ಎಂಸಿಸಿ ಬ್ಯಾಂಕ್ ಗೆ 13.12 ಕೋಟಿ ರೂ. ಲಾಭ: ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ

Update: 2024-04-05 09:32 GMT

ಮಂಗಳೂರು,ಎ.5: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 112 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಂ.ಸಿ.ಸಿ. ಬ್ಯಾಂಕ್ ಮಾರ್ಚ್ 2024ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಲೆಕ್ಕ ಪರಿಶೋಧನಾ ಪೂರ್ವ 13.12 ಕೋಟಿ ರೂ. ವ್ಯವಹಾರಿಕ ಲಾಭ ಗಳಿಕೆ ದಾಖಲಿಸಿದೆ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ.

ಮಿಲಾಗ್ರಿಸ್ ನ ಸೆನೆಟ್ ಹಾಲ್ ನಲ್ಲಿಂದು ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಸಿಸಿ ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆಗೊಳಿಸಲು ಶ್ರಮಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರಥಮ ಬಾರಿಗೆ 1.07% ಎನ್.ಪಿ.ಎ. ದಾಖಲಿಸಿದೆ ಎಂದರು.

ದಾಖಲೆಯ ಲಾಭ ಮತ್ತು ಕನಿಷ್ಠ ಎನ್.ಪಿ.ಎ. ಜೊತೆಗೆ 2023-2024ನೇ ವಿತ್ತೀಯ ವರ್ಷದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯ ಕ್ಷೇತ್ರವನ್ನು ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಹೀಗೆ 5 ಜಿಲ್ಲೆಗಳಿಗೆ ವಿಸ್ತರಿಸಿದೆ. ಪ್ರಸಕ್ತ ವರ್ಷ ಬ್ಯಾಂಕ್ ಕಾರ್ಯವ್ಯಾಪ್ತಿಯನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅನುಮತಿ ದೊರಕಿದ್ದು, ಇದೊಂದು ಮಹತ್ವದ ಸಾಧನೆಯಾಗಿದೆ ಎಂದವರು ಹೇಳಿದರು.

ಈಗಾಗಲೇ ಬ್ರಹ್ಮಾವರದಲ್ಲಿ ಬ್ಯಾಂಕಿನ 17ನೇ ಶಾಖೆಯನ್ನು ತೆರೆದಿದ್ದು, ಕಾವೂರು, ಬೆಳ್ತಂಗಡಿ ಮತ್ತು ಶಿವಮೊಗ್ಗದಲ್ಲಿ ಶೀಘ್ರದಲ್ಲೇ ಶಾಖೆಗಳನ್ನು ತೆರೆಯಲಾಗುವುದು. ಅನಿವಾಸಿ ಭಾರತೀಯರರಿಗೆ (ಎನ್.ಆರ್.ಐ) ಸೇವಾ ಸೌಲಭ್ಯವನ್ನು ನೀಡುವ ಕರ್ನಾಟಕದ ಪಟ್ಟಣ ಸಹಕಾರಿ ಬ್ಯಾಂಕುಗಳ ಪೈಕಿ ಎರಡನೇ ಬ್ಯಾಂಕ್ ಆಗಿರುತ್ತದೆ. ರಾಜ್ಯದಲ್ಲಿ ಹಂತ ಹಂತಗಳಲ್ಲಿ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಈ ನಡುವೆ ಬ್ಯಾಂಕಿನ ವ್ಯವಹಾರವು ಡಿಸೆಂಬರ್ ಅಂತ್ಯಕ್ಕೆ 1,000 ಕೋಟಿ ರೂ. ತಲುಪಿದ್ದು, ಈ ಆರ್ಥಿಕ ವರ್ಷದ ಇನ್ನೊಂದು ಮಹತ್ವದ ಸಾಧನೆಯಾಗಿರುತ್ತದೆ ಎಂದವರು ತಿಳಿಸಿದರು.

