ಹಳೆಯಂಗಡಿ: ನಾಪತ್ತೆಯಾದ ವ್ಯಕ್ತಿ ಶವವಾಗಿ ಪತ್ತೆ
ಮುಲ್ಕಿ, ಜು.4: ಕಳೆದ 9 ದಿನಗಳಿಂದ ನಾಪತ್ತೆಯಾದ ವ್ಯಕ್ತಿ ಪಾವಂಜೆ ಬಳಿಯ ರಾಷ್ಟ್ರೀಯ ಹೆದ್ದಾರಿ 66 ಪಕ್ಕದ ಪಾಳುಬಿದ್ದ ಮನೆಯಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿಯನ್ನು ಹಳೆಯಂಗಡಿ ಗ್ರಾಮದ ಪಾವಂಜೆ ಕದ್ರಾತೋಟ ನಿವಾಸಿ ದೇವದಾಸ್ ಕುಲಾಲ್ (52) ಎಂದು ಗುರುತಿಸಲಾಗಿದೆ.
ಇವರು ಜುಲೈ 25ರಂದು ಕದ್ರಾ ತೋಟದ ತನ್ನ ಮನೆಯಿಂದ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿದ್ದರು.
ಗುರುವಾರ ಪಾವಂಜೆ ಪರಿಸರದಲ್ಲಿ ದುರ್ವಾಸನೆ ಬರುತ್ತಿರುವುದನ್ನು ಕಂಡು ಸ್ಥಳೀಯರು ಹುಡುಕಾಡಿದಾಗ ಪಾಳು ಬಿದ್ದ ಮನೆಯೊಳಗೆ ತೀರಾ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಶವ ಪತ್ತೆಯಾದ ಸ್ಥಳದಲ್ಲಿ ಕೀಟನಾಶಕ ಪ್ಯಾಕೆಟ್ ಮತ್ತು ಎರಡು ಪ್ಲಾಸ್ಟಿಕ್ ಬಾಟಲಿಗಳು ಪತ್ತೆಯಾಗಿದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ.
ಅವರ ಪತ್ನಿ ಮತ್ತು ಸಂಬಂಧಿಕರು ದೇವದಾಸ್ ಅವರ ಅಂಗಿ, ಪ್ಯಾಂಟ್ ನಿಂದ ಶವದ ಗುರುತು ಪತ್ತೆ ಹಚ್ಚಿದ್ದು, ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸಾಮಾಜಿಕ ಕಾರ್ಯಕರ್ತರಾದ ಆಪತ್ಬಾಂಧವ ಆಸಿಫ್ ಹಾಗು ಅದ್ದಿ ಬೊಳ್ಳೂರು ಇವರ ಸಹಾಯದಿಂದ ಮೃತ ದೇಹವನ್ನು ಮುಲ್ಕಿ ಸಮುದಾಯ ಆರೋಗ್ಯ ಕೆಂದ್ರದ ಶವಗಾರಕ್ಕೆ ಸಾಗಿಸಲಾಯಿತು.
ಆತ್ಮಹತ್ಯೆಗೆ ಹಣಕಾಸಿನ ಸಮಸ್ಯೆ ಎಂದು ತಿಳಿದು ಬಂದಿದ್ದು ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.