ಕಟೀಲು: ಮಗನಿಂದಲೇ ತಾಯಿಯ ಕೊಲೆ ಶಂಕೆ; ಆರೋಪಿಯ ಬಂಧನ

Update: 2023-10-29 16:04 GMT


ಮುಲ್ಕಿ: ಕಟೀಲು ಸಮೀಪದ ಕೊಂಡೇಲಾ ಗ್ರಾಮದ ದುರ್ಗಾ ನಗರ ಎಂಬಲ್ಲಿ ಮಹಿಳೆಯೊಬ್ಬರು ಮನೆಯ ಕೋಣೆಯೊಳಗೆ ಅಸಹಜವಾಗಿ ಸಾವನ್ನಪ್ಪಿದ್ದು, ಕೊಲೆ ಆರೋಪದ ಮೇಲೆ ಮಹಿಳೆಯ ಮಗನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಮೃತ ಮಹಿಳೆಯನ್ನು ರತ್ನ ಶೆಟ್ಟಿ (60) ಹಾಗು ಆರೋಪಿಯನ್ನು ರವಿರಾಜ್ ಶೆಟ್ಟಿ(33) ಎಂದು ಗುರುತಿಸಲಾಗಿದೆ.

ರತ್ನ ಶೆಟ್ಟಿ ಅವರು ಕಟೀಲು ದುರ್ಗಾ ನಗರದ ಬಾಲಕೃಷ್ಣ ಎಂಬವರ ಮನೆಯ ಬದಿಯ ಕೋಣೆಯಲ್ಲಿ ಮಗ ರವಿರಾಜ್ ಜೊತೆ ವಾಸ್ತವ್ಯವಿದ್ದು ಗಿಡಿಗೆರೆ ಚರ್ಚ್ ಬಳಿಯ ಬಾಲಕೃಷ್ಣ ಎಂಬವರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಅನಾರೋಗ್ಯದ ನಿಮಿತ್ತ ಕೆಲಸಕ್ಕೆ ಹೋಗಿರಲಿಲ್ಲ. ಈ ನಡುವೆ ಮಗ ರವಿರಾಜ್ ಶೆಟ್ಟಿ ತಾಯಿ ಜೊತೆ ವಾಸ್ತವ್ಯವಿದ್ದ ಕೋಣೆಗೆ ಬೀಗ ಹಾಕಿ ಹೊರಗೆ ಹೋಗಿದ್ದಾನೆ.

ರವಿವಾರ ಬೆಳಗ್ಗೆ ಮನೆಯ ಪರಿಸರದಲ್ಲಿ ವಾಸನೆ ಬರುತ್ತಿರುವುದನ್ನು ಕಂಡು ಅನುಮಾನದಿಂದ ಮನೆಯವರು ಮಹಿಳೆ ವಾಸ್ತವ್ಯವಿದ್ದ ಕೋಣೆಯ ಕಿಟಕಿಯಲ್ಲಿ ನೋಡಿದಾಗ ಮಹಿಳೆಯ ಮುಖ ಬಟ್ಟೆಯಿಂದ ಮುಚ್ಚಿದ ಸ್ಥಿತಿಯಲ್ಲಿ ಹಾಗೂ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಕಂಡುಬಂದಿದ್ದು ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ನಡುವೆ ತಾಯಿಯ ಶವ ಪತ್ತೆಯಾದ ಬಗ್ಗೆ ಸ್ಥಳೀಯರಿಗೆ ಮಾಹಿತಿ ಬಂದ ಕೂಡಲೇ ಮಗ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿ ರವಿರಾಜ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನೂಪ್ ಅಗರ್ವಾಲ್ , ಎಸಿಪಿ ಮನೋಜ್ ಕುಮಾರ್, ಶ್ವಾನದಳ ಬೆರಳಚ್ಚು ತಜ್ಞರು, ಬಜ್ಪೆ ಪೊಲೀಸರು ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News