ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿಲ್ಲ: ಸಚಿವ ಕೃಷ್ಣ ಬೈರೇಗೌಡ
ಮಂಗಳೂರು, ಆ.29: ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆ, ಕಷ್ಟವನ್ನು ಅರ್ಥ ಮಾಡಿಕೊಳ್ಳದವರು ಇಂತಹ ಮಾತುಗಳನ್ನಾಡುವುದು ಸಹಜ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದೊಂದಿಗೆ ಅಭಿವೃದ್ಧಿ ಕಾಮಗಾರಿಯೂ ಆಗುತ್ತಿದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಮಂಗಳವಾರ ಭೇಟಿ ನೀಡಿ ಕಾರ್ಯಕರ್ತರ ಹಾಗೂ ಜನಸಾಮಾನ್ಯರ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಆಡಳಿತ ವ್ಯವಸ್ಥೆ ಕುಸಿತದಿಂದ ಮತ್ತು ಅಧಿಕಾರಿಗಳು ಸರಿಯಾಗಿ ಜವಾಬ್ದಾರಿ ನಿರ್ವಹಿಸದಿರುವುದರಿಂದ ಜನರು ಅನೇಕ ಸಮಸ್ಯೆಗಳನ್ನು ಎದರಿಸುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಸುಧಾರಣೆ ತರುತ್ತೇನೆ. ಅಧಿಕಾರಿ ಗಳೊಂದಿಗೆ ಮಾತನಾಡಿ ಈಗಾಗಲೇ ಜಿಲ್ಲೆಯಲ್ಲಿರುವ ಕೆಲವೊಂದು ವಿಶಿಷ್ಟ ಸಮಸ್ಯೆಗಳ ಬಗ್ಗೆ ಗಮನಹರಿಸಿದ್ದೇನೆ. ಸರ ಕಾರ ಮಟ್ಟದಲ್ಲಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.
ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಹಿತವೂ ಮುಖ್ಯ. ಮುಖ್ಯಮಂತ್ರಿ ಹೇಳಿದಂತೆ ಜನಪರ ಆಡಳಿತ ನೀಡಬೇಕು. ಬಿಜೆಪಿಯವರ ದುರಾಡಳಿತದಿಂದ ಬೇಸತ್ತು ಜನರು ಮತ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಲು ಪ್ರಯತ್ನ ಮಾಡುತ್ತೇನೆ ಎಂದ ಸಚಿವ ಕೃಷ್ಣ ಬೈರೇಗೌಡ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ 100 ದಿನದೊಳಗೆ ಯಾವುದೇ ಸರಕಾರ ಮಾಡಲು ಸಾಧ್ಯವಾಗದ ಕ್ರಾಂತಿಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. 5 ವರ್ಷಗಳು ಕಳೆದರೂ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲವೆಂದು ಬಿಜೆಪಿಗರು ಈ ಹಿಂದೆ ಟೀಕಿಸಿದ್ದರು. ಜನಸಾಮಾನ್ಯರಿಗೂ ಅನುಮಾನವಿತ್ತು. ಆದರೆ ಸರಕಾರ ಕ್ರಾಂತಿಕಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವುದು ದೊಡ್ಡ ಸಾಧನೆ ಯಾಗಿದೆ ಎಂದರು.
ಈ ವೇಳೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿರುವ ಸಮಸ್ಯೆ ಗಳನ್ನು ಸಚಿವರ ಗಮನ ಸೆಳೆದರು.
ಸಭೆಯಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ, ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್.ಲೋಬೊ,ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೋ, ವಿಶ್ವಾಸ್ ಕುಮಾರ್ ದಾಸ್, ಹೇಮನಾಥ್ ಶೆಟ್ಟಿ ಕಾವು, ಪ್ರಕಾಶ್ ಶೆಟ್ಟಿ ತುಂಬೆ, ಲಾರೆನ್ಸ್ ಡಿಸೋಜ, ಶುಭಾಷ್ ಕೊಲ್ನಾಡ್, ಬಿ.ಎಂ.ಅಬ್ಬಾಸ್ ಅಲಿ, ಶೇಖರ್ ಕುಕ್ಕೇಡಿ, ಸಂತೋಷ್ ಕುಮಾರ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ಮೋಹನ್ ಕೋಟ್ಯಾನ್, ಸುರೇಂದ್ರ ಕಾಂಬ್ಳಿ, ವಸಂತ್ ಬೆರ್ನಾಡ್, ಜೆ.ಅಬ್ದುಲ್ ಸಲೀಂ, ಬೇಬಿ ಕುಂದರ್, ಸರ್ವೋತ್ತಮ ಗೌಡ, ಸುಹಾನ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸ್ವಾಗತಿಸಿದರು. ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಕಾರ್ಯಕ್ರಮ ನಿರೂಪಿಸಿದರು.