ಜ.15ರಿಂದ 17: 'ಅಲೋಶಿಯಸ್'ನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ
ಮಂಗಳೂರು, ಜ.9: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಆರ್ಟ್ಸ್ ಆ್ಯಂಡ್ ಹ್ಯುಮಾನಿಟೀಸ್ ವತಿಯಿಂದ ಜ.15ರಿಂದ 17ರವರೆಗೆ ‘ಸುಸ್ಥಿರ ಅಭಿವೃದ್ಧಿ ಗುರಿಗಳು: ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಕ್ರಿಯೆಗಳ ಸಂಗಮ’ ಎಂಬ ವಿಷಯದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.
ಸಮ್ಮೇಳನವು ಹೊಸದಿಲ್ಲಿಯ ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ನ ಪ್ರಾಯೋಜಕತ್ವದಲ್ಲಿ ಸಂತ ಅಲೋಶಿಯಸ್ ವಿವಿಯ ಶೈಕ್ಷಣಿಕ ಪಾಲುದಾರರಾದ ಅಮೆರಿಕದ ಜಪಾನ್ನ ಸೋಫಿಯಾ ಯುನಿವರ್ಸಿಟಿ, ಕಾರ್ಟ್ ಲ್ಯಾಂಡ್ ಮತ್ತು ಸ್ಪೇನ್ನ ಕೆಥೊಲಿಕಾ ವಿಶ್ವವಿದ್ಯಾನಿಲಯದ ಸಹಕಾರವನ್ನು ಹೊಂದಿದೆ ಎಂದು ವಿವಿಯ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್ ಗುರುವಾರ ಪ್ರೆಸ್ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದಲ್ಲಿ ಥಿಂಕ್ ಲೀಪ್ ಟೆಕ್ನಾಲಜಿ ಲ್ಯಾಬ್ಸ್ ಪ್ರೈ. ಲಿ.ನ. ಸ್ಥಾಪಕ ಮತ್ತು ಸಿಇಒ ವಿಘ್ನೇಶ್ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜಪಾನ್ ನ ಸೀಸೆನ್ ವಿವಿಯ ಪ್ರೊ.ಕೇಟಿ ಮಾಟ್ಸುಯಿ ಮುಖ್ಯ ಭಾಷಣ ಮಾಡಲಿದ್ದಾರೆ. ತಾಂತ್ರಿಕ ಸೆಷನ್ 1ನ್ನು ಪರಿಸರ ತಜ್ಞೆ ಮತ್ತು ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮದ ನಾಯಕಿ ಡಾ.ಶೋಭಾ ರೆಡ್ಡಿ ನಡೆಸಲಿದ್ದಾರೆ. ತಾಂತಿಕ ಸೆಷನ್ 2 ಮತ್ತು 3ನ್ನು ಸಾಮಾಜಿಕ ಮಾನವಶಾಸ್ತ್ರಜ್ಞ ಪ್ರೊ.ಎ.ಆರ್.ವಾಸವಿ, ಸೆಂಟರ್ ಫಾರ್ ಗ್ಲೋಬಲ್ ಎಂಗೇಜ್ಮೆಂಟ್ ಸನಿ ಕಾರ್ಟ್ ಲ್ಯಾಂಡ್ ನ ಪ್ರೊ. ಅಲೆಕ್ಸಾಂಡ್ರು ಬಾಲಾಸ್ ನೆರವೇರಿಸಲಿದ್ದಾರೆ. ಸಮ್ಮೇಳನದಲ್ಲಿ ಪ್ಯಾನಲಿಸ್ಟ್ ಗಳಿಂದ ಚರ್ಚೆಯನ್ನು ಆಯೋಜಿಸಲಾಗಿದೆ. ಸಮ್ಮೇಳನದ ಅಂಗವಾಗಿ ಈಗಾಗಲೇ 110 ಸಂಶೋಧನಾ ಪ್ರಬಂಧಗಳು ಸ್ವೀಕೃತವಾಗಿವೆ ಎಂದು ಅವರು ವಿವರಿಸಿದರು.
ಪೂರ್ವ ಸಮ್ಮೇಳನದ ಭಾಗವಾಗಿ ಮನೋವಿಜ್ಞಾನ, ರಾಜ್ಯಶಾಸ್ತ್ರ, ಸಮಾಜ ಕಾರ್ಯ ಮತ್ತು ಪತ್ರಿಕೋದ್ಯಮ ವಿಭಾಗಗಳ ವತಿಯಿಂದ ಜ. 13ರಂದು ಬ್ರೇಕಿಂಗ್ ಪ್ಯಾಟರ್ನ್ಸ್ ಮತ್ತು ಕ್ರಿಯೇಟಿಂಗ್ ಚೇಂಜ್, ಸಂಘರ್ಷ, ಸಮನ್ವಯ ಮತ್ತು ಶಾಂತಿ ನಿರ್ಮಾಣ, ಆತ್ಮಹತ್ಯೆ ತಡೆಗಟ್ಟುವಿಕೆ ಗೇಟ್ ಕೀಪರ್ ತರಬೇತಿ ಮತ್ತು ಸ್ಥಳೀಯತೆಯನ್ನು ಸಂಕ್ಷಿಸುವಲ್ಲಿ ಮಾಧ್ಯಮ ಪಾತ್ರ ವಿಷಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಸಾಜಿಮೊನ್, ಸಂಚಾಲಕರಾದ ಡಾ.ಲೊವೀನಾ ಲೋಬೋ, ಡಾ. ಶಾಲಿನಿ ಅಯ್ಯಪ್ಪ, ಸಾರ್ವಜನಿಕ ಸಂಪರ್ಕ ಅಧಿಕಾರಿ ಚಂದ್ರಕಲಾ ಉಪಸ್ಥಿತರಿದ್ದರು.