ಹಳೆಯಂಗಡಿ: ರಿಲಯನ್ಸ್ ಅಸೋಸಿಯೇಶನ್ ನಿಂದ ಟೈಕ್ವೋಂಡೊ ತರಬೇತಿಗೆ ಚಾಲನೆ
ಹಳೆಯಂಗಡಿ: ರಿಲಯನ್ಸ್ ಅಸೋಸಿಯೇಶನ್ (ರಿ.) ಬೊಳ್ಳೂರು, ಮಂಗಳೂರಿನ ಮ್ಯಾಕ್ಸ್ ಫಿಟ್ ನೆಸ್ ಸಹಯೋಗದೊಂದಿಗೆ ಪ್ರಸ್ತುತಪಡಿಸಿರುವ ಟೈಕ್ವೊಂಡೋ ತರಬೇತಿಯ ಉದ್ಘಾಟನಾ ಸಮಾರಂಭವು ಇಂದಿರಾನಗರದ ರಿಲಯನ್ಸ್ ಭವನದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಿಲಯನ್ಸ್ ಅಸೋಸಿಯೇಶನ್ ಅಧ್ಯಕ್ಷ ಕಲಂದರ್ ಕೌಶಿಕ್, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದು ಮಕ್ಕಳ ಮಾನಸಿಕ ಹಾಗೂ ಶಾರೀರಿಕ ವಿಕಸನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವಂತೆ ಮಾಡಿ ಅವರ ವ್ಯಕ್ತಿತ್ವವನ್ನು ವಿಕಸನಗೊಳಿಸಬೇಕಾಗಿರುವುದು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಟೈಕ್ವೋಂಡೊ, ಕರಾಟೆ ಕೇವಲ ಆತ್ಮ ರಕ್ಷಣಾ ಕಲೆಯಾಗಿರದೇ, ಅವು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಪ್ರಬಲ ಅಸ್ತ್ರವೂ ಆಗಿದೆ. ಶಿಕ್ಷಣದ ಜೊತೆಗೆ ಇಂತಹ ಕಲೆಗಳು ಮಕ್ಕಳ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿಯೂ ಪೋಷಕರು ಆಲೋಚನೆ ನಡೆಸಬೇಕಾಗಿದೆ ಎಂದು ಮ್ಯಾಕ್ಸ್ ಫಿಟ್ನೆಸ್ ತರಬೇತುದಾರರಾದ ಆಸಿಫ್ ಕಿನ್ಯಾ ಹೇಳಿದರು.
ವೇದಿಕೆಯಲ್ಲಿ ಮ್ಯಾಕ್ಸ್ ಫಿಟ್ನೆಸ್ ಇದರ ಸಹ ತರಬೇತುದಾರರಾದ ಸವಾದ್ ಕಿನ್ಯಾ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಅಝೀಝ್ ಐ.ಎ.ಕೆ, ರಿಲಯನ್ಸ್ ಅಸೋಸಿಯೇಶನ್ ಪ್ರ.ಕಾರ್ಯದರ್ಶಿ ಮುಬಾರಕ್ ಬೊಳ್ಳೂರು ಹಾಗೂ ಲೆಕ್ಕ ಪರಿಶೋಧಕರಾದ ಅಕ್ಬರ್ ಬೊಳ್ಳೂರು ಉಪಸ್ಥಿತರಿದ್ದರು.
ಇದೇ ಸಂದರ್ಭ ವಿದೇಶಿ ಯಾತ್ರೆ ಕೈಗೊಂಡಿರುವ ರಿಲಯನ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷರಾದ ಸಿದ್ದಿಕ್ ಬೊಳ್ಳೂರು ಮತ್ತು ಮಾಜಿ ಕಾರ್ಯದರ್ಶಿ ಫಾರೂಕ್ ನವರಂಗ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಸಂಸ್ಥೆಯ ಸಲಹೆಗಾರರಾದ ಆರಿಶ್ ನವರಂಗ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಿಯಾಝ್ ಅಲ್ ಅಕ್ಸ ವಂದಿಸಿದರು.