ಮನಪಾ ಆಡಳಿತದ ವಿರುದ್ಧ ‘ನಾಗರಿಕರ ಆರೋಪ ಪಟ್ಟಿ’: ಮಂಗಳೂರು ನಗರ ಪೌರ ಸಮಿತಿಯಿಂದ ವಿನೂತನ ಪ್ರತಿಭಟನೆ

Update: 2025-02-25 13:39 IST
ಮನಪಾ ಆಡಳಿತದ ವಿರುದ್ಧ ‘ನಾಗರಿಕರ ಆರೋಪ ಪಟ್ಟಿ’: ಮಂಗಳೂರು ನಗರ ಪೌರ ಸಮಿತಿಯಿಂದ ವಿನೂತನ ಪ್ರತಿಭಟನೆ
  • whatsapp icon

ಮಂಗಳೂರು, ಫೆ.25: ಕಳೆದ ಐದು ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತ ನಾಗರಿಕರನ್ನು ದುಸ್ವಪ್ನದಂತೆ ಬಿಜೆಪಿ ಕಾಡಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಮಂಗಳೂರು ನಗರ ಪೌರ ಸಮಿತಿಯಿಂದ ಮಂಗಳವಾರ ಲಾಲ್ ಬಾಗ್ನ ಪಾಲಿಕೆ ಕಚೇರಿ ಎದುರು ಐದು ವರ್ಷಗಳ ಬಿಜೆಪಿ ದುರಾಡಳಿತದ ವಿರುದ್ಧ ‘ನಾಗರಿಕ ಆರೋಪ ಪಟ್ಟಿ’ (ಸಿಟಿಝನ್ ಚಾರ್ಜ್ ಶೀಟ್) ಎಂಬ ವಿನೂತನ ಪ್ರತಿಭಟನೆಯಲ್ಲಿ 16 ಪ್ರಮುಖ ಆರೋಪಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

 

ಈ ಹಿಂದೆ ಕಾಂಗ್ರೆಸ್ ನ ಭ್ರಷ್ಟಾಚಾರ ಆಡಳಿತ ಮುಂದಿಟ್ಟು ಭ್ರಷ್ಟಾಚಾರರಹಿತ, ಸ್ವಯಂ ಘೋಷಿತ ಆಸ್ತಿ ತೆರಿಗೆ ಹಾಗದೆ ಅಭಿವೃದ್ದಿ ಮಾಡುವುದಾಗಿ ಹೇಳಿತ್ತು. ಆದರೆ ಈವರೆಗಿನ ಅತೀ ಹೆಚ್ಚು ಭ್ರಷ್ಟ, ಜನ ವಿರೋಧಿ ದುರಾಡಳಿತವನ್ನು ಬಿಜೆಪಿ ಈ ಅವಧಿಯಲ್ಲಿ ನಡೆಸಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ವಿರೋಧಿಸಿದವರೇ ಇಂದು ಹೆಚ್ಚಿಸಿ ಪಡೆಯುತ್ತಿದ್ದಾರೆ. ಹಿಂದಿನ 12 ವರ್ಷಗಳಲ್ಲಿ ಆಗದ ನೀರಿನ ದರ ಏರಿಕೆ ಬಿಜೆಪಿ ಆಡಳಿತ ಅವಧಿಯಲ್ಲಾಗಿದೆ. ಹಿಂದಿನ ಅವಧಿಯಲ್ಲಿ ಇಡ್ಯಾದಲ್ಲಿ ಆರಂಭಿಸಲಾದ ಬಡವರಿಗೆ ವಸತಿ ಯೋಜನೆಗಾಗಿನ ಜಿ+3 ಮಾದರಿಯ 650 ಮನೆಗಳು ಪಾಳುಬಿದ್ದಿವೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭ ಮಾಡುವ ಉದ್ದೇಶದಿಂದ ಟಿಡಿಆರ್ ಹಗರಣ ನಡೆಸಲಾಗಿದೆ. ಪಚ್ಚನಾಡಿ, ಮರಕಡದ ಟಿಡಿಆರ್ ಹಗರಣಗಳನ್ನು ನಾವು ವಿರೋಧಿಸಿದರೂ ಇದೀಗ ಪದವು ಎಂಬಲ್ಲಿ 3.5 ಎಕರೆ ಭೂಮಿಯನ್ನು ಟಿಡಿಆರ್ನಡಿ ಬಡವರಿಗೆ ವಸತಿ ಯೋಜನೆಯ ನೆಪದಲ್ಲಿ ಪಡೆಯಲಾಗಿದೆ. 24 ಗಂಟೆ ನೀರು ಕೊಡುವ ಜಲಸಿರಿ ಯೋಜನೆ ಕಳೆದ ಐದು ವರ್ಷಗಲಿಂದ ಪೂರ್ಣಗೊಂಡಿಲ್ಲ. ಈ ಯೋಜನೆಯ ಮೂಲಕ ನೀರಿನ ವ್ಯವಸ್ಥೆಯನ್ನೇ ಖಾಸಗೀಕರಣಗೊಳಿಸುವ ಹುನ್ನಾರ ನಡೆಸಲಾಗಿದೆ. 750 ಕೋಟಿ ರೂ.ಗಳನ್ನು ಏಷ್ಯನ್ ಡೆವಲಪ್ ಮೆಂಟ್ನಿಂದ ಸಾಲ ಪಡೆದು ನಾಗರಿಕರ ಮೇಲೆ ಸಾಲದ ಹೊರೆ ಹಾಕಲಾಗಿದೆ. ಯುಜಿಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದೆಲ್ಲಾ ಸಾಲದು ಎಂಬಂತೆ ತಾವು ಜನಪ್ರತಿನಿಧಿಗಳು ಎಂಬುದ್ನನು ಮರೆತು ಕಾರ್ಪೊರೇಟರ್ ಗಳು ದುರಾಹಂಕಾರದಿಂದ ವರ್ತಿಸುತ್ತಿದ್ದಾರೆ. ಬಿಜೆಪಿ ಶಾಸಕರು ಆಡಳಿತದಲ್ಲಿ ಹಸ್ತಕ್ಷೇಪ ತೋರುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮಂಗಳೂರು ನಗರ ಪೌರ ಸಮಿತಿ ಜನಸಾಮಾನ್ಯರ ಪರ ಆಡಳಿತ ತರುವ ಪ್ರಯತ್ನದಲ್ಲಿ ತೊಡಗಿದೆ ಎಂದರು.

