ಆರೋಗ್ಯ ಇಲಾಖೆಯ ಸಿಬ್ಬಂದಿ ಕೊರತೆ ಇತ್ಯರ್ಥ: ದಿನೇಶ್ ಗುಂಡೂರಾವ್

Update: 2023-12-02 13:33 GMT

ಮಂಗಳೂರು: ಆರೋಗ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯನ್ನು ಹಂತ ಹಂತವಾಗಿ ನಿವಾರಿಸಲು ಮುಂದಾಗಿದ್ದು, ಪ್ರಥಮ ಹಂತದಲ್ಲಿ 800 ಸಿಬ್ಬಂದಿಯನ್ನು ಕೆಪಿಎಸ್‌ಸಿ ಮೂಲಕ ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ದ.ಕ. ವತಿಯಿಂದ ಸರಕಾರಿ ಆಯುಷ್ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಲಾದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಹಾಗೂ ಎಂಆರ್‌ಪಿಎಲ್ ಸಂಸ್ಥೆ ಕೊಡುಗೆ ನೀಡಿದ ವಿವಿಧ ಸೌಲಭ್ಯಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ದೇಶದ ಮೊದಲ ಆಯುಷ್ ಸ್ಪೋರ್ಟ್ಸ್ ಮೆಡಿಸಿನ್ ಆ್ಯಂಡ್ ರಿಸರ್ಚ್ ಸೆಂಟರ್ ಮಂಗಳೂರಿಗೆ ಮಂಜೂರಾಗಿದ್ದು, ಆ ಕೇಂದ್ರ ಆರಂಭಿಸಲು ಬೇಕಾದ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಿ, ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾ ಗುವುದು ಎಂದವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ಈ ವರ್ಷ ಸಂಚಾರಿ ಆಯುಷ್ ಘಟಕ ಆರಂಭಿಸುವ ಮೂಲಕ ಆಯುಷ್ ಚಿಕಿತ್ಸಾ ಪದ್ಧತಿ ಎಲ್ಲಾ ಮನೆಗಳಿಗೂ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾ ಗುವುದು. ಈ ಘಟಕವು ಒಬ್ಬ ವೈದ್ಯರು ಮತ್ತು ಮಲ್ಟಿ ಪರ್ಪಸ್ ವರ್ಕರ್ ಹಾಗೂ ಔಷಧಿ ಇರಲಿದ್ದು, ತಾಲೂಕಿನ 8 ಗ್ರಾಮಗಳನ್ನು ರೊಟೇಶನ್ ಮಾದರಿಯಲ್ಲಿ ಈ ವಾಹನ ತಲುಪಲಿದೆ ಎಂದರು.

ಮಂಗಳೂರಿನ ಆಯುಷ್ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್, ಫಿಸಿಯೋಥೆರಪಿ ವಿಭಾಗ, ಪ್ರಯೋಗಾಲಯ ಸೇರಿ ದಂತೆ ಮೂಲಭೂತ ವ್ಯವಸ್ಥೆಗಳು ಸುಸಜ್ಜಿತ ರೀತಿಯಲ್ಲಿ ನಿರ್ಮಾಣಗೊಂಡಿದೆ. ದೇಸಿಯ ಸಾಂಪ್ರದಾಯಿಕ ಪದ್ಧತಿ, ಚಿಕಿತ್ಸೆಯನ್ನು ಮೇಲ್ದರ್ಜೆಗೇರಿಸಬೇಕು, ಈ ಚಿಕಿತ್ಸಾ ಪದ್ಧತಿಯಲ್ಲಿ ಮತ್ತಷ್ಟು ಆವಿಷ್ಕಾರಗಳು ನಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದಲೂ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಮಹಮ್ಮದ್ ಇಕ್ಬಾಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಆಯುಷ್ ಆಸ್ಪತ್ರೆ ಯಲ್ಲಿ ಸುಸಜ್ಜಿತ ಶಸ್ತ್ರಚಿಕಿತ್ಸಾ ವಿಭಾಗವನ್ನು ಆರಂಭಿಸಲಾಗುತ್ತಿದೆ. ಖಾಸಗಿ ಹಾಗೂ ಸರಕಾರಿ ಆಯುರ್ವೇದ ಶಸ್ತ್ರಚಿಕಿತ್ಸಾ ತಜ್ಞರ ಸೇವೆಯನ್ನು ಬಳಸಿಕೊಳ್ಳಲಾಗುವುದು. ರೋಗಿಗಳಿಗೆ ಆಯುರ್ವೇದದ ಕ್ಷಾರ ಸೂತ್ರ, ಅಗ್ನಿಕರ್ಮ, ಶಸ್ತ್ರಚಿಕಿತ್ಸೆ, ಭಗಂದರ, ಪಿಸ್ತುಲಾ, ಮೂಲವ್ಯಾಧಿಗಳಿಗೆ ಶಸ್ತ್ರಚಿಕಿತ್ಸೆ, ವಾಸಿಯಾಗದ ಗಾಯಗಳ ಚಿಕಿತ್ಸೆ ಮಧುಮೇಹಿಗಳ ವೃಣಚಿಕಿತ್ಸೆ, ಮಧುಮೇಹಿಗಳಿಗೆ ಪಾದದ ಆರೈಕೆ, ಮುಂತಾದ ವ್ಯಾಧಿಗಳಿಗೆ ಆಯುರ್ವೇದ ಶಸ್ತ್ರಚಿಕಿತ್ಸೆ, ಹಿಜಾಮರೆಜಿಮಿನಲ್ ಥೆರಪಿ ಮುಂತಾದವುಗಳನ್ನು ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಒದಗಿಸಲಾಗುವುದು. ವಾತ ರೋಗ, ಪಕ್ಷಾಘಾತ ಮುಂತಾದ ರೋಗಗಳ ಚಿಕಿತ್ಸೆಗೆ ಸುಸಜ್ಜಿತ ಪಿಸಿಯೋಥೆರಪಿ ಕೇಂದ್ರವನ್ನು ಆರಂಭಿಸಲಾಗುವುದು. ರೋಗಿಗಳಿಗೆ ಎಲ್ಲಾ ರೀತಿಯ ರಕ್ತತಪಾಸಣೆಗೆ ಆಧುನಿಕ ಪ್ರಯೋಗಾಲಯ ವ್ಯವಸ್ಥೆ ಇದೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಳೀಯ ಮನಪಾ ಸದಸ್ಯ ಎ.ಸಿ. ವಿನಯರಾಜ್, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಮನಪಾ ಸದಸ್ಯರಾದ ಅನಿಲ್ ಕುಮಾರ್, ಸಂಶುದ್ದೀನ್, ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ್, ವೆನ್ಲಾಕ್ ಡಿಎಂಒ ಜೆಸಿಂತ, ಎಂಆರ್‌ಪಿಎಲ್ ನಿಯೋಜಿತ ಆಡಳಿತ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ಸಹಿತ ವಿವಿಧ ಅಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News