ಡಿಎ ಜಾರಿಗೆ ಬೀಡಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮನವಿ
ಮಂಗಳೂರು, ಆ.14: ಬೀಡಿ ಕಾರ್ಮಿಕರಿಗೆ 2015-16ನೇ ಸಾಲಿಗೆ ಪ್ರತೀ ಸಾವಿರ ಬೀಡಿಗಳಿಗೆ 12.75 ರೂ. ತುಟ್ಟಿಭತ್ತೆ ಪಾವತಿಸಲು ಸೂಕ್ತ ಕ್ರಮ ಜರಗಿಸಬೇಕು ಎಂದು ಬೀಡಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಈ ಬಗ್ಗೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ್ದರೂ ಕೂಡ ಬೀಡಿ ಮಾಲಕರು ಈ ಮೊತ್ತವನ್ನು 2018ರವರೆಗೆ ಪಾವತಿಸಿಲ್ಲ. ಬೀಡಿ ಕಾರ್ಮಿಕ ಸಂಘಟನೆಗಳು ನ್ಯಾಯಾಲಯದಲ್ಲಿ ದಾವೆ ಹೂಡಿ ತುಟ್ಟಿಭತ್ತೆ ಜಾರಿಗಾಗಿ ಆಗ್ರಹಿಸಿದ್ದವು. ಅಲ್ಲದೆ ಹಲವಾರು ವಿಧದ ಚಳವಳಿಗಳನ್ನೂ ಸಂಘಟಿಸಿದ್ದವು. ಎಂಟು ವರ್ಷಗಳ ಸುದೀರ್ಘ ಹೋರಾಟದ ನಂತರ ರಾಜ್ಯ ಉಚ್ಛ ನ್ಯಾಯಲಯವು ತೀರ್ಪು ನೀಡಿದ್ದು ಸರಕಾರದ ಅಧಿಸೂಚನೆಯನ್ನು ಎತ್ತಿ ಹಿಡಿದಿದೆ. ಅದರಂತೆ ಬೀಡಿ ಕಾರ್ಮಿಕರಿಗೆ 2015ರಿಂದ 2018ರವರೆಗೆ ಪ್ರತೀ ಸಾವಿರ ಬೀಡಿಗಳಿಗೆ 12.75 ರೂ.ತುಟ್ಟಿಭತ್ತೆಯಲ್ಲದೆ ಸಂಬಂಧಿಸಿದ ಕಾನೂನುಬದ್ದ ಸವಲತ್ತುಗಳನ್ನು ಪಾವತಿಸಬೇಕು. ಬೀಡಿ ಲೇಬಲಿಂಗ್ ಮತ್ತಿತರ ಕಾರ್ಮಿಕರಿಗೆ ಬಾಕಿ ಮೊತ್ತವನ್ನು ಪಾವತಿಸಲು ಬೇಕಾದ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದೆ.
ಬಿಎಂಎಸ್ ನಾಯಕರುಗಳಾದ ಕೆ.ವಿಶ್ವನಾಥ ಶೆಟ್ಟಿ, ಪುರುಷೋತ್ತಮ, ಎಐಟಿಯುಸಿ ನಾಯಕರಾದ ವಿ.ಎಸ್.ಬೇರಿಂಜ, ಬಿ.ಶೇಖರ್. ವಿ.ಕುಕ್ಯಾನ್, ಸುರೇಶ್ ಕುಮಾರ್ ಬಂಟ್ವಾಳ, ಎಂ.ಕರುಣಾಕರ್, ತಿಮ್ಮಪ್ಪಕಾವೂರು, ರಾಮ ಮುಗೇರ, ಹೆಚ್‌ಎಂಎಸ್ ಮುಖಂಡ ಮುಹಮ್ಮದ್ ರಫಿ, ಸಿಐಟಯು ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ, ಪದ್ಮಾವತಿ ಶೆಟ್ಟಿ, ಸದಾಶಿವ ದಾಸ್, ಜಯಂತ ನಾಯ್ಕ್ ನಿಯೋಗದಲ್ಲಿದ್ದರು.