ವಿಭಿನ್ನ ಭಾಷೆಗಳು ಭಾರತದ ಏಕತೆಯ ಆಧಾರ: ಉದಯನ್ ವಾಜಪೇಯಿ
ಮಂಗಳೂರು, ನ.4: ಭಾರತದ ವಿವಿಧ ಪ್ರದೇಶಗಳ ವಿಭಿನ್ನ ಸಂಸ್ಕೃತಿ, ಕಲೆಗಳ ಜತೆಗೆ ಆಯಾ ಪ್ರದೇಶಗಳ ಭಾಷೆಗಳು ಭಾರತದ ಏಕತೆಯ ಆಧಾರ ಎಂದು ಹಿಂದಿ ಕವಿ, ವಿಮರ್ಶಕ ವಿದ್ವಾಂಸ ಉದಯನ್ ವಾಜಪೇಯಿ ಅಭಿಪ್ರಾಯಿಸಿದ್ದಾರೆ.
ಅಖಿಲ ಭಾರತೀಯ ಕೊಂಕಣಿ ಪರಿಷದ್ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಶನಿವಾರ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಬಸ್ತಿ ವಾಮನ ಶೆಣೈ ವೇದಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದ ಭಾಷೆಯು ಒಂದಕ್ಕೊಂದು ಬೆಸೆದುಕೊಂಡಿವೆ. ಈ ತೆರನಾದ ಭಾಷೆಗಳ ನಿರಂತರತೆಯಿಂದಾಗಿ ನಮಗೆ ಬೇರೆ ಭಾಷೆಯ ಅರಿವು, ಜ್ಞಾನವಿಲ್ಲದಿದ್ದರೂ ನಮ್ಮಲ್ಲಿ ಅನ್ಯತೆಯ ಭಾವನೆ ಯನ್ನು ಮೂಡಿಸುವುದಿಲ್ಲ ಎಂದವರು ಹೇಳಿದರು.
ಕರ್ನಾಟಕದ ಖ್ಯಾತ ಸಾಹಿತಿ, ಜ್ಞಾನಪೀಠ ಪುರಸ್ಕೃತ ಡಾ.ಯು.ಆರ್.ಅನಂತ ಮೂರ್ತಿಯವರನ್ನು ನೆನಪಿಸಿಕೊಂಡ ಉದಯನ್ ವಾಜಪೇಯಿ, ಸಾಹಿತಿಗಳ ಹರಿತ ಲೇಖನಿಯ ಮೂಲಕ ಇಂದಿಗೂ ಸಮಾಜದಲ್ಲಿ ಸತ್ಯವನ್ನು ಸಮಾಜದ ಮುಂದಿಡುವ ಎದೆಗಾರಿಕೆ ಉಳಿದುಕೊಂಡಿದೆ ಎಂದರು.
ಜೀವನದಲ್ಲಿ ನೈತಿಕತೆಯ ಅರಿವು ಅತ್ಯಗತ್ಯವಾಗಿದ್ದು, ಇದು ಪ್ರತಿಯೊಬ್ಬರಲ್ಲೂ ಭಿನ್ನವಾಗಿರುತ್ತದೆ. ಆದರೆ ಹಿಂಸೆ, ದ್ವೇಷವನ್ನು ವಿರೋಧಿಸುವ, ಸತ್ಯವನ್ನು ಪ್ರತಿಪಾದಿಸುವ ನೈತಿಕತೆಯು ಸಾಹಿತ್ಯ ಮತ್ತು ಕಲೆಯಿಂದ ಜೀವಂತವಾಗಿದೆ. ಸಾಹಿತ್ಯ ಮತ್ತು ಕಲೆಗಳಿಂದ ಮಾತ್ರವೇ ಇಂದು ಪ್ರಶ್ನಿಸುವ ಸೃಜನಾತ್ಮಕತೆಯು ಉಳಿದುಕೊಂಡಿದೆಯೇ ವಿನಹ ವಿಜ್ಞಾನ, ತಂತ್ರಜ್ಞಾನ ಈ ಕಾರ್ಯ ಮಾಡದು ಎಂದು ಅವರು ಪ್ರತಿಪಾದಿಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ ಹೇಮಾ ನಾಯ್ಕ್ ವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಕೊಂಕಣಿ ಲೇಖಕ, ಬರಹಗಾರರಾದ ಶಿವರಾಮ್ ಕಾಮತ್, ಉದಯ್ ದೇಶ್‌ಪ್ರಭು, ಡಾ. ಹನುಮಂತ್ ಚೋಪ್ಡೆಕರ್, ಡಾ.ರಜಯ್ ಪವಾರ್, ವಿಶಾಲ್ ಖಂಡೇಪರ್ಕರ್, ಸರಸ್ವತಿ ದಾಮೋದರ್ ನಾಯ್ಕೆ, ವನಧಾ ಸಿನಾಯಿ, ಅಭಯ್ ಕುಮಾರ್ ವೆಲಿಂಗರ್, ಆರ್.ಎಸ್.ಭಾಸ್ಕರ್, ಪಂಡರಿನಾಥ್ ಲೋಟ್ಲಿಕರ್, ವಿಲ್ಸನ್ ಕಟೀಲ್ ಮತ್ತಿತರರು ಪುಸ್ತಕಗಳನ್ನು ಅನಾವರಣ ಗೊಳಿಸಲಾಯಿತು.
ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತರನ್ನು ಈ ಸಂದರ್ಭ ಅಭಿನಂದಿಸಲಾಯಿತು. ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೋಜಾ ಸ್ವಾಗತಿಸಿದರು. ಅಖಿಲ ಭಾರತ ಕೊಂಕಣಿ ಪರಿಷತ್‌ನ ಅಧ್ಯಕ್ಷ ಅರುಣ್ ಉಭಯಕರ್ ಹಾಗೂ ಉಪಾಧ್ಯಕ್ಷ ನಂದಗೋಪಾಲ್ ಶೆಣೈ ಮಾತನಾಡಿ ಶುಭ ಹಾರೈಸಿದರು. ಕಾರ್ಯಾಧ್ಯಕ್ಷ ಎಚ್.ಎಂ.ಪೆರ್ನಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷದ್‌ನ ಕಾರ್ಯದರ್ಶಿ ಗೌರೀಶ್ ವರ್ಣೇಕರ್ ವಂದಿಸಿದರು.
ಉದ್ಘಾಟನಾ ಸಮಾರಂಭಕ್ಕೆ ಮೊದಲು ನಾಗೇಶ್ ಕರ್ಮಾಲಿ ಪ್ರವೇಶ ದ್ವಾರದಿಂದ ಮೆರವಣಿಗೆ ನಡೆಯಿತು.