ಮಂಗಳೂರು ಮಹಾನಗರ ಪಾಲಿಕೆ| ಇನ್ನೂ ಪ್ರಕಟಗೊಳ್ಳದ ಮೇಯರ್-ಉಪಮೇಯರ್ ಮೀಸಲಾತಿ

Update: 2024-08-26 14:19 GMT

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮುಂದಿನ ಮೇಯರ್-ಉಪಮೇಯರ್ ಯಾರು ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಸರಕಾರ ಇನ್ನೂ ಕೂಡ ಮೀಸಲು ನೀತಿ ಪ್ರಕಟಿಸದ ಕಾರಣ ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಹಾಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಉಪ ಮೇಯರ್ ಸುನೀತಾ ಅವರ ಅವಧಿಯು ಸೆ.8ರಂದು ಮುಗಿಯ ಲಿದೆ. ಅದೇ ದಿನ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮುಂದಿನ ಅವಧಿಯ ಮೇಯರ್-ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಯಬೇಕಿದೆ.

ಆದರೆ ಅದಕ್ಕೂ ಮೊದಲು ಸರಕಾರ ಮೀಸಲು ಅಧಿಸೂಚನೆ ಪ್ರಕಟಿಸಬೇಕು. ಆ ಬಳಿಕ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣೆ ದಿನ ಘೋಷಿಸಬೇಕು. ಅಲ್ಲದೆ ಎಲ್ಲಾ ಕಾರ್ಪೊರೇಟರ್‌ಗಳಿಗೆ ಎರಡು ವಾರದ ಮೊದಲು ಚುನಾವಣೆ ಕುರಿತು ನೋಟಿಸ್ ನೀಡಬೇಕು. ಮೇಯರ್-ಉಪಮೇಯರ್ ಅವಧಿಯು ಕೇವಲ 13 ದಿನಗಳು ಮಾತ್ರ ಇವೆ. ಆದರೆ ಈವರೆಗೆ ಸರಕಾರ ಮೀಸಲು ಪ್ರಕಟಿಸದ ಕಾರಣ ಗೊಂದಲ ಮುಂದುವರಿದಿದೆ.

ನೂತನ ಮೇಯರ್-ಉಪಮೇಯರ್ ಅವಧಿಯು ಕೇವಲ ಆರು ತಿಂಗಳು ಮಾತ್ರವಿದೆ. ಹಾಗಾಗಿ ಹಿರಿಯ ಕಾರ್ಪೊರೇಟರ್‌ ಗಳು ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಕಂಡು ಬರುತ್ತಿಲ್ಲ. ಆದರೆ ಹೊಸಬರು ಸಿಕ್ಕಿದ ಅವಕಾಶ ಬಳಸಿಕೊಳ್ಳಲು ಮುಂದಾಗಿರುವುದಾಗಿ ಬಿಜೆಪಿಯ ಮೂಲಗಳು ತಿಳಿಸಿವೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 44, ಕಾಂಗ್ರೆಸ್‌ನ 14, ಎಸ್‌ಡಿಪಿಐ ಪಕ್ಷದ 2 ಕಾರ್ಪೊರೇಟರ್‌ ಗಳಿದ್ದಾರೆ. ಬಿಜೆಪಿಗೆ ಬಹುಮತವಿರುವ ಕಾರಣ ಅನಾಯಸವಾಗಿ ಮೇಯರ್-ಉಪಮೇಯರ್ ಸ್ಥಾನವನ್ನು ದಕ್ಕಿಸಿಕೊಳ್ಳಲಿದೆ.

