ಹಳೆಯಂಗಡಿ: ಅಕ್ರಮ ಮಾಂಸ ಸಾಗಾಟ; ಓರ್ವ ಪೊಲೀಸ್ ವಶಕ್ಕೆ
Update: 2024-09-15 08:11 GMT
ಹಳೆಯಂಗಡಿ: ಆಟೋ ರಿಕ್ಷಾವೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ದನದ ಮಾಂಸ ಸಹಿತ ಓರ್ವನನ್ನು ಮುಲ್ಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 200 ಕೆ.ಜಿ.ದನದ ಮಾಂಸ ಮತ್ತು ಅದನ್ನು ಸಾಗಾಟ ಮಾಡುತ್ತಿದ್ದ ಆಟೋ ರಿಕ್ಷಾ ಚಾಲಕ ಪಡುಬಿದ್ರಿ ನಿವಾಸಿ ನಝೀರ್ ಎಂಬವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯು ತನ್ನ ಆಟೋ ರಿಕ್ಷಾದಲ್ಲಿ ಪಡುಬಿದ್ರಿಯಿಂದ ಸುರತ್ಕಲ್ ನ ಕೃಷ್ಣಾಪುರದ ಅಂಗಡಿಯೊಂದಕ್ಕೆ ದನದ ಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಹಳೆಯಂಗಡಿ ಬಸ್ ನಿಲ್ದಾಣದ ಬಳಿ ಮುಲ್ಕಿ ಪೊಲೀಸರು ದಾಳಿ ಮಾಡಿ ದನದ ಮಾಂಸ ಸಹಿತ ಆಟೋ ರಿಕ್ಷಾ ಮತ್ತು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡೊದ್ದಾರೆ ಎಂದು ತಿಳಿದು ಬಂದಿದೆ.