ಬಿಜೆಪಿ ಡಬಲ್ ಡೇಂಜರ್: ಐವನ್ ಡಿಸೋಜ
ಮಂಗಳೂರು, ಎ.14: ಕಾಂಗ್ರೆಸ್ ಯಾವತ್ತೂ ಡೇಂಜರ್ ಅಲ್ಲ. ಮಣಿಪುರ ರಾಜ್ಯವೊಂದು ಹೊತ್ತಿ ಉರಿಯುತ್ತಿದ್ದಾಗ ದೇಶದ ಪ್ರಧಾನಿ ಅದರ ಬಗ್ಗೆ ತುಟಿ ಬಿಚ್ಚಿಲ್ಲ, ಭೇಟಿ ನೀಡಿಲ್ಲ. ಹಾಗಾಗಿ ಬಿಜೆಪಿ ಡಬಲ್ ಡೇಂಜರ್. ಬಿಜೆಪಿಯ ನೀಡಿರುವ ಜಾಹೀರಾತಿನಿಂದ ಅವರಿಗೆ ದುಡ್ಡ ನಷ್ಟ ಮಾತ್ರ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಸೂದ್, ಫಯಾಝ್ ಕೊಲೆಯಾದ ಸಂದರ್ಭ ಅವರ ಕುಟುಂಬಗಳಿಗೆ ಸರಕಾರ ಪರಿಹಾರ ನೀಡದೆ ತಾರತಮ್ಯ ಮಾಡಿತ್ತು. ಕುಕ್ಕರ್ ಬಾಂಬ್ ಸ್ಫೋಟ ಯಾರ ಅವಧಿಯಲ್ಲಿ ಆಯಿತು? ಸಂತ್ರಸ್ತರಿಗೆ ಬಿಜೆಪಿ ಸಹಾಯ ಮಾಡಿದೆಯೇ? ಅವರ ಮನೆಗೆ 2 ಲಕ್ಷ ರೂ. ಸಹಾಯಧನ ನೀಡಿರುವುದು ನಮ್ಮ ಸರಕಾರ ಬಂದ ಬಳಿಕ, ಅವರಿಗೆ ಮನೆ ಕಟ್ಟಿ ಕೊಟ್ಟಿರುವುದು ನಮ್ಮ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಎಂದು ಹೇಳಿದರು.
ರಾಜ್ಯದ ತೆರಿಗೆ ಪಾಲು ಕೇಳುತ್ತಿದ್ದರೂ ಅದನ್ನು ನೀಡದೆ ಸತಾಯಿಸುತ್ತಿರುವ ಕೇಂದ್ರ ಬಿಜೆಪಿ ನೇತೃತ್ವದ ಸರಕಾರ ಕೊಟ್ಟಿದ್ದು ಚೊಂಬು ಎಂದು ಹೇಳಿದ್ದೇವೆ. ಆದರೆ ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ. ಬಿಜೆಪಿಯ ಜಾಹೀರಾತು ದ್ವೇಷದಿಂದ ಕೂಡಿದ್ದು, ಇದನ್ನು ಜನ ಅರಿತಿದ್ದಾರೆ. ದಲಿತರಿಗೆ ಮೀಸಲಿಟ್ಟಿರುವ ಶೇ.27ರಷ್ಟು ನಿಧಿಯನ್ನು ಖರ್ಚು ಆಡಬೇಕು. ಅದು ಬಳಕೆ ಆಗದಿದ್ದಲ್ಲಿ ಅದನ್ನು ಮುಂದುವರಿಸಬೇಕು ಎಂದು ಕಾನೂನು ತಂದಿರುವುದೇ ಕಾಂಗ್ರೆಸ್ ಸರಕಾರ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ ಖಾಲಿ
ಜೆಡಿಎಸ್ ಜಾತ್ಯತೀತ ಎಂಬ ಪದವನ್ನು ತೆಗೆದು ಬಿಜೆಪಿ ಜತೆ ಸೇರಿಕೊಂಡಿದೆ. ಅದು ಬಿಜೆಪಿಯಾಗಿಯೇ ಉಳಿಯಲಿದೆ ಹೊರತು ಜೆಡಿಆಸ್ ಆಗಿ ಅಲ್ಲ. ಪಕ್ಷ ಉಳಿಸಲು ಬಿಜೆಪಿ ಜತೆ ಸಂಧಾನ ಎಂದು ಜೆಡಿಎಸ್ ಮುಖಂಡರು ಹೇಳಿಕೊಂಡಿದ್ದಾರೆ. ಅವರ ಸಿದ್ಧಾಂತ ಕುಟುಂಬದ ಪಕ್ಷ ಉಳಿಸುವುದು. ಇದನ್ನು ವಿರೋಧಿಸಿ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಜಿಲ್ಲೆಯಲ್ಲಿಯೂ ವಿವಿಧ ವಿಭಾಗಗಳ ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.
ರಾಜ್ಯದಲ್ಲೂ ಇಂಡಿಯಾ ಒಕ್ಕೂಟಕ್ಕೆ ಬಲವಾದ ಬೆಂಬಲ ವ್ಯಕ್ತವಾಗಿದ್ದು, ಒಕ್ಕೂಟದಲ್ಲಿ ಒಡಕು ಇದೆ ಎಂಬ ಬಿಜೆಪಿಯದ್ದು ಟೀಕೆ ಮಾತ್ರ. ಒಕ್ಕೂಟದಲ್ಲಿ ಕೆಲವೆಡೆ ಸ್ನೇಹಯುತ ಒಡಕು ಇದ್ದರೂ ಅದರಿಂದ ಬಿಜೆಪಿಗೆ ಲಾಭ ಆಗದು. ಚುನಾವಣೆ ಬಳಿಕವೂ ವಿರೋಧವಾಗಿ ಸ್ಪರ್ಧಿಸಿದವರೂ ಒಂದಾಗಿದ್ದು ಇದೆ ಎಂದು ಐವನ್ ಡಿಸೋಜ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೋ, ಶುಭೋದಯ ಆಳ್ವ, ಶಾಹುಲ್ ಹಮೀದ್, ನೀರಜ್ ಪಾಲ್, ಇಮ್ರಾನ್, ತನ್ವೀರ್ ಶಾ, ಮಹಾಬಲ ಮಾರ್ಲ, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.
------------------------------------------------------------
ಜೆಡಿಎಸ್ ನಿಂದ ಕಾಂಗ್ರೆಸ್ ಸೇರ್ಪಡೆ
ಜೆಡಿಎಸ್ ನ ವಿವಿಧ ಘಟಕಗಳಲ್ಲಿ ಜಿಲ್ಲೆಯ ಪದಾಧಿಕಾರಿಗಳಾಗಿದ್ದ ಸುಮಾರು 50 ಮಂದಿ ಕಾಂಗ್ರೆಸ್ ಪಕ್ಷದ ನೀತಿ ಸಿದ್ಧಾಂತಗಳನ್ನು ಒಪ್ಪಿಕೊಂಡು ಬೇಷರತ್ತಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದಾಗಿ ಐವನ್ ಡಿಸೋಜ ತಿಳಿಸಿದರು. ಸುದ್ದಿಗೋಷ್ಠಿಯ ಬಳಿಕ ಪಕ್ಷದ ಧ್ವಜ ನೀಡಿ ಕಚೇರಿಗೆ ಆಗಮಿಸಿದ್ದ ಜೆಡಿಎಸ್ ಪಕ್ಷದಲ್ಲಿದ್ದ ಮುಖಂಡರನ್ನು ಐವನ್ ಡಿಸೋಜ ಬರಮಾಡಿಕೊಂಡರು.