ಬೆಳ್ತಂಗಡಿ: ಡಾ.ಪ್ರಶಾಂತ್ ಶೆಟ್ಟಿಗೆ ರಾಜ್ಯೋತ್ಸವ ಪ್ರಶಸ್ತಿ

Update: 2023-10-31 12:38 GMT

ಬೆಳ್ತಂಗಡಿ: ಉಜಿರೆ ಎಸ್ ಡಿ ಎಂ ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ ಪ್ರಿನ್ಸಿಪಾಲ್ ಆಗಿ‌ ಸೇವೆ ಸಲ್ಲಿಸುತ್ತಿರುವ ಡಾ. ಪ್ರಶಾಂತ್ ಶೆಟ್ಟಿ ಅವರು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿದ್ದಾರೆ.

ಡಾ.ಪ್ರಶಾಂತ್ ಶೆಟ್ಟಿ ಅವರು ಮೂಲತಃ ಕಾರ್ಕಳ ತಾಲೂಕಿನ ಹೆಬ್ರಿಯವರು. ಇಲ್ಲಿನ ಮಾಬ್ರಿಯಲ್ಲಿ ಜನಿಸಿದ ಅವರು ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿ 1994ರಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಉಜಿರೆಯಲ್ಲಿ ಪ್ರಥಮ ಬ್ಯಾಚಿನಲ್ಲಿ ಬಿಎನ್ ವೈಎಸ್ ಪದವಿಯನ್ನು ಮುಗಿಸಿದ್ದಾರೆ.

ಶಿಕ್ಷಣ ಮುಗಿಸಿದ ಸಂಸ್ಥೆಯಲ್ಲಿ ತನ್ನ ವೃತ್ತಿ ಜೀವನವನ್ನು ಉಪನ್ಯಾಸಕರಾಗಿ ಹಾಗೂ ವೈದ್ಯಾಧಿಕಾರಿಯಾಗಿ ಪ್ರಾರಂಭಿಸಿ ದರು. 2006 ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಎಸ್.ವಿ.ವೈ.ಎ.ಎಸ್.ಎ. ಯೋಗ ವಿಶ್ವವಿದ್ಯಾನಿಲಯದಲ್ಲಿ ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು 'ವಸಿಷ್ಠ ಅವಾರ್ಡ್' ಪುರಸ್ಕಾರದೊಂದಿಗೆ ಮುಗಿಸಿದರು. ಇದೇ ವಿಶ್ವವಿದ್ಯಾನಿಲಯದಲ್ಲಿ 2014ರಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಷಯದಲ್ಲಿ ಪಿಎಚ್ ಡಿ ಪದವಿಯನ್ನು ಪಡೆದರು.

ಪ್ರಸ್ತುತ ಭಾರತ ಸರಕಾರದ ಆಯುಷ್ ಮಂತ್ರಾಲಯದ ಟಾಸ್ಕ್ ಫೋರ್ಸ್ ಸದಸ್ಯರಾಗಿ ಹಾಗೂ ಆಯುಷ್ ಮಂತ್ರಾಲಯದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ಹಾಗೂ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಂಡಳಿಯಲ್ಲಿ ಸದಸ್ಯತ್ವವನ್ನು ಪಡೆದಿರುತ್ತಾರೆ. ಕರ್ನಾಟಕದ ರಾಜೀವ್ ಗಾಂಧಿ ಅರೋಗ್ಯ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿರುವುದು ಇವರ ಸೇವೆಗೆ ಸಂದ ಗೌರವ.

ಪ್ರಸ್ತುತ ಇವರು ಕರ್ನಾಟಕ ಸರಕಾರದ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಸಲಹಾ ಮಂಡಳಿಯ ಸದಸ್ಯರಾಗಿ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಹಾಗೂ ಸ್ನಾತಕೋತ್ತರ ಸಲಹಾ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News