ಸಾರ್ವಜನಿಕನಿಂದ ಕಸ ವಿಲೇವಾರಿ ಕಾರ್ಮಿಕನಿಗೆ ಹಲ್ಲೆ: ಕರ್ತವ್ಯಕ್ಕೆ ಹಾಜರಾಗದೆ ಕಾರ್ಮಿಕರಿಂದ ಮುಷ್ಕರ
ಸುರತ್ಕಲ್: ಮಂಗಳೂರು ಮಹಾ ನಗರ ಪಾಲಿಕೆಯ ಕಸ ವಿಲೇವಾರಿ ವಾಹನದ ಸಿಬ್ಬಂದಿಗೆ ಸಾರ್ವಜನಿಕರನೋರ್ವ ಶನಿವಾರ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗದೆ ಸುರತ್ಕಲ್ ಸಮುದಾಯ ಆರೋಗ್ಯ ಕೇಂದ್ರದ ಮೈದಾನದಲ್ಲಿ ಧರಣಿ ಆರಂಭಿಸಿದ್ದಾರೆ.
ಹಲ್ಲೆಗೊಳಗಾದವರನ್ನು ರಾಜು ಎಂದು ಗುರುತಿಸಲಾಗಿದ್ದು, ಇವರಿಗೆ ಮುಕ್ಕ ಎರಡನೇ ವಾರ್ಡ್ ಸದಾಶಿವ ನಗರ ಪಡ್ರೆ ದ್ವಾರ ಬಳಿಯ ನಿವಾಸಿ ಕಾರ್ತಿಕ್ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ರಾಜು ಅವರಿಗೆ ಎದೆಯ ಭಾಗಕ್ಕೆ ತುಳಿದಿರುವ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಕಸ ವಿಲೇಚಾರಿ ಸಂದರ್ಭ ಕಸದೊಂದಿಗೆ ಇದ್ದ ಕಬ್ಬಣದ ರಾಡ್ ನ ತುಂಡು ತೆಗೆದಿದ್ದರು. ಬಳಿಕ ಆರೋಪಿ ಕಬ್ಬಿಣದ ರಾಡ್ ನ ತುಂಡು ಕೇಳಿದ್ದು, ರಾಜು ಹಿಂದಿರುಗಿಸಿ ಕಸ ಸರಬರಾಜು ವಾಹನದಲ್ಲಿ ಬರುತ್ತಿದ್ದರು.
ಈ ವೇಳೆ ಆರೋಪಿಯು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಕಸ ವಿಲೇವಾರಿಯ ವಾಹನಕ್ಕೆ ಕಾರನ್ನು ಅಡ್ಡ ಇಟ್ಟು ರಾಜು ಅವರಿಗೆ ಹಲ್ಲೆ ಮಾಡಿದ್ದನು. ಘಟನೆಯಿಂದ ಸಂತ್ರಸ್ತ ರಾಜು ಅವರಿಗೆ ಎದೆಯ ಭಾಗಕ್ಕೆ ಗಾಯಗಳಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯನ್ನು ವಿರೋಧಿಸಿ ಮಹಾನಗರ ಪಾಲಿಕೆಯ ಕಸ ವಿಲೇವಾರಿ ವಾಹನಗಳ ಸುಮಾರು ಸುಮಾರು 300 ಮಂದಿ ಕಾರ್ಮಿಕರು ಇಂದು ಕರ್ತವ್ಯಕ್ಕೆ ಹಾಜರಾಗದೆ ಸುರತ್ಕಲ್ ಸಮುದಾಯ ಆರೋಗ್ಯ ಕೇಂದ್ರದ ಮೈದಾನದಲ್ಲಿ ಸೇರಿ ಪ್ರತಿಭಟನೆ ಆರಂಭಿಸಿದರು.
ಬಳಿಕ ಆರೋಪಿಯ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡ ಪೊಲೀಸರು ಆತನಿಂದ ಮುಚ್ಚಳಿಗೆ ಬರೆಸಿಕೊಂಡು ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಕಾರ್ಮಿಕ ಸಂಘದ ಮುಖಂಡರು ಹಾಗೂ ಆರೋಗ್ಯ ಇಲಾಖೆಯ ಮನವಿಯ ಮೇರೆಗೆ ಕಾರ್ಮಿಕರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದರು.
