ದಾನದಿಂದ ಸಂಪತ್ತಿನ ಮೌಲ್ಯ ವೃದ್ಧಿ : ಒಡಿಯೂರು ಸ್ವಾಮೀಜಿ

Update: 2023-11-13 16:43 GMT

ಪುತ್ತೂರು: ದಾನ ಮಾಡುವ ಮೂಲಕ ಸಂಪತ್ತಿನ ಮೌಲ್ಯ ವೃದ್ಧಿಯಾಗುತ್ತದೆ. ಮನುಷ್ಯನ ಹೃದಯದಲ್ಲಿ ಪ್ರೀತಿ ಕಡಿಮೆ ಯಾಗುವ ಕಾರಣದಿಂದ ಸಮಾಜದಲ್ಲಿ ದ್ವೇಷ ಭಾವಗಳು ಹೆಚ್ಚಾಗುತ್ತಿದೆ. ಒಡಲಲ್ಲಿ ಪ್ರೀತಿಯ ಕೊರತೆಯಿಂದ ಒಡಕು ಮೂಡುತ್ತದೆ. ಮಾನವೀಯತೆ ಇರುವ ಹೃದಗಳ ನಡುವೆ ಒಡಕು ಉಂಟಾಗಲು ಸಾಧ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೇಂದ್ರ ಪುತ್ತೂರು ವತಿಯಿಂದ ದೀಪಾವಳಿ ಪ್ರಯುಕ್ತ ಆಯೋಜಿಸಲಾದ ಟ್ರಸ್ಟ್ನ ಫಲಾನುಭವಿಗಳ ಸಮಾವೇಶ-ಸೇವಾ ಸೌರಭ ಮತ್ತು 11 ನೇ ವರ್ಷದ ವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ರಾಜಕೀಯದಲ್ಲಿ ಧರ್ಮವಿರಬೇಕು. ಆದರೆ ಧರ್ಮದಲ್ಲಿ ರಾಜಕೀಯವಿರಬಾರದು. ಧರ್ಮ ಪ್ರಜ್ಞೆಯ ಬದುಕು ಅತ್ಯಂತ ಶ್ರೇಷ್ಠವಾಗಿದೆ. ನೈಜ ಪ್ರೀತಿಯಿಂದ ಲೋಕವನ್ನು ಗೆಲ್ಲಲು ಸಾಧ್ಯವಿದೆ. ಮಾನವೀಯತೆ ಇರುವಲ್ಲಿ ಬದುಕು ಉತ್ತಮವಾಗು ತ್ತದೆ. ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎನ್ನುವ ಮಾತಿಗೆ ಅನ್ವಯವಾಗುವಂತೆ ಅಶೋಕ್ ರೈ ಅವರು ಸಮಾಜ ಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಸನ್ಮಾನ ನೆರವೇರಿಸಿದ ವಿಧಾನ ಸಭೆಯ ಸಭಾಪತಿ ಯು.ಟಿ. ಖಾದರ್ ಮಾತನಾಡಿ, ಪ್ರೀತಿ, ವಿಶ್ವಾಸದಿಂದ ಸೇರಿ ಬದುಕುವುದೇ ದೇಶದ ಸಂಸ್ಕೃತಿ. ಶ್ರೀಮಂತಿಕೆಯನ್ನು ಹಂಚಿಕೊಳ್ಳುವ ಮಾನವೀಯತೆ, ಪ್ರತಿಯೊಬ್ಬರ ಸ್ವಾಭಿಮಾನದ ಬದುಕಿಗೆ ಸಹಕಾರ ನೀಡುವ ಅಶೋಕ್ ರೈ ಅವರ ಮನಸ್ಸು, ಹೃದಯ ಎಲ್ಲರದ್ದಾಗಬೇಕು ಎಂದರು. ಪುತ್ತೂರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ. ಪುತ್ತೂರು ಸೌಹಾರ್ದತೆಯ ಕ್ಷೇತ್ರವಾಗಿ ಬೆಳೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಟ್ರಸ್ಟ್ನ ಪ್ರವರ್ತಕ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೆ. ಎಸ್. ಮಾತನಾಡಿ ತಂದೆ-ತಾಯಿಯ ಪ್ರೇರಣೆಯಲ್ಲಿ 50 ಮಂದಿಗೆ ಆರಂಭಗೊಂಡ ವಸ್ತ್ರ ವಿತರಣೆಯು ಇಂದು 50 ಸಾವಿರವನ್ನು ದಾಟಿದೆ. ಎಲ್ಲರೂ ಪ್ರೀತಿಯಿಟ್ಟು ಆಗಮಿಸಿದ್ದಾರೆ. ಮುಂದಿನ ವರ್ಷ 1 ಲಕ್ಷ ಮಂದಿಗೆ ವಸ್ತ್ರ ವಿತರಣೆಗೆ ಮಾಡಲಾಗುವುದು ಎಂದರು.