 

ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಕಳೆದ ಐದು ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಟಿಡಿಆರ್ ಹಗರಣ, ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಸಾವಿರಾರು ಕೋಟಿ ರೂ. ನುಂಗಿದ್ದು, ಜಲಸಿರಿ ಹಾಗೂ ವಸತಿ ಯೋಜನೆಯಯನ್ನು ಕಾರ್ಯಗತಗೊಳಿಸದೆ ಜನರಿಗೆ ಮೋಸ ಮಾಡಿದ್ದಾರೆ. ಬಿಜೆಪಿ ಆಡಳಿತ ಜನವಿರೋಧಿ ನೀತಿಗಳ ಮೂಲಕ ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸರ್ವನಾಶ ಮಾಡುತ್ತಾರೆ. ಈ ಬಾರಿ ಜನತೆ ಪಾಠ ಕಲಿಸಬೇಕಾಗಿದೆ ಎಂದು ಅವರು ಹೇಳಿದರು.

 

ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್, ಆಮ್ ಆದ್ಮಿ ಪಕ್ಷದ ಜಿಲ್ಲಾ ಮುಖಂಡ ಎಸ್.ಎಲ್. ಪಿಂಟೋ ಮೊದಲಾದವರು ಮಾತನಾಡಿ, ಮನಪಾದ ಬಿಜೆಪಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

ಆಮ್ ಆದ್ಮಿಯ ವಿಶು ಕುಮಾರ್, ಸಿಪಿಎಂ ಯಾದವ ಶೆಟ್ಟಿ, ಜಯಂತಿ ಶೆಟ್ಟಿ, ಬಿ.ಕೆ.ಇಮ್ತಿಯಾಝ್, ಸಿಪಿಐ ವಿ. ಕುಕ್ಯಾನ್, ಸೀತಾರಾಂ ಬೆರಿಂಜ, ದಸಂಸದ ಸದಾಶಿವ, ಸಿಪಿಎಂನ ಜೆ.ಬಾಲಕೃಷ್ಣ ಶೆಟ್ಟಿ. ಪ್ರೊ.ಕಿಶೋರ್ ಅತ್ತಾವರ, ಭಾರತಿ ಬೋಳೂರು, ಜಯಂತಿ ಬಿ. ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

 

ಪ್ರತಿಭಟನಾ ಸಭೆಗೂ ಮೊದಲು ವಿವಿಧ ಸಂಘಟನೆ, ಪಕ್ಷಗಳನ್ನು ಒಳಗೊಂಡ ಮಂಗಳೂರು ನಗರ ಪೌರ ಸಮಿತಿಯ ನೇತೃತ್ವದಲ್ಲಿ ಪಿವಿಎಸ್ ಜಂಕ್ಷನ್ನಿಂದ ಲಾಲ್ ಬಾಗ್ ವರೆಗೆ ಮೆರವಣಿಗೆ ನಡೆಯಿತು.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News