ಮಂಗಳೂರು: ಆಸ್ಪತ್ರೆಯಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ 3 ದಿನಗಳಲ್ಲಿ ಸೆರೆ

Update: 2023-08-20 06:24 GMT

ಮಂಗಳೂರು. ಆ.20: ಅನಾರೋಗ್ಯ ಕಾರಣ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದ ವಿಚಾರಣಾಧೀನ ಕೈದಿಯೊಬ್ಬನನ್ನು ಮೂರು ದಿನಗಳಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ಸಜಿಪ ನಡು ನಿವಾಸಿ ಎಸ್.ಎಂ.ನೌಫಲ್(32) ಬಂಧಿತ ಆರೋಪಿ. ಡ್ರಗ್ಸ್ ಪ್ರಕರಣಕ್ಕೆ ಧರ್ಮಸ್ಥಳ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಈತ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದನು.

ಅನಾರೋಗ್ಯದ ಕಾರಣ ಈತನನ್ನು ಚಿಕಿತ್ಸೆಗಾಗಿ ಪೊಲೀಸ್ ಭದ್ರತೆಯಲ್ಲಿ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತ ಆ.16ರಂದು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪಿಎಸ್ಸೈ ಮನೋಹರ್ ಪುಸಾದ್ ಹಾಗೂ ಸಿಬ್ಬಂದಿ ಆ.19ರಂದು ನೌಫಲ್ ನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News