ಮಂಗಳೂರು: ಮನಪಾ ಸಂಚಾರ ಸುವ್ಯವಸ್ಥೆ ಸಭೆಯಲ್ಲಿ ಸಮಸ್ಯೆಗಳ ಮಹಾಪೂರ

Update: 2024-08-28 13:44 GMT

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್, ಫುಟ್‌ಪಾತ್‌ಗಳಲ್ಲಿ ವಾಹನ ನಿಲುಗಡೆ, ಶಾಲಾ- ಕಾಲೇಜು ಹಾಗೂ ಜಂಕ್ಷನ್‌ಗಳಲ್ಲಿಯೂ ವಾಹನಗಳ ಪಾರ್ಕಿಂಗ್ ಸಮಸ್ಯೆ, ಝೀಬ್ರಾ ಕ್ರಾಸಿಂಗ್ ವ್ಯವಸ್ಥೆ ಇಲ್ಲದೆ ನಗರದ ಎಲ್ಲಾ ಕಡೆ ಸಂಚಾರ ವ್ಯವಸ್ಥೆ ಹದಗೆಟ್ಟಿರುವುದಾಗಿ ಮನಪಾ ಸದಸ್ಯರು ಸಮಸ್ಯೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಬುಧವಾರ ಮನಪಾದ ಮಂಗಳಾ ಸಭಾಂಗಣದಲ್ಲಿ ನಡೆದ ಟ್ರಾಫಿಕ್ ಸುವ್ಯವಸ್ಥೆ ಕುರಿತಾದ ಸಭೆಯಲ್ಲಿ ಭಾಗವಹಿಸಿದ್ದ ಮನಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಸೇರಿದಂತೆ ಸದಸ್ಯರನೇಕರು ನಗರದಲ್ಲಿ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಡಿಸಿಪಿ ದಿನೇಶ್ ಕುಮಾರ್ ಗಮನ ಸೆಳೆದರು.

ಮನಾಪದಿಂದ ನಗರದಲ್ಲಿ ಸೂಕ್ತ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಬೇಕು. ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವ ಕಾರಣ ಈ ರೀತಿಯಾಗಿ ಸಾರ್ವಜನಿಕರು ಅಲ್ಲಲ್ಲಿ ನಿಲ್ಲಿಸುವ ವಾಹನಗಳಿಗೆ ದಂಡ ಹಾಕುವುದು, ವಾಹನಗಳನ್ನು ವಶಪಡಿಸುವ ಕಾರ್ಯ ನಡೆಸಿದಾಗ ಸಾರ್ವಜನಿಕರಿಂದ ಪಾರ್ಕಿಂಗ್ ಜಾಗ ಎಲ್ಲಿ ಎಂಬ ಪ್ರಶ್ನೆ ಬರುತ್ತಿದೆ ಎಂದು ಡಿಸಿಪಿ ದಿನೇಶ್ ಕುಮಾರ್ ಸಭೆಯಲ್ಲಿ ತಿಳಿಸಿದಾಗ, ಸ್ಮಾರ್ಟ್ ಸಿಟಿ ಮೂಲಕ ಅಭಿವೃದ್ಧಿಯಾಗಿರುವ ರಸ್ತೆಗಳ ಪಟ್ಟಿ ಮಾಡಿಕೊಂಡು ಕಂದಾಯ ಮತ್ತು ಪೊಲೀಸ್ ಇಲಾಖೆಗೆ ಪಾರ್ಕಿಂಗ್‌ಗೆ ಸೂಕ್ತ ಜಾಗದ ವರದಿ ನೀಡಿ, ಬಳಿಕ ಮೂರು ಇಲಾಖೆಗಳು ಕೂಲಂಕುಶವಾಗಿ ಪರಿಶೀಲನೆ ನಡೆಸಿ ಜಾಗ ಗುರುತಿಸಿ ಟೆಂಡರ್ ಕರೆಯುವಂತೆ ಮೇಯರ್ ಸುಧೀರ್ ಶೆಟ್ಟಿ ನಿರ್ದೇಶನ ನೀಡಿದರು.

