ತಪ್ಪು ಮಾಡದೆಯೂ ನಮಗೆ ಅನ್ಯಾಯವಾದರೆ ಚಿತ್ರ ತಂಡದ ಜೊತೆ ನಾನಿದ್ದೇನೆ: ವಿಜಯ್ ಕುಮಾರ್ ಕೊಡಿಯಾಲ್ ಬೈಲ್
ಮಂಗಳೂರು: ಹಿಮಾನಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಸುಮನ್ ಸುವರ್ಣ ನಿರ್ದೇಶನದಲ್ಲಿ ಶರತ್ ಕುಮಾರ್ ಎ.ಕೆ. ನಿರ್ಮಾಣದಲ್ಲಿ ತಯಾರಾದ “ಕಲ್ಜಿಗ” ಸಿನಿಮಾ ಶುಕ್ರವಾರ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ತೆರೆಕಂಡಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ಹಿರಿಯ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಕಲ್ಜಿಗ ಸಿನಿಮಾ ಕುರಿತು ಟೀಕೆ ಟಿಪ್ಪಣಿ ಬರುತ್ತಿದೆ. ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ. ಸಿನಿಮಾ ನೋಡಿದವರು ನಮ್ಮ ತುಳುನಾಡಿನ ದೈವಗಳ ಕಾರಣಿಕವನ್ನು ಚೆನ್ನಾಗಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಪ್ರಕಾರ ಸಿನಿಮಾದಲ್ಲಿ ದೈವಾರಾಧನೆಗೆ ಎಲ್ಲೂ ಅಪಚಾರ ಆಗಿರಲಿಕ್ಕಿಲ್ಲ. ನಾವು ತಪ್ಪು ಮಾಡದೆಯೂ ನಮಗೆ ಅನ್ಯಾಯವಾಗುವುದಾದರೆ ನಾನು ಚಿತ್ರತಂಡದ ಜೊತೆಗೆ ಇದ್ದೇನೆ“ ಎಂದರು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತಾಡಿ, “ಅರ್ಜುನ್ ಕಾಪಿಕಾಡ್ ಅವರು ಅಭಿನಯಿಸಿದ ಸಿನಿಮಾದಲ್ಲಿ ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕೆಲಸ ನಡೆದಿದೆ. ತುಳುನಾಡಿನ ದೈವಗಳ ಪವಾಡವನ್ನು ತೋರಿಸಲಾಗಿದೆ. ನಾವೆಲ್ಲರೂ ಸಿನಿಮಾ ನೋಡಿ ಬೆಂಬಲಿಸಬೇಕು” ಎಂದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಪ್ರಕಾಶ್ ಧರ್ಮನಗರ, ತಮ್ಮ ಲಕ್ಷ್ಮಣ, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ನಟ ಅರ್ಜುನ್ ಕಾಪಿಕಾಡ್, ನಿರ್ಮಾಪಕ ಶರತ್ ಕುಮಾರ್ ಎ.ಕೆ., ನಿರ್ದೇಶಕ ಸುಮನ್ ಸುವರ್ಣಮತ್ತಿತರರು ಉಪಸ್ಥಿತರಿದ್ದರು.