ನ.9ರಂದು ಪಣಪಿಲ 'ಜಯ-ವಿಜಯ' ಜೋಡುಕರೆ ಕಂಬಳ
ಮೂಡುಬಿದಿರೆ: 2024-25ನೇ ಸಾಲಿನ ಕಂಬಳಗಳು ನವೆಂಬರ್ ನಲ್ಲಿ ಆರಂಭಗೊಳ್ಳಲಿದ್ದು, ಮೂಡುಬಿದಿರೆ ಪಣಪಿಲದಲ್ಲಿ 15ನೇ ವರ್ಷದ ಹೊನಲು ಬೆಳಕಿನ 'ಜಯ-ವಿಜಯ' ಜೋಡುಕರೆ ಕಂಬಳ ನ.9ರಂದು ನಡೆಯಲಿದೆ.
ಈ ಸಂಬಂಧ ಬುಧವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂಬಳದ ಜಿಲ್ಲಾ ತೀರ್ಪುಗಾರರ ಸಂಚಾಲಕ ವಿಜಯ್ ಕುಮಾರ್ ಜೈನ್ ಕಂಗಿನಮನೆ ಮಾತನಾಡಿ, ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಳೆದ 14 ವರ್ಷಗಳಿಂದ ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗದ ಕೋಣಗಳಿಗಾಗಿ ಕಂಬಳ ಕ್ರೀಡೆಯನ್ನು ಆಯೋಜಿಸುತ್ತಾ ಬರುತ್ತಿದೆ. ಇದೇ ಕಂಬಳದಲ್ಲಿ ಕೋಣಗಳನ್ನು ಓಡಿಸಿ ತರಬೇತಿಯನ್ನು ಹೊಂದಿದ ಪಣಪಿಲ ಪ್ರವೀಣ್ ಕೋಟ್ಯಾನ್ ಉತ್ತಮ ಓಟಗಾರರಾಗಿ ಗುರುತಿಸಿಕೊಂಡು ರಾಜ್ಯ ಸರಕಾರದಿಂದ ಕ್ರೀಡಾರತ್ನ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ. 133.5 ಮೀ ಉದ್ದದ ಕಂಬಳ ಕರೆಯಲ್ಲಿ ಓಟಕ್ಕೆ ಸಬ್ ಜೂನಿಯರ್, ಜೂನಿಯರ್ ಹಾಗೂ ಹಗ್ಗ ಕಿರಿಯ ಸೇರಿದಂತೆ ಸುಮಾರು 200 ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು 24ಗಂಟೆಯೊಳಗೆ ಕಂಬಳ ಸ್ಪರ್ಧೆಯನ್ನು ಮುಕ್ತಾಯಗೊಳಿಸಲು ತೀರ್ಮಾನಿಸಿಸಲಾಗಿದೆ ಎಂದು ಹೇಳಿದರು.
'ಜಯ-ವಿಜಯ' ಜೋಡುಕರೆ ಕಂಬಳ ಸಮಿತಿ ಪಣಪಿಲ ಇದರ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಚೌಟ ಅವರು ಮಾತನಾಡಿ, ನ.9ರಂದು ಬೆಳಗ್ಗೆ 8 ಗಂಟೆಗೆ ಪಣಪಿಲ ಅರಮನೆಯ ವಿಮಲ್ ಕುಮಾರ್ ಶೆಟ್ಟಿ ಕಂಬಳವನ್ನು ಉದ್ಘಾಟಿಸಲಿದ್ದಾರೆ. ಕಂಬಳ ಸಮಿತಿ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸುವರು. ಸಮಿತಿ ಗೌರವ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್, ದರೆಗುಡ್ಡೆ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಯುವರಾಜ್ ಜೈನ್ ನಂದೊಟ್ಟು, ಪ್ರಧಾನ ಕಾರ್ಯದರ್ಶಿ ಕೆ. ಅಶ್ವತ್ಥ ಪಣಪಿಲ ಉಪಸ್ಥಿತರಿದ್ದರು.