ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಆರೋಪ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪುತ್ತೂರು ಎಸಿಗೆ ಮನವಿ
ಪುತ್ತೂರು: ಅರಣ್ಯ ಅತಿಕ್ರಮಣವನ್ನು ವಿಚಾರಣೆ ನಡೆಸಲು ತೆರಳಿದ್ದ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪುತ್ತೂರು ತಾಲೂಕು ಶಾಖೆಯ ವತಿಯಿಂದ ಪುತ್ತೂರಿನ ಸಹಾಯಕ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿರುವ ಮೀಸಲು ಅರಣ್ಯ ಜಾಗದಲ್ಲಿ ಲೋಲಾಕ್ಷ ಗೌಡ ಎಂಬವರು ಕಾನೂನು ಉಲ್ಲಂಘಿಸಿ ಜಾಗವನ್ನು ಅತಿಕ್ರಮಣ ಮಾಡಿ ನೆಲ ಸಮತಟ್ಟುಗೊಳಿಸಿ, ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು. ಇದನ್ನು ತೆರವುಗೊಳಿಸಲೆಂದು ಹೋಗಿದ್ದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಮತ್ತು ಸಿಬ್ಬಂದಿ ತನಿಖೆ ನಡೆಸುತ್ತಿದ್ದ ವೇಳೆ ಶಾಸಕ ಹರೀಶ್ ಪೂಂಜಾ ಆಗಮಿಸಿದ್ದು, ಅವರಿಗೆ ಅರಣ್ಯ ಅತಿಕ್ರಮಣದ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗಿತ್ತು. ವಾಸ್ತವ ಸ್ಥಿತಿ ಅರಿತಿದ್ದರೂ ಶಾಸಕರು ಏಕಾಏಕಿ ಕರ್ತವ್ಯ ನಿರತ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ. ಅಲ್ಲದೆ ಪದೇ ಪದೇ ದೂರವಾಣಿ ಕರೆ ಮಾಡಿ ಕರ್ತವ್ಯ ನಿರ್ವಹಣೆಯ ವೇಳೆ ಒತ್ತಡವನ್ನು ಹೇರಿರುತ್ತಾರೆ. ಹಾಗೂ ಸಾರ್ವಜನಿಕವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಸುಳ್ಳು ಆರೋಪವನ್ನು ಹೊರಿಸಿ ಮಾನಹಾನಿ ಮಾಡಿರುತ್ತಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಬಗ್ಗೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಇಲಾಖೆಯ ಮೇಲೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದ್ದಾರೆ ಎಂದು ಅವರು ದೂರು ನೀಡಿದ್ದಾರೆ.
ಇದರಿಂದಾಗಿ ಸರ್ಕಾರಿ ನೌಕರರಾದ ನಮಗೆ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ, ಘನತೆ ಗೌರವಗಳಿಂದ ಸರ್ಕಾರಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗಿದೆ. ತಪ್ಪಿತಸ್ಥ ಶಾಸಕ ಹರೀಶ್ ಪೂಂಜಾ ಹಾಗೂ ಮತ್ತಿತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಅರಣ್ಯ ಇಲಾಖೆಯ ಕರ್ತವ್ಯವಾದ ಅರಣ್ಯ ರಕ್ಷಣೆಯನ್ನು ನಿರ್ಭಯವಾಗಿ ನಿರ್ವಹಿಸಲು ಅನುವು ಮಾಡಿಕೊಡಬೇಕು. ಕರ್ತವ್ಯ ನಿರ್ವಹಿಸುವಲ್ಲಿ ಸೂಕ್ತ ರಕ್ಷಣೆಯನ್ನು ಒದಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಅವರು ಮನವಿ ಸ್ವೀರಿಸಿದರು. ತಹಸೀಲ್ದಾರ್ ಶಿವಶಂಕರ್ ಜೊತೆಗಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪುತ್ತೂರು ತಾಲೂಕು ಶಾಖೆಯ ಅಧ್ಯಕ್ಷ ಶಿವಾನಂದ ಆಚಾರ್ಯ, ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ, ಹಿರಿಯ ಉಪಾಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಗೌರವ ಅಧ್ಯಕ್ಷ ರಾಮಚಂದ್ರ, ಸದಸ್ಯರಾದ ಮಹೇಶ್ ಕುಮಾರ್, ಸುಲೋಚನಾ, ಕವಿತಾ, ಪದ್ಮಾವತಿ, ಉಪವಲಯ ಅರಣ್ಯಾಧಿಕಾರಿ ಗಳಾದ ಅಶೋಕ್, ಜರಾಲ್ಡ್ ಡಿಸೊಜ, ಬೀಟ್ ಫಾರೆಸ್ಟರ್ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.