ನಗರದಲ್ಲಿ ಎಲ್ಲೆಂದರಲ್ಲಿ ಮನಸ್ಸಿಗೆ ಬಂದ ಹಾಗೆ ರಸ್ತೆಗಳನ್ನು ಅಗೆಯಲಾಗುತ್ತಿದೆ. ಹಲವು ರಸ್ತೆಗಳು ಅಗಲಗೊಂಡು ಅಭಿವೃದ್ಧಿಯಾಗಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ರಸ್ತೆ ವಿಭಾಜಕಗಳು ಇರುವಲ್ಲಿ ಪಾದಾಚಾರಿಗಳು ರಸ್ತೆ ದಾಟಲು ಯೋಗ್ಯವಾಗುವಂತೆ ಝೀಬ್ರಾ ಕ್ರಾಸಿಂಗ್ ಅಳವಡಿಸುವಂತೆ ಹಲವು ಪತ್ರಗಳನ್ನು ಬರೆಯಲಾಗಿದ್ದರೂ ಪೂರಕ ಸ್ಪಂದನೆ ದೊರಕಿಲ್ಲ ಎಂದು ಡಿಸಿಪಿ ದಿನೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಬೆಂದೂರ್‌ವೆಲ್ ಜಂಕ್ಷನ್ ಬಳಿ ಹಾಗೂ ಬಂಟ್ಸ್‌ಹಾಸ್ಟೆಲ್ ಮೊದಲಾದ ಪ್ರಮುಖ ಜಂಕ್ಷನ್‌ಗಳಲ್ಲಿ ಬಸ್ಸು ನಿಲ್ದಾಣಗಳನ್ನು ಸ್ಥಳಾಂತರಿಸುವಂತೆ ಸಾಕಷ್ಟು ಬಾರಿ ಸಲಹೆ ನೀಡಲಾಗಿದೆ. ಈ ಸಮಸ್ಯೆಯನ್ನು ಬಗೆಹರಿಸದೆ ನಗರದಲ್ಲಿ ಸಂಚಾರ ಸುವ್ಯವಸ್ಥೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ ಎಂದು ಡಿಸಿಸಿ ದಿನೇಶ್ ಕುಮಾರ್ ಹೇಳಿದರು.

ಶಾಲಾ ಕಾಲೇಜುಗಳಲ್ಲಿ, ಅಪಾರ್ಟ್‌ಮೆಂಟ್‌ಗಳ ಎದುರು ವಾಹನ ನಿಲುಗಡೆಗೆ ಸಂಬಂಧಿಸಿ ಟ್ರಾಫಿಕ್ ಪೊಲೀಸರಿಂದ ಯಾವ ರೀತಿಯ ಕ್ರಮಗಳಾಗಿವೆ. ಸಂಚಾರ ವ್ಯವಸ್ಥೆಗೆ ತೊಂದರೆಯಾಗುವಂತೆ ವಾಹನಗಳ ನಿಲುಗಡೆ, ಪಾರ್ಕಿಂಗ್ ಮಾಡುವವರಿಗೆ ದಂಡ ಹಾಕಲು ಯಾಕಾಗುತ್ತಿಲ್ಲ ಎಂದು ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್, ನಗರದ ಪ್ರಮುಖ ಶಾಲಾ ಕಾಲೇಜುಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸಂಚಾರ ಸುವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮಾತ್ರವಲ್ಲದೆ, ಮೂರು ಬಾರಿ ಶಾಲಾ ಕಾಲೇಜುಗಳ ಮುಖ್ಯಸ್ಥರ ಸಭೆ ಕರೆದು ಶಾಲಾ ವಾಹನಗಳ ನಿಲುಗಡೆಯ ಬಗ್ಗೆಯೂ ಮನವರಿಕೆ ಮಾಡಲಾಗಿದೆ. ಈ ಬಗ್ಗೆ ಮನಪಾದಿಂದ ಸಂಬಂಧಪಟ್ಟ ಅಪಾರ್ಟ್‌ಮೆಂಟ್, ಪ್ರಮುಖ ಶಾಲಾ ಕಾಲೇಜುಗಳಿಗೆ ನೋಟೀಸು ನೀಡುವ ಕಾರ್ಯವೂ ಆಗಬೇಕಾಗಿದೆ ಎಂದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 60 ವಾರ್ಡ್‌ಗಳ ಸಮಸ್ಯೆಯನ್ನು ಗುರುತಿಸುವ ನಿಟ್ಟಿನಲ್ಲಿ ಎನ್‌ಐಟಿಕೆಯ ಟ್ರಾಫಿಕ್ ಮ್ಯಾನೇಜ್‌ಮೆಂಟ್ ವಿಭಾಗದ ಮೂಲಕ ಅಧ್ಯಯನ ನಡೆಸಿ ವರದಿ ಆಧಾರದಲ್ಲಿ ಸಮಗ್ರ ಯೋಜನೆ ರೂಪಿಸುವ ಕೆಲಸ ಆಗಬೇಕು ಎಂದು ಸಭೆಯಲ್ಲಿ ಸದಸ್ಯ ಶಶಿಧರ ಹೆಗ್ಡೆ ಸಲಹೆ ನೀಡಿದರು.

ಕೆಪಿಟಿಯಿಂದ ಮಂಗಳೂರು ಏರ್‌ಪೋರ್ಟ್‌ಗೆ ಹೋಗುವ ರಸ್ತೆಯಲ್ಲಿ ಅಲ್ಲಲ್ಲಿ ರಸ್ತೆ ವಿಭಾಜಕಗಳನ್ನು ತೆರೆಯಲಾಗಿದೆ. ಇದ ರಿಂದಾಗಿ ವಾಹನ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ರೀತಿ ಅನಗತ್ಯವಾಗಿ ತೆರೆದಿರುವ ರಸ್ತೆ ವಿಭಾಜಕಗಳಗಳನ್ನು ಬಂದ್ ಮಾಡಬೇಕು ಎಂದು ಸದಸ್ಯೆ ಸಂಗೀತ ಆರ್. ನಾಯಕ್ ತಿಳಿಸಿದರು.