ಈ ಸಂದರ್ಭ ಹೆಲ್ತ್ ಆಫಿಸರ್ ಮಂಜಯ್ಯ ಶೆಟ್ಟಿ, ಸಫಾಯಿ ಮರ್ಮಚಾರಿ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ, ಆರೋಗ್ಯ ಇಲಾಖೆಯ ಕಿರಣ್, ಅರುಣ್, ರಕ್ಷಿತಾ, ರೋಷನ್, ಶ್ರವಣ್, ಯೊಗೀಶ್, ಚೇತನ್ , ಆ್ಯಂಟನಿ ಸಂಸ್ಥೆಯ ಮ್ಯಾನೇಜರ್ ಅಭಿಲಾಶ್, ಸೂಪರ್ ವೈಸರ್ ಸುಭಾಷ್ ಮೊದಲಾದವರಿದ್ದರು.
"ನಮ್ಮ ಕಾರ್ಯಕರ್ತನಿಗೆ ಕಾರ್ತಿಕ್ ಎಂಬಾತ ಥಳಿಸಿದ್ದ. ಜೊತೆಗೆ ಅಸಂವಿಧಾನಿಕ ಪದಗಳನ್ನು ಬಳಸಿಕೊಂಡು ಬೈದಿದ್ದು, ವಾಹನದ ಚಾಲಕನಿಗೂ ಬೈದಿದ್ದ. ಹೀಗಾಗಿ ಇಂದು ನಮ್ಮ ಕೆಲವನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿ ದ್ದೇವೆ. ಇದರ ಉದ್ದೇಶ ಜನರಿಗೆ ತೊಂದರೆ ನೀಡುವುದಲ್ಲ. ಬದಲಾಗಿ ನಮ್ಮ ಮೇಲೆ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸುವ ಸಲುವಾಹಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಪೊಲೀಸ್ ಠಾಣೆಯಲ್ಲಿ ಆರೋಪಿ ಕಾರ್ತಿಕ್ ಕ್ಷಮಾಪಣೆ ಕೇಳಿ ಬಳಿಕ ಮುಚ್ಚಳಿಗೆ ಬರೆದುಕೊಟ್ಟಿರುತ್ತಾನೆ. ಸದ್ಯ ನಾವು ನಮ್ಮ ಪ್ರತಿಭಟನೆಯನ್ನು ಕೈಬಿಟ್ಟು ಮತ್ತೆ ಕರ್ವ್ಯಕ್ಕೆ ಹಾಜರಾಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹಾ ಕುಕೃತ್ಯಗಳು ಮುಂದುವರಿದರೆ ಉಗ್ರಹೋರಾಟ ಸಂಘಟಿಸಲಾಗುವುದು".
-ನಾರಾಯಣ ಶೆಟ್ಟಿ, ಸಫಾಯಿ ಕರ್ಮಚಾರಿ ಸಂಘದ ಅಧ್ಯಕ್ಷ.
"ಪೌರ ಕಾರ್ಮಿಕರಿಂದ ಯಾವುದೇ ರೀತಿಯ ತೊಂದರೆಗಳಾದರೆ ಕಾನೂನು ಕೈಗೆತ್ತಿಕೊಳ್ಳದೆ, ಸಂಬಂಧ ಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳು 112ಗೆ ಕರೆ ಮಾಡಿ ದೂರು ನೀಡಬಹುದು. ಈ ಕುರಿತಾಗಿ ಸದ್ಯದಲ್ಲೇ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗುವುದು. ಪೌರ ಕಾರ್ಮಿಕರ ರಕ್ಷಣೆಗೆ ಆರೋಗ್ಯ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಸಂಪೂರ್ಣ ಬೆಂಬಲ ನೀಡಲಿದೆ".
ಮಂಜಯ್ಯ ಶೆಟ್ಟಿ, ಆರೋಗ್ಯ ಅಧಿಕಾರಿ ಮನಪಾ