ಪ್ರಸಕ್ತ ಅರ್ಥಿಕ ವರ್ಷದಲ್ಲಿ ಅನಿಲ್ ಲೋಬೊ ನೇತೃತ್ವದ 14 ಸದಸ್ಯರು 2023-28ನೇ ವರ್ಷಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು, 2023ರ ಆಗಸ್ಟ್ 28ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅನಿಲ್ ಲೋಬೊ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಬ್ಯಾಂಕಿನ ಸದಸ್ಯರು ಬ್ಯಾಂಕಿನ ಮೇಲೆ ಹೊಂದಿರುವ ವಿಶ್ವಾಸವೇ ಇದಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 17 ಶಾಖೆಗಳನ್ನು ಹೊಂದಿರುವ ಎಂ.ಸಿ.ಸಿ. ಬ್ಯಾಂಕ್ 2023-24ನೇ ವಿತ್ತೀಯ ವರ್ಷದಲ್ಲಿ ದಾಖಲೆಯ 13.12 ಕೋಟಿ ರೂ. ವ್ಯವಹಾರಿಕ ಲಾಭ ಗಳಿಸಿದೆ. ಈ ವಿತ್ತೀಯ ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಬ್ಯಾಂಕಿನ ವ್ಯವಹಾರ ಪ್ರಗತಿಯನ್ನು ದಾಖಲಿಸಿದ್ದು, ಬ್ಯಾಂಕಿನ ನಿವ್ವಳ ಮೌಲ್ಯ (Net Worth) ರೂ. 62.45 ಕೋಟಿಯಿಂದ ರೂ.76.35 ಕೋಟಿಗೆ ತಲುಪಿದೆ. ಬ್ಯಾಂಕಿನ ವ್ಯವಹಾರ ರೂ.1081 ಕೋಟಿ ದಾಟಿದ್ದು, ಕಳೆದ ವರ್ಷಕ್ಕಿಂತ ಶೇ.16 ಏರಿಕೆಯಾಗಿದೆ ಎಂದು ಅನಿಲ್ ಲೊಬೊ ತಿಳಿಸಿದರು.

ಬ್ಯಾಂಕಿನ ಸದಸ್ಯರು ಬ್ಯಾಂಕಿನ ಪ್ರಸಕ್ತ ಆಡಳಿತ ಮಂಡಳಿಗೆ ನೀಡಿದ ಬೆಂಬಲ, ಗ್ರಾಹಕರ ವಿಶ್ವಾಸ ಮತ್ತು ಅಧಿಕಾರಿವರ್ಗ ಹಾಗೂ ಸಿಬ್ಬಂದಿಯ ಶ್ರಮದಿಂದ ಇದು ಸಾಧ್ಯವಾಗಿದೆ. ಜೊತೆಗೆ ಸಾಕಷ್ಟು ಅನಿವಾಸಿ ಭಾರತೀಯರು ಬ್ಯಾಂಕಿನಲ್ಲಿ ವ್ಯವಹಾರ ಮತ್ತು ಹೂಡಿಕೆಯನ್ನು ಮಾಡಿರುತ್ತಾರೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ ನಿರ್ದೇಶಕರಾದ ಆ್ಯಂಡ್ರೂ ಡಿಸೋಜ, ಡಾ.ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೋ, ಜೆ.ಪಿ.ರೊಡ್ರಿಗಸ್, ಡೇವಿಡ್ ಡಿಸೋಜ, ಎಲ್ರಾಯ್ ಕಿರಣ್ ಕ್ರಾಸ್ಟಾ, ಹೆರಾಲ್ಡ್ ಮೊಂತೆರೊ, ರೋಶನ್ ಡಿಸೋಜ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ.ಪಿಂಟೊ, ಸುಶಾಂತ್ ಸಲ್ಡಾನ, ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ಆಶ್ವಿನ್ ಪಿ. ಮೊಂತೆರೊ, ಫೆಲಿಕ್ಸ್ ಡಿ ಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಮಹಾಪ್ರಬಂಧಕ ಸುನೀಲ್ ಮಿನೇಜಸ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News