ಮಂಗಳೂರು: ಸಹಕಾರಿ ಸಂಘಕ್ಕೆ ವಂಚನೆ; ಪ್ರಕರಣ ದಾಖಲು
Update: 2023-09-05 17:53 GMT
ಮಂಗಳೂರು, ಸೆ.5: ಜೆಸಿಬಿ ವಾಹನದ ದಾಖಲೆ ಎಂದು ನಂಬಿಸಿ ಕಾರಿನ ದಾಖಲೆಗಳನ್ನು ಹಾಜರುಪಡಿಸಿ ಸಾಲ ಪಡೆದು ಸಹಕಾರಿ ಸಂಘಕ್ಕೆ ವಂಚಿಸಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿವೆ.
ಪದವು ಗ್ರಾಮದ ಪ್ರೀತಂ ಎಂಬಾತ 2018ರ ಜ.20ರಂದು ನೀರುಮಾರ್ಗದ ಸಹಕಾರಿ ಸಂಘದಲ್ಲಿ ವಾಹನದ ಮೇಲೆ ಸಾಲ ಪಡೆದುಕೊಳ್ಳಲು ಜೆಸಿಬಿ ವಾಹನದ ದಾಖಲೆಗಳನ್ನು ಹಾಜರುಪಡಿಸಿದ್ದ ಎನ್ನಲಾಗಿದೆ. 8 ಲಕ್ಷ ರೂ. ಸಾಲ ಪಡೆದು ಮಾಸಿಕ 13,400 ರೂ. ಕಂತುಗಳನ್ನು 7 ತಿಂಗಳುಗಳ ಕಾಲ ಮರುಪಾವತಿಸಿದ್ದ. ಉಳಿದ ಸಾಲದ ಕಂತುಗಳನ್ನು ಮರುಪಾವತಿಸದೆ ಇದ್ದಾಗ ಸಹಕಾರಿ ಸಂಘದವರು ವಾಹನದ ದಾಖಲೆಗಳನ್ನು ಆರ್‌ಟಿಒ ಕಚೇರಿಯಲ್ಲಿ ಪರಿಶೀಲಿಸಿದರು. ಆಗ ಆರೋಪಿಯು ಸಾಲ ಪಡೆಯುವ ವೇಳೆ ಸಂಘಕ್ಕೆ ಜೆಸಿಬಿ ವಾಹನದ ದಾಖಲೆಗಳೆಂದು ನಂಬಿಸಿ ಇಂಡಿಕಾ ಕಾರಿನ ದಾಖಲೆ ಹಾಜರುಪಡಿಸಿರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.