ಪರಶುರಾಮ ಥೀಮ್ ಪಾರ್ಕ್ ವಿರೋಧಿ ಹೋರಾಟ ರಾಜಕೀಯಪ್ರೇರಿತ: ಶಾಸಕ ಸುನಿಲ್ ಕುಮಾರ್

Update: 2023-09-09 15:40 GMT

ಕಾರ್ಕಳ: ಪ್ರವಾಸೋದ್ಯಮದ ಕೇಂದ್ರಬಿಂದುವನ್ನಾಗಿಸಬೇಕೆಂಬ ಉದ್ದೇಶದಿಂದ ಪರಶುರಾಮ‌ ಥೀಮ್ ಪಾರ್ಕ್ ಸ್ಥಾಪನೆಯ ಯೋಜನೆ ಅನುಷ್ಟಾನಗೊಳಿಸಲಾಗಿದೆ. ಆದರೆ ಈ ಮಹತ್ವಾಕಾಂಕ್ಷಿ ಯೋಜನೆಯನ್ನೇ ಕಾಂಗ್ರೆಸ್ ವಿರೋಧಿಸುತ್ತಿದ್ದು, ಕಾಂಗ್ರೆಸ್ ನಾಯಕರಿಗೆ ಇಂದಿರಾ ಗಾಂಧಿ ಕುಟುಂಬದ ಪ್ರತಿಮೆ ಸ್ಥಾಪಿಸಿದ್ದಲ್ಲಿ ಈ‌ ಯೋಜನೆಯನ್ನು ವಿರೋಧಿಸುತ್ತಿರಲಿಲ್ಲ ಎಂದು ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.

ಅವರು ಶನಿವಾರ ಕಾರ್ಕಳ ಪ್ರವಾಸಿಬಂಗಲೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಪರಶುರಾಮ‌ ಥೀಮ್ ಪಾರ್ಕ್ ವಿಚಾರ ಮುಂದಿಟ್ಟು ಕಾಂಗ್ರೆಸ್ ನಾಯಕರು ಕಾರ್ಕಳದ ಅಭಿವೃದ್ದಿಯನ್ನು ಸಹಿಸದೇ ಅದನ್ನು ಹೀಯಾಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಅರೋಪಿಸಿದರು.

ಪ್ರವಾಸೋದ್ಯಮದ ದೃಷ್ಟಿಯಿಂದ ಕಾರ್ಕಳ ಮೈಲಿಗಲ್ಲು‌ ಆಗಬೇಕು, ಈ ಹಿನ್ನಲೆಯಲ್ಲಿ ಈ ಯೋಜನೆ ರೂಪಿಸಲಾಗಿದೆ. ಪರಶುರಾಮ‌ ಥೀಮ್ ಪಾರ್ಕಿನ ಕಾಮಗಾರಿಯ ಗುಣಮಟ್ಟದ ಬಗ್ಗೆ ಚರ್ಚೆ ಕೇವಲ ರಾಜಕೀಯಪ್ರೇರಿತ, ಇದು ಕಾಂಗ್ರೆಸ್ ಬೆಂಬಲಿತರ ಪ್ರತಿಭಟನೆಯಾಗಿದೆ. ಎಲ್ಲಾ ಅಭಿವೃದ್ಧಿ ಕೆಲಸಗಳಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಆಯಾ ಇಲಾಖೆ ಅಧಿಕಾರಿಗಳ ಜವಾಬ್ದಾರಿ, ಈ ಕುರಿತು ಯಾವುದೇ ತನಿಖೆ ನಡೆಸಲು ಜಿಲ್ಲಾಡಳಿತಕ್ಕೆ ಸಂಪೂರ್ಣ ಅಧಿಕಾರವಿದೆ ಎಂದರು.

ಥೀಮ್ ಪಾರ್ಕ್ ನನ್ನ ವೈಯುಕ್ತಿಕ ಆಸ್ತಿಯಲ್ಲ ಬಿಜೆಪಿ ಪಕ್ಷದ ಆಸ್ತಿಯೂ ಅಲ್ಲ,ಅದು ಸಾರ್ವಜನಿಕರ ಆಸ್ತಿ, ಊರಿನ‌ ಆಸ್ತಿ, ಆದ್ದರಿಂದ ಅದರ ಅಬಿವೃದ್ಧಿಗೆ ಅನುದಾನ ಬಿಡುಗಡೆಯಾಗಬೇಕಿದೆ.ಆದರೆ ಅದಕ್ಕೆ ಅನುದಾನ ತಡೆಹಿಡಿಯುವ ಪ್ರಯತ್ನ ನಡೆಸಿದ್ದಲ್ಲಿ ಜನ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಸುನಿಲ್ ಕುಮಾರ್ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ, ಮಣಿರಾಜ ಶೆಟ್ಟಿ, ಉದಯ ಕುಮಾರ್ ಹೆಗ್ಡೆ, ವಿಕ್ರಮ್ ಹೆಗ್ಡೆ,ನವೀನ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News