ಕಲ್ಲಡ್ಕ : ಸೌಹಾರ್ದತೆಗೆ ಸಾಕ್ಷಿಯಾದ ಹದಗೆಟ್ಟ ರಸ್ತೆಯ ವಿರುದ್ಧದ ಪ್ರತಿಭಟನೆ
ಬಂಟ್ವಾಳ : ಕೋಮುಸೂಕ್ಷ್ಮ ಪ್ರದೇಶವಾದ ಕಲ್ಲಡ್ಕದಲ್ಲಿ ಪಕ್ಷ, ಜಾತಿ, ಧರ್ಮ ಬೇಧ ಮರೆತು ಇಲ್ಲಿನ ವರ್ತಕರು ಹಾಗೂ ಸಾರ್ವಜನಿಕರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದ ಘಟನೆ ಗುರುವಾರ ಸಂಜೆ ನಡೆಯಿತು.
ಕಲ್ಲಡ್ಕದ ಹದಗೆಟ್ಟ ರಸ್ತೆ ಮತ್ತು ಧೂಳಿನಿಂದ ಸಮಸ್ಯೆಯಿಂದಾಗಿ ರೋಸಿಹೋದ ಕಲ್ಲಡ್ಕದ ವರ್ತಕರು, ಹಾಗೂ ಸಾರ್ವಜನಿ ಕರು ಗುರುವಾರ ಕೆ.ಎನ್.ಆರ್.ಸಿ ಕಂಪನಿಯ ವಾಹನಗಳನ್ನು ತಡೆಗಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಕೆ.ಎನ್.ಆರ್.ಸಿ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು, ಇಲ್ಲಿನ ಸಮಸ್ಯೆಗಳು ಬಗೆಹರಿಯಬೇಕು ಎಂದು ಪ್ರತಿಭಟನಕಾರರು ಪಟ್ಟುಹಿಡಿದರು. ಇದರಿಂದಾಗಿ ಕೆಲಕಾಲ ರಸ್ತೆ ತಡೆ ಉಂಟಾಗಿ ಸಂಚಾರ ಅಸ್ತವ್ಯಸ್ತ ಗೊಂಡಿತ್ತು. ಈ ಸಂದರ್ಭ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾಧಿಕಾರಿ ರಾಮಕೃಷ್ಣ ಮತ್ತು ಸಿಬ್ಬಂದಿ ರಸ್ತೆ ಸಂಚಾರ ತಿಳಿಗೊಳಿಸಿದರು.
ಸ್ಥಳಕ್ಕೆ ಆಗಮಿಸಿದ ಗುತ್ತಿಗೆ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪ್ರತಿಭಟನಾಕಾರ ರೊಂದಿಗೆ ಮಾತುಕತೆ ನಡೆಸಿದರು, ಮುಂದಿನ ಬುಧವಾರದೊಳಗೆ ಸರ್ವಿಸ್ ರಸ್ತೆಗೆ ಡಾಮರೀಕರಣ ಕೆಲಸ ಆರಂಭಿಸುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು ಹೊಂಡ ಮುಚ್ಚಿ, ರಸ್ತೆಯನ್ನು ಡಾಮರೀಕರಣ ಮಾಡಬೇಕು. ಧೂಳಿನ ಸಮಸ್ಯೆ ತಲೆದೋರಿದ್ದು, ಇದಕ್ಕೆ ಮುಕ್ತಿ ನೀಡುವ ನಿಟ್ಟಿನಲ್ಲಿ ರಸ್ತೆಗೆ ನೀರು ಹಾಯಿಸುತ್ತಿರಬೇಕು, ರಸ್ತೆಯಲ್ಲಿ ಕೊಳಚೆ ನೀರು ಹರಿಯದಂತೆ ಡ್ರೈನೇಜ್ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಬುಧವಾರದೊಳಗೆ ಕಾಮಗಾರಿ ಆರಂಭಗೊಳ್ಳದೇ ಇದ್ದರೆ, ಕಲ್ಲಡ್ಕದ ವರ್ತಕರು ಎಲ್ಲರೂ ತಮ್ಮ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಪೇಟೆ ಬಂದ್, ಹೆದ್ದಾರಿ ತಡೆಯಂಥ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಂಪೆನಿಯ ಇಂಜಿನಿಯರ್ ಅಯ್ಯಪ್ಪ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಈ ಹಿಂದೆ ಕಲ್ಲಡ್ಕದ ವರ್ತಕರು ಹಾಗೂ ಸಾರ್ವಜನಿಕರ ನಿಯೋಗ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಬಂಟ್ವಾಳದಲ್ಲಿ ಭೇಟಿ ಮಾಡಿ, ಕಲ್ಲಡ್ಕದಲ್ಲಿ ಹೆದ್ದಾರಿ ಕಾಮಗಾರಿ ಸಂದರ್ಭ ಉಂಟಾಗುವ ತೊಂದರೆ ಕುರಿತು ಗಮನ ಸೆಳೆದಿದ್ದರು. ಈ ಸಂದರ್ಭ ಮಳೆ ಕಡಿಮೆಯಾದ ತಕ್ಷಣ ರಸ್ತೆಗೆ ಡಾಮರೀಕರಣ ಮಾಡುವುದು, ಹಾಗೂ ಧೂಳಿನಿಂದ ಮುಕ್ತಿಗಾಗಿ ಕಲ್ಲಡ್ಕದಲ್ಲಿ ಪ್ರತಿನಿತ್ಯ ನೀರು ಸಿಂಪಡಿಸುವ ಕುರಿತು ಸಂಸದ ನಳಿನ್ ಸೂಚನೆ ನೀಡಿದ್ದರು. ಆದರೆ ಇದ್ಯಾವುದೂ ಕಾರ್ಯಗತಗೊಂಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.