ಮಹಿಳೆಯರ ಕೈ ಗಟ್ಟಿ ಮಾಡಿದರೆ ಮನೆಗೆ ಶಕ್ತಿ ತುಂಬುತ್ತದೆ ಎಂಬ ನಿಟ್ಟಿನಲ್ಲಿ ಸರಕಾರ ಗ್ಯಾರಂಟಿ ಬಲ ನೀಡಿದೆ. ಸರಕಾರದ ಸವಲತ್ತುಗಳನ್ನು ಮನೆ, ಮನೆಗೆ ತಲುಪಿಸುವ ಆಶಯ ಹೊಂದಿದ್ದೇನೆ. ಎಲ್ಲರ ಆಶೀರ್ವಾದದಿಂದ ಶಾಸಕನಾಗಲು ಸಾಧ್ಯವಾಗಿದ್ದು, ಇದಕ್ಕೆ ಟ್ರಸ್ಟ್ ವರದಾನವಾಗಿದೆ. ಸಾವಿರಾರು ಅಕ್ರಮ -ಸಕ್ರಮ ಅರ್ಜಿಗಳು ಬಾಕಿ ಇದ್ದು, ಇದನ್ನು ನೀಡುವ ಕಾರ್ಯ ಮಾಡಲಾಗುವುದು. 600 ಮಂದಿ ವಿಧವೆಯರಿಗೆ ಟ್ರಸ್ಟ್‌ ಮೂಲಕ 3 ಸೆಂಟ್ಸ್ ಜಾಗವನ್ನು ಸ್ವಂತ ನೀಡಲಾಗುವುದು. ಎಲ್ಲರ ಋಣವನ್ನು ತೀರಿಸುವ ಕಾರ್ಯ ಮಾಡಲಾವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಸೀತಾರಾಮ ಶೆಟ್ಟಿ  ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತೊಡಗಿಕೊಂಡ 20 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ದೀಪಾವಳಿಯ ಅಂಗವಾಗಿ ಏರ್ಪಡಿಸಲಾದ ಗೂಡುದೀಪ ರಚನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪುತ್ತೂರು ಮಾಯಿದೇ ದೇವುಸ್ ಚರ್ಚ್ ಧರ್ಮಗುರು ವಂ. ಫಾ. ಲಾರೆನ್ಸ್ ಮಸ್ಕರೇನ್ಹಸ್, ಹುಸೈನ್ ದಾರಿಮಿ ರೆಂಜಲಾಡಿ, ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಶುಭಹಾರೈಸಿದರು.

ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್, ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಬಿ. ರಾಜಾರಾಂ, ಶ್ರೀ ರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಎ. ಹೇಮನಾಥ ಶೆಟ್ಟಿ, ಪುತ್ತೂರು ಕೋಟಿ -ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಟ್ರಸ್ಟಿನ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಕೃಷ್ಣಪ್ರಸಾದ್ ಬೊಳ್ಳಾವು, ನಗರಸಭಾ ಮಾಜಿ ಉಪಾಧ್ಯಕ್ಷ ಎಚ್. ಮಹಮ್ಮದ್ ಆಲಿ, ಅಶೋಕ್ ರೈ ಅವರ ಸಹೋದರರಾದ ಸುಬ್ರಹ್ಮಣ್ಯ ರೈ, ರಾಜ್ ಕುಮಾರ್ ರೈ ದಂಪತಿ, ಸುಮಾ ಅಶೋಕ್ ಕುಮಾರ್ ರೈ ಹಾಗೂ ಮಕ್ಕಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟಿ ನಿಹಾಲ್ ಶೆಟ್ಟಿ ಬೀಜಂದಾಡಿಗುತ್ತು ವಂದಿಸಿದರು. ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರ್ವಹಿಸಿದರು.

ದೀಪಾವಳಿ ಪ್ರಯುಕ್ತ ನಡೆದ ವಸ್ತ್ರದಾನ ಮತ್ತು ಅನ್ನದಾನದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಬೆಳಗ್ಗೆಯಿಂದ ಸಂಜೆಯ ತನಕ ಸುಮಾರು 15 ಕೌಂಟರ್‍ಗಳಲ್ಲಿ ವಸ್ತ್ರ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು.


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News