ಒಂಟಿಯಾಗಿ ವಾಸವಾಗಿರುವ ಹಿರಿಯ ನಾಗರಿಕರ ಆರೋಗ್ಯ ವಿಚಾರಣೆ : ಕಮಿಷನರ್ ಕುಲದೀಪ್ ಕುಮಾರ್ ಜೈನ್

Update: 2023-08-05 13:27 GMT

ಮಂಗಳೂರು: ಮಂಗಳೂರು ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಂಟಿಯಾಗಿ ವಾಸವಾಗಿರುವ ಹಿರಿಯ ನಾಗರಿಕರ ಮನೆಗಳಿಗೆ ಪೊಲೀಸರು ಆ.6ರಂದು ಭೇಟಿಯಾಗಿ ಅವರ ಆರೋಗ್ಯವನ್ನು ವಿಚಾರಿಸಲಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ತಿಳಿಸಿದ್ದಾರೆ.

ಅವರು ಶನಿವಾರ ತಮ್ಮ ಕಚೇರಿಯಲ್ಲಿ ಪೊಲೀಸ್ ಫೋನ್-ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಂಗಳೂರು ಕಮಿಷನರೇಟ್‌ನ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಎಷ್ಟು ಮನೆಗಳಲ್ಲಿ ಹಿರಿಯ ನಾಗರಿಕರು ಒಂಟಿ ಯಾಗಿ ಜೀವನ ನಡೆಸುತ್ತಿದ್ದಾರೆ ಎನ್ನುವುದನ್ನು ಪೊಲೀಸರ ತಂಡ ಈಗಾಗಲೇ ಮಾಹಿತಿ ಕಲೆ ಹಾಕಿದ್ದು, ಅವರ ಯೋಗ ಕ್ಷೇಮವನ್ನು ವಿಚಾರಿಸಿ ಅವರಿಗೆ ಅಗತ್ಯದ ವೈದ್ಯಕೀಯ ನೆರವು ಕಲ್ಪಿಸುವ ನಿಟ್ಟಿನಲ್ಲಿ ಯೋಚಿಸಲಾಗುವುದು ಎಂದು ಅವರು ಹೇಳಿದರು.

ಮೀಟರ್ ಅಳವಡಿಸದೆ ಅಧಿಕ ಶುಲ್ಕ ವಸೂಲಿ ಮಾಡುವ ಆಟೋ ರಿಕ್ಷಾಗಳು, ಬಸ್‌ಗಳು ನಿಗದಿತ ರೂಟ್‌ಗಳನ್ನು ಬಿಟ್ಟು ಬೇರೆ ರೂಟ್‌ಗಳಲ್ಲಿ ಸಂಚರಿಸುತ್ತಿರುವುದು .ಬಸ್‌ನಲ್ಲಿ ಲೌಡ್ ಸ್ಪೀಕರ್‌ನಲ್ಲಿ ಮ್ಯೂಸಿಕ್ ಅಳವಡಿಕೆ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರು ಸಾರ್ವಜನಿಕರಿಂದ 33 ಕರೆಗಳನ್ನು ಸ್ವೀಕರಿಸಿದರು. ಹಿರಿಯರು ಮತ್ತು ಮಕ್ಕಳಿಗೆ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮದ ಅಗತ್ಯವಿದೆ ಎಂದು ಹಿರಿಯರೊಬ್ಬರು ಸಲಹೆ ನೀಡಿದರು.

ನಗರದಾದ್ಯಂತ ಹಲವಾರು ಕರೆಗಳು ಆಟೋ ಚಾಲಕರು ಹೆಚ್ಚಿನ ಶುಲ್ಕವನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದರು, ಆತ್ಮಹತ್ಯೆ, ನೀರಿನಲ್ಲಿ ಮುಳುಗಿ ಸಾವು ಮತ್ತು ಇತರ ಕಾರಣಗಳಿಂದ ಅಸಹಜ ಸಾವುಗಳ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, 600 ಕ್ಕೂ ಹೆಚ್ಚು ಅಸಹಜ ಸಾವಿನ ಪ್ರಕರಣಗಳು ಈಗಾಗಲೇ ದಾಖಲಾಗಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಜೀಬ್ರಾ ಕ್ರಾಸಿಂಗ್ ಸ್ಪಾಟ್‌ಗಳಿಗೆ ಬಣ್ಣ ಬಳಿಯಲು ಎನ್‌ಎಚ್‌ಎಐ ಮತ್ತು ಮಂಗಳೂರು ಸಿಟಿ ಕಾರ್ಪೊರೇಷನ್‌ಗೆ ಪತ್ರ ಬರೆಯಲಾಗುವುದು ಮತ್ತು ಮೀಟರ್ ಅಳವಡಿಸದೆ ಅಧಿಕ ಶುಲ್ಕ ವಸೂಲಿ ಮಾಡುವ ಆಟೋ ರಿಕ್ಷಾಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರ್‌ಟಿಒಗೆ ತಿಳಿಸಲಾಗುವುದು ಎಂದು ಕುಲದೀಪ್ ಜೈನ್ ಹೇಳಿದರು.

ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್, ಸಂಚಾರ ಎಸಿಪಿ ಗೀತಾ ಕುಲಕರ್ಣಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News