ಕಲ್ಲಡ್ಕ: ರಸ್ತೆ ಬದಿಯ ಚರಂಡಿಗೆ ಬಿದ್ದ ಲಾರಿ; ವಾಹನ ಸಂಚಾರ ಅಸ್ತವ್ಯಸ್ತ

Update: 2023-10-01 09:27 GMT

ಬಂಟ್ವಾಳ : ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕಲ್ಲಡ್ಕ ಸರ್ವೀಸ್ ರಸ್ತೆಯ ಚರಂಡಿಗೆ ಘನ ಗಾತ್ರದ ಲಾರಿಯೊಂದು ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಆದಿತ್ಯವಾರ ಬೆಳಿಗ್ಗೆ ನಡೆದಿದೆ.

ಕಲ್ಲಡ್ಕ ಪೇಟೆ ಸಮೀಪದ ಪೂರ್ಲಿಪಾಡಿ ಬಳಿ ಸರ್ವೀಸ್ ರಸ್ತೆಯ ಬದಿಯಲ್ಲಿ ಮಳೆ ನೀರು ಹರಿದು ಹೋಗಲು ತಾತ್ಕಾಲಿಕವಾಗಿ ಮಾಡಲಾದ ಚರಂಡಿಗೆ ಲಾರಿ ಬಿದ್ದಿದೆ. ಇದರಿಂದಾಗಿ ಕೆಲಕಾಲ ರಸ್ತೆ ತಡೆ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಬಂಟ್ವಾಳ ಸಂಚಾರಿ ಪೊಲೀಸರು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇಲ್ಲಿ ರಸ್ತೆ ಮತ್ತು ಚರಂಡಿ ಎರಡು ಒಂದೇ ರೀತಿಯಲ್ಲಿದೆ. ಹಾಗಾಗಿ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿ ರಸ್ತೆಯ ಬದಿಗೆ ಸರಿದರೆ ವಾಹನಗಳು ಹೂತು ಹೋಗುವುದು ಖಚಿತ. ಪ್ಲೈ ಓವರ್ ನಿರ್ಮಾಣ ಮಾಡುವ ಸಂದರ್ಭ ಎರಡು ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಸರ್ವೀಸ್ ರಸ್ತೆಯನ್ನು ಪರಿಪೂರ್ಣ ರೀತಿಯಲ್ಲಿ ಮಾಡದೆ ಜನರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕನಿಷ್ಠ ಪಕ್ಷ ಡಾಮರೀಕರಣ ಮಾಡಿದ್ದರೆ ಪ್ಲೈ ಓವರ್ ಕಾಮಗಾರಿ ಮುಗಿಯುವವರೆಗೆ ಸಂಚಾರ ಮಾಡಬಹುದಿತ್ತು. ಇದೀಗ ಕೆಸರು ಮಿಶ್ರಿತ ಅವೈಜ್ಞಾನಿಕ ರೀತಿಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಒಂದು ಕಡೆಯಾದರೆ, ಇನ್ನೊಂದು ಕಡೆ ವಾಹನಗಳ ಅಪಘಾತಗಳು ನಿತ್ಯ ಸಂಭವಿಸುತ್ತಿದ್ದು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News