ಎ.9ರಂದು ಮಂಗಳೂರಿಗೆ ಬಿಜೆಪಿಯ ಜನಾಕ್ರೋಶ ಯಾತ್ರೆ

ಮಂಗಳೂರು, ಎ.1: ರಾಜ್ಯ ಸರಕಾರದ ವೈಫಲ್ಯದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಕೈಗೊಂಡಿದ್ದು, ಎ.9ರಂದು ಜನಾಕ್ರೋಶ ಯಾತ್ರೆ ಮಂಗಳೂರಿಗೆ ಆಗಮಿಸಲಿದೆಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾತ್ರೆಯ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದರು.
ರಾಜ್ಯದ ಜನತೆಗೆ ಯುಗಾದಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ರಾಜ್ಯ ಕಾಂಗ್ರೆಸ್ ಸರಕಾರ ಅವಕಾಶ ನೀಡಿಲ್ಲ. ಹಾಲು ಮತ್ತು ಮೊಸರಿನ ದರ ಲೀಟರ್‌ಗೆ ನಾಲ್ಕು ರೂ., ವಿದ್ಯುತ್ ದರ ಯೂನಿಟ್‌ಗೆ 36 ಪೈಸೆ ಹೆಚ್ಚಿಸಿ ಜನತೆಗೆ ಆಘಾತ ನೀಡಿದೆ. ವಾಹನ ಖರೀದಿ ತೆರಿಗೆ, ಮುದ್ರಾಂಕ ಶುಲ್ಕ ಸಹಿತ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡುವ ಮೂಲಕ ದುಬಾರಿಯ ವಾತಾವರಣವನ್ನು ಕಾಂಗ್ರೆಸ್ ಸರಕಾರ ಸೃಷ್ಟಿಸಿದೆ. ಅಧಿಕಾರಕ್ಕೆ ಬಂದ ಬಳಿಕ ಒಟ್ಟು ಮೂರು ಬಾರಿ ಹಾಲಿನ ದರ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸರಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ಚೀಟಿ ದರ ಏರಿಕೆ, ವೈದ್ಯಕೀಯ ಪ್ರಮಾಣ ಪತ್ರದ ದರ 250 ರೂ.ನಿಂದ 300 ರೂ.ಗೆ ಏರಿಕೆ , ಮುದ್ರಾಂಕ ಶುಲ್ಕ 50 ರೂ.ನಿಂದ 500 ರೂ.ಗೆ ಏರಿಸಲಾಗಿದೆ. ಬಿತ್ತನೆ ಬೀಜದ ದರ, ನೀರಿನ ಬಿಲ್, ಕಸ ವಿಲೇವಾರಿ ಸೆಸ್ ಏರಿಸುವ ಮೂಲಕ ಜನತೆಗೆ ಕಾಂಗ್ರೆಸ್ ಸರಕಾರ ಶಾಪಗ್ರಸ್ತ ಸರಕಾರವಾಗಿ ಪರಿಣಮಿಸಿದೆ ಎಂದು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರದಿಂದ ಇದೀಗ ಜನಸಾಮಾನ್ಯರಿಗೆ ಬದುಕೇ ಇಲ್ಲದಾಗುವ ಸ್ಥಿತಿ ಒದಗಿದೆ. ಮುಸಲ್ಮಾನರಿಗೆ ಪ್ರತ್ಯೇಕ ಬಜೆಟ್ ಮಂಡಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಸರಕಾರ ವಿಫಲವಾಗಿದೆ. ಎಸ್‌ಸಿ ಎಸ್‌ಟಿ ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಸುವ ಮೂಲಕ ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಅನ್ಯಾಯ ಎಸಗಲಾಗಿದೆ. ಹಿಂದು ಸಮಾಜಕ್ಕೆ ತೊಂದರೆ ನೀಡುವ ರೀತಿಯಲ್ಲಿ ಸರಕಾರ ಕಾರ್ಯವೆಸಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎ.2 ಮತ್ತು 3ರಂದು ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳು, ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಶಾಸಕರ ಅಮಾನತು ಖಂಡನೀಯ:
ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಶಾಸಕರ ಸಹಿತ ಬಿಜೆಪಿ 18 ಮಂದಿ ಶಾಸಕರನ್ನು 6 ತಿಂಗಳ ಕಾಲ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಅಮಾನತು ಮಾಡಿರುವುದು ಖಂಡನೀಯ ಎಂದು ಸತೀಶ್ ಕುಂಪಲ ಹೇಳಿದರು.
ಶಾಸಕರನ್ನು ಆರು ತಿಂಗಳು ಅಮಾನತು ಮಾಡಿರುವುದು ಸರಿಯಲ್ಲ. ಯು.ಟಿ. ಖಾದರ್ ಅವರು ಸ್ಪೀಕರ್ ಆದಾಗ ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿಯಾಗುತ್ತದೆ ಎಂಬ ಆಶಾವಾದ ಹೊಂದಲಾಗಿತ್ತು. ಆದರೆ, ಜಿಲ್ಲೆ ಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಸ್ಪೀಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಅವರು ಕಾಂಗ್ರೆಸ್ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರು ಏನು ತಪ್ಪು ಮಾಡಿದ್ದಾರೆ ಎಂಬ ಬಗ್ಗೆ ಅವರು ವಿಡೀಯೊ ತೋರಿಸಲಿ. ಶಾಸಕರ ಅಮಾನತಿ ನಿಂದ ಅವರ ಕ್ಷೇತ್ರಗಳಲ್ಲಿ ಮತದಾರರಿಗೆ ತೊಂದರೆಯಾಗುತ್ತಿದೆ. ತಕ್ಷಣ ಅಮಾನತನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ಮಂಜುಳಾ ರಾವ್, ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಎಸ್‌ಸಿ ಮೋರ್ಚಾ ಅಧ್ಯಕ್ಷ ಜಗನ್ನಾಥ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮಹೇಶ್ ಜೋಗಿ, ಜಿಲ್ಲಾ ವಕ್ತಾರ ಅರುಣ್ ಜಿ.ಶೇಟ್, ಮಾಧ್ಯಮ ಸಹ ಸಂಯೋಜಕ ಮನೋಹರ ಶೆಟ್ಟಿ, ಸಂಜಯ ಪ್ರಭು ಉಪಸ್ಥಿತರಿದ್ದರು.