ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳ ಕಳವಳಕಾರಿ: ಸಚಿವ ದಿನೇಶ್ ಗುಂಡೂರಾವ್

Update: 2024-08-15 15:50 GMT

ಮಂಗಳೂರು: ರಾಜ್ಯದಲ್ಲಿ ಕಳೆದ 5 ವರ್ಷದಿಂದ ಈಚೆಗೆ ಸೈಬರ್ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದೆ. ಅದರಲ್ಲೂ ಶೇ.20ರಷ್ಟು ಸೈಬರ್ ಅಪರಾಧಗಳಾಗಿರುವುದು ಕಳವಳಕಾರಿ ವಿಚಾರವಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಗುರುವಾರ ನಗರದ ಖಾಸಗಿ ಸಭಾಂಗಣದಲ್ಲಿ ನಡೆದ ಸೈಬರ್ ಅಪರಾಧ ಜಾಗೃತಿ ಜಾಥಾದ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಕಾಲಘಟ್ಟದಲ್ಲಿ ಸೈಬರ್ ಅಪರಾಧಗಳು ಪ್ರಮುಖ ಅಪರಾಧವಾಗಿ ಪರಿಣಮಿಸಿದೆ. ಇದರಲ್ಲಿ ಸುಶಿಕ್ಷಿತರು, ಬುದ್ಧಿವಂತರು ಅಧಿಕ ಸಂಖ್ಯೆಯಲ್ಲಿ ಬಲಿಪಶುಗಳಾಗುತ್ತಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಯಲ್ಲಿ ಕೇವಲ 1 ವರ್ಷದಲ್ಲಿ 11 ಕೋ.ರೂ.ಗೂ ಅಧಿಕ ಮೌಲ್ಯವು ಸೈಬರ್ ವಂಚಕರ ಪಾಲಾಗಿದೆ. ಹಾಗಾಗಿ ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಓಷಿಯನ್ ಪರ್ಲ್ ಉಪಾಧ್ಯಕ್ಷ ಬಿ.ಎನ್.ಗಿರೀಶ್, ರೋಹನ್ ಕಾರ್ಪೊರೇಷನ್ ಪ್ರೊಪ್ರೈಟರ್ ರೋಹನ್ ಮೊಂತೇರೊ, ಫಾರೆನ್ಸಿಕ್ ತಜ್ಞ ಡಾ. ಮಹಾಬಲ ಶೆಟ್ಟಿ, ಸೈಬರ್ ತಜ್ಞ ಅನಂತ್ ಪ್ರಭು, ಎನ್‌ಐಟಿಕೆ ಕಂಪ್ಯೂಟರ್ ವಿಭಾಗದ ಸಹಪ್ರಾಧ್ಯಾಪಕ ತೈಲಿಯಾನಿ, ಕಣಚೂರು ಶಿಕ್ಷಣ ಸಂಸ್ಥೆಯ ಅಬ್ದುಲ್ ರೆಹಮಾನ್, ಕೋಸ್ಟ್‌ಗಾರ್ಡ್ ಡಿಐಜಿ ಪಿ.ಕೆ. ಮಿಶ್ರಾ, ಯುನಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಹಬೀಬ್ ರೆಹಮಾನ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಸಿಎಆರ್ ಡಿಸಿಪಿ ಉಮೇಶ್ ಉಪಸ್ಥಿತರಿದ್ದರು.

*ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ನಡೆದ ಸೈಬರ್ ಅಪರಾಧ ಜಾಗೃತಿ ವಿಡಿಯೋ ಸ್ಪರ್ಧೆಯಲ್ಲಿ ಗೆದ್ದ ರೋಲ್‌ವಿನ್, ಸಂಪತ್ ಕುಮಾರ್‌ರೈ, ಅಯೇಷಾ ಸಾಬಾ, ರಾಯ್‌ಸ್ಟನ್ ಜೋವಿನ್ ಡಿಕುನ್ಹಾ, ಶೋಧನಾ ಡಿ.ಕೆ., ಸಾಹಿನಾ ಮತ್ತು ತಂಡ, ಶಶಿಕಾಂತ್ ಆರ್. ಕೋಟ್, ನಾಗೇಶ್ ಕಾಮತ್, ಸಾಧನ್ ರೈ ಅವರಿಗೆ ಬಹುಮಾನ ವಿತರಿಸಲಾಯಿತು.

ಕ್ರಿಮಿನಲ್‌ಗಳು ಸೈಬರ್ ಅಪರಾಧಗಳಿಗೆ ಶಿಪ್ಟ್: ಪೊಲೀಸ್ ಕಮಿಷನರ್

ಆಧುನಿಕ ತಂತ್ರಜ್ಞಾನದ ಹೊರತಾಗಿಯೂ ಸೈಬರ್ ಅಪರಾಧ ಪ್ರಕರಣಗಳನ್ನು ಬೇಧಿಸುವುದು ಪೊಲೀಸ್ ಇಲಾಖೆಗೆ ಸವಾಲಿನ ಕೆಲಸವಾಗಿದೆ. ಸುಲಭದಲ್ಲಿ ವಂಚಿಸಿ ಹಣ ಗಳಿಸುವ ಜಾಲ ಇದಾದ ಕಾರಣದಿಂದ ನಿರಂತರ ಅಪರಾಧದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಕ್ರಿಮಿನಲ್‌ಗಳು ಕೂಡಾ ಸೈಬರ್ ಅಪರಾಧಗಳತ್ತ ಶಿಪ್ಟ್ ಆಗುತ್ತಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಹೇಳಿದರು.

ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೈಬರ್ ಅಪರಾಧದಲ್ಲಿ ತೊಡಗಿಸಿಕೊಂಡವರಲ್ಲಿ ಅಧಿಕ ಮಂದಿ ಉತ್ತರ ಭಾರತೀಯರಾಗಿದ್ದಾರೆ. ನಕಲಿ ಫೇಸ್, ಧ್ವನಿ ಮೂಲಕ ಇವರು ವಂಚನೆ ಮಾಡುವುದರಲ್ಲಿ ನಿಸ್ಸೀಮರು. ಸೈಬರ್ ಅಪರಾಧ ಕೃತ್ಯಗಳಲ್ಲಿ ಶೇ.20ರಷ್ಟು ಮಾತ್ರ ಬೇಧಿಸಲು ಸಾಧ್ಯವಾಗುತ್ತದೆ. ಹಾಗಾಗಿ ಸಾರ್ವಜನಿಕರು ಸೈಬರ್ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು. ಆಧಾರ್ ಕಾರ್ಡ್‌ನ ಬಯೋಮೆಟ್ರಿಕ್ ಅನ್‌ಲಾಕ್ ಮಾಡಬೇಕು. ಸೈಬರ್ ಅಪರಾಧಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಎಲ್ಲ ಪೊಲೀಸ್ ಠಾಣೆಗಳಲ್ಲೂ ಕೇಸು ದಾಖಲಿಸಲು ಅವಕಾಶವಿದೆ. ಗೋಲ್ಡನ್ ಅವರ್‌ನಲ್ಲಿ ಸಂಬಂಧಪಟ್ಟವರಿಗೆ ದೂರು ನೀಡಬೇಕು ಎಂದು ಅನುಪಮ್ ಅಗ್ರವಾಲ್ ಸಲಹೆ ನೀಡಿದರು.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News