ಮಂಗಳೂರು: ಹಲೋ ಫ್ರೆಂಡ್ಸ್‌ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

Update: 2024-06-30 06:12 GMT

ಮಂಗಳೂರು: ಮಂಗಳೂರಿನ ಹಲೋ ಫ್ರೆಂಡ್ಸ್ ವತಿಯಿಂದ ಸದಸ್ಯರ ಇಬ್ಬರು ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಸಮಾರಂಭವು ನಗರದ ಹೈಲ್ಯಾಂಡ್‌ನ ಹೋಟೆಲ್ ಗ್ರ್ಯಾಂಡ್ ಶಿವಭಾಗ್‌ ನಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಲೋ ಫ್ರೆಂಡ್ಸ್‌ನ ಅಧ್ಯಕ್ಷ ಎನ್ಎಂಪಿಎಯ ನಿವೃತ್ತ ಅಧಿಕಾರಿ ಖಾಲಿದ್ ತಣ್ಣೀರುಬಾವಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ಶಿಕ್ಷಣ ಪಡೆದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು, ಐಎಎಸ್‌ನಂತಹ ಪದವಿ ಮೂಲಕ ಸರಕಾರಿ ಸೇವೆಗೆ ಪ್ರಯತ್ನಿಸಬೇಕು. ಸಮಾಜದ ಆಸ್ತಿಯಾಗಬೇಕು. ಇದರಿಂದ ಸೇವೆಯ ಜತೆಗೆ, ನಿವೃತ್ತಿಯ ಬಳಿಕವೂ ಜೀವನ ನಿರ್ವಹಣೆಗೆ ಕೈ ಚಾಚುವ ಪರಿಸ್ಥಿತಿ ಬರುವುದಿಲ್ಲ ಎಂದರು.

ಮುಖ್ಯ ಅತಿಥಿಯಾಗಿದ್ದ ಎಂಎಸ್ಐಎಲ್‌ನ ನಿವೃತ್ತ ಅಧಿಕಾರಿ ಯೂಸುಫ್ ಕೊಡಾಜೆ ಮಾತನಾಡಿ, ಸುಧಾರಣೆ ನಮ್ಮ ಮನೆಯಿಂದ ಆರಂಭಿಸಬೇಕು ಎಂಬಂತೆ ಮಕ್ಕಳನ್ನು ಪ್ರೋತ್ಸಾಹಿಸುವುದು ಅತ್ಯುತ್ತಮ ಕೆಲಸ. ಡಾ.ಎಪಿಜೆ ಅಬ್ದುಲ್ ಕಲಾಂ ಹೇಳಿದಂತೆ ವಿದ್ಯಾರ್ಥಿಗಳು ದೊಡ್ಡ ಕನಸು ಇಟ್ಟುಕೊಳ್ಳಬೇಕು. ಜೀವನದಲ್ಲಿ ಸಾಧನೆ ಮಾಡಬೇಕು ಎಂದರು.

ಹಿರಿಯ ಉದ್ಯಮಿ ಬದ್ರುದ್ದೀನ್ ಪಣಂಬೂರು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸಿದರು.

ಉದ್ಯಮಿ ಅಹ್ಮದ್ ಖಾನ್, ನಿವೃತ್ತ ಬ್ಯಾಂಕ್ ಅಧಿಕಾರಿ ಮುಹಮ್ಮದ್ ಅಲಿ, ಕೋಶಾಧಿಕಾರಿ ಮುಹಮ್ಮದ್ ರಫೀಕ್ ಎಕೋಲೈಟ್, ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.

ಪಿಯುಸಿಯಲ್ಲಿ ಶೇ.92 ಅಂಕ ಪಡೆದಿರುವ ಮುಹಮ್ಮದ್ ರಫೀಕ್ ಅವರ ಪುತ್ರ ಮುಹಮ್ಮದ್ ರಿಶಾದ್ ಮತ್ತು ಸಿಬಿಎಸ್ಇ ಹತ್ತನೇ ತರಗತಿಯಲ್ಲಿ ಶೇ.80 ಅಂಕ ಪಡೆದ ಮುಹಮ್ಮದ್ ಆರಿಫ್ ಪಡುಬಿದ್ರಿಯವರ ಪುತ್ರ ಮುಹಮ್ಮದ್ ಅಲ್ಮಾನ್ ಅವರನ್ನು ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು.

ಕಾರ್ಯದರ್ಶಿ ಮುಹಮ್ಮದ್ ಆರಿಫ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಹನೀಫ್ ಎಂಎಸ್ಇಝೆಡ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News