ಅಧಿಕಾರಿಗಳಿಂದ ಕಿರುಕುಳ ಆರೋಪ: ಎಂಆರ್‌ಪಿಎಲ್ ನೌಕರರಿಂದ ಪ್ರತಿಭಟನೆ
ಸುರತ್ಕಲ್: ಎಂಆರ್‌ಪಿಎಲ್ ನಲ್ಲಿ ಸುಮಾರು 25 ವರ್ಷಗಳಿಂದ ದುಡಿಯುತ್ತಿರುವ ಸ್ಥಳೀಯ ಗುತ್ತಿಗೆ ಕಾರ್ಮಿಕರಿಗೆ ಅಧಿಕಾರಿಗಳು ತಪಾಸಣೆ ನೆಪದಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ನೌಕರರು ಗೇಟ್ ಎದುರು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಎಂಆರ್‌ಪಿಎಲ್ ಜೋಕಟ್ಟೆ ಗೇಟಿನ ಬಳಿ ವರದಿಯಾಗಿದೆ.
ಸುಮಾರು 500ಕ್ಕೂ ಹೆಚ್ಚಿನ ಗುತ್ತಿಗೆ ನೌಕರರರು ಸಂಸ್ಥೆಯ ಒಳಗೆ ಹೋಗುವಾಗ ಅಲ್ಲಿನ ಅಧಿಕಾರಿಗಳು ಎಂದಿನಂತೆ ತೊಂದರೆ ನೀಡತೊಡಗಿದರು. ಇಂದು "ಪಾಸ್ ಸರಿ ಇಲ್ಲʼ ಎಂದು ತಗಾದೆ ತೆಗೆದ ಅಧಿಕಾರಿಗಳು, ಕಾರ್ಮಿಕರನ್ನು ತಡೆ ದರು. ಉತ್ತರ ಭಾರರತದ ನೌಕರರು ಎಂಆರ್‌ಪಿಎಲ್ ನ ಯಾವುದೇ ಗೇಟ್‌ನಲ್ಲಿ ಕಂಪೆನಿಗೆ ಹಾಜರಾಗಬಹುದು. ಆದರೆ, ನಿವೇಶನ ನೀಡಿ ಪರಿಹಾರದ ನೆಲೆಯಲ್ಲಿ ನೌಕರಿ ಪಡೆದುಕೊಂಡಿರುವ ಸ್ಥಳೀಯರು ಮುಖ್ಯ ದ್ವಾರದಲ್ಲೇ ಪ್ರವೇಶಿಸಬೇಕಿದೆ. ಅಧಿಕಾರಿಗಳು ಸ್ಥಳೀಯ ನೌಕರರಿಗೆ ದಿನಕ್ಕೊಂದರಂತೆ ಹೊಸ ಹೊಸ ಕಾನೂನುಗಳನ್ನು ತರಲು ಯತ್ನಿಸುತ್ತಿದ್ದು, ಇದು ಸ್ಥಳೀಯರನ್ನು ಕಂಪೆನಿಯಿಂದ ಹೊರದಬ್ಬುವ ಹುನ್ನಾರದ ಭಾಗ ಎಂದು ಪ್ರತಿಭಟನಾ ನಿರತ ನೌಕರರು ಆಕ್ರೋಶ ವ್ಯಕ್ತ ಪಡಿಸಿದರು.
ತಿಂಗಳ ಸಂಬಳ 21ಸಾವಿರ ರೂ. ಕ್ಕಿಂತ ಹೆಚ್ಚಾಗಿದ್ದರೆ, ಅಂತಹಾ ಸ್ಥಳೀಯ ನೌಕರರಿಗೆ ಆರೋಗ್ಯ ಭದ್ರತೆ ನೀಡುತ್ತಿಲ್ಲ. ಕಂಪೆನಿಯ ಕೆಲವೊಂದು ಕಾನೂನು ಗುತ್ತಿಗೆ ಕಾರ್ಮಿಕರಿಗೆ ತುಂಬಾ ಸಮಸ್ಯೆ ಉಂಟು ಮಾಡುತ್ತಿದೆ. ಕಂಪೆನಿ ಮತ್ತು ಗುತ್ತಿಗೆ ನೌಕರರ ಮುಖಂಡರು ಸರಿಯಾದ ವ್ಯವಸ್ಥೆ ಕಲ್ಪಿಸದೇ ಈ ರೀತಿಯ ಗೊಂದಲ ಸೃಷ್ಟಿಯಾಗುತ್ತಿದೆ. ಜಮೀನು ಕೊಟ್ಟು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆರೋಗ್ಯ ಭದ್ರತೆಯೂ ಇಲ್ಲ ಎಂದು ಪ್ರತಿಭಟನಾ ನಿರತರು ದೂರಿದರು.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕರ್ಮಚಾರಿ ಸಂಘದ ಮುಖಂಡ ನಿತಿನ್ ಬಿಸಿರೋಡ್, ಎಂಆರ್ಪಿಎಲ್ ಅಧಿಕಾರಿ ಗಳೊಂದಿಗೆ ಮಾತುಕತೆ ನಡೆಸಿ ಕಂಪೆನಿ ವಿಧಿಸಿದ್ದ ಹೊಸ ಕಾನೂನುಗಳನ್ನು ಹಿಂಪಡೆಯುವಂತೆ ಮನವಿ ಮಾಡಿ ಕೊಂಡರು. ಇಲ್ಲವಾದರೆ ಇನ್ನಷ್ಟು ನೌಕರರನ್ನು ಕರೆತಂದು ಗೇಟ್ ಮುಂಭಾಗದಲ್ಲಿ ನಿರಂತರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಅಧಿಕಾರಿಗಳು ನೌಕರರನ್ನು ಗೇಟಿನ ಒಳಗೆ ಬಿಡುವ ಮೂಲಕ ಸಮಸ್ಯೆಯನ್ನು ಇಥ್ಯರ್ಥ ಪಡಿಸಿದರು ಎಂದು ತಿಳಿದು ಬಂದಿದೆ.
ಎಂಆರ್‌ಪಿಎಲ್ ನಲ್ಲಿ ಕೆಲಸ ಮಾಡುವ ಸ್ಥಳೀಯ ಗುತ್ತಿಗೆ ನೌಕರರಿಗೆ ಆರೋಗ್ಯ ವಿಮೆ, ಉಚಿತ ವೈದ್ಯಕೀಯ ಸೌಲಭ್ಯ ಗಳನ್ನು ಕಂಪೆನಿಯಿಂದ ನೀಡಲಾಗುತ್ತಿಲ್ಲ. ಈ ಬಗ್ಗೆ ಸಂಸದ ಬೃಜೇಶ್ ಚೌಟ, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಸೇರಿದಂತೆ ಕೇಂದ್ರದ ಸಚಿವರುಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಶಿಘ್ರ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
- ನಿತಿನ್ ಬಿಸಿರೋಡ್, ಕರ್ಮಚಾರಿ ಸಂಘದ ಮುಖಂಡ.