಗಿದ್ದೇಕೆ?
ಬೇಡವೇ ಬೇಡ ಎನ್ನಲು ಕಷ್ಟವೇನು?
ಹೇಡಿಯಾಗಿರಲು ಭಯವೆ?
ಇದೆಲ್ಲವ ಮರೆತು ಒಮ್ಮೆ ನೋಡು, ನಾಳೆಯೆಡೆಗೇ ನೋಡು
ಸುರಸುಂದರಿಯೆಂದು ಕರೆಸಿಕೊಳ್ಳಲು ನೆನಪಾಗಲಿಲ್ಲ,
ನಾಚಿನಿಲ್ಲಬೇಕೆಂದೂ ಹೊಳೆಯಲಿಲ್ಲ!
ಮಾತು ಕಳೆದುಹೋದೀತು
ಯಾರುಯಾರದೋ ನುಡಿಯ ನಡುವೆಯೆಂದು
ತನ್ನ ಸ್ವರವನ್ನು ಮುಟ್ಟಿಸಲಿಲ್ಲವೆ ನೇರ ಅವನಲ್ಲಿಗೆ?
ಗಾಡಿಯಿದೆಯೇನು? ಕಟ್ಟಿ ಬಾ!
ಕಾಲದೆದುರು ಸೋಲಲಾರೆ,
ಅಳುತ್ತಾ ಹುಚ್ಚು ಹಿಡಿಸಿಕೊಳ್ಳಲೂ ಆರೆ!
ಕೇಳಿಸುತ್ತಿದೆ ಧ್ವನಿ ಆ ದಿಟ್ಟ ನಡೆಯದು
ಅವಳ ಕಾಲ್ಗೆಜ್ಜೆಯದು
***
ಕತ್ತಲಿನ ತೇಜಸ್ಸು
ದೀಪಾವಳಿಯ ಮರುದಿನದ ಬೆಳಕನ್ನು ಕಂಡು ಕೇಳಿದೆ
ಎಲ್ಲಿ ಕುಗ್ಗಿತು ಆ ಕತ್ತಲು?
ದೀಪಗಳನ್ನುರಿಸಲು ಮೊನ್ನೆ ಅಮಾವಾಸ್ಯೆಗೆ ಕಾಯುತ್ತಿದ್ದಂತೆ,
ಬೆನ್ನ ಹಿಂದೆ, ಕಾಣದ ಚಂದ್ರನು ಏರುತ್ತಿದ್ದಂತೆ,
ದೂರ ದಿಗಂತದಲಿ ಕಂಡೆ
ಇಳಿದ ಸೂರ್ಯನು ಬಿಟ್ಟು ಹೋದ ಪ್ರಭೆಯ
ಸಮಯ ಬಂತೆಂದು ತನಗೆ, ಶಾಂತನಾಗೇ ಆತ ಸಾಗಿದರೆ,
ಅವನನ್ನೇ ನೋಡುತ್ತಾ ನಿಂತಿರಲೆ?
ಕೈಯಲ್ಲಿನ ಕಿರುಹಣತೆ ನಾನೇಕಿರುವೆನೆಂದು ಕೇಳಿದಾಗ
ಅದರ ಸಂತೈಸಲು ಅದರೆಡೆಗೆ ನೋಡಿದೆ.
ಆದರೆ ಕಣ್ಣು ಮತ್ತೆ ಹೋಯಿತು ಮೇಲೆ,
ನಾಳೆ ನೋಡೋಣವೆಂಬ ವಿದಾಯದ, ಕೊನೆಯ ಮಾತಿಗೆ
ದೀಪ ಉರಿಸಿ, ಸುತ್ತಲೆಲ್ಲಾ ನೋಡಿದೆ
ಸಾವಿರಾರು ಹಣತೆಗಳ ಕಂಡು, ಹಿಗ್ಗಿ,
ಮತ್ತೆ-ಮತ್ತೆ ನೋಡಲು ತಿರುತಿರುಗಿ
ಕತ್ತಲೆಂದು ಭಯವೇಕೆ, ಅಂದುಕೊಂಡೆ
ಆಸೆಯ ಉಳಿಸಲು ದೀಪಗಳಿಷ್ಟಿವೆ!
ಭಾವಗಳ ಸಾಗರದಲಿ ಮುಳುಗಿ,
ತನ್ನನ್ನೇ ಮರೆತವಳಂತೆ, ಕಾಲವ ಕಳೆಯುತಿರೆ,
ನಾಲ್ಕು, ಇಲ್ಲ, ಮೂರೇ ದಿನಗಳಲ್ಲಿ ಕಳೆಯಿತು
ಕತ್ತಲು-ದೀಪದ ಸಂಬಂಧದ ಹಬ್ಬ
ಕಾಣಿಸುತ್ತಾ ಈಗ ಏರುತಿಹ ಸೂರ್ಯನೂ ಕೇಳುತ್ತಿದ್ದಾನೆ
ಎಲ್ಲೆಡೆ ಹಬ್ಬಿರೆ ನಿನ್ನೆಯದೇ ಬೆಳಕು, ನಾ ಬರಲೇತಕೆ?
ಮುಳುಗದಿರೆ ಆ ಸೂರ್ಯ, ಏರಿ ಮುಳುಗದಿರೆ ಆ ರಾತ್ರಿ,
ನಾ ಕಾಣಿಸುವೆನೆಂತು?