ಮಂಗಳೂರು| ಮೂವರು ಮಕ್ಕಳನ್ನು ಕೊಂದ ಆರೋಪಿ ಹಿತೇಶ್ ಶೆಟ್ಟಿಗಾರ್‌ಗೆ ಮರಣ ದಂಡನೆ

Update: 2024-12-31 13:13 GMT

ಹಿತೇಶ್ ಶೆಟ್ಟಿಗಾರ್‌

ಮಂಗಳೂರು, ಡಿ.31: ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿ ಹಾಕಿ ಕೊಂದದ್ದಲ್ಲದೆ, ತನ್ನ ಪತ್ನಿಯನ್ನು ಬಾವಿಗೆ ದೂಡಿ ಹಾಕಿ ಕೊಲೆಗೆ ಯತ್ನಿಸಿದ್ದ ಆರೋಪಿ ಹಿತೇಶ್ ಶೆಟ್ಟಿಗಾರ್‌ ಎಂಬಾತನಿಗೆ ಮಂಗಳೂರು ನ್ಯಾಯಾಲಯವು ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದೆ.

ತಾಳಿಪಾಡಿ ಗ್ರಾಮದ ಪದ್ಮನೂರು ಎಂಬಲ್ಲಿ 2022ರ ಜೂನ್ 23ರಂದು ಸಂಜೆ 5:15ಕ್ಕೆ ಹಿತೇಶ್ ಶೆಟ್ಟಿಗಾರ್ ತನ್ನ ಮಕ್ಕಳಾದ ರಶ್ಮೀತಾ (13), ಉದಯ ಕುಮಾರ (11), ದಕ್ಷೀತ್ (5) ಎಂಬವರನ್ನು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿದ್ದಲ್ಲದೆ ತನ್ನ ಪತ್ನಿ ಲಕ್ಷ್ಮಿ ಎಂಬವರನ್ನು ಬಾವಿಗೆ ದೂಡಿಹಾಕಿ ಕೊಲೆಗೆ ಯತ್ನಿಸಿದ್ದ.

ಆರೋಪಿಯು ಯಾವುದೇ ಕೆಲಸ ಮಾಡದೆ ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದು, ಅದೇ ದ್ವೇಷದಿಂದ ಆಗಷ್ಟೆ ಶಾಲೆಯಿಂದ ಬಂದಿದ್ದ ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿಹಾಕಿ ಕೊಲೆ ಮಾಡಿದ್ದ. ಸಂಜೆ ಹೊಟೇಲಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ತನ್ನ ಹೆಂಡತಿಯನ್ನು ಕೂಡ ಕೊಲೆ ಮಾಡುವ ಉದ್ದೇಶದಿಂದ ಮನೆಯ ಪಕ್ಕದ ಬಾವಿಗೆ ದೂಡಿ ಹಾಕಿದ್ದ. ಲಕ್ಷ್ಮಿಯ ಬೊಬ್ಬೆ ಕೇಳಿ ರಸ್ತೆ ಬದಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಬಾವಿಗೆ ಇಳಿದು ಲಕ್ಷ್ಮಿಯವರನ್ನು ರಕ್ಷಿಸಿದ್ದರು. ಮಕ್ಕಳನ್ನು ಬಾವಿಗೆ ಹಾಕಿದ ವೇಳೆ ಹಿರಿಯ ಮಗಳು ರಶ್ಮೀತಾ ಬಾವಿಗೆ ಅಳವಡಿಸಿದ್ದ ಪಂಪಿನ ಪೈಪನ್ನು ಹಿಡಿದುಕೊಂಡಿರುವುದ್ದನ್ನು ಕಂಡ ಆರೋಪಿ ಹಿತೇಶ್ ಶೆಟ್ಟಿಗಾರ್ ಕತ್ತಿಯಿಂದ ಪೈಪನ್ನು ತುಂಡರಿಸಿದ್ದ.

ಘಟನೆಯ ಬಗ್ಗೆ ಲಕ್ಷ್ಮಿ ನೀಡಿದ ದೂರಿನಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಕುಸುಮಾಧರ ತನಿಖೆ ನಡೆಸಿ ಅರೋಪಿಯ ವಿರುದ್ಧ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಎಎಸ್ಸೈ ಸಂಜೀವ ತನಿಖೆಗೆ ಸಹಕರಿಸಿದ್ದರು. ಸರಕಾರದ ಪರವಾಗಿ ಅಭಿಯೋಜಕ ಮೋಹನ ಕುಮಾರ್ ವಾದ ಮಂಡಿಸಿದ್ದರು.

ಆರೋಪಿಯು ಕೊಲೆ ಹಾಗೂ ಕೊಲೆಯತ್ನ ನಡೆಸಿರುವುದು ಸಾಬೀತಾಗಿರುವುದಾಗಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಆರೋಪಿಗೆ ಮರಣ ದಂಡನೆ ವಿಧಿಸಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News