ಸರ್ವರ ಸಹಭಾಗಿತ್ವದಲ್ಲಿ ಪಿಲಿಕುಳದಲ್ಲಿ ಕಂಬಳ ತುಳುನಾಡ ಉತ್ಸವ: ಯು.ಟಿ. ಖಾದರ್

Update: 2024-09-12 16:03 GMT

ಬೆಂಗಳೂರು: ಪಿಲಿಕುಳ ನಿಸರ್ಗಧಾಮಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಕಂಬಳ ತುಳುನಾಡ ಉತ್ಸವವನ್ನು ಎಲ್ಲರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲು ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ.

ವಿಧಾನ ಸಭಾ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಪಿಲಿಕುಳ ಕಂಬಳ, ತುಳುನಾಡ ಉತ್ಸವದ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪಿಲಿಕುಳದಲ್ಲಿ ಕೆಲವೊಂದು ಶಾಶ್ವತವಾದ ಕಾಮಗಾರಿಗಳನ್ನು ಕೈ ಗೊಂಡು ಅಭಿವೃದ್ಧಿಪಡಿಸಲು ಸಂಘಟಿತ ಪ್ರಯತ್ನ ನಡೆಸಲು ತುಳು ನಾಡು ಉತ್ಸವದ ಮೂಲಕ ತುಳುನಾಡಿನ ಕಂಬಳ ಸೇರಿದಂತೆ ಕಲೆ, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನಗಳು, ಕೃಷಿ ಮೇಳಗಳು, ಆಹಾರ ಮೇಳಗಳ ಮೂಲಕ ಚಾಲನೆ ನೀಡುವ ಚಿಂತನೆ ಇದೆ. ಈ ಬಗ್ಗೆ ಸಂಸದರು, ಶಾಸಕರು, ಅಧಿಕಾರಿಗಳು, ಮತ್ತಿತರ ಜನಪ್ರತಿನಿಧಿಗಳ ಸಹಿತ ವಿವಿಧ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಸೂಚನೆಗಳನ್ನು ಪಡೆದು ಕಾರ್ಯಕ್ರಮ ರೂಪಿಸಲು ಮುಂದಾಗಬೇಕು ಎಂದರು.

ಇದರಿಂದ ಪಿಲಿಕುಳಕ್ಕೆ ಸಾಕಷ್ಟು ಮಂದಿ ಪ್ರವಾಸಿಗರು, ವಿದ್ಯಾರ್ಥಿಗಳು ಭೇಟಿ ನೀಡಿ ನಿಸರ್ಗಧಾಮದ ಪ್ರಯೋಜನ ಪಡೆದುಕೊಳ್ಳಲು ಸಾಧ್ಯ. ತುಳುನಾಡು ಉತ್ಸವವನ್ನು ಈ ಬಾರಿ ಯಶಸ್ವಿಯಾಗಿ ಆಚರಿಸಿ ಮುಂದಿನ ಹಂತದಲ್ಲಿ ರಾಜ್ಯದ ಬಜೆಟ್‌ನಲ್ಲಿ ಅನುದಾನ ನಿಗದಿ ಪಡಿಸಿ ಶಾಶ್ವತವಾಗಿ ಕಾರ್ಯಕ್ರಮ ನಡೆಸಬಹುದು ಎಂದು ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡುತ್ತಾ ಪಿಲಿಕುಳದ ಅಭಿವೃದ್ಧಿ ಹಾಗೂ ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಒಳ್ಳೆಯ ಉದ್ದೇಶದಿಂದ ಈ ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲೆಯಲ್ಲಿ ಸಂಸದರು ,ಶಾಸಕರು ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಸಮಾಲೋಚನಾ ಸಭೆ ಕರೆಯುವುದಾಗಿ ತಿಳಿಸಿದ್ದಾರೆ.

ಸಂಸದ ಬೃಜೇಶ್ ಚೌಟ ಮಾತನಾಡಿ, ಈ ಉತ್ಸವದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದರು.

ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಡಾ.ಭರತ್ ಶೆಟ್ಟಿ, ಹರೀಶ್ ಪೂಂಜಾ, ಅಶೋಕ್ ಕುಮಾರ್ ರೈ, ಡಾ.ಮಂಜುನಾಥ ಭಂಡಾರಿ, ಐವನ್ ಡಿಸೋಜ, ಭೋಜೇ ಗೌಡ, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ದ.ಕ. ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಆಳ್ವಾಸ್ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ಡಾ. ಮೋಹನ್ ಆಳ್ವ, ಪಿಲಿಕುಳ ಅಭಿವೃದ್ಧಿ ಪ್ರತಿಷ್ಠಾನದ ಅಧಿಕಾರಿಗಳು, ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


 






 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News