2019ರ ನ.12ರಂದು ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಆದರೆ ಮೇಯರ್-ಉಪಮೇಯರ್ ಆಯ್ಕೆ ವಿಳಂಬವಾಗಿತ್ತು. ಅಂದರೆ ಪ್ರಥಮ ಅವಧಿಗೆ 2020ರ ಫೆ.28ರಿಂದ 2021ರ ಮಾ.2ರ ತನಕ ದಿವಾಕರ ಪಾಂಡೇಶ್ವರ ಮೇಯರ್ ಆಗಿದ್ದರು. ಎರಡನೇ ಅವಧಿಗೆ ಪ್ರೇಮಾನಂದ ಶೆಟ್ಟಿ ಅವರ ಮೇಯರ್ ಅವಧಿಯು 2021ರ ಮಾ.2ರಂದು ಆರಂಭಗೊಂಡಿದ್ದರೂ, ಕಾನೂನು ಸಮಸ್ಯೆಯಿಂದ ಆರು ತಿಂಗಳು ವಿಸ್ತರಿಸಿ ಸೆ.9ರಂದು ಅವಧಿ ಕೊನೆ ಗೊಂಡಿತ್ತು. ಮೂರನೇ ಅವಧಿಗೆ ಜಯಾನಂದ ಅಂಚನ್ 2022ರ ಸೆ.9ರಿಂದ 2023ರ ಸೆ.8ರ ತನಕ ಮೇಯರ್ ಆಗಿದ್ದರು. ನಾಲ್ಕನೇ ಅವಧಿಗೆ 2023ರ ಸೆ.8ರಿಂದ ಸುಧೀರ್ ಶೆಟ್ಟಿ ಕಣ್ಣೂರು ಮೇಯರ್ ಆಗಿದ್ದರು. ಅವರ ಅವಧಿಯು ಸೆ.8ರಂದು ಕೊನೆಗೊಳ್ಳಲಿದೆ.

ಪ್ರೇಮಾನಂದ ಶೆಟ್ಟಿಗೆ ಆರು ತಿಂಗಳು ಹೆಚ್ಚುವರಿ ಅಧಿಕಾರ ಸಿಕ್ಕಿದ್ದರಿಂದ ಐದನೇ ಅವಧಿಯ ಮೇಯರ್‌ಗೆ ಸೆ.8ರಿಂದ 2025ರ ಫೆ.28ರ ತನಕ ಕೇವಲ ಆರು ತಿಂಗಳ ಅಧಿಕಾರ ಅವಧಿ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

*ಮೀಸಲಾತಿ ಯಾವುದೇ ಬಂದರೂ ಕೂಡ ಆಡಳಿತಾರೂಢ ಬಿಜೆಪಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆ, ಹಿಂದುಳಿದ ವರ್ಗ, ಸಾಮಾನ್ಯ ವರ್ಗದ ಕಾರ್ಪೊರೇಟರ್‌ಗಳಿದ್ದಾರೆ.

*ಪ್ರಥಮ ಮತ್ತು ಎರಡನೇ ಅವಧಿಗೆ ಮಂಗಳೂರು ನಗರ ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ, ಮೂರನೇ ಅವಧಿಗೆ ಮಂಗಳೂರು ನಗರ ಉತ್ತರ ಕ್ಷೇತ್ರದಿಂದ, ನಾಲ್ಕನೇ ಅವಧಿಗೆ ಮಂಗಳೂರು ನಗರ ದಕ್ಷಿಣ ಕ್ಷೇತ್ರದಿಂದ ಮೇಯರ್ ಆಯ್ಕೆ ನಡೆದಿತ್ತು. ಕೊನೆಯ ಅವಧಿಗೆ ಯಾವ ಕ್ಷೇತ್ರದಿಂದ ಆಯ್ಕೆ ನಡೆಯಲಿದೆ ಎಂಬ ಕುತೂಹಲವು ಬಿಜೆಪಿಗರಲ್ಲಿದೆ.

*ಪಾಲಿಕೆಯ ಸದಸ್ಯತ್ವವು ಶೇ.50 ಮಹಿಳಾ ಮೀಸಲಾದರೂ ಕೂಡ ಮಹಿಳೆಯರಿಗೆ ಮೇಯರ್ ಭಾಗ್ಯ ನಾಲ್ಕು ಅವಧಿ ಯಲ್ಲಿ ಸಿಕ್ಕಿಲ್ಲ. ಈವರೆಗಿನ ನಾಲ್ಕು ಮೇಯರ್‌ಗಳು ಕೂಡ ಪುರುಷರಿಗೆ ಲಭಿಸಿತ್ತು. ಹಾಗಾಗಿ ಕೊನೆಯ ಅವಧಿಯು ಮಹಿಳೆಯರಿಗೆ ಲಭಿಸುವ ಸಾಧ್ಯತೆಯ ಮಾತು ಕೇಳಿ ಬರುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News