ಮಂಗಳೂರು: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪ; 4 ಮಂದಿ ಸೆರೆ
ಮಂಗಳೂರು: ಕೇರಳದಲ್ಲಿ ಖೋಟಾ ನೋಟು ಮುದ್ರಿಸಿ ಮಂಗಳೂರಿನಲ್ಲಿ ಚಲಾವಣೆ ಮಾಡುತ್ತಿದ್ದ ಆರೋಪದಲ್ಲಿ ನಾಲ್ವರ ತಂಡವೊಂದನ್ನು ಬಂಧಿಸಿರುವ ಮಂಗಳೂರಿನ ಸಿಸಿಬಿ ಪೊಲೀಸರು ಅವರಿಂದ ಖೋಟಾ ನೋಟುಗಳನ್ನು ವಶಪಡಿಸಿ ಕೊಂಡಿದ್ದಾರೆ.
ಕಾಸರಗೋಡಿನ ಕೊಳತ್ತೂರು ನಿವಾಸಿ ಪ್ರಿಯೇಶ್(38), ಮುಳಿಯಾರು ವಿನೋದ್ ಕುಮಾರ್ (33), ಕುನಿಯಾ ಅಬ್ದುಲ್ ಖಾದರ್ (58), ಬೆಳಿಯೂರು ಕಟ್ಟೆಯ ಅಯೂಬ್ ಖಾನ್(51) ಬಂಧಿತ ಆರೋಪಿಗಳು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ಮಂಗಳೂರು ನಗರದ ಕ್ಲಾಕ್ ಟವರ್ ಪರಿಸರದ ಲಾಡ್ಜ್ ವೊಂದರ ಪರಿಸರದಲ್ಲಿ ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 500 ರೂ. ಮುಖಬೆಲೆಯ ಖೋಟಾ ನೋಟು ಚಲಾವಣೆ ಜಾಲದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 2,13,500 ರೂ. ಮೌಲ್ಯದ 500 ರೂ. ಮುಖಬೆಲೆಯ 427 ಖೋಟಾ ನೋಟುಗಳು, ಹಾಗೂ 4 ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಪ್ರಿಯೇಶ್ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿನ ಪ್ರಿಂಟಿಂಗ್ ಪ್ರೆಸ್ ನಲ್ಲಿ ಈ ಖೋಟಾ ನೋಟುಗಳನ್ನು ತಯಾರಿಸುತ್ತಿದ್ದನು. ಈ ಖೋಟಾ ನೋಟುಗಳನ್ನು ತಯಾರಿಸಲು ಬೇಕಾದ ಕಚ್ಚಾ ಸಾಮಗ್ರಿಗಳನ್ನು ಕೋಝೀಕೋಡ್ ಮತ್ತು ದಿಲ್ಲಿಯಿಂದ ಖರೀದಿಸಿಕೊಂಡು ಈ ಖೋಟಾ ನೋಟುಗಳನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿ ಸುಲಭವಾಗಿ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳು ಈ ಖೋಟಾ ನೋಟುಗಳನ್ನು ಕೇರಳದಿಂದ ತಯಾರಿಸಿಕೊಂಡು ತಂದು ಮಂಗಳೂರು ನಗರದಲ್ಲಿ ಚಲಾವಣೆ ಮಾಡಲು ಯತ್ನಿಸುತ್ತಿದ್ದರು. ಈ ಖೋಟಾ ನೋಟು ಚಲಾವಣೆ ಜಾಲದಲ್ಲಿ ಹಲವಾರು ಮಂದಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗುವುದು ಎಂದು ಆಯುಕ್ತರು ಹೇಳಿದ್ದಾರೆ.