ದಮ್ಮಾಮ್ - ಮಂಗಳೂರು ಮಧ್ಯೆ ಸಂಚರಿಸುವ ಏರ್ ಇಂಡಿಯಾ ವಿಮಾನ ಯಾನ ವಿಳಂಬ: ಪ್ರಯಾಣಿಕರ ಆರೋಪ

Update: 2024-02-24 16:48 GMT

ಫೈಲ್‌ ಫೋಟೊ

ಮಂಗಳೂರು: ಸೌದಿ ಅರೇಬಿಯಾದ ದಮ್ಮಾಮ್‌ನಿಂದ ಮಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಕಂಪೆನಿಯ ವಿಮಾನವು ಕ್ಲಪ್ತ ಸಮಯಕ್ಕೆ ಯಾನ ಆರಂಭಿಸದೆ ಕಾಲಹರಣ ಮಾಡಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಶುಕ್ರವಾರ ರಾತ್ರಿ (ಫೆ.23) 10:20ಕ್ಕೆ ದಮ್ಮಾಮ್‌ನಿಂದ ಟೇಕ್‌ಆಫ್ ಆಗಬೇಕಿದ್ದ ವಿಮಾನವು 11:50ಕ್ಕೆ ಟೇಕ್‌ಅಫ್ ಆಯಿತು. ವಿಳಂಬಕ್ಕೆ ಸೂಕ್ತ ಕಾರಣವನ್ನೂ ನೀಡದೆ ಕಂಪೆನಿಯು ನಮ್ಮ ತಾಳ್ಮೆಯನ್ನು ಪರೀಕ್ಷಿಸಿತು. ಸುಮಾರು ಒಂದುವರೆ ಗಂಟೆಗಳ ಕಾಲ ನಾವು ವಿಮಾನದಲ್ಲೇ ಬಾಕಿಯಾದೆವು ಎಂದು ಪ್ರಯಾಣಿಕರು ದೂರಿದ್ದಾರೆ.

ವಿಮಾನದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಪ್ರಯಾಣಿಕರು ಅಧಿಕ ಸಂಖ್ಯೆಯಲ್ಲಿದ್ದರು. ಅದರಲ್ಲೂ ಮಕ್ಕಳು, ಮಹಿಳೆ ಯರು, ವೃದ್ಧರ ಸಂಖ್ಯೆ ಹೆಚ್ಚಿತ್ತು. ರೋಗಿಗಳೂ ಇದ್ದರು. ಉಸಿರಾಡಲಾಗದ ಸ್ಥಿತಿ ಎದುರಾಗಿತ್ತು. ಈ ವಿಮಾನದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕುಂದಾಪುರ ಮೂಲದ ಮಹಿಳೆಯೊಬ್ಬರ ಆರೋಗ್ಯವೂ ಹದಗೆಟ್ಟಿತ್ತು. ಆದರೆ ಏರ್ ಇಂಡಿಯಾ ಕಂಪೆನಿಯ ಅಧಿಕಾರಿ, ಸಿಬ್ಬಂದಿ ವರ್ಗವು ಸಕಾಲಕ್ಕೆ ಸ್ಪಂದಿಸಲಿಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಮುಂಜಾನೆ 5:30ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿದೆವು. ತಪಾಸಣೆಯ ಸಂದರ್ಭ ಹಿರಿಯ ಮಹಿಳೆ ಯೊಬ್ಬರ ಬಳಿಯಿರುವ ಚಿನ್ನಾಭರಣದ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರನ್ನು ಹೊರಗೆ ಬಾರದಂತೆ ತಡೆಹಿಡಿಯಲಾಯಿತು. ಮೊದಲೇ ಸುಸ್ತಾಗಿ ಬಳಲಿದ್ದ ನಮಗೆ ಇದು ತುಂಬಾ ಕಿರಿಕಿರಿಯಾಯಿತು. ನಾವು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಅವರನ್ನು ಬಿಟ್ಟುಬಿಡಲಾಯಿತು. ಒಟ್ಟಿನಲ್ಲಿ ಏರ್ ಇಂಡಿಯಾ ಕಂಪೆನಿಯು ತಾಳ್ಮೆ ಪರೀಕ್ಷಿಸುತ್ತಿವೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

"ನಾನು ಹಲವು ಬಾರಿ ವಿಮಾನ ಯಾನ ಮಾಡಿರುವೆ. ಆದರೆ ಇಂತಹ ಕಹಿ ಅನುಭವ ಯಾವತ್ತೂ ನನಗೆ ಆಗಿರಲಿಲ್ಲ. ಏರ್ ಇಂಡಿಯಾ ಕಂಪೆನಿಯ ವಿಮಾನದ ಅವ್ಯವಸ್ಥೆಯ ಬಗ್ಗೆ ಕೇಳಿ ತಿಳಿದುಕೊಂಡಿದ್ದೆ. ಇದೀಗ ನನಗೆ ಸ್ವತಃ ಅದರ ಅನುಭವವಾಯಿತು. ರನ್‌ವೇ ಕ್ಲಿಯರ್ ಇಲ್ಲದ ಕಾರಣ ಎಂದು ಹೇಳಲಾಯಿತು. ಆದರೆ ಸ್ಪಷ್ಟ ಕಾರಣ ತಿಳಿಸದೆ ಪ್ರಯಾಣಿಕ ರಿಗೆ ಅನ್ಯಾಯ ಮಾಡಿರುವುದು ಅಕ್ಷಮ್ಯ".

-ಫೌಝಿಯಾ ಹರ್ಷದ್, ಮೂಡುಬಿದಿರೆ

"ಪ್ರಯಾಣಿಕರನ್ನು ನಿರಂತರ ಸತಾಯಿಸುವುದು ಏರ್ ಇಂಡಿಯಾ ಕಂಪೆನಿಯವರಿಗೆ ಅಭ್ಯಾಸವಾಗಿದೆ. ಈ ಕಂಪೆನಿಯ ಅನ್ಯಾಯ, ಅಕ್ರಮವನ್ನು ಪ್ರಶ್ನಿಸಿದರೆ ಉಡಾಫೆಯ ಉತ್ತರ ಸಿಗುತ್ತಿವೆ. ಈ ಕಂಪೆನಿಯ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವುದು ಅನಿವಾರ್ಯ".

-ಇಸ್ಹಾಕ್ ಸಿ.ಐ. ಪಜೀರ್ (ಗಲ್ಫ್ ಕನ್ನಡಿಗ)

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News