ಈಗಾಗಲೇ ನಗರದ ಸಾಕಷ್ಟು ಕಡೆಗಳಳಲ್ಲಿ ಅಗತ್ಯವಿಲ್ಲದೆಡೆ ತೆರೆದಿರುವ ರಸ್ತೆ ವಿಭಾಜಕಗಳ ಬಗ್ಗೆ ವರದಿ ನೀಡುವಂತೆ ಸಂಚಾರಿ ಪೊಲೀಸರಿಗೆ ತಿಳಿಸಲಾಗಿದ್ದು, ಮನಪಾ ಸದಸ್ಯರು ಮುಚ್ಚಲು ತೊಂದರೆ ಇಲ್ಲದ ಇಂತಹ ರಸ್ತೆ ವಿಭಾಜಗಳನ್ನು ಮುಚ್ಚಲು ಮಾಹಿತಿ ನೀಡಿದರೆ ಕ್ರಮ ವಹಿಸಲಾಗುವುದು ಎಂದು ಡಿಸಿಪಿ ತಿಳಿಸಿದರು. ಹಾರ್ನ್ ನಿಷೇಧಿತ ವಲಯಗಳಲ್ಲಿ ಸೂಚನಾ ಫಲಕಗಳ ಅಳವಡಿಕೆ, 20 ಕಡೆ ನೋ ಪಾರ್ಕಿಂಗ್ ಪ್ರದೇಶಗಳ ಬಗ್ಗೆ ಪಟ್ಟಿ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ ಎಂದೂ ಡಿಸಿಪಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಗದೀಶ್ ಶೆಟ್ಟಿ, ಕಿರಣ್ ಕೋಡಿಕಲ್, ವಿನಯರಾಜ್, ಅನಿಲ್ ಕುಮಾರ್, ಸಂಶುದ್ದೀನ್,ಜಯಾನಂದ ಅಂಚನ್, ಭಾಸ್ಕರ್ ಹಾಗೂ ಇನ್ನಿತರರು ತಮ್ಮ ವಾರ್ಡ್‌ಗಳಲ್ಲಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಗಮನ ಸೆಳೆದರು.

ಉಪ ಮೇಯರ್ ಸುನೀತಾ, ಉಪ ಆಯುಕ್ತ (ಅಭಿವೃದ್ಧಿ) ಚಂದ್ರಶೇಖರಯ್ಯ, ಎಸಿಪಿ ನಜ್ಮಾ ಫಾರೂಕಿ ಮೊದಲಾದರು ಉಪಸ್ಥಿತರಿದ್ದರು.

ಕ್ಲಾಕ್‌ಟವರ್‌ನಿಂದ- ಎಬಿಶೆಟ್ಟಿ ವೃತ್ತದಲ್ಲಿನ ದ್ವಿಮುಖ ವಾಹನ ಸಂಚಾರಕ್ಕೆ ಹಿಂದಿದ್ದಂತೆಯೇ ವ್ಯವಸ್ಥೆ ಕಲ್ಪಿಸಬೇಕು. ಸ್ಮಾರ್ಟ್ ಸಿಟಿಯಿಂದ ಆ ರಸ್ತೆ ಅಭಿವೃದ್ಧಿಯಾಗಿ ಇದೀಗ ಬಸ್ಸು ಹಾಗೂ ಇತರ ವಾಹನಗಳ ನಿಲುಗಡೆ ತಾಣವಾಗಿ ಪರಿವರ್ತನೆಯಾಗಿದೆ. ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಸದಸ್ಯರಾದ ಅಬ್ದುಲ್ ಲತೀಫ್ ಸಭೆಯಲ್ಲಿ ಆಗ್ರಹಿಸಿದಾಗ, ಪ್ರೇಮಾನಂದ ಶೆಟ್ಟಿ ಸೇರಿದಂತೆ ಇತರ ಸದಸ್ಯರು ಬೆಂಬಲಿಸಿದರು.

ಆ ರಸ್ತೆಯಲ್ಲಿ ದ್ವಿಮುಖ ಸಂಚಾರದ ಅಗತ್ಯವಿದೆ. ಆದರೆ ಸ್ಮಾರ್ಟ್ ಸಿಟಿಯಿಂದ ರಸ್ತೆ ಅಗಲಗೊಂಡಿರುವ ಜತೆಗೆ ಆ ರಸ್ತೆಯ ಫುಟ್‌ಪಾತ್‌ಗಳೂ ಅಗಲಗೊಂಡಿದೆ. ಹಾಗಾಗಿ ಸದ್ಯ ಆ ಸಮಸ್ಯೆ ಬಗೆಹರಿಸದೆ ದ್ವಿಮುಖ ಸಂಚಾರಕ್ಕೆ ಈ ರಸ್ತೆಯಲ್ಲಿ ಅವಕಾಶ ಕಲ್ಪಿಸಲು ಸಾಧ್ಯವಾಗದು ಎಂದು ಡಿಸಿಪಿ ದಿನೇಶ್ ಕುಮಾರ್ ತಿಳಿಸಿದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News