ಮಂಗಳೂರು| ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

Update: 2024-08-28 16:51 GMT

ಮಂಗಳೂರು: ರಾಜ್ಯಪಾಲರನ್ನು ಅವಹೇಳನ ಮಾಡಿದ, ದೇಶದ್ರೋಹಿ ಹೇಳಿಕೆ ನೀಡಿದ ಕಾಂಗ್ರೆಸ್ ಧುರೀಣರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ವ್ಯವಸ್ಥೆ ಹಾಗೂ ರಾಜ್ಯ ಸರಕಾರದ ವಿರುದ್ಧ ನಗರದ ಪಿವಿಎಸ್ ವೃತ್ತ ಬಳಿ ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಿಜೆಪಿ ಜಿಲ್ಲಾ ಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಸಿದ ಬಳಿಕ, ಪಿವಿಎಸ್ ವೃತ್ತ ಬಳಿ ಕೆಲಕಾಲ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ರಾಜ್ಯ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಐವನ್ ಡಿಸೋಜ ವಿರುದ್ಧ ಘೋಷಣೆ ಕೂಗಿದರು. ನಂತರ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ತೆಗದುಕೊಂಡು ಬಸ್‌ನಲ್ಲಿ ಕರೆದೊಯ್ದರು.

ಈ ವೇಳೆ ಮಾತನಾಡಿದ ಸಂಸದ ಬ್ರಿಜೇಶ್ ಚೌಟ, ವಾಲ್ಮೀಕಿ ನಿಗಮ, ಮುಡಾ ಸಹಿತ ಹಲವು ಹಗರಣಗಳಲ್ಲಿ ಸಿಲುಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಬೆಂಬಲಿ ಸುವ ಭರದಲ್ಲಿ ಕಾಂಗ್ರೆಸಿಗರು ಸಾಂವಿಧಾನಿಕ ಹುದ್ದೆಗಳ ಬಗ್ಗೆ ತುಚ್ಛವಾಗಿ ನಿಂದಿಸಿ, ಗೇಲಿ ಮಾಡುತ್ತಿದ್ದಾರೆ. ಕಾಂಗ್ರೆಸಿಗರಿಗೆ ಬಾಂಗ್ಲಾ, ಪಾಕ್ ಮಾದರಿ ಬಗ್ಗೆ ಅಪಾರ ಪ್ರೀತಿ. ರಾಜ್ಯಪಾಲರನ್ನು ತುಚ್ಛವಾಗಿ ನಿಂದಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಹಗರಣದ ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥಿ ಸಿಕೊಳ್ಳಲು ಆಡಳಿತ ಪಕ್ಷವಾದ ಕಾಂಗ್ರೆಸ್ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವುದು ನಾಚಿಕೆಗೇಡು. ರಾಜ್ಯಪಾಲರ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ದೊಂಬಿ ನಡೆಸುವುದು ನಮ್ಮ ಜನ್ಮಸಿದ್ದ ಹಕ್ಕು ಎಂಬಂತೆ ಕಾಂಗ್ರೆಸ್ ವರ್ತಿಸುತ್ತಿದೆ. ಐವನ್ ಡಿ ಸೋಜ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವಿನಂತಿಸಿದಾಗ, ದೂರು ನೀಡಿದರೆ ಎಫ್‌ಐಆರ್ ಮಾಡುತ್ತೇವೆ ಎಂದು ಆಯುಕ್ತರು ತಿಳಿಸಿದ್ದರು. ಯುವಮೋರ್ಚಾ ಕಾರ್ಯಕರ್ತರು ಐವನ್ ವಿರುದ್ಧ ದೂರು ನೀಡಿದ್ದರೂ, ಎಫ್‌ಐಆರ್ ಮಾಡಿಲ್ಲ. ಪೊಲೀಸರು ನ್ಯಾಯಸಮ್ಮತವಾಗಿ ಕೆಲಸ ಮಾಡಿ. ಕ್ರಮ ಕೈಗೊಳ್ಳದಿದ್ದರೆ ಎಫ್‌ಐಆರ್ ದಾಖಲಿಸಲು ಕಾನೂನೂ ಮೂಲಕ ಹೋರಾಟ ನಡೆಸುತ್ತೇವೆ ಎಂದು ಶಾಸಕ ಕಾಮತ್ ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ, ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಜಿಲ್ಲಾ ವಕ್ತಾರರಾದ ರಾಜಗೋಪಾಲ ರೈ, ಅರುಣ್ ಶೇಟ್, ಮುಖಂಡರಾದ ದಿವಾಕರ ಪಾಂಡೇಶ್ವರ, ಮಂಜುಳಾ ರಾವ್, ಪೂರ್ಣಿಮಾ ರಾವ್, ನಂದನ್ ಮಲ್ಯ, ಅಶ್ವಿತ್ ಕೊಟ್ಟಾರಿ, ವಸಂತ ಪೂಜಾರಿ, ಕಾರ್ಪೋರೇಟರ್‌ಗಳು ಭಾಗವಹಿಸಿದ್ದರು.





Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News