ಕೃಷಿ ಪಂಪ್‌ಗಳಿಗೆ ಆಧಾರ್ ಜೋಡಣೆ ಮಾಡಬೇಡಿ: ಉಡುಪಿ ಜಿಲ್ಲಾ ಕೃಷಿಕ ಸಂಘ

Update: 2024-09-09 12:39 GMT

ಉಡುಪಿ : ಕೃಷಿ ವಿದ್ಯುತ್ ಪಂಪುಗಳಿಗೆ ಕೃಷಿಕರು ಕಡ್ಡಾಯವಾಗಿ ತಮ್ಮ ಆಧಾರ್ ಜೋಡಣೆ ಮಾಡಬೇಕೆಂದು ಮೆಸ್ಕಾಂ ತರಾತುರಿಯಲ್ಲಿ ನೀಡಿರುವ ಆದೇಶವನ್ನು ಉಡುಪಿ ಜಿಲ್ಲಾ ಕೃಷಿಕ ಸಂಘ ವಿರೋಧಿಸಿದ್ದು, ಇದು ಅನ್ನದಾತರ ವಿದ್ಯುತ್ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಟೀಕಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ತುಂಡು ಭೂಮಿ ಹಿಡುವಳಿ ಕೃಷಿಕರೇ ಅಧಿಕ. ಇರುವ ಜಮೀನಿನ ಪಹಣೀ ಪತ್ರಿಕೆ, ಖಾತೆ ವಿಲೇವಾರಿ ಗೊಂದಲಗಳು ಹಲವು ಇವೆ. ಈಗಾಗಲೇ ತೀರಿಕೊಂಡಿರುವ ಅಜ್ಜ ಮುತ್ತಜ್ಜ, ತಂದೆ, ಮಾವ ಹೆಸರಲ್ಲಿರುವ, ಜಮೀನು ಪಾಲು ಪಟ್ಟಿಯಾಗಿರದ ಕೃಷಿ ಪಂಪುಗಳಿವೆ. ಕೆಲವೆಡೆ ಪಹಣೀ ಪತ್ರಿಕೆ ಇರುವ ಮಕ್ಕಳ ಹೆಸರಿಗೆ ಬದಲಾಗಿದೆ. ಆದರೆ ಪಂಪು ತೀರಿಕೊಂಡ ತಂದೆ ಹೆಸರಲ್ಲೆ ಇದ್ದರೂ ಎಲ್ಲ ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಆಸ್ತಿ ಜಮೀನು ಕಲಹ ಇದೆ. ನ್ಯಾಯಾಲಯದಲ್ಲಿ ವ್ಯಾಜ್ಯವಿದೆ. ಇಂತಹ ಸಂದಭರ್ಗಳಲ್ಲಿ ಪಂಪನ್ನು ಮೆಸ್ಕಾಂ ಯಾರ ಆಧಾರ್ ಪಡೆದುಕೊಂಡು ದಾಖಲಿಸಿಕೊಳ್ಳುತ್ತದೆ? ಎಂದು ಸಂಘ ಪ್ರಶ್ನಿಸಿದೆ.

ಮೆಸ್ಕಾಂನ ಈ ನಡೆ ಕೃಷಿಕ ಕುಟುಂಬಗಳಲ್ಲಿ ಇನ್ನಷ್ಟು ಕಲಹಕ್ಕೆ ನಾಂದಿ ಹಾಡಲಿದೆ. ಹೀಗಾದರೆ ಕರಾವಳಿ ಜಿಲ್ಲೆಯ ಬಹು ತೇಕ ಕೃಷಿಕರು ಕೃಷಿ ಸಬ್ಸಿಡಿ ಸೌಲಭ್ಯಗಳಿಂದ ವಂಚಿತರಾಗುವುದಲ್ಲದೆ ಕೃಷಿಯಿಂದಲೇ ವಿಮುಖರಾಗಲಿ ದ್ದಾರೆ. ಕೇವಲ ಆಧಾರ್ ನೀಡಿದ ಮಾತ್ರಕ್ಕೆ ಸುಲಭದಲ್ಲಿ ಪಂಪುದಾರರ ಹೆಸರು ಬದಲಾವಣೆ ಆಗುವುದಿಲ್ಲ ಎಂಬುವುದನ್ನು ಕೃಷಿಕರು ತಿಳಿದುಕೊಳ್ಳಬೇಕಿದೆ. ಪಂಪುದಾರರ ಹೆಸರು ಬದಲಾವಣೆಗೆ ಮೆಸ್ಕಾಂನಲ್ಲಿ ಕಠಿಣ ನಿಯಮಗಳಿವೆ. ಮೊದಲು ಹೆಸರು/ಖಾತೆ ಬದಲಾವಣೆಗೆ ಸಾವಿರಾರು ರೂ.ಗಳ ಬಾಂಡ್ ಪೇಪರ್ ನೀಡಲು ಹೇಳಲಾಗುತ್ತದೆ. ಮುಂದೆ ಹೆಸರು, ಖಾತೆ ಬದಲಾವಣೆ ಸಮಯದಲ್ಲಿ ಆ ಪಂಪಿಗೆ ಸಂಬಂಧಿಸಿ ವಿವಿಧ ಠೇವಣಿ ಎಂದು ಮೆಸ್ಕಾಂ ಹೇಳುವ ದುಬಾರಿ ಮೊತ್ತವನ್ನು ಪಾವತಿಸಲೇಬೇಕಿರುತ್ತದೆ.

ಕೃಷಿ ಪಂಪಿಗೆ ಸಂಬಂಧಪಟ್ಟ ಯಾರು ಕೃಷಿ ಮಾಡುತ್ತಿದ್ದಾರೋ ಅವರ ಆಧಾರ್ ಮಾತ್ರ ಪಡೆದುಕೊಂಡು, ಅಡಕ ಗೊಂಡಿರುವ ಸಹಿತ ಯಾವುದೇ ಶುಲ್ಕ ಪಡೆಯದೆ, ನಿಯಮಗಳನ್ನು ಹೇರದೆ ಮೆಸ್ಕಾಂ ಆಧಾರ್ ಜೋಡಣೆ ಮಾಡುವು ದಾದರೆ ಸಂಘವು ಸ್ವಾಗತಿಸುತ್ತದೆ. ಇದರ ಹೊರತು ಈಗಿನ ಪರಿಸ್ಥಿತಿಯಲ್ಲಿ ಕೃಷಿಕರಿಂದ ಮೆಸ್ಕಾಂ ಆಧಾರ್ ಪಡೆಯು ವುದನ್ನು ನಮ್ಮ ಸಂಘವು ವಿರೋಧಿಸುತ್ತದೆ. ಆಧಾರ್ ನೆಪದಲ್ಲಿ ಪಂಪುಗಳ ವಿದ್ಯುತ್ ಕಡಿತಕ್ಕೆ ಮುಂದಾದರೆ ಜಿಲ್ಲೆಯ ಕೃಷಿಕರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News