ಐವನ್ ಡಿಸೋಜ ಕುಟುಂಬದಿಂದ ಮನೆ ಹಸ್ತಾಂತರ
ಪಡುಬಿದ್ರಿ: ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮೈಕಲ್ ರಮೇಶ್ ಡಿಸೋಜರವರು ತಮ್ಮ ಹೆತ್ತವರಾದ ದಿ. ಸಿಂಪ್ರಿಯನ್ ಮತ್ತು ಲಿಲ್ಲಿ ಡಿಸೋಜ ದಂಪತಿಗಳ ಸ್ಮರಣಾರ್ಥ ಸುರೇಖಾ ಆಚಾರ್ಯ ಅವರಿಗೆ ಮನೆಯೊಂದನ್ನು ನಿರ್ಮಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವಿದ್ಯಾನಗರ ಅಂಗನವಾಡಿ ರಸ್ತೆಯ ಬಳಿಯ ನಿವಾಸಿಯಾಗರುವ ಸುರೇಖ ಆಚಾರ್ಯ ಅವರು ಗಂಡ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅವರ ತಾಯಿ ಸೇರಿ ಒಟ್ಟು ಐದು ಮಂದಿ ವಾಸ್ತವ್ಯ ಹೂಡಿದ್ದರು. ಸುರೇಖಾ ಆಚಾರ್ಯ ಅವರ ಮನೆ ಪರಿಸ್ಥಿತಿಯನ್ನು ಗಮನಿಸಿದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮೈಕಲ್ ರಮೇಶ್ ಡಿಸೋಜ ನಿವೇಶನದ ಹಕ್ಕುಪತ್ರವನ್ನು ಕೊಡಿಸುವಲ್ಲಿ ಯಶಸ್ವಿಯಾದರು. ಆ ಬಳಿಕ ಅವರ ಮನೆಯು ವಾಸಕ್ಕೆ ಯೋಗ್ಯವಲ್ಲದೆ ಇರುವುದರಿಂದ ತನ್ನ ಸಹೋದರ ಐವನ್ ಡಿಸೋಜ ಬಳಿ ಮನೆ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದರು. ಐವನ್ ಡಿಸೋಜ ಮತ್ತು ರಮೇಶ್ ಅವರು ತಮ್ಮ ಹೆತ್ತವರ ಸ್ಮರಣಾರ್ಥ ಆರು ಲಕ್ಷ ರೂ. ವೆಚ್ಚದ ಮನೆ ನಿರ್ಮಿಸಿದರು. ರವಿವಾರ ಈ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಮನೆ ಹಸ್ತಾಂತರಿಸಿ ಮಾತನಾಡಿದ ಐವನ್ ಡಿಸೋಜ, ಜನರ ಕಷ್ಟ ಅರಿತು ಅದನ್ನು ಪರಿಹರಿಸುವ ಗುಣ ಎಲ್ಲರಿಗೂ ಬರುವುದಿಲ್ಲ. ಧರ್ಮ, ಜಾತಿ ಮುಖ್ಯವಲ್ಲ ಸಹಾಯದ ನಿರೀಕ್ಷೆಯಲ್ಲಿರುವ ಜನರಿಗೆ ಉಪಕಾರ ಮಾಡಿದಾಗ ಮಾತ್ರ ದೇವರು ಮೆಚ್ಚುವನು ಎಂದರು.
ಮುದರಂಗಡಿ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‍ನ ಧರ್ಮಗುರು ಫೆಡ್ರಿಕ್ ಡಿಸೋಜ ಮಾತನಾಡಿ, ವಸತಿ ಮಾನವನ ಜೀವನದ ಮುಖ್ಯ ವಿಷಯ. ಸ್ವಂತ ಮನೆ ಹಲವರ ಕನಸು. ಬೇರೆಯವರ ಕನಸು ನನಸು ಮಾಡುವವರು ವಿರಳ. ಮೈಕಲ್ ಡಿಸೋಜ ಈ ಕಾರ್ಯ ಮಾಡಿದ್ದಾರೆ. ಆದರೆ ತಂದೆ ತಾಯಿ ಹಾಕಿದ ಸಮಾಜಮುಖಿ ಚಿಂತನೆಯನ್ನು ಮುಂದುವರೆಸಿ ಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಧನಸಹಾಯ : ಕಂಪೋರ್ಶನೇಟ್ ಫ್ರೆಂಡ್ಸ್ ಅಸೋಸಿಯೇಷನ್ ಮುದರಂಗಡಿ ವತಿಯಿಂದ ಕ್ಯಾನ್ಸರ್ ಪೀಡಿತ ವ್ಯಕ್ತಿಯೋ ರ್ವರಿಗೆ 25 ಸಾವಿರ ರೂಪಾಯಿ ಧನ ಸಹಾಯ ನೀಡಲಾಯಿತು. ಮೈಕಲ್ ರಮೇಶ್ ಡಿಸೋಜ ವತಿಯಿಂದ ಸುರೇಖ ಆಚಾರ್ಯರ ಪುತ್ರಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಸಮಾಜ ಸೇವಕ ಸಾಯಿನಾಥ್ ಶೆಟ್ಟಿ ಅಬ್ಬೆಟ್ಟು ಗುತ್ತು ಕುತ್ಯಾರು, ಸರಕಾರಿ ಪದವಿಪೂರ್ವ ಕಾಲೇಜು ಮುಚ್ಚೂರಿನ ಪ್ರಾಂಶುಪಾಲ ರಘುನಾಥ್ ನಾಯಕ್, ಶಿರ್ವ ರೋಟರಿ ಮಾಜಿ ಅಧ್ಯಕ್ಷ ವಿಠ್ಠಲ್ ನಾಯಕ್, ಉಡುಪಿ ತಾಲೂಕು ಪಂಚಾ ಯತ್ ಮಾಜಿ ಅಧ್ಯಕ್ಷೆ ಅನಿತಾ ಡಿಸೋಜ, ಎಲ್ಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಯುಸಿ ಶೇಖಬ್ಬ, ಮೈಕಲ್ ರಮೇಶ್ ಡಿಸೋಜ, ಗ್ಲಾಡಿಸ್ ಐಡಾ ಡಿಸೋಜ ಉಪಸ್ಥಿತರಿ ದ್ದರು. ಮೈಕಲ್ ರಮೇಶ್ ಡಿಸೋಜ ಸ್ವಾಗತಿಸಿ, ಪ್ರಸ್ತಾವನೆಗೈದರು. ಸುಧಾಕರ ಶೆಣೈ ಪಿಲಾರು ನಿರೂಪಿಸಿ, ವಂದಿಸಿದರು.