ಬೆಳ್ತಂಗಡಿ: ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಹೋಂಸ್ಟೇಗಳಿಗೆ ಅರಣ್ಯ ಇಲಾಖೆಯಿಂದ ನೋಟಿಸ್

Update: 2024-09-11 05:05 GMT

ಬೆಳ್ತಂಗಡಿ: ತಾಲೂಕಿನಲ್ಲಿ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಹಾಗೂ ಉದ್ಯಾನವನದ ಬಫರ್ ಝೋನ್ ಎಂದು ಗುರುತಿಸಲಾಗಿರುವ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ 54 ಹೋಂ ಸ್ಟೇಗಳಿಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ನೋಟಿಸ್ ನೀಡಿ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದೆ.

ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಸುತ್ತಲೂ ಯಾವುದೇ ಪರವಾನಿಗೆಯಿಲ್ಲದೆ ಅನಧಿಕೃತವಾಗಿ ಹೋಂ ಸ್ಟೇಗಳು ಕಾರ್ಯ ನಿರ್ವಹಿಸುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2020 ರಲ್ಲಿ ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಬಫರ್ ಝೋನ್ ಬಗ್ಗೆ ಅಂತಿಮ ನೋಟಿಫಿಕೇಶನ್ ಆಗಿದ್ದು ಬಫರ್ ಝೋನ್ ಅನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ.

ಉದ್ಯಾನವನದ ಸುತ್ತಲೂ ಇರುವ ಅನಧಿಕೃತ ಹೋಂಸ್ಟೇಗಳನ್ನು ಉಪಯೋಗಿಸಿ ಉದ್ಯಾನವನದೊಳಗೆ ಅನಧಿಕೃತವಾಗಿ ಟ್ರಕ್ಕಿಂಗ್ ನಡೆಯುತ್ತಿದೆ ಹಾಗೂ ಜಲಪಾತಗಳಿಗೆ ತೆರಳುತ್ತಿದ್ದಾರೆ. ಈ ಬಗ್ಗೆ ಈ ಹಿಂದೆಯೂ ಹಲವಾರು ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿತ್ತು. ಇದೀಗ ಅರಣ್ಯ ಇಲಾಖೆ ರಾಜ್ಯಾದ್ಯಂತ ಅನುಮತಿ ಪಡೆಯದೆ ನಡೆಸುತ್ತಿರುವ ಹೋಂಸ್ಟೇಗಳು ರೆಸಾರ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಬೆಳ್ತಂಗಡಿ ತಾಲೂಕಿನಲ್ಲೂ ನೋಟಿಸ್ ನೀಡಲಾಗಿದೆ.

ಲಭ್ಯ ಮಾಹಿತಿಯಂತೆ ತಾಲೂಕಿನ ಪರಿಸರ ಸೂಕ್ಷ್ಮ ಪ್ರದೇಶ ದಲ್ಲಿ ಕಾರ್ಯನಿರ್ವಹಿಸುತ್ತಿರುವ 54 ಹೋಂ ಸ್ಟೇ ಗಳಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ಬಹುತೇಕ ಹೋಂಸ್ಟೇಗಳು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿವೆ.

ಹಲವು ಹೋಂಸ್ಟೇಗಳಿಗೆ ಗ್ರಾಮ ಪಂಚಾಯತ್ ನಿಂದ ನೀಡಿರುವ ನಿರಾಪೇಕ್ಷಣಾ ಪತ್ರಗಳೇ ಆಧಾರವಾಗಿವೆ ಎಂದು ತಿಳಿದು ಬಂದಿದೆ. ಉದ್ಯಾನವನದ ಬಫರ್ ಝೋನ್ ನಲ್ಲಿ ಹೋಂಸ್ಟೇಗಳನ್ನು ನಡೆಸಲು ಅರಣ್ಯ ಇಲಾಖೆಯ ಅನುಮತಿಯೂ ಬೇಕಾಗುತ್ತದೆ. ಆದರೆ ಇಲಾಖೆ ಯಾರಿಗೂ ಅನುಮತಿ ನೀಡಿಲ್ಲ ಬೆರಳೆಣಿಕೆಯ ಹೋಂಸ್ಟೇಗಳು ಮಾತ್ರ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿಯನ್ನು ಪಡೆದು ಕಾರ್ಯನಿರ್ವಹಿಸುತ್ತಿವೆ. ಆದರೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರೆಸಾರ್ಟ್ ಹಾಗೂ ಹೋಂಸ್ಟೇಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಇವುಗಳ ಕಾರ್ಯನಿರ್ವಹಣೆಯೂ ನಿಲ್ಲಿಸಬೇಕಾಗಿ ಬರಲಿದೆ.


ಅರಣ್ಯ ಇಲಾಖೆಯ ವನ್ಯ ಜೀವಿ ವಲಯದಿಂದ ವಲಯದ ವ್ಯಾಪ್ತಿಯಲ್ಲಿರುವ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ 54 ಹೋಂ ಸ್ಟೇಗಳಿಗೆ ನೋಟಿಸ್ ನೀಡಿ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಲಾಗಿದೆ. ಈ ದಾಖಲೆಗಳು ಬಂದ ಬಳಿಕ ಅವುಗಳನ್ನು ಪರಿಶೀಲಿಸಿ ಮೇಲಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು.

-ವಿ ಶರ್ಮಿಷ್ಠ

ವಲಯ ಅರಣ್ಯಾಧಿಕಾರಿ

ಬೆಳ್ತಂಗಡಿ ವನ್ಯಜೀವಿ ವಲಯ

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News