ಮಂಗಳೂರು-ಮುಂಬೈ ಮಧ್ಯೆ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಳವು: ದೂರು

Update: 2023-08-07 16:00 GMT

ಮಂಗಳೂರು, ಆ.7: ಮಂಗಳೂರಿನಿಂದ ಮುಂಬೈಗೆ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಸೇರಿದ ಬ್ಯಾಗನ್ನು ಎಗರಿಸಿ ಅದರಲ್ಲಿದ್ದ ಹಣ ಮತ್ತು ದಾಖಲೆ ಪತ್ರಗಳನ್ನು ಕಳವುಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೂಲತಃ ಮುಂಬೈಯ ಪ್ರಸ್ತುತ ನಗರದ ಶಕ್ತಿನಗರ ಎಂಬಲ್ಲಿ ವಾಸವಾಗಿದ್ದ ಎಲಿಝಬೆತ್‌ಗೆ ಸೇರಿದ ಬ್ಯಾಗ್ ಇದಾಗಿದ್ದು, ಇದರಲ್ಲಿ 15 ಸಾವಿರ ರೂ., ಎಟಿಎಂ, ಆಧಾರ್, ಪ್ಯಾನ್ ಕಾರ್ಡ್ ಮತ್ತಿತರ ದಾಖಲೆಪತ್ರಗಳಿದ್ದವು ಎನ್ನಲಾಗಿದೆ. ಆರೋಪಿಗಳು ಇವೆಲ್ಲವನ್ನು ಪಡೆದು ಬಳಿಕ ಬ್ಯಾಗ್ ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ನಗರದ ಕಂಕನಾಡಿಯಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಮುಂಬೈಗೆ ತೆರಳುವ ರೈಲಿಗೆ ಆ.4ರಂದು ಸಂಜೆ 5:30ಕ್ಕೆ ಎಲಿಝಬೆತ್ ಮತ್ತವರ ಸಹೋದರ ಹತ್ತಿದ್ದರು. ರಾತ್ರಿ ಸುಮಾರು 10ಕ್ಕೆ ಇಬ್ಬರು ನಿದ್ದೆಗೆ ಜಾರಿದ್ದು, ಬೆಳಗ್ಗೆ ಎದ್ದು ನೋಡಿದಾಗ ಬ್ಯಾಗ್ ಕಳವಾಗಿತ್ತು. ಹುಡುಕಾಡಿದಾಗ ಬ್ಯಾಗ್ ರೈಲಿನ ಬೋಗಿಯೊಂದರ ಟಾಯ್ಲೆಟ್‌ನಲ್ಲಿ ಕಂಡು ಬಂದಿತ್ತು. ಗೋವಾ-ರತ್ನಗಿರಿ ಮಧ್ಯೆ ಈ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಕೃತ್ಯದ ಬಗ್ಗೆ ಎಲಿಝಬೆತ್ ಟಿಟಿಗೆ ಮಾಹಿತಿ ನೀಡಿದ್ದು, ಅದರಂತೆ ರೈಲ್ವೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News